ಮುಖ ಪುಟ > ಕತೆ -ಕಥೆ > ಪರಮ ಪ್ರಯಾಣ

ಪರಮ ಪ್ರಯಾಣ

ಇಲ್ಲಿಂದ ಗಾಂಧಿ ನಗರಕ್ಕೆ ಹದಿನೈದು ಕಿಲೋಮೀಟರು. ಅಲ್ಲಿಂದ ಒಂದು ನಾಲ್ಕುನೂರು ಕಿಲೋಮೀಟರಿಗೆ ಹೊನ್ನಾವರ. ಹೊನ್ನಾವರದಿಂದ ಕಾಸರಕೋಡು ಆರು. ಮತ್ತೊಂದರ್ಧ ಫರ್ಲಾಂಗು ನಡೆದರೆ ಕೆಳಗಿನೂರು. ಎಲ್ಲಾ ಸೇರಿಸಿದರೆ ಹನ್ನೊಂದು ತಾಸಿನ ದಾರಿಯಷ್ಟೆ. ಮೈಗೆ ಮನಸಿಗೆ ಒಂದಷ್ಟು ಕಷ್ಟ ಆದರೂ ಸರಿ ಹೊರಟೇಬಿಡುವುದೆಂದು ನಿಶ್ಚಯಿಸಿದರು ಪರಮೇಶ್ವರ ಭಟ್ಟರು. ಅವರು ಒಂಥರಾ ಹಾಗೇ. ಲೆಕ್ಕಾಚಾರಸ್ಥರು. ಪ್ರತೀ ಸಲ ಹೊರಟಾಗಲೂ ಲೆಕ್ಕ ಹಾಕುತ್ತಾರೆ. ಪ್ರತಿಯೊಂದಕ್ಕೂ ಗುಣಾಕಾರ ಭಾಗಾಕಾರ ಮಾಡುತ್ತಾರೆ. ನಿರ್ಧಾರಕ್ಕೆ ಬರುತ್ತಿದ್ದಂತೆ ಹೆಂಡತಿಯನ್ನು ಕೂಗುತ್ತಾರೆ. ’ಮಾಕೀ..’ – ಹೆಂಡತಿಯನ್ನು ಹಾಗೇ ಕರೆಯುವುದು ಅವರು. ಇವತ್ತಿಗೆ ಇಪ್ಪತ್ತೆಂಟು ವರ್ಷಗಳ ಹಿಂದೆ ಮಹಾಲಕ್ಷ್ಮೀ ಅಂತ ಬಾಯ್ತುಂಬಾ ಕರೆಯುತ್ತಾ ಅಪ್ಸರಕೊಂಡ, ಹೊನ್ನಾವರದ ಸುತ್ತೆಲ್ಲಾ ರಂಗೇರಿಸಿದ್ದು ಬಿಟ್ಟರೆ ಕುತ್ತಿಗೆಗೆ ಮೂರು ಗಂಟು ಬಿಗಿದ ನಂತರ ಭಟ್ಟರ ಬಾಯಲ್ಲಿ ಆಕೆಯ ಪೂರ್ತಿ ಹೆಸರು ಹೊರಡಲೇ ಇಲ್ಲ. ಅದೇ ಸಮಯಕ್ಕೆ ಮಾಕೀ ಅಂದರೆ ಆಕೆಗೂ ಒಂಥರಾ ಖುಷಿಯಾಗುತ್ತಿತ್ತು. ಪರಮ, ಪರಮಾ, ಪರಮೇಶ್ವರ ಅಂತೆಲ್ಲಾ ಕರೆಯುವುದು ಬಿಟ್ಟು ಗಂಭೀರವಾಗಿ ’ಹೊಯ್’ ಅನ್ನುವುದಕ್ಕಾರಂಭಿಸಿ ಮದುವೆಯ ಮೊದಲಿನ ಪಕ್ಕಾ ಪೋಕರಿತನವನ್ನು ಗುಡಿಸಿ ಮನೆಯಾಚೆ ಎಸೆದುಬಿಟ್ಟಳು. ಭಟ್ಟಾ, ಕೊರಮ, ಪೋಕರಿ ಅಂತ ಕರೀತಿದ್ದ ತನ್ನ ಗಂಡುಬೀರಿ ಸ್ವಭಾವವನ್ನಂತೂ ಮನೆಯಿಂದ ಹೊರಟ ಐದು ನಿಮಿಷಕ್ಕೇ ಹೊನ್ನಾವರ ಹೊಳೆಗೆ ಎಸೆದು ಬಂದಿದ್ದಳು ಮಹಾಲಕ್ಷ್ಮಿ. ಹಾಗೆ ಬೆಂಗಳೂರೆಂಬ ಬೆಂಗಳೂರಿನಲ್ಲಿ ಸಂಸಾರ ಹೂಡಿದ ಪರಮ-ಮಾಕಿ ದಂಪತಿಗಳಿಗೀಗ ವಯಸ್ಸಿಗೆ ಬಂದ ಮಗಳಿದ್ದಾಳೆ. ಇತ್ತೀಚೆಗಷ್ಟೆ ಓದು ಮುಗಿಸಿ ಕೆಲಸಕ್ಕೂ ಹೋಗುತ್ತಿದ್ದಾಳೆ. ಒಟ್ಟಿನಲ್ಲಿ ಚಿಕ್ಕ ಚೊಕ್ಕ ಸಂಸಾರ ಭಟ್ಟರದು. 

ಹೊರಡುವ ತಾಸಿಗೆ ಮೊದಲಷ್ಟೆ ತೀರ್ಮಾನ ಮಾಡಿದ ಭಟ್ಟರು ಮಾಕಿಯನ್ನು ಪಕ್ಕಕ್ಕೆ ಕೂರಿಸಿಕೊಂಡು ಸೂಕ್ಷ್ಮವಾಗಿ ಹೊರಟ ವಿಚಾರ ತಿಳಿಸಿದರು. ತನ್ನ ನಿರಂತರ ಪ್ರಯತ್ನ ಸಫಲವಾಯಿತೆಂಬಂತೆ ಮಾಕಿ ಒಳಗೊಳಗೇ ಖುಷಿ. ತೋರಿಸಿಕೊಳ್ಳದೆ ತಾನು ಹೊರಡುವ ತಯಾರಿ ಮಾಡುತ್ತೇನೆಂದು ಭಟ್ಟರಿಗೆ ಬಚ್ಚಲಿನ ದಾರಿ ತೋರಿಸುವಷ್ಟರಲ್ಲಿ ಭಟ್ಟರು ಬಾಯಿ ತುಂಬಾ ಕವಳ ಹಾಕಿದರು. ಬಚ್ಚಲಿಗೆ ಹೊರಟರು. – ಹೊರಡುವ ಮೊದಲು ಸ್ನಾನ ಮಾಡುವುದು ಭಟ್ಟರ ಬಹಳ ಕಾಲದ ರೂಢಿ- ಮೈ ತೊಳೆದುಕೊಂಡು ಉಟ್ಟ ಲುಂಗಿ ಚಡ್ಡಿಯನ್ನು ಅಲ್ಲೇ ಉಳುಚಿಟ್ಟು ಟವೆಲ್ಲು ಸುತ್ತಿಕೊಂಡು ಬರುತ್ತಾರೆ.  ಸ್ನಾನ ಆಯಿತೆಂಬಂತೆ ಹೊರಬಂದು ಕೆಮ್ಮಿದಾಗ ಅನಾಥ ಮುದ್ದೆಯಂತೆ ಬಿದ್ದಿರುವ ಭಟ್ಟರ ಚಡ್ಡಿ ಲುಂಗಿಯನ್ನು ತೊಳೆಯಲು ಹೋದಳು ಮಾಕಿ. ಹೊರಬಂದವಳೇ ದೇವರ ಮುಂದೆ ಕೂತೆದ್ದು ಬಂದ ಭಟ್ಟರಿಗೆ ಗರಿಗರಿ ಚಡ್ಡಿ ಕೊಟ್ಟಳು. ಭಟ್ಟರು ಚಡ್ಡಿಯನ್ನೊಮ್ಮೆ ಮೂಸಿ ನೋಡಿ – ಅದಕ್ಕೆ ಸಾಬೂನಿನ ಪರಿಮಳವಿರಬೇಕು- ಕೈಹಾಕಿ ಚಡ್ಡಿಯನ್ನು ಉಲ್ಟಾ ಮಾಡಿ ಹಾಕಿಕೊಂಡು ಇಸ್ತ್ರಿ ಮಾಡಿಟ್ಟ ಜುಬ್ಬಾ ಹಾಕಿದರು. ಹದಿನೈದು ನಿಮಿಷ ಕೂದಲು ಬಾಚಿದರು. ಕೂದಲೆಂದರೆ ಬಹಳ ಹೆಮ್ಮೆ ಅವರಿಗೆ. ಬಿಟ್ಟರೆ ನಿಮಗಿಂತಾ ಜಾಸ್ತಿ ಇದೆ ನೋಡೆ ಅಂತ ಆಗಾಗ ಹೆಂಡತಿ ಮಗಳನ್ನು ಹಂಗಿಸುತ್ತಾರೆ. ಏನಾದರೊಂದು ಹೇಳುತ್ತ ಬಾಗಿಲ ಪಕ್ಕದಲ್ಲಿ ಹೊಳೆಯುತ್ತ ಬಿದ್ದ ಚಪ್ಪಲು ಮೆಟ್ಟುತ್ತಾ ಒಳಕೋಣೆಯತ್ತ ನೋಡಿ ಕಣ್ಣ್ಮುಚ್ಚುತ್ತಾರೆ. ಇಡಗುಂಜಿ ಗಣಪತಿಯ ಆಳೆತ್ತರದ ಫೋಟೋಕ್ಕೊಂದುಬಾರಿ ಕೈಮುಗಿದು ಪ್ರಾರ್ಥಿಸಿಯೇ ಹೊರಡಬೇಕು. ಹೊರಡುವ ಮೊದಲು ಹೆಂಡತಿಗೊಂದು ಮಾತು. ನಡೆಸಿಕೊಂಡು ಬಂದದ್ದು ಅದು.

ಎಂದಿನಂತೆ ಕೈಮುಗಿದು ಮರುಕ್ಷ್ಣದಲ್ಲೇ ಹೆಂಡತಿಗಿಷ್ಟು ಅರ್ಚನೆ ಮುಗಿಸಿ ಹೊರಟರು ಪರಮ ಭಟ್ಟರು. ಅರ್ಧ ಗಂಟೆಯಲ್ಲಿ ಗಾಂಧೀನಗರ ತಲುಪಿಸಿದ ಡ್ರೈವರನ ಕೈಗಿಷ್ಟು ಕಾಸು ತುರುಕಿ ತಮಗಾಗೇ ಕಾಯುತ್ತಿದ್ದ ಬಸ್ಸು ಹತ್ತಿದರು. ಬಸ್ಸು ಸಾವಕಾಶವಾಗಿ ಹೊರಡುತ್ತ ಅಲ್ಲಲ್ಲಿ ನಿಲ್ಲುತ್ತ ನಿಲ್ಲುತ್ತ ಚೂರೇ ಚೂರು ಅನುಮಾನವಿದೆ ಅನ್ನುವಂತೆ ರೋಡು ಸೇರುವಾಗ ಭಟ್ಟರಿಗೆ ಬಿಲದಿಂದ ಹೆಗ್ಗಣ ಹೊರಬಿದ್ದಂತೆ ಭಾಸವಾಯಿತು. ರೋಡಿಗೆ ಮುಖ ಕೊಟ್ಟು ತಮ್ಮನ್ನು ತಂದು ತಲುಪಿಸಿದ ರಸ್ತೆ ನೋಡಿದ್ದೇ ತಡ ಹೆಂಡತಿಗಾಡಿದ ಮಾತುಗಳು ತಿರುಗಿಬಂದು ತಮ್ಮ ತಲೆಯಮೇಲೆ ಕುಳಿತಂತೆ ಅನಿಸಿತು. ’ಇವಳೇ, ಮಗಳ ವಕೀಲತಿ ಮನೇನೂ ಮಗಳ್ನೂ ಸರಿಯಾಗಿ ನೋಡ್ಕ. ಕ್ಲಾಸು ಸರಿಯಾಗಿ ನಡೆಸು. ನಿನ್ನ ಮಗಳಿಗೆ ಮತ್ತೊಂದ್ಸಲ ತಿಳ್ಸಿ ಹೇಳು. ಇಬ್ರೂ ಒಂದೆ. ನಜಬೊಂಡ ಯೋಗದವರು. ನನ್ನ ಮರ್ಯಾದೆ ಮಣ್ಣು ಮಾಡುದಕ್ಕೇ ಹುಟ್ಟಿದ್ದು ಅದು. ನನ್ನ ಕರ್ಮ, ತೀಟೆಗೆ ಹುಟ್ಟಿಸ್ದಾಂಗಾತು. ಹೀಂಗೆ ದಿನಾ ದಿನಾ ಸಾಯ್ಸು ಬದ್ಲು ಹುಟ್ಟದಾಗೇ ಸತ್ತೋಗಿದ್ರೆ ಚೊಲೋ ಆಗಿತ್ತು. ಪಿಶಾಚಿ ಮುಂಡೇದು. ಭೂಮಿಗೆ ಭಾರ ಕೂಳಿಗೆ ದಂಡ. ನಂಗೊಂದ್ಮಾತೂ ತಿಳಿಸ್ದೆ ಇಷ್ಟು ಮುಂದುವರ್ದ್ಲು. ನಿಂದೂ ಕುಮ್ಮಕ್ಕಿತ್ತು ಬಿಡು. ನಿನ್ನಾಂಗೆ ನಿನ್ನ ಮಗಳು.’ ತಾವು ಮುಕ್ಕಾಲು ಗಂಟೆ ಮೊದಲು ಆಡಿದ ಮಾತು ತಮ್ಮನ್ನೇ ತಿನ್ನುವಂತೆನಿಸಿ ತಲೆ ಸುತ್ತಿದಂತಾಗಿ ಕಣ್ಮುಚ್ಚಿದರು ಭಟ್ಟರು.  ಕಣ್ಮುಂದೆ ಕೊಡಾಣಿ, ಶರಾವತಿ, ಹೊನ್ನಾವರ, ಅಪ್ಸರಕೊಂಡ ಹಾದು ಹೋದವು. ಪರಮೇಶ್ವರ ಭಟ್ಟರು ಹಳೆಯ ನೆನಪುಗಳಲ್ಲಿ ಪರಮನಾಗಿ ಕಳೆದುಹೋಗತೊಡಗಿದರು.

-**-

ಕಲಾವಿದರಾಗಿ ಇವತ್ತಿಗೆ ದೊಡ್ಡ ಹೆಸರು ಸಂಪಾದಿಸಿ ಪರಮೇಶ್ವರ ಭಟ್ಟರಾಗಿರುವ ಅಂದಿನ ಪರಮ ಭಟ್ಟ ಹುಟ್ಟಿದ್ದು ಹೊಳೆತೀರದ ಕೊಡಾಣಿಯಲ್ಲಿ. ಶರಾವತಿಗೆ ತಾಗಿಕೊಂಡಿರುವ ಪಿತ್ರಾರ್ಜಿತ ಆಸ್ತಿಯನ್ನು ನೋಡಿಕೊಂಡು ಮಾಸ್ತರಿಕೆಯನ್ನೂ ಮಾಡಿಕೊಂಡಿದ್ದ ನಾಣಮಾಸ್ತರರ ಮಗನಾಗಿ. ಮೊದಲಿಗೆ ನಾಲ್ಕು ಜನರ ಸಂಸಾರ. ನಂತರ ಮೂರೇ ಜನ- ಮಾಸ್ತರು, ಮಗಳು ಶರಾವತಿ, ಮಗ ಪರಮ. ಪರಮ ಹುಟ್ಟಿದ ಎರಡು ವರ್ಷದೊಳಗೆ ಒಂದು ದಿನ ನಾಣಮಾಸ್ತರರ ಹೆಂಡತಿ ಹೇಳದೆ ಕೇಳದೆ ತನ್ನ ವಯಸ್ಸೇ ಇಷ್ಟು ಅನ್ನುವಂತೆ ಪ್ರಾಣ ಬಿಟ್ಟು ಮಾಸ್ತರು ಒಂಟಿಯಾಗುವಂತೆ ಮಾಡಿದ್ದಳು. ಒಬ್ಬಂಟಿ ಮಾಸ್ತರು ಮತ್ತೆ ಮದುವೆಯಾಗದೆ ಇಬ್ಬರು ಮಕ್ಕಳನ್ನೂ ತಾವು ಕೆಲಸ ಮಾಡುವ ಉಪ್ಪೋಣಿ ಶಾಲೆಯಲ್ಲೇ ಕಲಿಸಿ ನಂತರ ಹೊನ್ನಾವರದಲ್ಲಿ ಹೈಸ್ಕೂಲ್ಲಿಗೆ ಸೇರಿಸುವುದರೊಂದಿಗೆ ವಿಧುರ ಜೀವನಕ್ಕೆ ಏಕಾಂತದ ಕ್ಷಣಗಳ ಸೇರ್ಪಡೆಯಾಯಿತು. ಮಕ್ಕಳಿಬ್ಬರ ಅಪ್ಪನಿಂದಲೂ ದೂರವಾದ ಬಾಲ್ಯವೂ.

ಮಗಳು ಹತ್ತನೇ ಕ್ಲಾಸಿಗೂ ಮಗ ಒಂಬತ್ತಕ್ಕೂ ಹೊಗುವಾಗ ಮಳೆಗಾಲದ ಒಂದು ದಿನ ಸಿಂಬಳ ಸುರಿಸುತ್ತಾ ಬಂದ ಮಕ್ಕಳನ್ನು ಹೈಗುಂದ ಡಾಕ್ಟರಿಗೆ ತೋರಿಸಿ ಔಷಧ ತೆಗೆದುಕೊಂಡು ಹೊಳೆಯಾಚಿನ ಕೊಡಾಣಿಗೆ ಹೊರಟರು ಮಾಸ್ತರು. ನಡೆದುಕೊಂಡೇ ತಾರಿ ಬಾಗಿಲಿಗೆ ತಲುಪಿದಾಗ ಮಳೆ ನಿಲ್ಲದೇ ಸುರಿದು ಶರಾವತಿ ಅಗಲವಾಗುತ್ತಾ ನಡೆದಿದ್ದಳು. ’ಮ್ಯಾಲೆ ನೀರು ಬಿಟ್ಟರಂತೆ’ ಯಾರೋ ಅನ್ನುತ್ತಿದ್ದುದು ಕಿವಿಗೆ ಬಿತ್ತು.  ಮಾಸ್ತರು ಮಕ್ಕಳಿಬ್ಬರನ್ನೂ ತಮ್ಮ ಪಕ್ಕಕ್ಕೆ ಕೂರಿಸಿಕೊಂಡು ಹತ್ತುವಾಗ ದೋಣಿ ತುಂಬಾ ಜನ. ಅಂಬಿಗರ ರಾಮನ ಜಲ್ಲಿಗೂ ನಿಲುಕದಷ್ಟು ನೀರು ಬಂದು ನಡುವೆ ಆಳ ಜಾಸ್ತಿಯಾಗುತ್ತಾ ಎರಡೂ ಬದಿಯ ಗದ್ದೆ ತೋಟವನ್ನು ನುಂಗುತ್ತಾ ಹೊರಟಿತ್ತು. ಹೆಚ್ಚೂ ಕಡಿಮೆ ಕೆಂಪಾಗಿದ್ದ ನೀರಲ್ಲಿ ದೋಣಿಗೆ ಹುಟ್ಟು ಹಾಕುತ್ತಿದ್ದ ರಾಮನ ಮುಂದೆ ಕುಳಿತ ಪರಮ ತಮಾಷೆಯಾಗಿದ್ದ. ಏ ಶರಾವತಿ ದಮ್ಮಿದ್ರೆ ಈಗ ಬಾ ನೋಡ್ವ. ಇವತ್ತು ಮೀಸ್ವ. ಗಂಭೀರೆ ಶರಾವತಿ ಸಿಡುಕಿದ್ದಳೂ – ನಿಂಗೆ ಆಟ ಮಾರಾಯಾ ನಂಗಿಲ್ಲಿ ಮನೆ ಮುಟ್ಟಿದ್ರೆ ಸಕಾಯ್ದು. ನಿನ್ನಾಂಗೆ ಹಂಡೆಮುಕಳೀ ಜ್ವರ ಅಲ್ಲಾ ನಂಗೆ. ನಾಣಮಾಸ್ತರ ದೃಷ್ಟಿಯಾಕೋ ಅಂಬಿಗರ ರಾಮನ ಮೇಲೆ ನೆಟ್ಟಿತ್ತು.

ದೋಣಿ ಅರ್ಧ ಹೋಳೆ ದಾಟಿ ಇನ್ನೇನು ಮತ್ತೆ ಅರ್ಧಚಂದ್ರಾಕೃತಿಯಲ್ಲಿ ತೇಲುತ್ತಾ ದಡ ಸೇರಬೇಕು. ತುದಿಯಲ್ಲಿ ಕೂತಿದ್ದ ಅಂಗಡಿಯ ಮೆಲ್ವಿನ್ ಯಾಕೋ ಬಗ್ಗಿಬಿಟ್ಟ. ಒಮ್ಮೆ ವಾಲಿದಂತಾದ ದೋಣಿಯ ತುಂಬಾ ಹೋ.. ಕೂಗಿದರು ಒಂದಿಬ್ಬರು. ಪರಮನೂ ಹೋ ಅಂದ. ಅಂಬಿಗರ ರಾಮ ವಾಲಿದವನ ಹೆಂಡತಿಯನ್ನೂ ನೆನಪಿಸಿಕೊಂಡು ಸೂಳಾಮಗನೆ ನೆಟ್ಟಗೆ ಕೂತ್ಕಂತ್ಯ ಇಲ್ವ? ಹೆಣ್ತಿ ಮೊಕ ಕಾಂಬು ಆಸೆ ಇಲ್ವ ಹೆಂಗೆ? ಅಂದು ಇನ್ನೊಂದು ತುದಿಯಿಂದ ತನ್ನ ಭಾಷಾ ಜ್ನಾನವನ್ನು ಪ್ರದರ್ಷಿಸಿದ. ಪರಮ ಭಟ್ಟನಿಗೆ ಅವನ ಮಾತು ಕೇಳುತ್ತಾ ಮತ್ತೊಮ್ಮೆ ಉಮೇದಿ ಬಂದು ಹಾರೇ ಶರಾವತಿ ಅನ್ನುತ್ತಿದ್ದಂತೆ ಮಾಸ್ತರು ಪಟ್ಟ್ ಅಂತ ಒಂದು ಬಿಟ್ಟರು ಮಗನ ಬೆನ್ನಿಗೆ. ಪರಮ ಕಿಸಕ್ ನಗೆಯಾಡಿದ. ತನಗೇನೂ ಆಗಿಲ್ಲವೆಂಬಂತೆ.

ಅದ್ಯಾವ ಘಳಿಗೆಯಲ್ಲಿ ಮಗನ ಬೆನ್ನಿಗೆ ಹೊಡೆದರೋ ಮಾಸ್ತರು? ಸರಿಯಾಗಿ ಅದೇ ಸಮಯಕ್ಕೆ ದೋಣಿಯೂ ಬೆನ್ನು ಮಗುಚಿತು. ಏನಾಯಿತೆಂದು ತಿಳಿಯುವಷ್ಟರಲ್ಲಿ ದೋಣಿಯಲ್ಲಿದ್ದವರೆಲ್ಲಾ ನೀರಿಗೆ ಬಿದ್ದಾಗಿತ್ತು. ಕಂಗಾಲಾದವರ ಅಷ್ಟಿಷ್ಟು ಕೂಗಾಟವೂ ಸುರಿಯುತ್ತಿದ್ದ ಮಳೆಯಲ್ಲಿ ಲೀನವಾಗಿ ಭಟ್ಟರು ಮಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ದಡದ ದಿಕ್ಕಿಗೆ ಹೊರಡುವಾಗಲೆ ಮಗ ಕಾಣದಾಗಿದ್ದ. ದೋಣಿಯಲ್ಲಿದ್ದ ಹದಿನೈದು ಜನರನ್ನು ಕಾಣಿಸುವಷ್ಟು ಹತ್ತಿರಕ್ಕೆ ಇದ್ದ ದಡ ಪಾರು ಮಾಡಿತ್ತು. ಮಾಸ್ತರೂ ದಡ ತಲುಪಿದರು. ಆದರೆ ಶರಾವತಿಯ ಕೈ ತಪ್ಪಿ ಕೆಂಪು ನೀರು ಆಕೆಯನ್ನು ತನ್ನಲ್ಲಿ ಸೇರಿಸಿಕೊಂಡಿತು. ತಲೆಯ ಮೇಲೆ ಕೈ ಹೊತ್ತು ಕೆಂಪು ನೀರನ್ನೆ ದಿಟ್ಟಿಸುತ್ತ  ಕುಳಿತಿದ್ದ ಭಟ್ಟರಿಗೆ ಆ ಹೊತ್ತಿಗೆ ಸಿಕ್ಕ ಒಂದೇ ಸಮಾಧಾನ ಪರಮ ಕಂಡಿದ್ದು. ಶರಾವತಿಯನ್ನು ಕೂಗುತ್ತಾ ಬಂದವನು ಅದ್ಯಾವ ಮಾಯೆಯಲ್ಲಿ  ದಡ ಸೇರಿದನೋ?  ಶರಾವತಿಯನ್ನು ಮಾತ್ರ ಕಳೆದುಕೊಳ್ಳುವುದರ ಸಾಲಿಗೆ ಸೇರಿಸಿತು ಹರಿವ ಶರಾವತಿ. ಮಾಸ್ತರು ಮತ್ತೊಮ್ಮೆ ಕಲ್ಲಾದರು.  ವಾರ ಕಳೆಯುವಷ್ಟರಲಿ ಕೊಡಾಣಿಗೆ ಕೊನೆಯ ನಮಸ್ಕಾರ ಹೇಳಿ ಕೆಂಬಾಲಿನ ಕಾಡು ಸೇರಿದರು. ಪರಮ ಒಬ್ಬನೇ ಹೊನ್ನಾವರ ಸೇರಿದ. ಬಜಾರ ರೋಡಿನ ಶಾನುಭೋಗರ ಮನೆಯ ತಿಂಗಳು ತಿಂಗಳು ದುಡ್ಡು ಕೊಡುವ ಅತಿಥಿಯಾಗಿ.

ದಿನ ಕಳೆದಂತೆ ಮಾಸ್ತರು ಮಂಕಾದಂತೆ ಕಂಡರೂ ತಾವು ಪ್ರಾಣ ಬಿಡುವ ಮೊದಲು ಮಗನನ್ನು ದಡ ಹತ್ತಿಸಬೇಕೆಂದು ನಿಶ್ಚಯಿಸಿದವರಂತೆ ಪರಮನಿಗೆ ಬೇಕಾದ ಸವಲತ್ತು ಒದಗಿಸಿದರು. ಪರಮನೂ ಆಸಕ್ತಿಯಿಂದ ಕಲಿತ. ನೀರಿಗೆ ಬಿದ್ದರೆ ಈಜಿ ಬಂದಂತೆ ಸರಾಗವಾಗಿ ಕೈ ಹಾಕಿದ್ದೆಷ್ಟೂ ದಕ್ಕಿಸಿಕೊಂಡ. ಆಡಿದ,ಹಾಡಿದ,ಓಡಿದ,ಓದಿದ ಪ್ರತಿಯೊಂದರಲ್ಲೂ ಗೆದ್ದ. ಕೆಂಬಾಲಿಗೆ ಬಂದವನು ಬೆಟ್ಟದಲ್ಲಿ ಸಿಕ್ಕಿದ ಕ್ಯೆರ, ಶಿವಣೆ ಮರದ ತುಂಡಿನಲ್ಲಿ ವಾದ್ಯಗಳನ್ನು ತಯಾರಿಸಿದ –  ಬಾರಿಸುವ ಕಲೆ ಹುಟ್ಟಿನಿಂದಲೇ ಬಂದಿತ್ತು ಪರಮನಿಗೆ – ತಾನು ತಯಾರಿಸಿದ ವಾದ್ಯ ಬಾರಿಸುತ್ತ ಬಾರಿಸುತ್ತ ಕೆಳಗಿನ ಕೇರಿಯ ಗೀತಾಳ ಎದೆಯಲ್ಲಿ ವಾದ್ಯ ಬಾರಿಸಿದ. ಹೊನ್ನವರದ ಕಾಲೇಜಿನಲ್ಲಿ ಪಿಯುಸಿ  ಮುಗಿಯುವಾಗಲೆ ಆತ ಮಹಾಲಕ್ಷ್ಮಿಯ ಜೊತೆ ಅಪ್ಸರಕೊಂಡದಲ್ಲಿ ಮಿಂದು, ಗೋಕರ್ಣಕ್ಕೆ ಹೋಗೋಣಾವ? ಅಂದಿದ್ದ.  ಅಷ್ಟರಲ್ಲಿ ರಾಮಕೃಷ್ಣನಿಗೆ ವಾಸನೆ ಹೊಡೆಯಿತು. ತನ್ನ ಗೆಳೆಯ –  ಮರದ ತುಂಡು ಕೆತ್ತುತ್ತ, ಸಿಕ್ಕಲ್ಲಿ ಹಾಕಿಕೊಂಡು ಬಿದ್ದಿರುವವ- ತನಗೆ ತಿಳಿಯದಂತೆ ತಂಗಿಯ ಜೊತೆ ಸುತ್ತುವುದಾ? ಆಕೆಗಿನ್ನೂ ಬರೀ ಹದಿನೇಳು. ಇವನಿಗೂ ಹೆಚ್ಚೂ ಕಡಿಮೆ ಅಷ್ಟೆ. ತನಗಿಂತ ಚಿಕ್ಕವನು. ಪರಮನ ಗೆಳೆಯ ರಾಕುಟ್ಟಿ ಮನೆಯಲ್ಲಿ ಗಲಾಟೆಯಬ್ಬಿಸಿದ. ಅಲ್ಲಿಗೆ ಮಹಾಲಕ್ಷ್ಮಿಯ ಅಭ್ಯಾಸ ಹನ್ನೊಂದನೆ ಕ್ಲಾಸಿಗೆ ಮುಗಿದು ಮನೆಯಲ್ಲಿ ಮುಸುರೆ ತಿಕ್ಕತೊಡಗಿದಳು.

ಏನಾಯ್ತೋ ರಾಕುಟ್ಟಿ? ಮಹಾಲಕ್ಷ್ಮಿ ಯಾಕೆ ಬರ್ತಿಲ್ಲ? ಕಾಲೇಜಿನಲ್ಲೊಂದು ದಿನ ಪರಮ ಕೇಳಿ ಮುಗಿಸುವುದರೊಳಗೆ ಕ್ಯಾಂಟೀನಿನ ಪೈಗೆ ಚಿಲ್ಲರೆ ಕೊಡುತ್ತಿದ್ದ ರಾಕುಟ್ಟಿ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಚಿಲ್ಲರೆ ಮಾತಾಡಿದ. ರಂಡೆ ಭಟ್ಟಾ ಇನ್ನೊಂದ್ಸಲ ಮಾತೆತ್ತಿದ್ರೆ ಹಲ್ಲು ಉದ್ರಸ್ತೆ ನೋಡು. ನಮ್ಮನೆಗೆ ಬಂದು ನನ್ನ ಹಾಸಿಗೆಮೇಲೆ ಮಲಗಿ, ಕೇಳಿ ಕೇಳಿ ಗಟ್ಟಿ ಮೊಸರು ಹೊಟ್ಟೆ ಬಿರಿ ತಿಂದಿದ್ದಲ್ದೆ ನನ್ನ ತಂಗೀನು ಮಳ್ಳಮಾಡ್ತ್ಯಾ? ನಿನ್ನಂತ ದರವೇಶಿಗೆ ಮನೆ ಸೇರ್ಸಿದ್ದೂ ತಪ್ಪು. ಇದೇ ಕೊನೆ ನಮಗೂ ನಿನಗೂ ಸಂಬಂಧವಿಲ್ಲ ಅಂತ ರಾಕುಟ್ಟಿ ಹೇಳುವುದರೊಂದಿಗೆ ಅವರ ಗೆಳೆತನ ಮುರಿದು ಬಿತ್ತು. ಆದರೆ ಅದೇ ಸಂಜೆ ಶಾನುಭಾಗರ ಮಗನ ಕೈಲಿ ಸಾಲ ಪಡೆದು ಬೆಂಗಳೂರಿಗೆ ಹೊರಟವನು ವಾರ ಕಳೆಯುವುದರೊಳಗೆ ಮಹಾಲಕ್ಷ್ಮಿಯನ್ನೂ ಸುಮ್ಮನೆ ಕರೆದುಕೊಂಡು ಬಂದುಬಿಟ್ಟ ಭಟ್ಟ. ಬೆಂಗಳೂರಿನಲ್ಲೇ ಮೂರು ಗಂಟು ಬಿಗಿದು ಆಕೆಯನ್ನು ಮಾಕಿ ಮಾಡಿದ. ಬೆಂಗಳೂರಿನಲ್ಲಿ ನೆಲೆಯಾದಮೇಲೆ ಊರಿನಲ್ಲಿ ಅಪ್ಪ ಮಾಡಿಟ್ಟ ಆಸ್ತಿಯನ್ನು ಮಾರಿ ತನ್ನ ಅಲ್ಲಿನ ಸಂಬಂಧವನ್ನು ಕಳೆದುಕೊಂದರೂ ಹೆಂದತಿ ಮಗಳೊಡನೆ ವರ್ಷಕ್ಕೊಮ್ಮೆ ಇಡಗುಂಜಿಗೆ ಬಂದು ಹೋಗುತ್ತಿದ್ದ. ಆದರೆ ಪರಮ-ರಾಕುಟ್ಟಿ ಮಾತ್ರ ವರ್ಷಗಳು ಕಳೆದರೂ ದೂರವೇ ಉಳಿದರು.

–**–

ನಸುಕಿನ ಆರು ಗಂಟೆಗೆ ಭಟ್ಟರನ್ನು ಹೊನ್ನಾವರ ತಲುಪಿಸಿದ ಬಸ್ಸು ಸ್ಟ್ಯಾಂಡಿನ ಮೂಲೆ ಸೇರಿತು. ನಿದ್ದೆಯಿಲ್ಲದ ಕೆಂಪು ಕಣ್ಣು ಉಜ್ಜಿತ್ತಾ ಹೊರಟ ಭಟ್ಟರು ಪಕ್ಕದ ಉಡುಪಿ ಹೋಟೆಲ್ಲಿನಲ್ಲಿ ಮುಖ ತೊಳೆದು ಬೆಳಗಿನ ಚಾ ತಿಂಡಿ ಮುಗಿಸಿದರು. ಮನಸು ಕಾಲೇಜಿಗೊಮ್ಮೆ ಹೋಗು ಅಂದರೆ ಬುದ್ಧಿ ಕೆಳಗಿನೂರಿಗೆ ಹೊರಡು ಅನ್ನುತ್ತಿತ್ತು. ಯಾವುದೂ ಬೇಡವೆನ್ನುವಂತೆ ದಿಕ್ಕು ಬದಲಿಸಿ ಗೂಡು ರಿಕ್ಷಾ ಹತ್ತಿದವರೇ ಅಪ್ಸರಕೊಂಡಕ್ಕೆ ಹೊರಟರು.  ಸಮುದ್ರದ ಪಕ್ಕ ಕೋಡಿ ಭಟ್ಟರನ್ನೇ ಕಾದಂತೆ ಒಂಟಿಯಾಗಿ ಮಲಗಿತ್ತು. ತಾವು ಮೊದಮೊದಲು ರಕುಟ್ಟಿಯ ಜೊತೆ, ನಂತರ ಮಾಕಿಯ ಜೊತೆ ಪ್ರಾಯದ ಕಾಲದಲ್ಲಿ ಹತ್ತಿ ಕೂರುತ್ತಿದ್ದ ಕಲ್ಲು ಕಾಣಿಸಿತು ಭಟ್ಟರಿಗೆ. ಯೋಚಿಸುತ್ತಲೇ ಕಲ್ಲಿನಮೇಲೆ ಆಸೀನರಾದ ಭಟ್ಟರಿಗೆ ಪಕ್ಕದಲ್ಲಿ ರಾಕುಟ್ಟಿಯೂ ಬಂದು ಕುಳಿತಂತೆ ಕಂಡಿತು.  ಕಣ್ಮುಂದೆ ನಿಶ್ಚಲವಾಗಿ ಮಲಗಿದ್ದ ಕೋಡಿ ನೀರಿನಲ್ಲಿ ಹತ್ತಾರು ಪ್ರಶ್ನಾರ್ಥಕ ಚಿನ್ಹೆಗಳು ಕಂಡಂತಾಗಿ ಅಲ್ಲೇ ಕಲ್ಲಿಗೊರಗಿದರು.

ಯೋಚಿಸುತ್ತ ಸಮುದ್ರದ ದಿಕ್ಕಿಗೆ ಮುಖ ಮಾಡಿದ ಭಟ್ಟರ ತಲೆಯಲ್ಲಿ ನೂರು ವಿಷಯ. ಮತ್ತೆ ಮತ್ತೆ ತಲೆ ಕೆರೆದುಕೊಂಡರು. ರಾಕುಟ್ಟಿಯ ಮನೆಗೆ ಹೊರಡುವುದಾ ಇಲ್ಲಾ ಅವನನ್ನೇ ಇಲ್ಲಿ ಬರ ಹೇಳುವುದಾ? ಒಮ್ಮೆ ಮನೆಬಾಗಿಲಿಗೆ ಹೋದರೆ ಒಳಗೆ ಸೇರಿಸುತ್ತಾನಾ? ಇಲ್ಲೇ ಕರೆದರೆ ಬರುವ ಮನಸು ಮಡುತ್ತಾನಾ? ಇಲ್ಲಿಯವರೆಗೆ ಬಂದದ್ದು ಹೌದಾದರೂ ಆತನನ್ನು ಕಾಣುವುದು ಹೇಗೆ? ಎಲ್ಲಿಂದ ಪ್ರಾರಂಭಿಸಬೇಕು? ಆತ ತಾನೇ ಕಸಿದುಕೊಳ್ಳಬಯಸಿದ್ದ ಸಂಬಂಧವನ್ನೂ, ತಾನು ಆತನಿಂದ ಕಸಿದುಕೊಂಡಿದ್ದ ತಂಗಿಯನ್ನೂ ಈಗ ಒಂದಾಗಿಸಲು ಸಾಧ್ಯವಾ? ಮದುವೆಯಾಗಿ ಮನೆಗೆ ಬಂದ ತಂಗಿಯನ್ನು ಕಣ್ಣೆತ್ತಿಯೂ ನೋಡದವ ಈಗ ತನ್ನ ಮಾತು ಕೇಳುವುದು ಸಾಧ್ಯವಿಲ್ಲವೆನಿಸಿ ಭಟ್ಟರ ಯೋಚನೆಗೆ ತಡೆ ಬಂತು.

ಕೊನೆಗೊಮ್ಮೆ ಫೋನು ಮಾಡುವುದೇ ಸಾರಿ ಎಂದು ನಿರ್ಧರಿಸಿದರು ಭಟ್ಟರು.  ತನಗೂ ಮಾಕಿಗೂ ಮಾಡಿದಂತೆ ಮಕ್ಕಳಿಗೂ ಮಾಡಬೇಡ,  ಇಷ್ಟು ವರ್ಷ ತುಂಡಾಗಿ ಬಿದ್ದಿದ್ದ ಕೊಂಡಿಯನ್ನು ಬೆಂಗಳೂರು ಒಂದಾಗಿಸಿದೆ. ಅವರಿಗೆ ತಿಳಿಯದೇ ನಮ್ಮ ಸಂಬಂಧ ಮುಂದುವರೆದಿದೆ. ನೀನು ಒಪ್ಪಿದರೆ ಮುಂದಿನ ಮಾತು. ಇಲ್ಲವಾದರೆ? ಇಲ್ಲವಾದರೆ ಮುಂದೇನು ಎನ್ನುವ ಪ್ರಶ್ನೆ ಮತ್ತೆ ಬಂದದ್ದೇ ಭಟ್ಟರು ಚಿಂತಿತರಾದರು. ಇದು ಮುಗಿಯದ್ದೆನಿಸಿ ಮರುಕ್ಷಣವೇ ಕೈಗೆ ಫೋನೆತ್ತಿಕೊಂಡರು.

ಎರಡೇ ರಿಂಗು. ಆ ಕಡೆಯಿಂದ ಹಾಲ್ಲೋ.. ಅಂದದ್ದು ರಾಕುಟ್ಟಿಯೆಂದು ತಿಳಿಯಲು ಕಷ್ಟವಾಗಲಿಲ್ಲ ಭಟ್ಟರಿಗೆ. ನಾನು ಪರಮ. ಅಪ್ಸರಕೊಂಡದಲ್ಲಿದ್ದೆ ಅನ್ನುವಷ್ಟರಲ್ಲಿ ಮಾತೇ ನಿಂತಂತಾಯಿತು ಭಟ್ಟರಿಗೆ. ಸುಮ್ಮನೆ ಫೋನು ಕಿವಿಗೆ ಹಿಡಿದು ನಿಂತವರಿಗೆ ರಾಕುಟ್ಟಿಯ ಮಾತು ಕೇಳಿಸುತ್ತಿತ್ತು. ಅಲ್ಲೆಂತ ಮಾಡ್ತಿದ್ಯೋ, ಇನ್ನೂ ಮೀಸು ತಲಬಾ ನಿಂಗೆ? ಮನೆಗೆ ಬಾ ಮೊದ್ಲು. ಮತ್ತೆ ಮಾತು ಕತೆ. ಗಾಡಿ ಕಳಸ್ತೆ ಮಗನ ಕೈಲಿ. ಅವನೂ ಈಗಷ್ಟೆ ಬಂದ. ನೀನು ಹೊರಟ ಸುದ್ದಿ ಬಂತು ನಂಗೆ. ಸುಮ್ಮನೆ ಬಾ.. ಫೋನ್ ಕಟ್ಟಾದರೂ ಭಟ್ಟರು ಹಾಗೇ ಎರಡು ನಿಮಿಷ ನಿಂತರು. ಉಸಿರಾಟ ಒಂದು ಹದಕ್ಕೆ ಬಂದಂತೆನಿಸಿ ಮೈಯೆಲ್ಲ ಹಗುರಾದಂತಾಯಿತು ಭಟ್ಟರಿಗೆ. ಅಲ್ಲೇ ಬಟ್ಟೆ ಕಳಚಿಟ್ಟು ಕೋಡಿಯ ನೀರಿಗೆ ಹಾರಿದರು. ಮೈತುಂಬಾ ಮಿಂದೆದ್ದು ಸೂರ್ಯನಮಸ್ಕಾರ ಮುಗಿಸಿ ಬಟ್ಟೆ ಹಾಕಿಕೊಳ್ಳುತ್ತಿದ್ದಂತೆ ದೂರದಲ್ಲಿ ರಾಕುಟ್ಟಿಯ ಮಗ ಬರುತ್ತಿರುವುದು ಕಾಣಿಸಿತು. ಹೆಚ್ಚುತ್ತಿದ್ದ ತೆರೆಯ ಮುಂದೆ ನಿಂತು ಆತನತ್ತ ಕೈಬೀಸಿ ಬೆಳ್ಳಗೊಂದು ನಗೆಯಾಡಿದರು.

*****

’ಕನ್ನಡ ಪ್ರಭ’ ಪ್ರಕಟಿಸಿದೆ ಕಣ್ರಿ…

Advertisements
 1. 20/04/2009 ರಲ್ಲಿ 10:11 ಫೂರ್ವಾಹ್ನ

  ಚೆನ್ನಾಗಿದೆ ಕಣ್ರೀ!….

 2. 20/04/2009 ರಲ್ಲಿ 1:20 ಅಪರಾಹ್ನ

  ’ಕನ್ನಡ ಪ್ರಭ’ದಲ್ಲಿ ನಿನ್ನೆ ಓದಿದೆ ಕಣ್ರೀ..

  ಚೆನ್ನಾಗಿದೆ ಕಣ್ರೀ..

 3. minchulli
  20/04/2009 ರಲ್ಲಿ 5:12 ಅಪರಾಹ್ನ

  ’ಕನ್ನಡ ಪ್ರಭ’ದಲ್ಲಿ ನಿನ್ನೆ ಓದಿದೆ

  ಚೆನ್ನಾಗಿದೆ..

 4. 21/04/2009 ರಲ್ಲಿ 4:36 ಅಪರಾಹ್ನ

  ಹೇ.. ಮಸ್ತೈತ್ರಿ..

  -ಶೆಟ್ಟರು

 5. 29/04/2009 ರಲ್ಲಿ 7:58 ಅಪರಾಹ್ನ

  Pradeep, Vikaas, Shama & Shettaru…

  ‘THANKS’

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: