ಅಡ್ಡಪಟ್ಟಿಯ ಚಿತ್ರ

ವಿಳಾಸ ಇದ್ದೂ ಇಲ್ಲದ ಮನೆಯ
ಹಿಂಬಾಗಿಲ ಅಡ್ಡಪಟ್ಟಿಗೆ ಕೈ
ಹಚ್ಚಿ ನಿಂತದ್ದು ಕೇವಲ ಚಿತ್ರವಷ್ಟೇ

ಅಲ್ಲ ಎದುರಿನ ಕೆಪ್ಪು ಜೋಗವೂ
ಅಬ್ಬಿ ಬೀಳುವ ಹನಿ ನೀರೂ
ಚೂರಾಗಿ ಪಾರಾಗಿ ಹಸಿರೆಲೆಯ ಮೇಲೆ
ಕುಳಿತು ಹೊಳೆಯುವ ಮುತ್ತೂ
ಮತ್ತು ಒಂಟಿ ಉಳಿದ ಮುತ್ತುಗವೂ

ಒಂದೆಲೆಯ ಹಿಂಬಾಲಿಸಿ ಹೊರಟು
ಅಡ್ಡಬಿದ್ದೊಂದೆಳೆಗೆ ಉದ್ದುದ್ದ ಸಿಕ್ಕಿ
ತಪ್ಪಿಸಿಕೊಳ್ಳಲಾರದೆ ಬಳಲಿ ಬೆಂಡಾಗಿ ಬಿಕ್ಕಿ
ಅಂತೂ ಸರಾಗ ಹರಿದು ಸೇರಿದಲ್ಲಿ

ತೀರದ ಶಬ್ಧ
ತೀರಿದ ಬದುಕು

ಅಲೆದಲೆದು ದಡ
ಸೇರುವ ಬದಲು ಅಲೆಯೊಳಗೆ ಇಳಿದರೆ
ಒಂದು ಮತ್ತೊಂದರ ನಡುವೆ
ಇನ್ನೊಂದು ಎನ್ನುತ್ತ ಭರತಕ್ಕೆ ಸರಿಯಾಗಿ
ದಡಕ್ಕೆ ಬಿದ್ದವರೆಲ್ಲ ಎದ್ದು
ಸಾಲಾಗಿ ಹೊರಟು ದೂರ ಸೇರಿಬಿಟ್ಟರು

ತೀರಾ ತೀರವೂ ಇರದ
ಊರೇ ಅಲ್ಲದ ಊರಲ್ಲಿ ತೀರ್ಥ
ಸೇವಿಸುತ್ತ ಪ್ರಸಾದ ಸ್ವೀಕರಿಸುತ್ತ
ಇಪ್ಪತ್ತೂ ಬೆರಳು ಸೇರಿಸಿ ಲೆಕ್ಕ
ಹಾಕುತ್ತ ನೀರಿರದ ನಳಕ್ಕೆ ಹೆದರುತ್ತ
ಮೆಟ್ಟಿ ನಿಂತ ನೆಲಕ್ಕೆ ಬೆದರುತ್ತ
ಉಬ್ಬಸದ ನಡುವೆಯೂ ಎದೆಯುಬ್ಬಿಸಿ ನಿಂತದ್ದು
ಚಿತ್ರವಷ್ಟೇ ಅಲ್ಲ; ದೃಶ್ಯಕಾವ್ಯ

ಇಲ್ಲೀಗ ಪತ್ರ ಬಂದಿದೆ
ವರುಷಗಳ ಬಳಿಕ
ಶಬ್ಧ ತೀರದ ಉದ್ದಕ್ಕೂ ಅಕ್ಷರ
ಓದುತ್ತ ಹಿಮ್ಮುಖ ಹೊರಟ ಕವಿತೆ
ಹಲವು ತಾಕಲಾಟಗಳ ನಡುವೆ
ಅದೇ ಕೆಪ್ಪು ಜೋಗದ ನೆತ್ತಿ ಹತ್ತಿ ಕೂಗುತ್ತಿದೆ

ಬಾಗಿಲ ಅಡ್ದಪಟ್ಟಿಯ ಒಂಟಿ ಚಿತ್ರ
ಅಸಹಾಯಕ ದೃಷ್ಟಿ ಬೀರಿ
ಬರದ ಹನಿ ಕಣ್ಣೀರನ್ನು ಹುಡುಕುತ್ತ
ಅದೇ ಹಳೆಯ ದಾರಿಯುದ್ದ ಹೊರಟಿದೆ.

Categories: ಕವನ

ಘಟ್ಟದ ಮೇಲೆ – ಘಟ್ಟದ ಕೆಳಗೆಉತ್ತರ ಕನ್ನಡದಲ್ಲೊಂದು ರೇಖೆ ಹಾದು ಹೋಗುತ್ತದೆ. ಕೇವಲ ಈ ಜಿಲ್ಲೆಗಷ್ಟೇ ಸೀಮಿತವಾಗಿರುವ ರೇಖೆ – ಘಟ್ಟದ ಮೇಲೆ ಹಾಗೊ ಘಟ್ಟದ ಕೆಳಗೆ ಎಂದು ’ಉ.ಕ’ವನ್ನು ವಿಭಜಿಸಿ ನಡುವೆ ತಟಸ್ಥವಾಗಿ ಉಳಿದುಬಿಟ್ಟಿದೆ. ಯಾವ ಮಹತ್ವದ ಕಾರಣಕ್ಕಾಗಿ ಇದೊಂದು ಹೆಚ್ಚುವರಿ ರೇಖೆ ಹುಟ್ಟಿಕೊಂಡಿತು ಹಾಗೂ ಯಾರು ಈ ರೇಖೆಯನ್ನೆಳೆದು ಉಧ್ಗಾಟಿಸಿದರು ಅನ್ನುವುದು ಈ ಹೊತ್ತಿನವರೆಗೂ ಮಹತ್ವದ ವಿಷಯವಲ್ಲ. ಘಟ್ಟದ ಮೇಲಿನವರು, ’ಘಟ್ಟದ ಕೆಳಗೆ’ ಹಾಗೂ ಘಟ್ಟದ ಕೆಳಗಿನವರು, ’ಘಟ್ಟದ ಮೇಲೆ’ ಅನ್ನುವಷ್ಟಕ್ಕೆ ಮಾತ್ರ ಸೀಮಿತ. ಅಷ್ಟರ ಹೊರತಾಗಿಯೂ ಒಮ್ಮೊಮ್ಮೆ ’ಸೂಕ್ಷ್ಮ’ವಾಗುತ್ತದೆ ಈ ರೇಖೆ – ಒಂದು ರೀತಿಯಲ್ಲಿ ಮನೆಯೊಳಗಿನ ವ್ಯವಹಾರ ಅದು. ಪಾತ್ರಗಳು ಅದಲು-ಬದಲಾಗುತ್ತಿರುತ್ತವೆ!!

ಭೌಗೋಳಿಕ ಕಾರಣಗಳಿಂದಾಗಿ ಇಂಥದ್ದೊಂದು – ಉಪದ್ರವಕಾರಿಯಲ್ಲದ – ವಿಭಜನೆ ಆಗಿಲ್ಲವಾದರೂ ಸರಿ.  ಅದೇ ಕಾರಣಕ್ಕೆ ಆಗಿದ್ದರೆ ಮತ್ತೂ ಸರಿ. ಘಟ್ಟದ ಕೆಳಗಿನ ಊರುಗಳಿಗೆ ತೀರದ ಶಬ್ದದ ಆಸರೆಯಾದರೆ, ಘಟ್ಟದ ಮೇಲಿನ ಪ್ರದೇಶಕ್ಕೆ ಮಲೆಯ ಆಸರೆ. ಘಟ್ಟದ ಕೆಳಗಿನ ಉತ್ತರ ಕನ್ನಡ ಅಲೆಯ ಸೆರಗು ಬೀಸಿದರೆ, ಘಟ್ಟದ ಮೇಲೆ ಮಲೆಯ ಸೆರಗು. ಬಹಳ ಸೆಖೆಯೆಂದೂ, ಸಿಕ್ಕಾಪಟ್ಟೆ ಚಳಿಯೆಂದೂ ಅವರು ಇವರಿಗೆ, ಇವರು ಅವರಿಗೆ ಹೇಳುತ್ತಿರುವುದು ಜನರ ಆಪ್ತತೆಯನ್ನು ತೋರಿಸುತ್ತದಷ್ಟೆ. ಜೊತೆಗೆ-  ನಿರ್ಲಿಪ್ತತೆಯನ್ನೂ. 

ತನ್ನೊಳಗೆ ಒಡೆದು ಎರಡಾಗುವ ಸಂದರ್ಭವೊಂದನ್ನೂ ಎದುರುಗೊಂಡಿದ್ದ ಉತ್ತರ ಕನ್ನಡ ಇವತ್ತಿಗೂ ಇಡಿಯಾಗಿ ಹಿಡಿದುಕೊಂಡಿದ್ದರೆ, ಒಂದು ಬದಿಯಲ್ಲಿ ವಿಪರೀತ ಸೆಖೆ ತಟ್ಟದಿದ್ದುದೂ, ಇನ್ನೊಂದು ಬದಿಯಲ್ಲಿ  ಹೆಚ್ಚೇ ಅನ್ನುವಷ್ಟು ಚಳಿಯಾಗದೆ ಇದ್ದುದೇ ಕಾರಣವಾ? ವ್ಯಾಪಕವಾಗಿ ಬೆಳೆಯುತ್ತಿರುವ ದಕ್ಷಿಣ ಕನ್ನಡ, ನಿರೀಕ್ಷೆ ಮೀರಿದ ಚಟುವಟಿಕೆಗಳನ್ನು ನೋಡುತ್ತಿರುವ ಶಿವಮೊಗ್ಗ, ತನ್ನದೇ ಆದ ಮಣ್ಣ ವಾಸನೆ ಹೊತ್ತ ಹುಬ್ಬಳ್ಳಿ-ಧಾರವಾಡಗಳ ನಡುವೆ, ಇನ್ನೂ ಘಟ್ಟದ ಮೇಲೆ, ಘಟ್ಟದ ಕೆಳಗೆ ಅನ್ನುತ್ತ ಮೇಲೆ-ಕೆಳಗೆ ನೋಡುತ್ತಿದೆ ಉತ್ತರ ಕನ್ನಡ. ಒಂದು ರೀತಿ ತ್ರಿಶಂಕು ಸ್ವರ್ಗದಲ್ಲಿರುವಂತೆ ಭಾಸವಾಗುವ ಜಿಲ್ಲಾ ಕೇಂದ್ರದ ಮೈತುಂಬ ಸರಕಾರೀ ಗಾಯ. ಅಲ್ಲೀಗ ತರಕಾರಿ ಬೆಳೆಯುವುದೂ ಸಹ ಕಷ್ಟಸಾಧ್ಯ.  

ಪ್ರತಿಯೊಂದು ವಿಷಯದಲ್ಲೂ ’ವಿಪರೀತ’ಕ್ಕೆ ಹೆಚ್ಚಿನ ಮಹತ್ವವಿರುವ, ನೈತಿಕತೆ, ಸ್ಪರ್ಧೆ, ವ್ಯಾಪಾರ -ವ್ಯವಹಾರ ಮುಂತಾದ ಶಬ್ಧಗಳ ಪರಿಭಾಷೆಯೇ ಬದಲಾಗುತ್ತಿರುವ ದಿನದಲ್ಲಿ, ಉತ್ತರ ಕನ್ನಡ ಇಡಿಯಾಗಿ ತನ್ನನ್ನು ರೂಪಿಸಿಕೊಳ್ಳಬೇಕಾ ಈಗ? ಪೂರ್ತಿಯಾಗಿ ತನ್ನನ್ನು ಬೆಳೆಸಿಕೊಡಬಹುದಾದ ರೇಖೆಯೊಂದನ್ನು ತನ್ನದೇ ಮೈಸುತ್ತ ಎಳೆದುಕೊಳ್ಳಬೇಕಾ? ತನ್ನನ್ನು ತಾನೇ ರೂಪಿಸಿಕೊಂಡು ಸುತ್ತಲಿನ ಜಿಲ್ಲೆಗಳ ಸಮಕ್ಕೆ ನಿಲ್ಲುವ ದಾರಿ ಒಂದಾದರೆ, ದೊಡ್ದ ಯೋಜನೆಗಳಿಗೆ ತನ್ನನ್ನು ಒಡ್ಡಿಕೊಂಡು ಕಾಣದ ಕೈಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವುದು ಇನ್ನೊಂದು ದಾರಿ. ಅಷ್ಟು ಬಿಟ್ಟರೆ,  ಮೂರನೆಯ ದಾರಿ ಯಾವುದು?

ಒಂದು ತಲೆಮಾರಿನವರು ಊರು ಬಿಟ್ಟು ಮುಂಬೈ ಸೇರಿಕೊಂಡರೆ, ನಂತರದವರು ಬೆಂಗಳೂರು ಸೇರಿದರು. ಹಲವಾರು ಕಾರಣಗಳಿಗೆ ಮುಂಬೈ ಹೊಕ್ಕವರು ಅಲ್ಲಿನವರೇ ಆಗಿ, ಬೆಂಗಳೂರು ಸೇರಿದವರು – ಕೆಲವು ಸಂದರ್ಭದಲ್ಲಿ – ಎಲ್ಲಿಯವರೂ ಆಗದೇ ಉಳಿದುಬಿಟ್ಟಂತಿದೆ. ನಂತರದ ಬೆಳವಣಿಗೆ ವೈಮಾನಿಕ. ಒಂದು ಸ್ವರ್ಗದಿಂದ ಸೀದಾ ಇನ್ನೊಂದು ಸ್ವರ್ಗಕ್ಕೆ ಪ್ರಯಾಣ ಈಗ. ವರ್ಷಕ್ಕೊಮ್ಮೆ ಕುಲದೇವರಿಗೋ!, ಜಾತ್ರೆಗೋ ಅಥವಾ ಊರಿನ ಸೆಳೆತವೆಂದೋ ಒಮ್ಮೆ ಬಂದು ಹೋಗುವ ಸಾಧ್ಯತೆಯೂ ಸಹ ಕಡಿಮೆ. ಇಂತಹ ಬೆಳವಣಿಗೆ ಉತ್ತರ ಕನ್ನಡಕ್ಕೆ ಮಾತ್ರ ಸೀಮಿತವಲ್ಲದಿದ್ದರೂ, ಅಲ್ಲಿನ ಬಾಕಿ ಸಂಗತಿಗಳೊಂದಿಗೆ ಹೋಲಿಸಿದಾಗ ಹೆಚ್ಚು ಪ್ರಸ್ತುತವಾಗುತ್ತದೆ.

ಒಂದು ಹಂತದಲ್ಲಿ ಹೆಚ್ಚಿನವರೆಲ್ಲ ಮಾಸ್ತರುಗಳಾಗಿಬಿಟ್ಟರು, ತಮ್ಮ ತಮ್ಮ ಊರಲ್ಲಿ. ಇದ್ದ ಹತ್ತಿಪತ್ತು ಗುಂಟೆ ಜಾಗ(ಜಾಸ್ತಿ ಇದ್ದರೂ ಅದು ಅವರಿಗೇ ತಾನೆ?) ಹಾಗೂ ಬಂದ ಪಗಾರಿನಲ್ಲಿ ತಮ್ಮ ಬದುಕು ಕಟ್ಟಿಕೊಂಡರು. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೊರಟವರು, ತಮ್ಮ ಜಿಲ್ಲೆ ಬಿಟ್ಟು ಹೊರಬಂದು – ಮತ್ತದೇ ನೆಲೆಯಲ್ಲಿ ಜೀವನ ಮಾಡಿದರು. ಮುಂದಿನ ತಯಾರಿಯಾಗಿ, ಪ್ರಕಾಶಿಸುತ್ತ ನಡೆದ ಬೃಹತ್ ಭಾರತ ದೇಶದಲ್ಲಿ, ಹತ್ತು ಹಲವು ಅವಕಾಶಗಳು ಬಂದವು. ಉತ್ತರ ಕನ್ನಡಿಗರು ಪೂರ್ವ, ಪಶ್ಚಿಮ, ದಕ್ಷಿಣಕ್ಕೆ ನಡೆದರು. ಸಂಬಳ ಹೆಚ್ಚಾಯಿತು. ಜೊತೆಗೆ ಖರ್ಚೂ. ಊರು ಮಾತ್ರ ಉತ್ತರವಿಲ್ಲದೇ ಉಳಿದುಬಿಟ್ಟಿತು.

ಎಲ್ಲ ಬೆಳವಣಿಗೆಗಳೂ ಆಗಲೇಬೇಕಿತ್ತು, ಹೀಗಿದ್ದರೇ ಸರಿ/ಹೀಗಾಗುವುದೇ ಸರಿ, ಉತ್ತರ ಕನ್ನಡ ಉತ್ತರ ಕನ್ನಡವಾಗಿಯೆ ಇರಲಿ – ಅದು ದಕ್ಷಿಣ ಕನ್ನಡವೋ ಅಥವಾ ಮತ್ತೊಂದು ಜಿಲ್ಲೆಯಂತೋ ಆಗುವುದು ಬೇಡ, ಉತ್ತರ ಕನ್ನಡ ಹೀಗಿದ್ದರೇ ಒಳ್ಳೆಯದು…. ಹಲವು ಸುದ್ದಿಗಳು ಹೊರಬೀಳುತ್ತಿವೆ ಈಗ. ತಮ್ಮ ಮನೆಯಲ್ಲೆ ಉಳಿದುಕೊಂಡ ಉತ್ತರ ಕನ್ನಡಿಗರಿಗೆ ಸಾಲ ತೀರಿಸುವುದೋ, ಮನೆ ಉಳಿಸಿಕೊಳ್ಳುವುದೋ, ಪಕ್ಕದ ಜಿಲ್ಲೆಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಪಡೆಯುವುದೋ… ಯಾವುದೂ ತಿಳಿಯದ ಸ್ಥಿತಿ. ಸ್ವಲ್ಪ ಗೆಲುವಾದರೆ (ಅಥವಾ ಗೆಲುವಿದ್ದವರಾದರೆ?), ಎಲ್ಲೋ ಇರುವ ಮಕ್ಕಳು ಮರಿಯ ಜೊತೆ ಚಾಟ್ ಮಾಡಬೇಕು. ಅನುಕೂಲವಾದರೆ ಒಂದೆರಡು ವಾರ ಹೋಗಿ ಇದ್ದು ಬರಬೇಕು. ಎಲ್ಲ ಹೋಗಿ ಬರುವವರ ಆಟ…

ಉತ್ತರ ಕನ್ನಡವೀಗ ತನ್ನೊಳಗೆ ಸೃಷ್ಟಿಯಾದ ರೇಖೆಯನ್ನೇ ಹಿಡಿದಿದುಕೊಂಡಿದೆ ಆಸರೆಗಾಗಿ. ಊರುಗಳು ತಾಲೂಕನ್ನೂ, ತಾಲೂಕುಗಳು ಜಿಲ್ಲೆಯನ್ನೂ ನೋಡುತ್ತಿವೆ. ಜಿಲ್ಲಾ ಕೇಂದ್ರದ ಸುತ್ತ ಕೇಂದ್ರ ಮತ್ತು ರಾಜ್ಯದ ಹದ್ದುಗಣ್ಣು. ಒಂದರ ಹಿಂದೊಂದು, ಅಭಿವೃಧಿ ಪಥದತ್ತ ಹೊರಟ, ಯೋಜನೆಗಳು.  ಗಟ್ಟಿಯಾಗಿ – ಬೇಕು ಅಥವಾ ಬೇಡ ಎನ್ನಲೂ ಆಗದಂಥಾ ಪರಿಸ್ಥಿತಿ. ನಿರಂತರವಾಗಿ ಬೆಳೆಯುತ್ತಿರುವ ಜಗತ್ತಿನ ನಡುವೆ, ಆದಷ್ಟೇ ಬೆಳವಣಿಗೆಯೆಂಬಂತೆ ತನ್ನನ್ನು ತೋರಿಸಿಕೊಳ್ಳುತ್ತಿದೆ ಉತ್ತರ ಕನ್ನಡ.

ಭರ್ತಿ ಮಳೆ, ತೀರದ ಶಬ್ಧದ ಜೊತೆಗಿದ್ದೂ ತನ್ನನ್ನು ತೊಳೆದುಕೊಳ್ಳಲಾರದ ಸ್ಥಿತಿಯಾ ಇದು?

ಜಿಲ್ಲೆಯ ಹೊರಗಿರುವವರೆಲ್ಲ, ವರ್ಷದ ಅಂತ್ಯದಲ್ಲಿ ಸಿಗಬೇಕಾದ ಬಡ್ತಿ, ಹೆಚ್ಚಿನ ಸಂಬಳ, ಭವಿಷ್ಯದ ಲೆಕ್ಕ ಹಾಕುತ್ತಿದ್ದಾರೆ. ಅವರೆಲ್ಲ ಖಂಡಿತವಾಗಿಯೂ ತಮ್ಮ ತಮ್ಮ ಊರು/ಜಿಲ್ಲೆಗಿಂತ ಹೆಚ್ಚಿನ ತೊಂದರೆಯನ್ನು ವಯಕ್ತಿಕವಾಗಿ ಅನುಭವಿಸುತ್ತಿದ್ದಾರೆ. ಡಾರ್ವಿನ್ನನ ಥಿಯರಿ ಎಂದಿಗಿಂತ ಹೆಚ್ಚು ಈ ಊರು ಬಿಟ್ಟವರಿಗೆ ಅನ್ವಯವಾಗುತ್ತಿದೆ. ಉತ್ತರ ಕನ್ನಡಿಗರಿಗೆ ಮಾತ್ರ ಘಟ್ಟದ ಮೇಲೆ ಯಾವುದು, ಘಟ್ಟದ ಕೆಳಗೆ ಯಾವುದು ಎಂಬುದೂ ಮರೆತುಹೋದಂತಿದೆ!!

(KS (!) Link – http://www.kendasampige.com/article.php?id=4194)

ಮತ್ತೆ ಮತ್ತೆ ಉದ್ಧರಿಸುವವರ ನಡುವೆ ಮತ್ತೊಂದು ಸಮ್ಮೇಳನ…

 ಈ ಸಂದರ್ಭದಲ್ಲಿ ಬೆಂಗಳೂರನಲ್ಲಿಲ್ಲದಿದ್ದರೆ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯದೆ ಇದ್ದಿದ್ದರೆ, ಪ್ರತಿ ವರ್ಷದಂತೆ ಮತ್ತೆ – ಪತ್ರಿಕೆ, ಟೀವಿ, ಮತ್ತಿತರ ಮಾಧ್ಯಮಗಳ ನಡುವೆ ಮತ್ತೊಂದು ಸಮ್ಮೇಳನ ಮುಗಿದು ಹೋಗುತ್ತಿತ್ತು. ವಯಕ್ತಿಕವಾಗಿ ಇಲ್ಲಿಯವರೆಗೆ ಒಂದೂ ಸಮ್ಮೇಳನಕ್ಕೆ ಹಾಜರಿ ಹಾಕದ ಕಾರಣ ಹಾಗೂ ಸಣ್ಣದೊಂದು ಕುತೂಹಲ ಇಟ್ಟುಕೊಂಡು ಈ ಬಾರಿ ಮೊದಲೆರಡು ದಿನ ಹಾಜರಿ ಹಾಕಿ ಕಾಲುಳುಕಿಸಿಕೊಂಡು ಬಂದವರ ಪೈಕಿ ನಾನೂ ಒಬ್ಬನಾಗಿ ಈ ಮಾತು.

ಸಾಹಿತ್ಯ, ಸಾಹಿತಿ, ಸಮಿತಿ, ಪರಿಷತ್ತು, ಪುಸ್ತಕ, ಮಳಿಗೆ, ಮಾರಾಟ, ಮೈಕು, ಮೈಕಾಸುರರು, ಬ್ಯಾಂಡು, (ಬತ್ತಾಸು!), ಬಿಂದಿ, ಬಿಂದಿಗೆ, ಸ್ವಾಗತ, ಸತ್ಕಾರ, ಸಂಭ್ರಮ, ಸಂಭಾಷಣೆ, ಸಂ-ಭಾಷಣ…ಮುಂತಾದವುಗಳ ಒಳಗೊಳಗೆ ನಡೆದ ಮೂರು ದಿನಗಳ ಈ ಒಳಾಂಗಣ ಆಟ, ಮೂರು ವರ್ಷದಿಂದಲೂ ಅರ್ಧ ನಿರ್ಮಿತ ನಗರದಂತೆ ಕಾಣಿಸಿಕೊಳ್ಳುತ್ತಿರುವ – ಅಸಾಮಾನ್ಯ ಸಂಯಮದ – ಬೆಂಗಳೂರಿಗೆ, ನಿನ್ನದಾದರೂ ನಿರ್ಮಾಣ ಸ್ಥಿತಿ, ತನ್ನದು ಮಾತ್ರ ನಿರ್ನಾಮದ ಸ್ಥಿತಿ ಎಂದು ಸಾರುತ್ತಿದೆಯಾ ಎಂಬುದೊಂದು ಅನುಮಾನ ಸುಳಿಯುವಂತೆ ಮಾಡಿಸಿದ್ದು ಸುಳ್ಳಲ್ಲ. ಆದರೂ, ಬೆಂಗಳೂರು half constructed, ಕನ್ನಡ half destructed ಎಂದು ಸುಮ್ಮನೆ ಹೇಳುವುದು ಸಾಧ್ಯವಿಲ್ಲ. ಅದಕ್ಕೊಂದು ಆಧಾರವಿಲ್ಲದಿರುವ ಕಾರಣ, ಬೆಂಗಳೂರು ನಿರ್ಮಾಣ ಹಂತದಲ್ಲಿರುವ ಮತ್ತೊಂದು ಸಿಂಗಾಪುರವೆಂದೂ, ಕನ್ನಡ ಇವತ್ತಿಗೂ ’ಕಸ್ತೂರಿ ಕನ್ನಡ’ ಎಂದುಕೊಂಡೇ ಸಮ್ಮೇಳನವನ್ನು ಅನುಭವಿಸಬಹುದಾ ಅಂದುಕೊಂಡರೆ – ನಮ್ಮ ನಮ್ಮದೇ ಆದ ವಿಚಾರಗಳು ಅದಕ್ಕೂ ಅಡ್ಡಿಪಡಿಸುವ ಸಮಯ ಇದು.

ವ್ಯವಸ್ಥೆಯ ದೃಷ್ಟಿಯಿಂದ ಸಮ್ಮೇಳನವೂ ಸಹ ಬಹಳಷ್ಟು ಕಾರಣಗಳಿಂದಾಗಿ – ಕಡಿಮೆ ಸಾಹಿತ್ಯಿಕ ಮತ್ತು ಹೆಚ್ಚು ಮಾರುಕಟ್ಟೆ ಕೇಂದ್ರಿತ ವ್ಯವಹಾರದಂತೆ ಕಾಣಿಸಿದ್ದು ಸುಳ್ಳಲ್ಲ. ಕಿಶೋರ್ ಬಿಯಾನಿ ಎಂಬ ಬಿಗ್ ಬಝಾರ್ ಜನಕನೇನಾದರೂ ಈ ಸಾಹಿತ್ಯ ಸಮ್ಮೇಳನವನ್ನೂ, ಅದರ ಸುತ್ತ ಬೆಳೆದು-ನಿಂತ ಮಾರುಕಟ್ಟೆಯನ್ನೂ ನೋಡಿದ್ದರೆ ತಾನು ತಿಂಗಳಿಗೊಂದು ಸಮ್ಮೇಳನ ಮಾಡುತ್ತೇನೆಂದು ಘೋಷಿಸಿ, ಅದರ ಸುತ್ತ ಮತ್ತೊಂದು ಯಶಸ್ವೀ ವ್ಯವಹಾರ ಬೆಳೆಸುವ ಉದ್ದೇಶವೊಂದಕ್ಕೆ ಚಾಲನೆ ನೀಡುತ್ತಿದ್ದುದು ಖಂಡಿತ. ಬೌದ್ಧಿಕ ವಲಯವಾಗಬೇಕಿದ್ದ ಮೂರು ದಿನಗಳ ಸಮ್ಮೇಳನ, ಕೆಲವೇ ಕೆಲವು ಸಂದರ್ಭಗಳಲ್ಲಿ ನಿರೀಕ್ಷಿತ ಯಶಸ್ಸು, ಸಂಭ್ರಮ ಕಂಡಿದ್ದರೆ ಅದು ಕನ್ನಡದ ಪುಣ್ಯವೇ ಹೌದು. ಆದರೆ, ಆ ಯಶಸ್ಸಿಗೆ, ಸಂಭ್ರಮಕ್ಕೆ ಮಾನದಂಡ ಯಾವುದು? ಸೇರಿದ್ದ ಜನರ ದೃಷ್ಟಿಯಿಂದ ಇದು ಯಶಸ್ವೀ ಸಮ್ಮೇಳನ ಅಂದುಕೊಳ್ಳಲು ಯಾವ ಅಡ್ಡಿಯೂ ಇಲ್ಲ ಅನ್ನುವುದು ಒಂದು ಮಾನದಂಡ ಆಗಬಹುದಾ? ಸಾಹಿತ್ಯ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ನಿರ್ದಿಷ್ಟ ವ್ಯಕ್ತಿ, ವಸ್ತು, ವಿಷಯದ ಸುತ್ತ ಕೇಂದ್ರೀಕೃತವಾಗಬೇಕಿದ್ದ ಸಮ್ಮೇಳನ ಅದೊಂದು ಬಿಟ್ಟು ಮತ್ತೆಲ್ಲ ಆಗಿದೆಯಾ? ಅಥವಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೆಂಬುದು ಹೀಗೆಯೇ, ಇಂತೆಯೇ ಇರಬೇಕೆಂದು ಭಾಷ್ಯ ಬರೆದಿಡಲಾಗಿದೆಯಾ? ನಗರ ಕೇಂದ್ರಿತವಾಗುತ್ತಿರುವ ಬದುಕಿನಲ್ಲಿ ಕಳೆದುಹೋಗುತ್ತಿರುವ ಊರು, ಜಾತ್ರೆ, ಹಬ್ಬ… ಎಲ್ಲ ವರ್ಷಕ್ಕೊಮ್ಮೆ ಒಂದೇ ಊರಿನಲ್ಲಿ ಒಟ್ಟಾರೆ ಸಿಗುವ ಅಲಿಖಿತ ಒಪ್ಪಂದದಂತೆ ನಡೆಯುತ್ತದಾ ಈ ಕನ್ನಡದ ಜಾತ್ರೆ?

ಆಯೋಜಿಸುವುದು ಸರಿ. ಆದರೆ, ಯಾವ ಮೂಲ ಉದ್ದೇಶದ ಈಡೇರಿಕೆಗಾಗಿ, ’ಈ ರೂಪದಲ್ಲಿ’ ನಡೆಯಬೇಕು ಸಮ್ಮೇಳನ? ಹೀಗೇ ನಡೆಯುವುದೇ ಸರಿಯಾದ ರೀತಿಯಾ? ಇದಕ್ಕೊಂದು ಬೇರೆಯದೇ ಆದ ರೂಪ ಕೊಡುವುದು ಸಾಧ್ಯವಿಲ್ಲವಾ? ಅಥವಾ ಅಂಥದ್ದೊಂದು ವಿಚಾರದ ಅವಶ್ಯಕತೆಯೇ ಇಲ್ಲವಾ?

ಒಂದರ ಹಿಂದೊಂದು ಪ್ರಶ್ನೆಗಳು..

ಪ್ರಶ್ನೆಗೊಂದು ಉತ್ತರದ ಅವಶ್ಯಕತೆಯೇ ಇಲ್ಲವೆಂಬಂತೆ ಒಂದರ ಹಿಂದೊಂದು ಸಮ್ಮೇಳನಗಳು, ಸಂಭ್ರಮಗಳು.. ಪ್ರತಿಯೊಂದೂ ಗುಂಪಿನಲ್ಲಿ ಗೋವಿಂದ. ನಿರೂಪಣೆಯೆಂಬ ಸಣ್ಣ (?) ವಿಷಯವನ್ನು  ಉದಾಹರಣೆಯಾಗಿ ತೆಗೆದುಕೊಂಡರೆ – ಸಮ್ಮೇಳನದ ವೇದಿಕೆಯ ಒಂದು ತುದಿಯಲ್ಲಿ ಮೈಕಿಗೆ ಬಾಯಿ ಹಚ್ಚಿ ಒದರುತ್ತಿದ್ದವ ಹಲವಾರು ನಿರೂಪಕರಲ್ಲೊಬ್ಬ. ಉಚ್ಚಾರ ಸ್ಪಷ್ಟವಿತ್ತು, ಗಂಟಲ ಗಟ್ಟಿಯಿತ್ತು ಎನ್ನುವುದು ಆತನ ಗುಣ. ಅದೇ ಸಮಯಕ್ಕೆ ಆತ – ’ದರ್ಪ ಮೆಟ್ಟಿದ ಸರ್ಪ’ ಎಂಬ ಜಗತ್ಪಸಿದ್ಧ ನಾಟಕದ ’ಕಾಳಿಂಗ’ನ ಪಾತ್ರಧಾರಿಯಂತೆ ಆಡುತ್ತಿದ್ದುದೂ, ಅವನ ಭಯಂಕರ ಮಾತಿನ ಮೋಡಿಯಲ್ಲಿ ವೇದಿಕೆಯ ಮೇಲೆ ಕೆಳಗಿದ್ದವೆರೆಲ್ಲ ಸಂಪೂರ್ಣವಾಗಿ ಕಳೆದು ಹೋದದ್ದೂ ಸುಳ್ಳಲ್ಲ. ಒಬ್ಬ ನಿರೂಪಕನಿಗೂ, ಅರ್ಥಧಾರಿಗೂ, ನಾಟಕ ಪಾತ್ರಧಾರಿಗೂ ಇರಬೇಕಾದ ಮತ್ತು ಅವರು ಅಳವಡಿಸಿಕೊಳ್ಳಬೇಕಾದ ಮಾತಿನ ಧಾಟಿಯೇ ಬೇರಲ್ಲವಾ? ಸಮ್ಮೇಳನದ ನಿರೂಪಕ ನಾಟಕ ಮಾಡತೊಡಗಿದರೆ ಹೇಗೆ?

ಇರಲಿ. ನಿರೂಪಣೆ, ಧ್ವನಿ, ಬಿಸಿಲು, ಧೂಳು… ಮುಂತಾದ ಸಣ್ಣಪುಟ್ಟ ದೂರುಗಳನ್ನೆಲ್ಲ ಸುತ್ತಿಟ್ಟ ಸಮ್ಮೇಳನದ ಪೆಂಡಾಲುಗಳಲ್ಲಿ ಮುಚ್ಚಿ ಅದೇ ಮೈದಾನದಲ್ಲಿ ಮೂರಡಿ ಅಗೆದು ಹೂತಿಟ್ಟು, ಅದರ ಮೇಲೊಂದು ವೇಲಂಟೈನ್ ಡೇಗಾಗಿ ಬಂದ ಕೆಂಪು ಹೂವಿಟ್ಟುಬಿಡುವ. ಆದರೆ, ಗಮನ ವಹಿಸಬೇಕಾದ ವಿಷಯಗಳಿವೆಯಲ್ಲ – ಅವನ್ನೇನು ಮಾಡಬೇಕು? ಯಾವ ನಿರೀಕ್ಷಿತ ಕಾರಣಕ್ಕಾಗಿ ಸಮ್ಮೇಳನವನ್ನು ಅನುಭವಿಸಬೇಕು? ಯಶಸ್ವಿಯೆಂದು ಗುರುತಿಸಬೇಕು?

ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ, ಕನ್ನಡ – ಕನ್ನಡಪರ ಸಂವೇದನೆಯ ದಿಕ್ಕಿನಿಂದ, ಸಾಹಿತಿಗಳ ಇರುವು ಮತ್ತು ಅವರ ಕೃತಿಗಳ ಲಭ್ಯತೆಯಿಂದ, ವಿಮರ್ಷಾತ್ಮಕ ದೃಷ್ಟಿಕೋನದಿಂದ…. ಮತ್ತೆ ಇನ್ನೂ ಯಾವ ಯಾವ ಕಾರಣಕ್ಕಾಗಿ ಈ ಸಮ್ಮೇಳನ? ಇಲ್ಲಾ, ಇವೆಲ್ಲ ಕಾರಣಗಳನ್ನು ಒಟ್ಟಿಗೆ ಸೇರಿಸಿ ಒಂದು ಸಮ್ಮೇಳನ ಅನ್ನುವುದಾದರೆ, ಆ ಎಲ್ಲ ಅಂಶಗಳನ್ನೂ ಒಳಗೊಂಡಿತ್ತಾ ಈ ಸಮ್ಮೇಳನ? 

ಹೌದು ಅನ್ನುವುದು ಉತ್ತರವಾಗುತ್ತದಾದರೆ ಸರಿ. ಇಲ್ಲವಾದರೆ, ಒಟ್ಟಾರೆ/ಶೇಕಡಾವಾರು ಲೆಕ್ಕವಾಗುತ್ತದೆ. ಅದೂ ಇಲ್ಲದಿದ್ದರೆ, ಮತ್ತೇನಿಲ್ಲ – ಮುಂದಿನ ತಯಾರಿ.

ರಥ ಗಂಗಾವತಿಗೆ ಹೊರಡುತ್ತದೆ. ಮತ್ತೊಂದು ವಿಶೇಷ. ಮತ್ತೆ ಮುಖಪುಟ ಸುದ್ದಿ. ವರದಿ, ವಿಶೇಷಾಂಕ. ನೀವಲ್ಲಿ,  ಪೆಂಡಾಲಿನೊಳಗೋ, ಮರದ ಕೆಳಗೋ ನಿಂತಿದ್ದರೆ, ಪಕ್ಕದಲ್ಲೊಬ್ಬರು ವೀರಾವೇಶದಲ್ಲಿ ಘೋಷಿಸುತ್ತಿರುತ್ತಾರೆ – ’ನಾನು ಮತ್ತೆ ಮತ್ತೆ ಉದ್ಧರಿಸಿದೆ. ಎಷ್ಟು ಹೇಳಿದರೇನು ಪ್ರಯೋಜನ? ಇವರೆಲ್ಲಾ ನಾಲಾಯಖ್ಖು I say. ಖನ್ನಡಾ ಉದ್ಧಾರಾ ಆದಾಂಗೆ…  I will not tolerate this. Too much it is….’ ಕಿವಿ ತುಂಬಿಕೊಂಡು ಜಾಗ ಬದಲಿಸಿದರೆ, ಸಮ್ಮೇಳನ, ಭಾಷಣ, ಘೋಷಣೆ, ವರದಿ – ವಾಚನ, ಜನ, ಸದ್ದು, ಗದ್ದಲ, ಮಳಿಗೆ – ಮಾರಾಟ….ಈ ಲೊಕದ ಪರಿವೆಯೇ ಇಲ್ಲದೆ ನಾಲ್ಕು ಬೆರಳುಗಳ ನಡುವೆ ಹುಡಿ ಹಾರಿಸಿ ಶೇಂಗಾ ತಿನ್ನುವ ಸಪೂರ ಹೆಂಗಸು. ಅವಳನ್ನೂ ಸೇರಿಸಿ ಪೂರ್ತಿ ಸಮ್ಮೇಳನವನ್ನು ಕಾಣಿಸುವ ಟೀವಿಗಳು. ಭಯಂಕರ ಕೆಲಸ ಸಿಕ್ಕ ಖುಷಿಯಲ್ಲಿ ಹಾರ ಹಾಕಿಕೊಂಡು ಓಲಾಡುವ ಪತ್ರಕರ್ತ ಮಿತ್ರರು. ಮಳಿಗೆಳೊಳಗೆ ಸುಮ್ಮನೆರಡು ಪುಸ್ತಕ ಕದಿಯುವವರು, ಜಗತ್ತಿನಲ್ಲೆಲ್ಲೂ ಸಿಗಲಾರದೆಂಬಂತೆ ಇಪ್ಪತ್ತೇ ಇಪ್ಪತ್ತು ರುಪಾಯಿ ಕೊಟ್ಟು ಚೆಡ್ಡಿ ಖರೀದಿಸುವವರು…. ಒಂದಾ ಎರಡಾ? ದಿನವೊಂದನ್ನು ನಾಲ್ಕು ಭಾಗ ಮಾಡಿದಂತೆ ಕಂತಿನಲ್ಲಿ ಬಂದು, ಕುರ್ಚಿ ತುಂಬಿಸಿ, ಕಂತಿನಲ್ಲೇ ಹೋಗುವ ಕನ್ನಡಿಗರು, ವಿಶೇಷ ವಲಯದಲ್ಲಿ ಆಸೀನರಾಗುವ VVIP, VIPಗಳು. ಬಾಸಿಂಗವೊಂದು ಬಿಟ್ಟು ಉಳಿದೆಲ್ಲ ಎರಿಸಿಕೊಂಡೇ ಇರುವ ವಿಶೇಷ ವ್ಯಕ್ತಿತ್ವಗಳು…. ಎಲ್ಲವುಗಳ ನಡುವೆ ಅಧ್ಯಕ್ಷರ ಕೇಳಲೇಬೆಕಾದ ಮಾತುಗಳು,  ಮತ್ತಿಷ್ಟು ವಿಶೇಷ ಭಾಷಣಗಳು, ಹೇಳಿಕೆಗಳು, ಘೋಷಣೆಗಳು, ಹಾಡುಗಳು….

ಎಲ್ಲ ಒಟ್ಟಿನಲ್ಲಿ ದಕ್ಕಿಸಿಕೊಳ್ಳಬಹುದಾ?

ಅದು ಸಾಧ್ಯವಾಗದೇ ಹೋದರೆ, ಮಧ್ಯಮದ ಸಹಾಯ ಪಡೆಯಬೆಕು. ವರದಿಗಳನ್ನು ಕೇಳಬೇಕು, ಓದಬೇಕು… ಸಮ್ಮೆಳನದ ಜಾಗವೇನಿದ್ದರೂ ಜಾತ್ರೆ ಪೇಟೆಯಷ್ಟೆ.

ಸಮ್ಮೇಳನಕ್ಕೊಂದು ಹಾಜರಿ ಹಾಕಿ, ಪೂರ್ತಿಯಾಗಿ ಅನುಭವಿಸುವುದಕ್ಕೂ, ಮಾಧ್ಯಮದ ಮೂಲಕ ತಿಳಿದುಕೊಳ್ಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂದೇ ನನ್ನ ನಂಬಿಕೆ. ಅದು Virtual ಜಗತ್ತಿಗೂ Actual ಜಗತ್ತಿಗೂ ಇರುವ ವ್ಯತ್ಯಾಸ. (ಈ ವ್ಯತ್ಯಾಸ ಇಂತಹ ಸಂದರ್ಭಗಳಲ್ಲಿ,  ಅದಲು ಬದಲಾಗುತ್ತಿರುವ ಸಂಭವವೂ ಇದೆ.) ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ತಿಯಾಗಿ ಮಾಧ್ಯಮದ ಮುಖಾಂತರವೇ ಸಿಗುವುದಾದರೆ ಮತ್ತು ಆಯೋಜಿಸಲ್ಪಟ್ಟ ಕಾರ್ಯಕ್ರಮ ದೊಡ್ಡ ಪ್ರಮಾಣದ ಜಾತ್ರೆಯೇ ಆಗುವುದಾದರೆ, ಓಟ್ಟಾಗಿ ಆಯೋಜಿಸಲ್ಪಡುವ ಈ ಕಾರ್ಯಕ್ರಮ ಎರಡು ಬೇರೆ ಬೇರೆ ರೂಪದಲ್ಲಿ ದೊರೆಯಬಾರದು??

ಎಷ್ಟೆಲ್ಲ (?) ಖರ್ಚು ಮಾಡುವ, ಖರ್ಚಿನ ವಿಷಯದಲ್ಲಿ ಎಲ್ಲರನ್ನೂ/ಸಂದರ್ಭಗಳಲ್ಲಿ  ಕನ್ಪ್ಯೂಜ್ ಮಾಡುವ (ಚುಲ್ ಬುಲ್?) ಎಲ್ಲ ದೊಡ್ಡ ಜನರಲ್ಲಿ ಇಷ್ಟೇ ಅಲ್ಲ ಮತ್ತೂ ಬೇಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಶಕ್ತಿಯಿದೆ. ಅದಿಲ್ಲದಿದ್ದಲಿ, ಕನ್ನಡಮಾತೆ ಎಲ್ಲರಿಗೂ ಆ ಶಕ್ತಿಯನ್ನು ಕೊಡಲಿ…

ವರ್ಲ್ಡ್ ಸ್ಪೇಸ್

ಮಧುರ ಹಾಡುಗಳ ಮರೆಯಲ್ಲಿ ಸದ್ದಿಲ್ಲದೆ ನಡೆದಿರುವ ಸೂಕ್ಷ್ಮ ಅವನತಿಯ ಕುರಿತು ಓದುತ್ತಿದ್ದರೆ, ಇಹದ ಅಶರೀರವಾಣಿಗಳ ಅಸಾಮಾನ್ಯ ಸದ್ದನ್ನು ಕೇಳಿಸಿಕೊಳ್ಳುತ್ತ ತೀರಿಹೋದ ’ವರ್ಲ್ಡ್ ಸ್ಪೇಸ್’ ರೇಡಿಯೊ- ಪರದಲ್ಲಿ ಚಿಕ್ಕದೊಂದು ಮರುಹುಟ್ಟಿನ ಚಿಂತನೆಯನ್ನೂ ನಡೆಸದೆ ಮಲಗಿಬಿಟ್ಟಿರುವುದು ಗಮನಕ್ಕೆ ಬರುತ್ತದೆ.

ಆಕಾಶವಾಣಿಯ ಹಾಡುಗಳ ಮಾಧುರ್ಯ, ಇತಿ ವಾರ್ತಾ: ಟಿಪಿಕಲ್ ಹಿನ್ನೆಲೆ ಸಂಗೀತ, ಕಾಮೆಂಟರಿ- ಅದರ ಜೊತೆಗಿನ ಪುಕ್ಕಟೆ ಸದ್ದು, ಗದ್ದಲ, ಗಾಳಿ… ಪ್ರತಿಯೊಂದೂ ಗಾಳಿಯೊಳಗೆ ಲೀನವಾಗುತ್ತ ನಡೆದು ಎಫ್. ಎಮ್. ಎಂಬ ಮಾಯಾ ಬಝಾರು ಚಾಲ್ತಿಗೆ ಬಂದು ಪಕ್ಕಾ ಅಸಂಬದ್ಧಗಳಿಗೆಲ್ಲ ಒಂದೊಂದು ಸಂಬಂಧ ಕಲ್ಪಿಸಿ, ತಾನು ನಡೆದದ್ದೇ ದಾರಿ ಎಂಬಂತೆ ಹೊರಟಿರುವಾಗ ಕಳೆದುಹೋಗುತ್ತಿರುವ ಆಕಾಶವಾಣಿ ಹಾಗೂ ಕಳೆದುಹೋಗಿರುವ WorldSpace ರೇಡಿಯೊಗಳು ನೆನಪಿಗೆ ಬರದಿದ್ದರೆ, ಅದಕ್ಕೆ ಕಾರಣ- ಈ ಎಫೆಮ್ಮುಗಳ ಗದ್ದಲವೇ ಇರಬಹುದು ಅನ್ನಿಸಿಬಿಡುತ್ತದೆ.

ಕನಿಷ್ಟ ಎರಡೆರಡು ನಿಮಿಷಗಳ ಕಾಲ ನಿಲ್ಲಿಸುವ ಸಿಗ್ನಲ್ಲುಗಳಿಗಿಂತ ಒಂದು ಕೈ ಮೇಲು ಈ ಚಾನಲ್ಲುಗಳು. ೨೪/೭ ವಟವಟ. ನಡುವಲ್ಲೊಂದು ಹಾಡು ಸಿಗುತ್ತದೆನ್ನುವುದು, ’ಇದು ರೇಡಿಯೊ ಎಂಬುದಕ್ಕೆ ಸಾಕ್ಷಿ ಮಾತ್ರ’. ಅವಕಾಶವಾದಿಗಳ ನಗರದಲ್ಲಿ ಈ ಎಫೆಮ್ಮುಗಳು ಆಕಾಶವಾದಿಗಳು ಅಷ್ಟೆ! ಮಾಧ್ಯಮದ ಯಾವ ಗುಣ ಲಕ್ಷಣಗಳನ್ನೂ ಮೈಗೂಡಿಸಿಕೊಳ್ಳದೆ, ಕೇವಲ ಆರ್ಥಿಕ ಹಿತಾಸಕ್ತಿಯನ್ನು ಮಾತ್ರ ಬೆಳೆಸಿಕೊಂಡು, ಪೋಷಿಸಿಕೊಂಡು ಬರುತ್ತಿರುವ ಭಾರತೀಯ ಎಫೆಮ್ ಚಾನೆಲ್ಲು ಜನಕರಿಗೆ ಗರಿಷ್ಟ ಎರಡು ನಿಮಿಷದ ಉದ್ಧಂಡ ನಮಸ್ಕಾರವಿರಲಿ. ಕಡಿಮೆಯಾಗುತ್ತ ಹೋಗುವ ಹಸಿರಿನ ನಡುವೆ, ನಾನೂ ಪಕ್ಕಾ ಹಸಿರೆ ಎನ್ನುತ್ತ ಬೆಳೆಯುವ ಕಳೆಗಳಂತೆ ಇವು..

ಪಕ್ಕಾ ಭಾರತೀಯ ಚಾನಲ್ಲುಗಳು ಅನ್ನುವಾಗ- ಈ WorldSpace, Liberty Media, Sirius XM ಮುಂತಾದ ಚಾನಲ್ಲುಗಳು ನೆನಪಿಗೆ ಬರುತ್ತವೆ. ದಿವಾಳಿಯೆದ್ದ WorldSpace, ದಿವಾಳಿಯ ನಂತರ ಸುದ್ದಿಗೆ ಬಂದ Liberty/Sirius ಮುಂತಾದ ಸಂಸ್ಥೆಗಳು ಇವತ್ತಿಗೂ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರೆ ಅದಕ್ಕೆ ಮೂಲ ಕಾರಣ- ಅಲ್ಲಿಂದ ಹೊರಟ ಉತ್ಕೃಷ್ಟ ಸಂಗೀತ. ಉತ್ತಮ ಹಾಡುಗಳು. ಅಲ್ಲೊಂದು ವೈವಿಧ್ಯತೆ ಇತ್ತು. ಆಯ್ಕೆಗೆ ಹಲವು ಅವಕಾಶಗಳಿದ್ದವು. ಶೇಕಡಾ ನೂರರಷ್ಟು ಡಿಜಿಟಲ್ ಗುಣಮಟ್ಟ ಇತ್ತು. ಎಲ್ಲಕ್ಕಿಂತ ಹೆಚ್ಚು– RJಗಳ ಅರಚುವಿಕೆ, ಜಾಹೀರಾತುಗಳ ಅಬ್ಬರವಿರಲಿಲ್ಲ.

ಮೂಲ ವ್ಯತ್ಯಾಸವಿರುವುದೇ ಆಯ್ಕೆಯಲ್ಲಿ. ಎಫೆಮ್ಮುಗಳ ಸೇವೆ ವರ್ಷ ಪೂರ್ತಿ ಬಿಟ್ಟಿ ಬೀಳುತ್ತದೆ ಬಾಗಲಲ್ಲಿ. ಕನಿಷ್ಟ ಎರಡೂವರೆ ರೂಪಾಯಿಯನ್ನು ಸಹ ಕೊಡುವ ಅವಶ್ಯಕತೆಯಿಲ್ಲ. (ಅದಕ್ಕಿಂತ ಜಾಸ್ತಿ ರದ್ದಿ ಸಿಗುವ ದುರಾಸೆಯೂ ಇಲ್ಲ ಬಿಡಿ) ಐದು ನಿಮಿಷ ಹಾಡು, ಹತ್ತು ನಿಮಿಷ ಆರ್ಜೆಗಳ ಅತಿರೇಕಗಳ ಜೊತೆ ಹದಿನೈದು ನಿಮಿಷ ಜಾಹೀರಾತು ಪ್ರಸಾರ ಮಾಡುವಾಗ ಎಲ್ಲಾ ಚಾನುಲ್ಲಗಳ ಪೂರ್ತಿ ಗಮನವಿರುವುದು- ಜಾಹೀರಾತಿನ ಮೇಲಷ್ಟೆ. ಯಾವ ಹಾಡು, ಯಾರ ಹಾಡು, ಯಾರ ಸಂಗೀತ.. ಅದೆಲ್ಲ ಯಾರಿಗೆ ಬೇಕು? ಹಾಡು ಮಾತ್ರ ಜಾಹೀರಾತಿನ ಅಲೆಗಳ ನಡುವೆ ಆಗಾಗ ಸಿಗುವ ಸಿಹಿ ಅಪಘಾತಗಳಷ್ಟೆ.

ಇಂದಿಗೆ, ಎಫೆಮ್ಮುಗಳಿಗೆ- ಅವರ ಭಯಂಕರ Schedule ಗಳಿಗೆ ನಾವು ಸೀಮಿತವಾಗಿದ್ದರೆ ಅದಕ್ಕೆ ಕಾರಣವೂ ಸಹ ನಾವೇ.

ಎರಡು ಸಾವಿರದಷ್ಟು ಬಂಡವಾಳ, ಹದಿನೆಂಟುನೂರು ರೂಪಾಯಿ ವಾರ್ಷಿಕ ಚಂದಾ ಕಟ್ಟಿಬಿಟ್ಟರೆ ದಿನಪೂರ್ತಿ ಕೇಳಬಹುದಾದ ಸಂಗೀತವನ್ನು ಸೀದ ಚಟ್ಟಕ್ಕೆ ಹತ್ತಿಸಿ ವರ್ಷದ ಮೇಲೂ ಒಂದು ತಿಂಗಳಾಯಿತು. ವರ್ಲ್ಡ್ ಸ್ಪೇಸ್ ಕೇಳಿದ್ದೇ ಅಷ್ಟಲ್ಲವಾ? ತಾನು ದಿವಾಳಿಯೆದ್ದಿದ್ದರೂ ಕೆಲಕಾಲ ಸೇವೆ ಮುಂದುವರೆಸಿದ ಕಂಪನಿಯನ್ನು ಬದುಕಿಸಿಡುವ ಆಯ್ಕೆ ನಮ್ಮದೇ ಆಗಿತ್ತಲ್ಲವಾ? ಜಗತ್ತಿನ ಮೂರರಲ್ಲಿ ಎರಡು ಭಾಗ ತಲುಪುತ್ತಿತ್ತು ವರ್ಲ್ದ್ಸ್ಪೆಸ್- With its own satellite. With six beams. ಒಂದೊಂದು beam ೮೦ ಚಾನೆಲುಗಳನ್ನು ಪ್ರಸಾರ ಮಾಡುವ ಶಕ್ತಿ ಹೊಂದಿದೆಯೆಂದು ಅವರ Web ಈಗಲೂ ಹೇಳುತ್ತ ಕುಳಿತಿದೆ. ಆದರೆ, ಅವರಿಗೀಗ ಕೇಳಿಸುವ ಚೈತನ್ಯ ಕಳೆದುಕೊಂಡಿದ್ದೇವೆಂದು ಸಾರಿ, ಕೈತೊಳೆದುಕೊಂಡು ಎರಡನೆ ವರ್ಷ. ನೂರಾನಲವತ್ತಕ್ಕೂ ಅಧಿಕ ದೇಶಗಳಲ್ಲಿ ಅವರು ಕೇಳಿಸಿದ ಸಂಗೀತ ಎಲ್ಲಿ? ಈ ಪ್ರಾದೇಶಿಕ ಚಾನೆಲ್ಲುಗಳ ಇವತ್ತಿನ ಅಬ್ಬರ ಎಲ್ಲಿ? ನಮಗೆ ಒಳ್ಳೆಯದು ಬೇಕು. ಆದರದು ಹೇಗೆ ಸಿಗಬೇಕು ಅನ್ನುವುದರ ಕುರಿತು ಯಾವ ಕಾಳಜಿಯೂ ಇಲ್ಲವಾಗಿದೆಯಾ? ಅಥವಾ ಅಂಥದ್ದೊಂದು ಕಾಳಜಿ, ಆಸಕ್ತಿ, ಸಿದ್ಧತೆ ಇರುವವರನ್ನು ಏಳದಂತೆ ಮಲಗಿಸಿಬಿಡುತ್ತದಾ ಇಂದಿನ ’Revenue Generating Module’ಗಳು? ನಾವು ನಾವೇ ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗುವ ಸುದ್ದಿ ಬಿಡಿ, ಕನಿಷ್ಟ ಪಕ್ಷ ಆಗಲೇಬೇಕಾದ ಬದಲಾವಣೆಗಳಾದರೂ ಆಗಬಹುದಾ?

ಅದು ಸಾಧ್ಯವಿಲ್ಲದ ಮಾತೇ ಇರಬಹುದು..

ಇಷ್ಟದವರಿಗೆ ಉಡುಗೊರೆಯಾಗಿ ಕೊಟ್ಟೆ, ದಿನದ ೨೪ ಗಂಟೆಯೂ ಹಚ್ಚಿಟ್ಟೇ ಕಳೆದೆ, ನಿಂತಲ್ಲಿ, ಕುಳಿತಲ್ಲಿ, ಮಲಗಿದಲ್ಲಿ, ಸಾಧ್ಯವಾದಲ್ಲೆಲ್ಲ ಕೇಳಿಸಿಕೊಂಡೆ, ಕನಿಷ್ಟ ನಾಲ್ಕು ಜನರಿಗೆ ಕೊಡಿಸಿದೆ…. ಎಂಬೆಲ್ಲ ಮಾತುಗಳೂ ಮುಗಿದು, ಈಗ, ಅದೊಂದು ಸಿಸ್ಟಮ್ ಹಾಗೇ ಬಿದ್ದಿದೆ, ನೆನೆಸಿಕೊಂಡರೆ ಇನ್ನೂ ಸಂಕಟ, ಬಾಕಿ ಉಳಿದ ಹಣ ಹಾಗೆ ಇರಲಿ- ಉತ್ಕೃಷ್ಟ ಸೇವೆಗೆ ಸಲ್ಲಲಿ ಅದು, ನನ್ನದೇ ಒಂದು ಭಾಗ ಕಳೆದುಕೊಂಡಂತಾಗಿದೆ…. ಇತ್ಯಾದಿ ಮಾತುಗಳು ಕೇಳಿಸುತ್ತವೆ. ಅಲ್ಲಲ್ಲಿ. ಅಷ್ಟು ಮಾತೂ ಕೇಳಿಸದ ಜಾಗದಲ್ಲೆಲ್ಲ ಎಫೆಮ್ಮೇ ಎಫೆಮ್ಮು!

ಸಹಿಸಿಕೊಳ್ಳಲೇಬೇಕು, ಈಗ ಸಿಗುತ್ತಿರುವ ಪುಕ್ಕಟೆ ಮನರಂಜನೆಯನ್ನು. ಸದಸ್ಯರಾಗಿದ್ದವರೆಲ್ಲ, ವರ್ಲ್ದ್ ಸ್ಪೇಸ್ ಉಳಿಸಿಹೋಗಿರುವ ಖಾಲಿ ಡಬ್ಬಿಯನ್ನು ಸವರಿ ಕನಿಷ್ಟ ಒಂದು ನಿಮಿಷ ಮೌನಾಚರಣೆ ಮಾಡಬೇಕು..

ನಿರೀಕ್ಷೆ

ಪದ್ಮನಾಭನಿಗೊಂದು ಕೆಲಸ
ತುರ್ತಾಗಿ ಬೇಕು

ಅಂಥಾ ಗಾಬರಿಯೇನಿರಲಿಲ್ಲ ನಿನ್ನೆ
ಮೊನ್ನೆಯವರೆಗೂ
ಪಾಲುದಾರನಾಗಿದ್ದ ಕ್ಲಾಸಮೇಟು (ಕಂ ರೂಂಮೇಟು)
ನಾಳೆಯ ನಿರೀಕ್ಷೆಯಲ್ಲಿ ಜೊತೆಗಿರುವವರೆಗೆ.
ಎಂದಿನಂತಿರದ ಒಂದು ಸಂಜೆ
ಧಾರವಾಡ ಫೇಡೆ ಕೊಟ್ಟು
ಪಕಪಕ ಕಿವಿವರೆಗೆ ನಗುವವರೆಗೆ

ಅವನಿಗೆ ಸಿಕ್ಕಿದ್ದು ತನಗೂ
ಸಿಗುತ್ತದೆಂಬ ಖಾತರಿಯಿಂದ ತಿಂದ
ಸಿಹಿ ಗಂಟಲೊಳಗೆ ಇಳಿದು ಜೀರ್ಣ
ಆಗುವುದರೊಳಗೆ ದೋಸ್ತ
ಬೇರೆಯದೇ ಗೃಹದ ಜೀವಿಯಂತೆ

ಕಾಣಿಸಿ ಫಳಫಳ ಅವನ
ಅಡ್ಡಡ್ಡ ನಡಿಗೆಯಲ್ಲಿ ಆತ್ಮವಿಶ್ವಾಸ
ಇದ್ದಬದ್ದ ನಿರೀಕ್ಷೆಗಳೆಲ್ಲ
      ಅಕ್ಕ ಹೊಲಿದಿಟ್ಟ ಪಲಕಿ
      ಅಪ್ಪ ಹೆಕ್ಕಿಟ್ಟ ಉಳ್ಳೆ
      ಆಯಿ ಹಚ್ಚಿಟ್ಟ ದೀಪದಲ್ಲೇ ಅವಿತು
ಅಣಕಿಸುತ್ತಿರುವಂತೆ ಭಾಸ
ತಿನ್ನುವ ಒಂದೊಂದು ತುತ್ತಿಗೂ ಆಯಾಸ

ಕೈ ಬಿಡುತ್ತ ಕೊನೆಯ ನೋಟು
ಕೈ ಹಿಡಿಸಿದ ತಟ್ಟೆಯೊಳಗೆ
ಅದದೇ ಲೆಕ್ಕ ತಿರುಗಿ ಮುರುಗಿ
ಉಳಿದ ಚಿಲ್ಲರೆ ತಾಳೆಹಾಕುತ್ತ
ತಿಂದ ಲಿಮಿಟೆಡ್ ಮೀಲ್ಸ್ ವಗರು ವಗರು

ಬೆಳಗಾದರೆದ್ದು ಹೊರಡಬೇಕು
ಮಾಸಿದ ಫೈಲಿನೊಳಗೆ ನಾಳೆ ಹಿಡಿದಿಟ್ಟು
ಕೆಲಸವೊಂದ ಪಡೆದು ಸಂಧಾನ ಮಾಡಿಸಬೇಕು

ಕಿತ್ತೊಸೆದು ಸುಮ್ಮನಾಗಿದ್ದಾನೆ
ಬೆಚ್ಚಗೆ ಹೊದ್ದ ಮೆತ್ತಗಿನ ಚಾದರ
ನಿದ್ದೆಯ ನಿರೀಕ್ಷೆಯಲ್ಲಿ ಅಂದುಕೊಂಡಿದ್ದಾನೆ
ಫೇಡೆ ಅಂಗಡಿಗೊಂದು ವ್ಯಾಪಾರ ಆಗಲೇಬೇಕು

ಮೊದಲ ಕಂತಿನ ಋಣ ಸಂದಾಯ
ಮಾಡಿದ ನಂತರವೆ ಬೆಚ್ಚಗೆ
ಚಾದರ ಹೊದ್ದು ಮಲಗಬೇಕು

Categories: ಕವನ ಟ್ಯಾಗ್ ಗಳು:, ,