ಮುಖ ಪುಟ > ಹಾಗೆ ಸುಮ್ಮನೆ > ಮುಗಿದು ಹೋಗುವ ವರ್ಷವನ್ನ ರಿವೈಂಡ್ ಮಾಡೋಕಾಗತ್ತಾ ಅಂದ್ಕೊಂಡು…

ಮುಗಿದು ಹೋಗುವ ವರ್ಷವನ್ನ ರಿವೈಂಡ್ ಮಾಡೋಕಾಗತ್ತಾ ಅಂದ್ಕೊಂಡು…

ಯಾವುದನ್ನು ಮಾಡಬಾರದು ಅಂದ್ಕೊಂಡಿರ್ತೀನೋ ಅದನ್ನೇ ಮಾಡೋದು ಅಭ್ಯಾಸ ಆಗಿ ಹೆಚ್ಚೂ ಕಡಿಮೆ ನನಗಾಗಿದ್ದರ ಅರ್ಧದಷ್ಟು ವರ್ಷ ಆಯ್ತೇನೋ. ನಾನಾಗಲೆ ಇಪ್ಪತ್ತರ ಲೆಕ್ಕ ಬಿಟ್ಟು ಮೂವತ್ತರ ಲೆಕ್ಕ ಪ್ರಾರಂಭಿಸಿದ್ದೇನೆ. ಇಪ್ಪತ್ತರ ಮೊದಲರ್ಧ ಮುಗಿದಮೇಲೆ ಇನ್ನೇನು ಮೂವತ್ತು ಬಂದೇಬಿಡುತ್ತೆ ಅಲ್ವಾ? ಆಗಲೇ ಕಿವಿಯ ಹತ್ತಿರದಲೆಲ್ಲೊ ಸುಮ್ಮನೆ ಕಾಣಿಸಿದ ಬೆಳ್ಳನೆಯ ಕೂದಲು ನೀನೇನು ಹೊಳೆವ ಕಪ್ಪು ಕೂದಲಿನ ಸಾಮ್ರಾಟನಲ್ಲ! ಅಂದಾಂಗಿತ್ತು ಮೊನ್ನೆ ಮೊನ್ನೆ. ನಾನೂ ಅಂದಿದೀನಿ, ಅದೆಷ್ಟು ಹುಟ್ಕೋತೀರೋ ಹುಟ್ಕೊಳ್ಳಿ ಅಂತ. ನಾನಂತೂ ಅದ್ರಷ್ಟು ಬೆಳ್ಳಗಿಲ್ಲ ಅದಾದ್ರೂ ಇರ್ಲಿ ಅಂದ್ಕೊಂಡ್ರೆ ಯಾಕೋ ಆರು ತಿಂಗ್ಳಿಂದ ಎರಡ್ನೇ ಬಿಳಿ ಕೂದ್ಲು ಹುಟ್ತಾನೆ ಇಲ್ಲಾ.. ಮೂವತ್ತಕ್ಕೆ ಮತ್ತೊಂದು ವರ್ಷ ಕಡಿಮೆ ಆಗ್ಬೇಕು ಅಂದ್ರೆ ಮತ್ತೆ ಜುಲೈ ತಿಂಗ್ಳಿಗೆ ಕಾಯ್ಬೇಕು. ಆಗ್ಲಾದ್ರೂ ಮತ್ತೊಂದೆರಡು ಹುಟ್ತಾವೇನೋ?

ಹನ್ನೆರಡು ತಿಂಗಳಲಿನ ಅವಧಿಯಲ್ಲಿ ಎರಡು ಸಲ ವರ್ಷ ಪೂರ್ತಿಯಾಗುತ್ತೆ ನಂಗೆ. ನಿಮ್ಮೆಲ್ಲರಂತೇ.  ಒಮ್ಮೆ ನನಗೆ ಒಂದು ವರ್ಷ ಹೆಚ್ಚಾದರೆ ಮತ್ತೊಮ್ಮೆ ವರ್ಷಕ್ಕೇ ವರ್ಷವಾಗುತ್ತೆ. ನನಗಾದ ವರ್ಷದ ಪ್ರಭಾವದಿಂದಾಗಿ ಈ ವರೆಗೆ ಅದೇನು ಆಗಿವೆಯೋ ಅದಕ್ಕೆಲ್ಲ ನಾನು ಜವಾಬ್ದಾರನಲ್ಲ. ಕೇವಲ ವರ್ಷದ ಜವಾಬ್ದಾರಿ ಅದು. ಅಷ್ಟು ಬಿಟ್ರೆ ಪ್ರತೀ ವರ್ಷ ಒಂದಲ್ಲ ಒಂದು ತಿಕ್ಕಲು ಹಚ್ಚಿಕೊಂಡಿರ್ತೀನಿ. ಒಳ್ಳೇದಾದ್ರೆ ನಂಗೇ, ಕೆಟ್ಟದಾದ್ರೂ. ಇಷ್ಟರವರೆಗೆ ಕೈ ಸುಟ್ಟಿಕೊಂಡಿದ್ದೆ ಜಾಸ್ತಿ. ಅಂತಾದ್ದೊಂದು ಕೆಲಸ ಮಾಡಿರ್ತೀನಿ. ಜುಲೈ ತಿಂಗಳಲ್ಲಿ ಶುರು ಮಾಡಿದ್ದು ಡಿಸೆಂಬರ್ ಮುಗಿಯೋದ್ರೊಳಗೆ ಅಷ್ಟಕ್ಕಷ್ಟೇ ಆಗೋದ್ರಿಂದ ಹೊಸ ವರ್ಷಕ್ಕೆ ಅಂತ ವಿಶೇಷವಾಗಿ ಏನೂ ಮಾಡಲ್ಲಾ ಅಂತ ಗಟ್ಟಿಯಾಗಿ ಹೇಳ್ಕೊಂಡಿರ್ತೀನಿ. ನಂಗೇ.

ನಿನ್ನೆ ಸಂಜೆ ಹಾಗಂದೆ. ವರ್ಷಕ್ಕೇ ವರ್ಷ ಜಾಸ್ತಿ ಆಗ್ತಿರೋವಾಗ ನಂದೇನು ಮಹಾ. ಹೊಸ ವರ್ಷಕ್ಕೆ ಅಂತ ಏನೂ ವಿಶೇಷ ಇಲ್ಲಾ ಸುಮ್ನೆ ಮುನ್ನೂರರವತ್ತೈದು ದಿನ ಕಳೀತೀನಿ. ಈ ಬಾರಿ ಏನು ಅಂತ ಕೇಳಿದ ನನ್ನ ಬಾಸ್ ಸಿಟ್ಟಾಗಿ ಯಾವತ್ತೂ ಇಷ್ಟೇ ಅಂತ ಬೈದು ತಲೆ ಕುಕ್ಕಿ ಹೋದ್ಲು. ಅಷ್ಟು ಮಾತಿಗೆ. ಡೆಲ್ಲಿ ಮೂಲದ ಚಂದದ ಹೆಂಗಸು ಅವಳು. ಕಳೆದ ವಾರವಷ್ಟೆ ಮೂವತ್ತು ಮುಗಿಸಿದ್ದಾಳೆ. ಡಿಸೆಂಬರ್ ಮೂವತ್ತಕ್ಕಾಗಲೇ ಕನಿಷ್ಟ ಮುನ್ನೂರು ಬೆಳ್ಳಿಕೂದಲಿವೆ ಅವಳ ತಲೇಲಿ. ಅವಳು ತಣ್ಣಗಿರಲಿ. ಮುಗಿಯುತ್ತಿರುವ ವರ್ಷದಲ್ಲಿ ಆದ ಒಳ್ಳೆಯದಕ್ಕೆ ಅವಳೂ ಕಾರಣ.

ಮೊನ್ನೆ ಮೊನ್ನೆ ಮುಗಿದ ಹಾಗಿದೆ ಜೂನ್ ತಿಂಗಳು. ಆಗಲೇ ತಲೆಹೊಕ್ಕಿದ್ದು ಈ ಬ್ಲಾಗ್ ವಿಚಾರ. ನಾನೂ ಒಂದು ಬ್ಲಾಗ್ ಶುರು ಮಾಡ್ಬೇಕು ಅಂತ. ಪ್ರಯತ್ನಕ್ಕೆ ಅಂತ ಒಂದು ಪೋಸ್ಟ್ ಕೂಡಾ ಮಾಡಿ ಕೂತ್ಕೊಂಡೆ, ಜುಲೈ ತಿಂಗಳು ಅರ್ಧ ಆಗ್ಲಿ ಶುರು ಮಾಡ್ವ ಬ್ಲಾಗಾಯಣ ಅಂದ್ಕೊಂಡು. ಅಷ್ಟಾಗಿ ಕೆಲವೇ ಕೆಲವು ದಿನ, ಹಾರಿ ಹೊರಟಿದ್ದ ಪಟ ದಿಕ್ಕು ತಪ್ಪಿತು ನೋಡಿ. ಇನ್ನೂ ಲಯಕ್ಕೆ ಬಂದಿಲ್ಲ. ವರ್ಷ ಮುಗಿಯಲು ಇನ್ನೊಂದೇ ದಿನ. ಅಷ್ಟರೊಳಗೆ ಯಾಕೋ ಒಂದಿಷ್ಟು ಬರೀಬೇಕು, ಬ್ಲಾಗ್ ಲೋಕಕ್ಕೆ ಮತ್ತೆ ಹೊಕ್ಕಬೇಕು ಅಂದ್ಕೊಂಡು ಮತ್ತೆ ಬಂದೆ ನೋಡಿ, ನೀವೆಲ್ಲಾ ಸಿಕ್ಕಿದ್ರಿ. ಹೆಚ್ಚೂ ಕಡಿಮೆ ೨೫ ಪೋಸ್ಟ್ ಮಾಡಿದೆ. ಅದರ ಎರಡರಷ್ಟು ಜನ ಪರಿಚಯವಾದ್ರು. ನಾನು ಬರೆದ ಸಾಲುಗಳು (ಅದನ್ನ ಕವನ ಅಂತ ನಾನು ಅನ್ನಲ್ಲ) ಚೆನ್ನಾಗಿವೆ ಅಥವಾ ಚೆನ್ನಾಗಿಲ್ಲ ಅನ್ನೋ ವಿಚಾರಕ್ಕೇ ಹೋಗಿಲ್ಲ ನಾನು. ಕವನ, ಲೆಖನಗಳಿಗಿಂತಾ ಚೆಂದದ ಗೆಳೆಯರು, ಗೆಳತಿಯರು ಸಿಕ್ಕಿದ್ದಾರೆ. ಬಿಟ್ಟರೆ ನೀವೊಂದೆರಡು ಒಳ್ಳೆ ಮಾತಾಡಿದ್ರೆ ಖುಷಿಪಟ್ಟಿದ್ದೇನೆ. ಅಷ್ಟು ಸಾಕು. 
ನೀವೆಲ್ಲಾ ಚಂದದ ಕವನ, ಲೇಖನ ಬರೆವವರು, ಬ್ಲಾಗ್ ಲೋಕದಲ್ಲಿ ಕ್ರಿಯಾಶೀಲವಾಗಿರುವವರು ಪ್ರತಿಯೊಬ್ಬರೂ ಆಪ್ತವೆನ್ನಿಸುತ್ತೀರಿ. ಕೇವಲ ಮೂರು ತಿಂಗಳ ಮಾತು, ತಿರುಗಿ ನೋಡಿದ್ರೆ ಎಷ್ಟೊಂದು ಖುಷಿ ಖುಷಿ…  ಮೂರ್ನಾಲ್ಕು ಪ್ರಯತ್ನಗಳು ಅಲ್ಲಲ್ಲಿ ಪ್ರಕಟ ಕೂಡಾ ಆದ್ವು. ಇಷ್ಟರವರೆಗೆ ಎನಂದ್ರೆ ಏನೂ ಬರೀದೆ ಇದ್ದ ನನ್ನಂತಾ ನನಗೆ ಇನ್ನೇನು ಬೇಕು. ನೀವೆಲ್ಲಾ ಬರೆವವರ, ಓದುವವರ ಹೊಸ ವರ್ಷ ಸುಂದರವಾಗಲಿ. ಇನ್ನೂ ಚಂದದ ಕತೆ, ಕವನ, ಲೇಖನಗಳು ಮೂಡಿಬರಲಿ. ಬರಹಗಳನ್ನ ಪ್ರಕಟಿಸುವ ಎಲ್ಲರಿಗೂ  ವಾಹ್ ಅನ್ನುವಂತಾ ಬರಹ ಸಿಗಲಿ, ಅವರಿಗೆ ವರ್ಷಪೂರ್ತಿ ಯಶಸ್ಸು ಸಿಗಲಿ… ಹೊಸ ಬೆಳವಣಿಗೆಯಾಗಲಿ. ಹಾಗಂತ ಅಂದ್ಕೊಂಡೆ ಇಲ್ಲೇ ಕೂತಲ್ಲಿ. ಹಾಗೇ ಆಗ್ಲಿ.

ನಂದೇನು ಮಹಾ, ಹತ್ತಿಸಿಕೊಂಡ ಹೊಸ ಹುಚ್ಚು ಈ ಬ್ಲಾಗಿಂಗು! ಅದನ್ನ ಮುಂದುವರೆಸಬೇಕು. ಸಾಧ್ಯ ಆದ್ರೆ ಒಳ್ಳೇದೇನಾದ್ರೂ ಬರೀಬೆಕು. ಅಷ್ಟೇ. ಅದಕ್ಕಾಗಿ ಹೊಸ ವರ್ಷ ಬರಲಿ ಅಂತ ಕಾದಿದ್ದೇನೆ. ಆಗಾಗ ಬಂದು ಒಂದು ಮಾತು ಹೇಳುತ್ತಿರಿ. ಬರೆದಿದ್ದು ಸರಿಯಿಲ್ಲವಾದರೆ ಸಹಿಸಿಕೊಳ್ಳಿ ಕೆಲವು ದಿನ. ಸರಿ ಇರಲ್ಲ ನಾನು ಬರೆದಿದ್ದು ಅಂತ   ಗೊತ್ತಾಗುತ್ತೆ ನೀವು ಬಂದು ಹೋಗೊದ್ರಿಂದಾಗಿ. ಆಮೇಲೆ ನಿಮ್ಮ ಮುಂದೆ ಬರಲ್ಲ, ಹೇಗಿದೆ ಅಂತ ಕೇಳ್ಕೊಂಡು. ಅಷ್ಟೊತ್ತಿಗೆ ಇನ್ನೇನಾದ್ರೂ ಮಾಡ್ಕೊಂಡು ಹೊರಟಿರ್ತೀನೇನೋ? ಅದೂ ಒಂದು ಹೆದರಿಕೆ ಇದೆ. ನೋಡ್ವಾ…

ನೀವೆಲ್ಲ ಹೊಸ ವರ್ಷಕ್ಕೆ ಭಾರೀ ಗದ್ದಲ ಮಾಡ್ತಾ ಹೊರಡಿ. ನಾನು ಇದೇ ವರ್ಷವನ್ನ ರಿವೈಂಡ್ ಮಾಡ್ಬೇಕು ಅಂದ್ಕೊಂಡಿದೀನಿ. ಹಾಗೇ ತಿಂಗಳು ತಿಂಗಳಾಗಿ ಹೊರಟರೆ, ಜುಲೈ ತಿಂಗಳಲ್ಲಿ ಹೊರಟುಹೋದ ನನ್ನಪ್ಪ ತಿರುಗಿ ಸಿಕ್ತಾರಲ್ವಾ? ಅದ್ಕೇ….

ನೀವು ಹೊಸಾ ಗೆಳೆಯರು, ಹಳೆ ಗೆಳೆಯರು, ಈ ವರ್ಷದಲ್ಲೇ ನನ್ನೂರಿಗೆ, ನಮ್ಮನೆಗೆ ಬರುತ್ತೇನೆಂದವರು ಹೊಸವರ್ಷದಲ್ಲಿ ಬನ್ನಿ….

ಪ್ರೀತಿಯಿರಲಿ.
ನಿಮ್ಮವ,

ಕಲ್ಲರೆ.

Advertisements
Categories: ಹಾಗೆ ಸುಮ್ಮನೆ ಟ್ಯಾಗ್ ಗಳು:
 1. Brunda
  31/12/2008 ರಲ್ಲಿ 5:48 ಅಪರಾಹ್ನ

  Hosa varushada shubhashayagalu, nivu heleda hage ide varshuvannu rewind madidare nimage nimma thande siguthare, nanage nanna Husband siguthare, aguvadadre hele nanu try maduthene.

  nimma boss blog oduvodilla vendu thubha comment madidare, nimma boss ge kannada hele koduthene.

 2. 01/01/2009 ರಲ್ಲಿ 12:09 ಅಪರಾಹ್ನ

  ಆತ್ಮೀಯ ಬರಹ ತುಂಬಾ ಆಪ್ತವೆನಿಸಿತು. ನಿಮಗೂ ಕೂಡಾ ಹಾರ್ದಿಕ ಶುಭಾಶಯಗಳು. ತುಂಬಾ ರಿವೈಂಡ್ ಮಾಡ್ಬೇಡಿ. ಹಳೆತರಲ್ಲಿ ಸಂತಸವನ್ನೀವ ವಿಷವನ್ನಷ್ಟೇ ಆದಷ್ಟು ರಿವೈಂಡ್‌ಮಾಡಿ ಜೊತೆಗೆ ಕೊಂಡೊಯ್ಯಿರಿ. ಉಳಿದುದಕ್ಕೆಲ್ಲಾ ಕಲ್ಲುಚಪ್ಪಡಿ ಎಳೆದು ಅದರ ಮೇಲೆ ಹೊಸವರುಷದ ಮನೆಕಟ್ಟಿಬಿಡಿ ಏನಂತೀರಾ? 🙂

 3. Suvarna Hegde
  01/01/2009 ರಲ್ಲಿ 6:18 ಅಪರಾಹ್ನ

  Bossina mele kanna maraya………………………..

 4. Suvarna Hegde
  01/01/2009 ರಲ್ಲಿ 6:22 ಅಪರಾಹ್ನ

  physically ille andre namma hatra ille anta artha alla, avarella yavagalu namma jothe irtha navu illi ira thanaka. nin appa yavagalu. Navu adanna feel madikollabeku ashte.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: