ಮುಖ ಪುಟ > ಕತೆ -ಕಥೆ > ಸೌಗಂಧಿಕ

ಸೌಗಂಧಿಕ

ಕೆಲವರಿಗಷ್ಟೆ ತಿಳಿದಿರುವಂತೆ ಪತಂಜಲಿಯ ಮಲಗುವ ಖಯಾಲಿ ಬಹಳ ವಿಭಿನ್ನವಾದದ್ದು. ತಾನೇ ನಿಂತು ಹೇಳಿ ಮಾಡಿಸಿಕೊಂಡ ಮಂಚದ ಮೇಲೆ – ಒಬ್ಬನಿಗೆ ಅವಶ್ಯಕತೆಗಿಂತ ಹೆಚ್ಚು, ಇಬ್ಬರಿಗೆ ಕಡಿಮೆಯೆನ್ನಿಸುವಷ್ಟಿದೆ ಆ ಮಂಚ – ಮನೆಯಲ್ಲೇ ಮಾಡಿಸಿದ ದಪ್ಪ ಹಾಸಿಗೆ ಹಾಕಿ, ಹುಡುಕಿ ಹುಡುಕಿ ತಂದ ಬೆಡ್ ಶೀಟು ವಾರಕ್ಕೆರಡು ಸಲ ಬದಲಾಯಿಸಿಕೊಳ್ಳುತ್ತ ಅರಬ್ ದೇಶದಿಂದ ತಂದ ವಿಶೇಷವಾದ ಚಾದರ ಹೊದ್ದು ಮಲಗುತ್ತಾನೆ. ಹಾಗೂ ಮಲಗುವಾಗಿನ ಆತನ ಮನಸ್ಥಿತಿಗೆ ತಕ್ಕಂತೆ ಆತ ಮಲಗುವ ದಿಕ್ಕೂ ಬದಲಾಗುತ್ತದೆ. ತನ್ನ ಚೂಪು ನೋಟದ ಕಣ್ಣುಗಳಲ್ಲಿ ಅಗಾಧವಾದ ಕಾಂತಿ – ಜೊತೆಗೆ ಶಾಂತಿ ಸಹ – ತುಂಬಿಕೊಂಡು ಖುಷಿಯಾಗಿ ಮಲಗಿದನೆಂದರೆ ಅಂದು ಆತ ಮಂಚದ ತಲೆಭಾಗಕ್ಕೆ ತಲೆ ಹಾಕಿ ಮಲಗಿದ್ದಾನೆಂದು ಅರ್ಥ. ಅಂದಿನ ರಾತ್ರಿ ದಿಂಬಿಗೆ ತಲೆಕೊಡುವುದಷ್ಟೇ ಬಾಕಿ. ಮಂಪರು ಮಂಪರು ಕಣ್ಣಿಗೆ ನಿಮಿಷದೊಳಗೆ ಪಟಪಟನೆ ಹೊಲಿಗೆ ಬಿದ್ದು ಮೈತುಂಬ ನಿದ್ದೆ ಆವರಿಸುತ್ತದೆ.  ಅಂತಹ ರಾತ್ರಿಯ ಆಚೆಗಿರುವುದು ಮಂಚದ ತಲೆಭಾಗದಲ್ಲಿರುವ ಕಿಟಕಿಯ ಮೂಲಕ ಎಳೆ ಎಳೆಯಾಗಿ ಸರ್ರನೆ ಒಳಹೊಕ್ಕು ಬೆಳಕಿನ ಕೋಲುಗಳನ್ನು ಸೃಷ್ಟಿಸಿ ನಿಮಿಷದೊಳಗೆ ರಂಗು ರಂಗಾದ ಬೆಳಗು ತೋರಿಸಿ ಕಣ್ರೆಪ್ಪೆ ಬಿಡಿಸುವ ಬೆಳಗು. ಆ ಬೆಳಕಿಗೊಂದು ಕಡುಹಸಿರು ಆವೇಶವಿದೆ. ಉಮೇದಿಯೂ. ಬದಲಿಗೆ ಅವೇ ಬೆಳಕಿನ ಕಿರಣಗಳು ಒಳಬರಲಾರದಂತೆ ಮುಚ್ಚಿಟ್ಟ ಕಿಟಕಿಯ ಹೊರಗೆ ಗಿರಕಿ ಹೊಡೆಯಲಾರಂಭಿಸಿದವೆಂದರೆ ಹಿಂದಿನ ದಿನದ ರಾತ್ರಿ ನಿದ್ದೆಗೆ ಬೇಗ ಅನುಮತಿ ಸಿಕ್ಕಿಲ್ಲವೆಂದು ಅರ್ಥ. ಅಂದು ಮಂಚದ ಕಾಲುಭಾಗದಲ್ಲಿ ತಲೆಹಾಕಿ ಮಲಗಿರುತ್ತಾನೆ ಪತಂಜಲಿ. ಸರಿಯಾಗಿ ತಲೆಯ ಹಿಂದೆ ಬರುವ ಕಿಟಕಿಯನ್ನು ತೆರೆದಿಟ್ಟು ಮಲಗಿದವನನ್ನು ಬೆಳಕು ಎಬ್ಬಿಸಲಾರದು. ಬದಲಿಗೆ ನಿಧಾನ ನಿಧಾನವಾಗಿ ಒಳಬರುವ ಹೂವಿನ ಪರಿಮಳ – ಮನೆಯೆದುರು ಹಲವಾರು ನಮೂನೆಯ ಹೂವು ಬೆಳೆಸಿದ್ದಾನೆ ಪತಂಜಲಿ – ದಿನಪೂರ್ತಿ ಕನ್ನಡಕ ಹೊತ್ತಿರುವ, ಸ್ವಲ್ಪವೇ ಸ್ವಲ್ಪ ಉದ್ದವೆನ್ನಬಹುದಾದ,  ಆತನ ಮೂಗಿನ ಒಳಹೊಕ್ಕು ಎಬ್ಬಿಸುತ್ತದೆ.  ಅದು ಪರಿಮಳದ ಬೆಳಗು.

ಅಪರೂಪಕ್ಕೆಂಬಂತೆ ತಲೆಕೆಳಗಾಗಿ ಮಲಗಿದ್ದ ಪತಂಜಲಿ ಮೂಗರಳಿಸುತ್ತಲೇ ಎದ್ದು ಕುಳಿತ. ಕತ್ತು ತಿರುಗಿಸಿ ನೋಡಿದರೆ ಅದೇ ಗಾರ್ಡನ್ನು, ಅವೇ ಗಿಡಗಳು ಆದರೆ ಹೂವು ಮಾತ್ರ ಹೊಚ್ಚಹೊಸದು. ಕೋಣೆಯ ತುಂಬಾ ಹರಡಿದ್ದ ಹೊಸ ಹೂವಿನ ಪರಿಮಳ ಇವತ್ಯಾಕೋ ಸ್ವಲ್ಪ ಹೆಚ್ಚೇ ಇದೆಯೆನ್ನಿಸಿ ಮುದುರು ಮುದುರಾಗಿದ್ದ ಹಾಸಿಗೆಯನ್ನು ನೀಟಾಗಿ ಹಾಸಿಟ್ಟು ಕಿಟಕಿಯ ಹೊರಗೆ ಕಣ್ಣು ಹಾಯಿಸಿದ. ಆಗಷ್ಟೆ ಹುಟ್ಟಿದ ಹೂವುಗಳನ್ನು ಕಣ್ತುಂಬಿಕೊಳ್ಳುವ ಮೊದಲೇ ಪಕ್ಕದಿಂದ ಹಾಲಿನವನ ಮಾತು ಉಕ್ಕಿಬರಲಾರಂಭಿಸಿತು. ಪಾತ್ರೆ ಹಿಡಿದು ಹೊರಬಂದ ಎದುರುಮನೆಯ ಹೆಂಗಸಿನ ಸಹಸ್ರ ನಾಮಾರ್ಚನೆಯೂ ಪ್ರಾರಂಭವಾಯಿತು. ಆಕೆಯ ಮಾತು ಕೇಳುತ್ತಿದ್ದಂತೆ ಆಕೆಗಿಂತಲೂ ದಪ್ಪ ಬೆಳೆದ ಮೋಟು ಬಾಲದ ಬೆಳ್ಳಗಿನ ನಾಯಿ ಹೊರಬಂದು- ಆ ಗಂಡು ನಾಯಿಯ ಹಣೆಯ ಮೇಲೊಂದು ಟಿಕಲಿಯೂ ಇದೆ. ಅದರ ಒಡತಿ ತಾನು ಇಟ್ಟುಕೊಳ್ಳುವುದಿಲ್ಲವಾದರೂ ನಾಯಿಗೆ ಮಾತ್ರ ಇಡುತ್ತಾಳೆ. ಬಹಳ ಲಕ್ಷಣವಾಗಿದೆ ನಾಯಿ – ತಾನೇನೂ ಕಡಿಮೆಯಿಲ್ಲವೆಂಬಂತೆ ಶುರುವಿಟ್ಟುಕೊಂಡಿತು. ಅಲ್ಲೇ ಪಕ್ಕದ ಸಂದಿಯಲ್ಲಿ ಕಾಣುವಂತೆ ಗಡಿಬಿಡಿಯಲ್ಲಿದ್ದ ಮಲೆಯಾಳಿ ನರ್ಸುಗಳು ದಾರಿಯಲ್ಲೇ ತಲೆಬಾಚುತ್ತಿದ್ದರು. ಮತ್ತಿಷ್ಟು ಜನ ಒದ್ದೆ ತಲೆ ಹೊತ್ತು ಆಸ್ಪತ್ರೆಯ ದಾರಿ ಹಿಡಿದಿದ್ದರು.  ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದವರು ತಲೆಯೊಂದಿದೆ ಅನ್ನುವುದನ್ನೇ ಮರೆತು ಅಸ್ತವ್ಯಸ್ತ ಕೂದಲುಗಳನ್ನೂ, ಬಾಡಿದ ಕಣ್ಣುಗಳನ್ನೂ ಹೊತ್ತು ಬರುತ್ತಿದ್ದರು. ಮಹಡಿಯ ಮೇಲಿನಿಂದ ಕಸ ಗುಡಿಸಿ ಗುಡಿಸಿ ಕೆಳಗೆ ಹಾಕುತ್ತಿದ್ದ ಸುಂದರಿಯನ್ನು ಬಾಯಿ ಬಿಟ್ಟುಕೊಂಡು ಇಸ್ತ್ರಿ ಅಂಗಡಿಗೆ ಬಂದ ಹುಡುಗ ನೋಡುತ್ತಿದ್ದ. ಅಲ್ಲೇ ಪಕ್ಕದಲ್ಲಿ ಗಾಡಿ ತರಕಾರಿಯ ಆಸಾಮಿ ಬೆಳಿಗ್ಗೆ ಬೆಳಿಗ್ಗೆ ಮಗ್ಗಿ ಹೇಳುವ ಮಕ್ಕಳಂತೆ ಅಷ್ಟೂ ತರಕಾರಿಯ ಹೆಸರು ಕೂಗುತ್ತಾ ಹೊರಟಿದ್ದ. ಆತನ ಕೀರಲು ಧ್ವನಿಯ ಕೂಗು ಅಲ್ಲೇ ಕಸ ಬಾಚುತ್ತಿದ್ದ ಮುನ್ಸಿಪಾಲ್ಟಿ ಗಂಡಸಿನ ಕ್ಯಾಕರಿಕೆಯನ್ನೂ ಮೀರಿ ಸುತ್ತಲಿನ ಮನೆ ಹೊಕ್ಕುವಲ್ಲಿ ಸಫಲವಾಯಿತೆನ್ನುವಂತೆ ನೈಟಿ ತೊಟ್ಟ ಹೆಂಗಸರು ಕೈಯಲ್ಲಿ ನೋಟು ಹಿಡಿದು ಹೊರಬಂದರು.. ಎಲ್ಲಾ ಸೇರಿ ತನ್ನ ಬೆಳಗನ್ನು ತಿನ್ನಲೇ ಹುಟ್ಟಿಕೊಂಡಿವೆ ಅನ್ನಿಸಿದಂತಾಗಿ ಪತಂಜಲಿ ಬಾಗಿಲು ತೆರೆದು ಸೀದಾ ಹೂದೋಟದ ಒಳಹೊಕ್ಕಿದ – ಅಲ್ಲಾದರೂ ಬೆಳಗಿನ ಸಂತೋಷವನ್ನು ಪಡೆಯುತ್ತೇನೆನ್ನುವಂತೆ. ತಮ್ಮೊಳಗೊಂದು ಸ್ಪರ್ಧೆ ನಡೆಯುತ್ತಿದೆಯೆನ್ನಿಸುವಂತೆ ಒಂದಕ್ಕಿಂತ ಒಂದು ಸುಂದರವಾಗಿ ಅರಳಿ ನಿಂತಿದ್ದ ಹೂವುಗಳೆಲ್ಲವನ್ನೂ ನೋಡುತ್ತ ಹೆಜ್ಜೆ ಹಾಕುತ್ತಿದ್ದವನಿಗೆ ದಾರಿ ಬದಿಯಲ್ಲಿ ವೈಯಾರದ ಹೆಜ್ಜೆ ಹಾಕುತ್ತ ಹೊರಟ  ಪ್ರಾಯದ ಪೋರಿಯರ ಆಸೆಕಂಗಳು ಕಾಣಿಸಿಬಿಟ್ಟವು. ಹೆಜ್ಜೆ ಮುಂದೆ ಹೋಗುತ್ತಿದ್ದರೂ ಆ ಹುಡುಗಿಯರ ಕಣ್ಣುಗಳು ಮಾತ್ರ ಕಂಪೌಡಿನ ಪಕ್ಕದಲ್ಲೇ ಬೆಳೆದು ನಿಂತ ಹೂವುಗಳ ಮೇಲೆ ಇರುವುದನ್ನು ಗಮನಿಸಿ, ಸುಮ್ಮಸುಮ್ಮನೆ ಯಾರನ್ನೂ ಕರೆಯದ ಪತಂಜಲಿ, ನಿಂತಲ್ಲೇ ಕೈಸನ್ನೆ ಮಾಡಿ ಹುಡುಗಿಯರನ್ನು ಕರೆದ.  ಹೂವು ಬೇಕಿತ್ತಾ? ಕೇಳಿದ. ತಾವು ನೋಡಿದ್ದೇ ತಪ್ಪಾಯಿತೇನೋ ಅನ್ನುವ ಭಾವದಲ್ಲಿ ನಿಂತಿದ್ದ ಹುಡುಗಿಯರಿಗೆ, ಪತಂಜಲಿಯ ಮಾತು ಕೇಳಿದ್ದೇ ಮುಖದಮೇಲೆ ಮತ್ತೊಂದು ಪ್ರಶ್ನಾರ್ಥಕ ಚಿನ್ಹೆ ಜಾಸ್ತಿಯಾಗಿ ಹೇಳುವುದೇನೆಂದು ಯೋಚಿಸುತ್ತ ನಿಂತಿರುವಾಗ, ’ಗೊತ್ತು ಗೊತ್ತು, ನೀವು ಯಾವತ್ತೂ ನೋಡುತ್ತಾ ಹೋಗುತ್ತೀರಿ. ಇವತ್ತು ಒಬ್ಬಳು ಹೆಚ್ಚು ಅಷ್ಟೆ. ಬನ್ನಿ ಒಳಗೆ,  ಒಬ್ಬೊಬ್ಬರೂ ಒಂದೊಂದು ಹೂವು ಕೊಯ್ದುಕೊಳ್ಳಿ. ನಿಮಗೆ ಬೇಕಾದ್ದು. ಗಿಡದಲ್ಲಿದ್ದಕ್ಕಿಂತ ನಿಮ್ಮ ಜೊತೆಗಿದ್ದಾಗ ಹೆಚ್ಚು ಚೆಂದ ಈ ಹೂಗಳು’ ಅನ್ನುತಾ ಗೇಟು ತೆಗೆದು ಒಳಗೆ ಬಿಟ್ಟುಕೊಂಡ..

ಈಗಷ್ಟೆ ಹದಿನೆಂಟಾಗಿರಬಹುದಾ? ಇಲ್ಲಾ ವರ್ಷಾರುತಿಂಗಳು ಕಡಿಮೆಯಿರಬಹುದಾ? ಈಗಿನ ಮಕ್ಕಳ ಬೆಳವಣಿಗೆ ಲೆಕ್ಕಕ್ಕೇ ಸಿಗುವುದಿಲ್ಲ ಅಂದುಕೊಳ್ಳುತ್ತಿರುವಾಗ ನೀಲಿಯ ಆಚೀಚಿನ ಬಣ್ಣಗಳ ಜೀನ್ಸ್ ತೊಟ್ಟ ಹುಡುಗಿಯರು ದಪ್ಪ ದಪ್ಪ ಬಟ್ಟೆಯ ಗೋಣೀಚೀಲದಂಥಾ ಅಂಗಿಯೊಂದಿಗೆ ಹೆಗಲಿನ ಎಡಭಾಗದಿಂದ ಬಲಕ್ಕೆ ಇಳಿಬಿಟ್ಟು ಸೊಂಟಕ್ಕಿಂತ ಕೆಳಗೆ ನೇಲಿಸಿಕೊಂಡುಬಂದಿದ್ದ ಬ್ಯಾಗಿನೊಂದಿಗೆ – ಅದಕ್ಕೆ ಪರ್ಸಂಟೇಜ್ ಬ್ಯಾಗು ಅಂತ ಕರೆಯುತ್ತಾರೆಂದು ಸ್ವಲ್ಪ ದಿನ ಮೊದಲಷ್ಟೆ ತಿಳಿದುಕೊಂಡಿದ್ದಾನೆ ಪತಂಜಲಿ –  ಒಳಬಂದು ಬಿಟ್ಟಕಣ್ಣುಗಳಲ್ಲಿ ಗಿಡಗಳನ್ನು ನೋಡತೊಡಗಿದರು. ಪತಂಜಲಿಯ ಮಾತಿನಂತೆ ತಮಗಿಷ್ಟವಾದ ಹೂವಿನ ಆಯ್ಕೆಯಲ್ಲಿ ತೊಡಗಿದರು. ಒಬ್ಬಾಕೆ ಕಂಪೌಂಡ್ ಬದಿಯ ಕಡುಗೆಂಪು ಗುಲಾಬಿ ಆಯ್ದುಕೊಂಡರೆ, ಮತ್ತೊಬ್ಬಳು ಗುಲಾಬಿ ಬಣ್ಣದ ಗುಲಾಬಿ ಆಯ್ಕೆಮಾಡಿದಳು. ಮೂರನೆಯವಳು ಮಾತ್ರ ಇನ್ನೂ ಹುಡುಕುವುದನ್ನು ಮುಗಿಸಲಿಲ್ಲ. ಆಕೆಗ್ಯಾಕೋ ಕೆಂಪು ಹೂವು, ನೀಲಿ ಹೂವು… ಯಾವುದೂ ಇಷ್ಟವಾದಂತಿರಲಿಲ್ಲ. ಕೊನೆಗೂ ಹಳದಿ ಬಣ್ಣದ ಹೂವೊಂದನ್ನು ಹುಡುಕಿ ಹುಡುಕಿ ಆರಿಸಿಕೊಂಡಳು. ಆಗಲೇ ಪತಂಜಲಿಯ ದೃಷ್ಟಿ ಅವಳತ್ತ ತಿರುಗಿದ್ದು. ’ಹಳದಿ ಹೂ ನನಗೂ ಇಷ್ಟ’ ಅನ್ನಲು ಹೊರಟವನ ಮಾತು ಹೊರಬರಲಾರದೇ ನಿಂತುಬಿಟ್ಟಿತು.

ಹುಡುಗಿ ಹಾಗೇ ಕಾಣಿಸುತ್ತಾಳೆ. ಅವಳದ್ದೇ ಕಣ್ಣು. ಅದೇ ಮೂಗು, ಅದೇ ರೀತಿಯ ಕೂದಲು – ಅವಳಷ್ಟು ಉದ್ದ ಬಿಟ್ಟಿಲ್ಲ ಅಷ್ಟೆ – ಅದೇ ಎತ್ತರ, ಅದೇ ನಿಲುವು. ತನಗೆ ಬೇಕಾದ್ದು ಹುಡುಕಿ ಹುಡುಕಿ ಆರಿಸಿಕೊಂಡ ಬಗೆಯೂ ಅದೇ.  ಈಕೆ ಸುಶೀಲೆಯಂತಿದ್ದಾಳೆ ಅನ್ನುವುದು ಮೊದಲೇ ಯಾಕೆ ಹೊಳೆಯಲಿಲ್ಲವೆನ್ನುವುದು ಅರ್ಥವಾಗಲಿಲ್ಲ ಪತಂಜಲಿಗೆ. ಹುಡುಗಿ ಹೊರಟವಳು ತನ್ನಿಬ್ಬರು ಗೆಳತಿಯರನ್ನೂ ಸೇರಿಸಿಕೊಂಡು ಹೂವಿನಂಥಾ ನಗುವನ್ನೂ ಜೊತೆಗೊಂದು ಥ್ಯಾಂಕ್ಸನ್ನೂ ನೀಡಿ ಗೇಟು ದಾಟಿದಳು. ಆಕೆಯ ಹೆಸರು ಕೇಳಲೋ ಬಿಡಲೋ ಅನ್ನುವ ಅನುಮಾನದಲ್ಲೆ ಅವರ ಹಿಂದೆ ನಾಲ್ಕು ಹೆಜ್ಜೆ ಹಾಕಿದ. ಈಕೆಗೆ ಸುಶೀಲೆ ಗೊತ್ತು – ಗೊತ್ತಿರುವುದೇನು ತನ್ನ ಊಹೆ ನಿಜವಿರಲೇಬೇಕು. ಆಕೆ ಸುಶೀಲೆಯ ಮಗಳೇ ಇರುತ್ತಾಳೆ ಅನ್ನುವ ಭಾವ ಬೇರುಬಿಡಲಾರಂಭಿಸಿತ್ತು ಅಷ್ಟರಲ್ಲೇ – ಅನ್ನುವ ಭರವಸೆಯಲ್ಲಿ ಗೇಟಿನ ಹೊರಗೆ ಅವರ ಹಿಂದೆಯೇ ಬಂದ. ಮುಂದೆ ಮುಂದೆ ಚಿಗುರುಪ್ರಾಯದ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದ ಹುಡುಗಿ ತನ್ನಿಂದ ಹೆಜ್ಜೆ ಹೆಜ್ಜೆಗೂ ದೂರಾಗುತ್ತಿದ್ದಂತೆ ಕೈಲಿದ್ದ ದೊಣ್ಣೆಯನ್ನು ನೆಲಕ್ಕೆ ಕುಕ್ಕಿ ತನ್ನ ಭಾರವಾದ ಕಾಲೆಳೆದುಕೊಳ್ಳುತ್ತ ಒಳಸೇರಿದ. ಇಂದಲ್ಲದಿದ್ದರೆ ನಾಳೆ ಕೇಳಿದರಾಯ್ತು ಅಂದುಕೊಳ್ಳುತ್ತ.  

ಹೊಸದಾಗಿ ಬಂದು ಹಳದಿ ಹೂ ಆರಿಸಿಕೊಂಡ ಹುಡುಗಿ, ಆಕೆಯೇನೋ ಹೊರಟುಹೋದಳು. ರೂಮಿನೊಳಗೆ ಕುಳಿತ ಪತಂಜಲಿಗೆ ಮಾತ್ರ ಆಕೆಯ ಮುಖ ಎದುರು ಬರಲಾರಂಭಿಸಿತು. ನಾಳೆಯ ನಿರೀಕ್ಷೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಯಿತು. ನಿರೀಕ್ಷೆ ಹೆಚ್ಚಿದಂತೆಲ್ಲಾ ಉದ್ವೇಗವೂ ಹೆಚ್ಚಾಗಲಾರಂಭಿಸಿ ಮನೆಯೊಳಗೆ ಹಿಂದೆ ಮುಂದೆ ಕೈ ಕಟ್ಟಿಕೊಂಡು ನಡೆಯಲಾರಂಭಿಸಿದ. ಏನು ಮಾಡಿದರೂ ಸಮಯ ಮಾತ್ರ ಸಾಗುತ್ತಿಲ್ಲ. ಗಂಟೆ ನೋಡಿದರೆ ಇಪ್ಪತ್ತೈದು ವರ್ಷ ಹಳೆಯದಾದ ಗಡಿಯಾರ, ಈಗಿನ್ನೂ ನಡೆಯುತ್ತಿದ್ದುದು, ತಾನಿನ್ನು ಮುಂದೆ ಹೋಗಲಾರೆನೆನ್ನುವಂತೆ, ನಿಂತುಬಿಟ್ಟಿತು. ಪತಂಜಲಿ ನಿಂತಲ್ಲಿ ನಿಲ್ಲದಾದ ಕೂತಲ್ಲಿ ಕೂರದಾದ. ಆತನ ಚಡಪಡಿಕೆಯನ್ನು ನೋಡಲಾರದ ಗಡಿಯಾರ ಹಿಂದಕ್ಕೆ ಓಡಲಾರಂಭಿಸಿ ತಾನು ಮೊದಲ ದಿನ ’ಟಿಕ್’ ಶಬ್ಧ ಮಾಡಿ ಮೊದಲ ಸೆಕೆಂಡು ದಾಟಿ, ಎರಡು ಮೂರು ಅನ್ನುತ್ತಾ ನಿಮಿಷ ಹಾದು, ತಾಸಾಗಿ ದಿನವಾಗಿ ಹೊರಟ ತನ್ನ ಆ ಮೊದಲನೆಯ ದಿನಕ್ಕೆ ಬಂದು ನಿಂತಿತು. ಪತಂಜಲಿ ಇಪ್ಪತ್ತೈದು ವರ್ಷ ಹಳೆಯದಾದ ಪ್ರಾಯದ ಬದುಕಿಗೆ ಸುಶೀಲೆಯೆಂಬ ತನಗಿಂತ ಒಂದು ವರ್ಷ ಚಿಕ್ಕ, ಸುಂದರ, ಬುದ್ಧಿವಂತ.. ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ತನಗಿಂತ ಹೆಚ್ಚು ಹಚ್ಚಿಕೊಂಡ ಜೀವದೊಂದಿಗೆ. ಆಕೆಯಾದರೂ ಅಷ್ಟೆ, ಪತಂಜಲಿಗೆ ಈಗಲೂ ಸಾಥ್ ಕೊಡುತ್ತೇನೆನ್ನುವಂತೆ ತುಂಬಾ ಸಹಜವಾಗಿ ಪತಂಜಲಿಯಿದ್ದಲ್ಲಿ ಬಂದಳು. 

ಆಕೆಯ ಜೊತೆ ಕೇದಿಗೆಯ ಪರಿಮಳ ಬಂತು. ಸುಶೀಲೆ ಕುಳಿತಲ್ಲಿಂದ ಹೊರಟ ಘಾಡ ಪರಿಮಳ ರೂಮಿನ ತುಂಬಾ ಹರಡಿ ಆಗಷ್ಟೆ ಸ್ನಾನ ಮುಗಿಸಿ ಕುಳಿತ ಪತಂಜಲಿಯ ಮೈತುಂಬಾ ಹಬ್ಬಲಾರಂಬಿಸಿತು. ಕೇದಿಗೆಯ ಘಮವೇ ಅಂತದ್ದು. ಹಿಂಡು ಹಿಂಡು ಮುಳ್ಳಿನ ಪೊದೆಯ ನಡುವೆ ಬೆಳೆಯುವ ಹಳದಿ ಬಣ್ಣದ ಎಲೆಯಂತೆ ಕಾಣುವ ಹೂವಿಗೆ ಅದೆಲ್ಲಿಂದ ಆ ಪರಿಯ ಪರಿಮಳವೋ? ಹಾವಿಗೂ ಇಷ್ಟವಂತೆ ಆ ಪರಿಮಳ. ಕೇದಿಗೆ ಹಿಂಡಿದ್ದಲ್ಲಿ ಹಾವು ಇರಲೇಬೇಕು. ಹಾವಿಗೇ ಇಷ್ಟವಾದ ಆ ಪರಿಮಳ ಸುಶೀಲೆಗೂ ಇಷ್ಟವೆಂದು ತಿಳಿದೇ ಇಡಿಯಾಗಿ ಕೇದಿಗೆ ಹೂವಿನ ಕೊನೆಯನ್ನು ತಂದು ಕೊಟ್ಟಿದ್ದ ಪತಂಜಲಿ. ಹಾವೆಂದರೆ ಅಗಾಧವಾದ ಹೆದರಿಕೆಯಿದ್ದರೂ ಮುಳ್ಳು ಹಿಂಡಿನೊಳಗೆ ಹೊಕ್ಕು ಮೈಕೈ ಗಾಯಮಾಡಿಕೊಂಡು ತಂದ ಪರಿಮಳ ಅದು. ಸುಶೀಲೆಯ ಅಪ್ಪನ ಸಂಕಷ್ಟಿ ಪೂಜೆಯ ರಾತ್ರಿ ಗಣಪತಿಯ ತಲೆಯೇರಿ ಮಾರನೆ ದಿನ ಸುಶೀಲೆಯ ಮುಡಿ ಸೇರಿ ತನ್ನಲ್ಲಿ ಬಂದದ್ದು. ಹಳ್ಳದ ಬದಿಯ ದರೆಯಮೇಲೆ ಮುಳ್ಳು ರಾಶಿಯ ನಡುವೆ ಬೆಳೆದ ಹೂವು ಹುಟ್ಟಾ ಸುಪ್ಪತ್ತಿಗೆಯಲ್ಲೆ ಕಾಲ ಕಳೆದ ಸುಶೀಲೆಯ ಮೂಲಕ ಮತ್ತೆ ತನ್ನಬಳಿ ಬರಲು ಸುಶೀಲೆಗೆ ತನ್ನಮೇಲೆ ಮನಸಿರುವುದೇ ಕಾರಣ ಅಂದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ ಪತಂಜಲಿಗೆ. ಕೇದಿಗೆ ತರುವಾಗ ಪಟ್ಟ ಪಾಡುಗಳೆಲ್ಲ ಇದಕ್ಕೇ ಆಗಿತ್ತಾ? ಹಿಂಡಿನಲ್ಲಿದ್ದಕ್ಕಿಂತ ಹೆಚ್ಚು ಪರಿಮಳ ಇವಳ ತಲೆಯೇರಿದಾಗ ಬರುತ್ತಿದೆಯಲ್ಲ ಅಂದುಕೊಳ್ಳ್ಳುತ್ತಿದ್ದರೆ,  ಅದಕ್ಕೆ ಸರಿಯಾಗಿ ’ಯಾವತ್ತೂ ಕೇದಿಗೆ ತಂದು ಕೊಡುತ್ತೀಯಾ ನನಗೆ, ಪರಿಮಳ ನಿನ್ನ ಸುತ್ತಲೂ ಹರಡಿರುವಂತೆ ನೋಡಿಕೊಳ್ಳುತ್ತೇನೆ’ ಅಂದುಬಿಟ್ಟಳು ಸುಶೀಲೆ.  

ಆಕೆಯೇನೂ ದೂರದವಳಲ್ಲ. ಖಾಸಾ ಮಾವನ ಮಗಳು. ಆದರೆ ನಾನೀಗ ಓದು ಮುಗಿಸುತ್ತಿದ್ದೇನೆ. ದಿಕ್ಕೆಂಬುದು ಇಬ್ಬರನ್ನೂ ಕೇದಿಗೆ ಘಮದೊಂದಿಗೆ ಸೆಳೆದುಕೊಂಡು ಒಂದೆಡೆಗೆ ತಂದರೂ, ದಾರಿ ತಪ್ಪದೇ ಹೊರಡಬೇಕು.. ಯಾವುದಕ್ಕೂ ಸಮಯ ಬಂದಾಗ ನೋಡಿಕೊಂಡರಾಯಿತು ಅಂದುಕೊಂಡವನು ಸುಶೀಲೆಯ ಜೊತೆಗೂಡಿ ಕಾಲೇಜಿಗೆ ಹೊರಟ. ಒಳಮನಸು ಯಾಕೋ ಇದು ನಿನ್ನ ಮಿತಿಯ ಕೆಲಸವಲ್ಲ, ಅತ್ತೆಗೆ ನಿನ್ನನ್ನು ಕಂಡರಾಗುವುದಿಲ್ಲ, ಸುಶೀಲೆಯ ಮನೆಯ ಪರಿಸರವೂ ಸಹ ನಿನ್ನ ನಿಲುಕಿನಲ್ಲಿಲ್ಲ ಅನ್ನುತ್ತಿತ್ತು. ಏನಾದರಾಗಲಿ, ಮುಂದಿನದು ಮುಂದೆ ನೋಡಿದರಾಯ್ತೆಂದು ಸುಮ್ಮನಾದ. ಆತ ಸುಮ್ಮನಾದರೂ ಆಕೆ ಸುಮ್ಮನಾಗಬೇಕಲ್ಲ? ದಿನದಿಂದ ದಿನಕ್ಕೆ ಹತ್ತಿರವಾಗತೊಡಗಿದಳು. ದಿನ ತಿಂಗಳಾಗಿ, ತಿಂಗಳು ವರ್ಷವಾಗುವುದರೊಳಗೆ ಆಕೆಗಿಂತ ಹೆಚ್ಚು ತಾನೇ ಹತ್ತಿರವಾಗತೊಡಗಿದ ಪತಂಜಲಿ.  ನೋಡುತ್ತ ನೋಡುತ್ತ ಕಾಲೇಜು, ಕಾಲೇಜಿನಿಂದ ಊರು, ಊರಿನಿಂದ ಮನೆಯವರೆಗೂ ವಿಷಯ ಹೋಯಿತು. ಸುದ್ದಿ ಸಿಕ್ಕರೆ ಆಡಿಕೊಳ್ಳುವವರಿಗೇನು ಕಡಿಮೆ?

ವಾರ ಮುಗಿದು ವಾರ ಶುರುವಾದದ್ದಷ್ಟೆ, ಕಿಟಕಿಯ ಪಕ್ಕ ಮಲಗಿ ಶೂನ್ಯ ದೃಷ್ಟಿ ಬೀರುತ್ತಿದ್ದ ಪತಂಜಲಿ.  ಸುಶೀಲೆ ಪತಂಜಲಿಯ ರೂಮಿಗೆ ಬರುವಾಗ ಪತಂಜಲಿಗೆ ಮೈತುಂಬಾ ಜ್ವರ. ಚಳಿ ನಡುಕ ಬೇರೆ. – ಆತನ ಎಮ್.ಎಸ್ಸಿ ಗೆಳೆಯರು ಹೇಳುವಂತೆ ಸುಶೀಲೆಯ ಮನೆಯವರ ಧಮಕಿಯೇ ಕಾರಣ. ಅಳಿಯನೆನ್ನುವುದನ್ನು ಮರೆತು ಆತನಿಗೆ ಒಂದೊಂದು ಅಂಗವನ್ನೂ ಬೇರೆಮಾಡುವುದಾಗಿ ಬೆದರಿಸಿದ್ದರು ಸುಶೀಲೆಯ ಅಪ್ಪ. ಆತನ ಅಪ್ಪ ಬೇರೆ ಜಾತಿಯೆನ್ನುವುದೂ ಅವರಿಗೆ ಮೊದಲ ಬಾರಿಗೆ ತಿಳಿದು, ಅದೇ ಸುಶೀಲೆಯ ಅಪ್ಪನ  ಅಸಮ್ಮತಿಗೆ ಕಾರಣವೆಂದು ಸುದ್ದಿ ತಲುಪಿದ್ದಾಗಿತ್ತು- ಚಾದರ ಹೊದ್ದು ಮಲಗಿದವನ ಪಕ್ಕದಲ್ಲಿ ಸುಮ್ಮನೆ ಕುಳಿತಳು ಸುಶೀಲ. ಸರಿಯಾಗಿ ಕುಳಿತುಕೊಳ್ಳೆನ್ನುವಂತೆ ಕಾಲ ಮೇಲೆ ಕಾಲಿಟ್ಟು ಕಣ್ಸನ್ನೆಯಲ್ಲೆ ಜಾಗ ತೋರಿಸಿದ. ಅರ್ಥವಾಯಿತೆನ್ನುವಂತೆ ಹಣೆ ಮುಟ್ಟಿ ನೋಡಿದವಳು ಔಷಧಿ ತೆಗೆದುಕೊಂಡೆಯಾ? ಡಾಕ್ಟರಿದ್ದಲ್ಲಿ ಹೋಗಿದ್ದೆಯೋ ಅಥವಾ ನಿನಗೆ ನೀನೆ ಡಾಕ್ಟರಾದೆಯೋ? ಅನ್ನುತ್ತಿದ್ದಾಗಲೇ ಕಿಟಕಿಯ ಪಕ್ಕ ಮಡಚಿಟ್ಟ ಕವರ್ ಕಾಣಿಸಿತು. ಅದರ ಪಕ್ಕದಲ್ಲಿ ಔಷಢಿ ಗುಳಿಗೆ.  ನಿನಗೇನು ಜ್ವರವೋ, ಎದ್ದೇಳು, ನಾನೊಂದು ಬಿಸ್ಸಿ ಬಿಸಿ ಚಾ ಮಾಡುತ್ತೇನೆ ಅನ್ನುತ್ತಲೆ ಥಟ್ಟನೆ ಚಾ ಮಾಡಿ ತಂದು ತಾನು ಕುಡಿಯುತ್ತಾ ಅಲ್ಲೇ ಬಿದ್ದಿದ್ದ ಹಾಳೆಯನ್ನು ಬಿಚ್ಚಿ ಓದತೊಡಗಿದಳು. ಸರಿಯಾಗಿ ಓದಿದಳೊ ಇಲ್ಲವೋ? ಮಾರುದ್ದದ ನಗೆ ತುಂಬಿಕೊಂಡು, ಪತಂಜಲೀ.. ನಾನಂದುಕೊಂಡಂತೆ ಆಯಿತಲ್ಲೋ, ನಿನಗೆಲ್ಲಿ ಹೊರೆಯಾಗುತ್ತೇನೋ ಅಂದುಕೊಂಡೇ ಬಂದಿದ್ದೆ. ಆದರೆ ದೇವರು ಕೈಬಿಡುವುದಿಲ್ಲ ನೋಡು. ಅಲೆಯುವ ಕೆಲಸವಿಲ್ಲದೇ ನಿನಗೆ ಕೆಲಸ ಸಿಕ್ಕಿತಲ್ಲೋ.. ಒಂದೇ ಒಂದು ದಿನದ ಅವಕಾಶ ಕೊಡು. ಬಂದುಬಿಡುತ್ತೇನೆ. ಅವರಿವರ ಮಾತು ಕತೆಯೆಲ್ಲಾ ಅತ್ಲಾಗಿರಲಿ. ಅಪ್ಪ ಅಮ್ಮ ಅವರಂದುಕೊಂಡಂತೆ ಆಡುತ್ತಿರಲಿ. ನಾವು ಹೊರಟುಬಿಡುವ. ಯಾರಿಗೂ ಗೊತ್ತಿಲ್ಲದ ಊರಿನಲ್ಲಿ ನೆಲೆಯಾಗುವುದಕ್ಕೊಂದು ಕೆಲಸವೂ ಆಯಿತಲ್ಲ. ನಿನ್ನಜೊತೆ ನಾನೂ ಒಂದು ಕೆಲಸ ಹುಡುಕಿಕೊಳ್ಳುತ್ತೇನೆ. ನಮ್ಮಿಬ್ಬರದೊಂದು ಮನೆ, ನಿನ್ನಂತಿರುವ ಒಂದು ಮಗು ಮಾಡಿಕೊಂಡು ಇದ್ದುಬಿಡೋಣ. ನಾಳೆ ರಾತ್ರಿ ಹೊರಡುವುದು… ಪತಂಜಲಿಗೆ ಈ ಹುಡುಗಿ ಹೀಗೆ ಮಾತನಾಡುತ್ತಾಳಾ, ತಾನು ಹೇಳಬಹುದಾಗಿದ್ದ ಮಾತುಗಳೆಲ್ಲ ಈಕೆಯ ಬಾಯಲ್ಲಿ ಸರಾಗವಾಗಿ ಬರುತ್ತಿವೆಯಲ್ಲ ಅಂತನ್ನಿಸಿ ಹೊದ್ದ ಚಾದರವನ್ನೂ ಹಾಗೇ ಹೊದ್ದುಕೊಂಡೇ ಎದ್ದು ಕುಳಿತ. ತಾನು ವಾರದ ನಂತರ ಹೋಗಬೇಕಾಗಿದ್ದರೆ ಈಕೆ ನಾಳೆಯೇ ಹೊರಡಿಸುತ್ತಿದ್ದಾಳಲ್ಲ? ಜೀವನ ನೀರೀಕ್ಷೆಗಿಂತ ವೇಗವಾಗಿ ನಡೆಯುವುದೆಂದರೆ ಇದೇನಾ ಅನ್ನುವ ಅನುಮಾನ ಒಳಗೊಳಗೇ ಹಾದುಹೋಯಿತು.

ಅಷ್ಟೇ. ಗಡಿಯಾರ ಮತ್ತೆ ಮುಂದಕ್ಕೋಡಲಿಲ್ಲ. ಅರ್ಥಾತ್ ಇಪ್ಪತ್ತೈದು ವರ್ಷಗಳ ಹಿಂದೆ ಹೋಗಿ ಅಲ್ಲಿಂದ ಮತ್ತೊಂದು ವರ್ಷ ಸಾಗಿಸಿಕೊಂಡು ಬಂದ ಗಡಿಯಾರ, ಎಂದಿನ ತನ್ನ ಸಮಯವನ್ನು ಸರಿಯಾಗಿ ತೋರಿಸಲಾರಂಭಿಸಿತು. ಮೂರು ಮುಕ್ಕಾಲು. ಹೊಟ್ಟೆ ಚುರುಗುಟ್ಟಲಾರಂಭಿಸಿದಾಗ ಬೆಳಗಿನಿಂದ ಇದ್ದಲ್ಲೇ ಇರುವುದು ವಾಸ್ತವದ ಬೆಳಕಿನಲ್ಲಿ ತನ್ನನ್ನು ತಾನು ನೋಡಿಕೊಂಡಾಗಲೇ ತಿಳಿಯಿತು ಪತಂಜಲಿಗೆ. ಇಲ್ಲೀಗ ಸುಶೀಲೆಯೂ ಇಲ್ಲ. ಕೈಲಿದ್ದ ಕೆಲಸವೂ ಇಲ್ಲ. ಅಂದು ಹೇಗಿದ್ದೆನೋ ಅದೇ ಸ್ಥಿತಿಯಲ್ಲಿ ನಾನಿರುವುದು ಮಾತ್ರ ಸತ್ಯ… ಯೋಚಿಸುತ್ತ ಎಂದಿನಂತೆ ರಾತ್ರಿಯೇ ಮಾಡಿಟ್ಟ ಊಟವನ್ನು ತಿನ್ನಲಾರಂಭಿಸಿದ. ಯಾಕೋ ಊಟದಲ್ಲೂ ಸುಶೀಲೆಯ ಕೈರುಚಿಯಿದೆ, ಈ ಅಡಿಗೆ ಆಕೆಯೇ ಬಂದು ಮಾಡಿಟ್ಟಿದ್ದು ಅನ್ನಿಸಲಾರಂಭಿಸಿತು. ಹೊಟ್ಟೆ ತುಂಬಿದ್ದಕ್ಕೋ ಏನೋ? ಎದುರಿಗಿದ್ದ ಗಡಿಯಾರವನ್ನು ಅದರ ಪಾಡಿಗೆ ಮುಂದಕ್ಕೋಡಲು ಬಿಟ್ಟು ಪತಂಜಲಿ ತಾನು ಮತ್ತೆ ಹಿಂದೆ ಹಿಂದೆ ಹೊರಟ. ಸುಶೀಲೆ ಮನೆಯಿಂದ ಮಾಡಿಕೊಂಡುಬಂದ ಪಲ್ಯ, ನುಗ್ಗೆ ಸಾಂಬಾರು ಹಾಕಿಕೊಂಡು ಊಟಮಾಡಲಾರಂಭಿಸಿದ. ’ನಿನಗಾಗಿಯೇ ಮಾಡಿದ್ದೇನೋ, ನೀನು ನಿನ್ನಪ್ಪನಂತೆ ಮೀನು ತಿನ್ನುವುದಿಲ್ಲವಲ್ಲ? ಕೊನೇಪಕ್ಷ ಸರಿಯಾದ ಊಟವನ್ನಾದರೂ ಮಾಡಲಿ ಅಂತ ನಾನೇ ಮಾಡಿ ತಂದೆ. ಅದೆಲ್ಲಿಯ ಹೋಟೆಲ್ಲು, ಮೆಸ್ಸಿನ ಪುಳಚಾರು ತಿಂದು ಬಿದ್ದಿರುತ್ತಿದ್ದೆಯೋ’. ಸುಶೀಲೆ ಬೇಡವೆಂದರೂ ಬಡಿಸುತ್ತಾ ಹೇಳುತ್ತಿದ್ದಳು. ’ಡಿಪೋ ಕಟ್ಟಿಗೆ ಚೆನ್ನಾಗಿದೆ.. ಒಳ್ಳೆ ನಿನ್ನಹಾಗೇ ಬೆಳೆದಿದೆ’ ಅನ್ನುತ್ತಾ ಬಟ್ಟಲು ಖಾಲಿ ಮಾಡಿ ಎದ್ದರೆ ಸುಶೀಲೆ ಎಲ್ಲಿ? ತಾನು ತನ್ನವರೆಂಬವರು ಯಾರೆಂದರೆ ಯಾರೂ ಇರದ ಈ ಒಂಟಿ ಮನೆಯಲ್ಲಿ ಒಬ್ಬನೆ ಊಟ ಮಾಡುತ್ತಿರುವುದು ನೆನಪಿಗೆ ಬಂದು ಕೈತೊಳೆದುಕೊಂಡು ಆರಾಮು ಕುರ್ಚಿಯಲ್ಲಿ ಕುಳಿತ. ಎದುರಿಗೆ ತನ್ನಷ್ಟಕ್ಕೆ ತಾನು ಓಡುತ್ತಿತ್ತು ಗಡಿಯಾರ. ಸುಶೀಲೆ ಪತಂಜಲಿ ಇಬ್ಬರೂ ಪೇಟೆಗೆ ಹೋಗಿ ಪೂರ್ತಿ ಅರ್ಧ ದಿನ ಹುಡುಕಿ ತಂದ ಗಡಿಯಾರ. ಆಕೆ ಕೂಡಿಸಿಟ್ಟ ನವರಾತ್ರಿಯ ದುಡ್ಡಿನಲ್ಲಿ ತನಗಾಗಿ ಕೊಂಡದ್ದು. ಈ ಗಡಿಯಾರಕ್ಕೆ ಚಾಲನೆ ಕೊಟ್ಟು ಬೆಳ್ಳಗೆ ನಗುತ್ತಾ ನಿಂತಿದ್ದಳಲ್ಲವಾ ಅಂದು? ಗಡಿಯಾರ ಮಾತ್ರ ಇಂದಿಗೂ ಅದೇ ನಗು ಮುಖ ಹೊತ್ತು ಓಡುತ್ತಿದೆ. ಭರ್ತಿ ಇಪ್ಪತ್ತೈದು ವರ್ಷವಾದರೂ ನಗು ನಿಂತಿಲ್ಲ.

ಅಂದು ಜ್ವರ ಬಂದು ಮಲಗಿದ್ದಾಗ ಎದುರಿಗಿದ್ದಿದ್ದೂ ಇದೇ ಗಡಿಯಾರ. ಇಂದು ತನ್ನೆದುರಿಗಿರುವುದೂ ಅದೇ. ಒಂದೇ ವ್ಯತ್ಯಾಸವೆಂದರೆ, ಅಂದು ಆಕೆಯಿದ್ದಳು. ಆಕೆಯ ಮಾತು ಇತ್ತು. ಹರೆಯದ ಉತ್ಸಾಹವೂ ಇತ್ತು ಅವಳಲ್ಲಿ. ತನ್ನನ್ನೂ ಹೊರಡಿಸಿಕೊಂಡು ತಾನು ಹೋಗಬೇಕಾದ ಊರಿಗೆ ಹೊರಟಿದ್ದಳು. ಆದರೆ ತಾನೇಕೆ ಆಕೆಗೆ ಉತ್ತರಿಸುವ ಗೋಜಿಗೇ ಹೋಗಲಿಲ್ಲ? ನಾನು ವರ್ಷದಿಂದ ನಿಮ್ಮಪ್ಪ ಅಮ್ಮನನ್ನು ಒಪ್ಪಿಸುತ್ತೇನೆ ಅಂದಿದ್ದ ಮಾತಿನಲ್ಲಿಯೆ ಉತ್ತರ ಕಂಡುಕೊಂಡುಬಿಟ್ಟಳಾ? ನಾಳೆ ಸಂಜೆ ಬರುತ್ತೇನೆ ಅನ್ನುತ್ತಾ ಸಿಟ್ಟು ಮಾಡಿಕೊಂಡೇ ಹೊರಬಿದ್ದ ಹುಡುಗಿ ಮಾರನೆಯ ದಿನ ಮಧ್ಯಾನ್ಹಕ್ಕೇ ಬಂದಿದ್ದಳಂತೆ. ನಾನೆಲ್ಲಿದ್ದೆ ಅಲ್ಲಿ? ರಾತ್ರಿಗೇ ಹೊರಟು ಈ ಜನರ ಕಾಡಿಗೆ ಬಂದು ತಲುಪಿಬಿಟ್ಟೆನಲ್ಲ. ಕೈಲಿದ್ದ ನೌಕರಿಯನ್ನು ಬಿಟ್ಟು. ಸುಶೀಲೆಯನ್ನೆ ಬಿಟ್ಟು ಬಂದವನಿಗೆ ಆ ನೌಕರಿ ಯಾವ ಲೆಕ್ಕವಾಗಿತ್ತು? ಊರು ಬದಲಾಯಿತು. ಕೆಲಸ ಬದಲಾಯಿತು. ಮನೆ ಬದಲಾಯಿತು. ಯಾವ ರಾತ್ರಿ ಯಾವುದೊಂದು ನಿರ್ಧಾರಕ್ಕೂ ಬರಲಾರದೆ ಇಷ್ಟಪಟ್ಟವಳನ್ನು ಸುಖವಾಗಿರಲು ಬಿಟ್ಟು ಬರುತ್ತಿದ್ದೇನೆ ಅನ್ನುವ ಭಾವದಲ್ಲೇ ಹೊರಟು ಬಂದವನು ಊರುಗಳನ್ನು ಬಟ್ಟೆ ಬದಲಾಯಿಸಿದಂತೆ ಬದಲಾಯಿಸಿ ಇಲ್ಲಿಗೆ ಬಂದು ತಲುಪುವಷ್ಟರಲ್ಲಿ ಇಪ್ಪತ್ತೈದು ವರ್ಷ ಕಳೆದೆನಾ? ಆಕೆ ತನ್ನೊಂದಿಗೆ ಬಂದಿದ್ದರೆ ಇವಿಷ್ಟೂ ವರ್ಷಗಳೂ ಹೀಗೆ ಕಳೆಯುತ್ತಿದ್ದವಾ? ಹಾರಿಸಿದ ಗಾಳಿಪಟದ ದಾರ ಅಲ್ಲೇ ಸುತ್ತಿಟ್ಟು ಬರದಿದ್ದರೆ ಇಷ್ಟು ಹೊತ್ತಿಗೆ ಅದೆಷ್ಟು ಎತ್ತರಕ್ಕೆ ಹಾರುತ್ತಿತ್ತು ಪಟ? ಮನೆ ಬಿಟ್ಟುಬಂದು ಅಪ್ಪನನ್ನು ಮದುವೆಯಾಗಿದ್ದ ಆಯಿಯನ್ನು ನೋಡಿದರೆ ನಾನು ಮಾಡಿದ್ದು ಸರಿಯೇ. ಆಯಿ ಪೂರ್ತಿ ಬದುಕನ್ನೂ ನೋಡದೆ ಹೋಗಿಬಿಟ್ಟಳು. ಅಪ್ಪ ತನ್ನನ್ನೂ ತಾನು ನೋಡಿಕೊಳ್ಳದಂತಾದ. ನನಗೇನಿತ್ತು? ಜೊತೆ ಬಂದರೆ ಆಕೆಯೊಂದನ್ನು ಬಿಟ್ಟು. ಆದರೂ ಆಕೆಯನ್ನು ಬಿಟ್ಟುಬಂದೆನಲ್ಲ… ಆಯಿ ಮನೆಬಿಟ್ಟು ಬಂದ ದಿನದಿಂದಲೇ ನನ್ನ ಬಿಟ್ಟು ಬರುವ, ಅಲೆಮಾರಿಯಾಗುವ ಅನಿರ್ದಿಷ್ಟವಾಗಿ ಬದುಕುವ ಯಾವುದನ್ನೂ ಲೆಕ್ಕಿಸದ ದಿನಗಳು ಪ್ರಾರಂಭವಾಗಿಬಿಟ್ಟಿದ್ದವಾ? ನಾನಿನ್ನೂ ಆಕೆಯ ಹೊಟ್ಟೆಯೊಳಗಿರುವಾಗಲೇ. ಇಲ್ಲಾ ಅಪ್ಪನಿಂದ ಬಂದದ್ದಾ ಇದು? ಕುಳಿತ ಆರಾಮ ಕುರ್ಚಿಯ ಬುಡ ಅಲ್ಲಾಡಿಸಿ ಅದನ್ನೇ ಹಾಸಿಗೆಯಂತೆ ಮಾಡಿಕೊಂಡು ಒರಗಿಕೊಂಡ ಪತಂಜಲಿ.. ತಾನಿನ್ನೂ ನಿನ್ನ ಜೊತೆ ನಡೆಯುತ್ತಿದ್ದೇನೆ ಅನ್ನುವಂತೆ ಗಡಿಯಾರದ ಸದ್ದು ಕೇಳಿಸಿತು. ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತಿದ್ದವನು ಮತ್ತೆ ಕುಳಿತಿರಲಾರದೆ ಎದ್ದು ಹೊರಟ. 

ಸಂಜೆ ಎಂದಿನಂತೆ ತಣ್ಣಗೆ ಕರೆಯುತ್ತಿತ್ತು. ತಾನೂ ಎಂದಿನಂತೆ ಹೊರಟು ಪದ್ಧತಿಯಂತೆ ನಾಲ್ಕಾರು ಜನರನ್ನು ಮಾತನಾಡಿಸಿ ಸರ್ಕಲ್ಲಿನ ಪಕ್ಕದ ಮಲೆಯಾಳಿಯ ಹೊಟೆಲಿನಂತಾ ಬೇಕರಿ ಹೊಕ್ಕಿದ. ಪತಂಜಲಿಯನ್ನು ನೋಡಿದ್ದೇ ’ಧಣಿ ನಮಸ್ಕಾರ, ವಾರವಾಯಿತಲ್ಲ ಬರದೆ…’,  ಮಲೆಯಾಳಿ ಕನ್ನಡ ಆಡುತ್ತ ಕೈಲೊಂದು ಲಿಂಬು ಜ್ಯೂಸ್ ಹಾಗೂ ಕಿಂಗ್ ಹಿಡಿದುಕೊಂಡು ಬಂದ ಅಂಗಡಿಯ ಮಾಲೀಕ ಪತಂಜಲಿಯ ಕೈಗಿತ್ತು ತಾನೂ ಕುಳಿತುಕೊಂಡ. ಆತನಿಗೆ ಗೊತ್ತು ತನ್ನಲ್ಲಿಗೆ ಬಂದಾಗಲೆಲ್ಲ ಪತಂಜಲಿಗೆ ಮಾತಾಡುವ ಉತ್ಸಾಹ ಬಂದಿರುತ್ತದೆಂದು… ಆತನ ಜೊತೆ ಕೂತು ಹಾಗೂ ಹೀಗು ಸಂಜೆ ಹಾಯಿಸಿ ಮಲೆಯಾಳಿಯ ಕೈಗೆ ಕಾಸು ತುರುಕಿ ಸಂಜೆಯ ಗಾಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ ಹಳೆಯ ಹಾಡಿಗೆ ಕಿವಿಯಾಗಿ ನಾಲ್ಕು ಹೆಜ್ಜೆ ಹಾಕಿಬಂದವನು ಗಿಡಗಳಿಗೆ ನೀರು ಹಾಕಿ ನಾಳೆ ಯಾವ್ಯಾವ ಹೂವು ಅರಳುತ್ತದೆಂದು ಲೆಕ್ಕ ಮಾಡಿದ. ಹಳದಿ ಹೂವಿನ ಗಿಡದೆಡೆಗೆ ವಿಶೇಷ ಗಮನ ಕೊಡುವುದಕ್ಕೆ ಮರೆಯಲಿಲ್ಲ. ನಾಳೆಯರಳುವ ಮೊಗ್ಗುಗಳಿಗೆ ಹಾಡು ಕೇಳಿಸುವುದಕ್ಕೂ. ಕತ್ತಲಾಗುತ್ತಿದ್ದಂತೆ ಗಿಡಕ್ಕೆ ಬಣ್ಣದ ಬೆಳಕು ಹಚ್ಚಿಟ್ಟು ಮೊಗ್ಗುಗಳನ್ನು ಸವರಿ ಮಾತನಾಡಿಸಿದ. ಮನೆಯೊಳಗೆ ಬಂದು ಹತ್ತಾರು ಜಾಗ ಹುಡುಕಿ ನಂಬರು ತೆಗೆದುಕೊಂಡು ಹಳೆಯ ಗೆಳೆಯನಿಗೆ ಫೋನು ಮಾಡಿ ಅರ್ಧ ಗಂಟೆ ಮಾತನಾಡಿದ. ಊರಿನಿಂದ ಅವಶ್ಯವಾಗಿ ಕೇದಿಗೆ ಹೂವು ತೆಗೆದುಕೊಂಡು ಇಂದೇ ರಾತ್ರಿ ಹೊರಡುವಂತೆ ತಾಕೀತು ಮಾಡಿ ಫೋನಿಟ್ಟ. ದಿನಕ್ಕಿಂತ ಸ್ವಲ್ಪ ಹೆಚ್ಚೇ ಊಟ ಮಾಡಿ, ಮುಚ್ಚಿಟ್ಟ ಕಿಟಕಿ ತೆರೆದಿಟ್ಟು ಮಂಚದ ತಲೆಭಾಗಕ್ಕೆ ತಲೆಹಾಕಿ ನಿಮಿಷದೊಳಗೆ ಗೊರಕೆ ಹೊಡೆಯಲಾರಂಭಿಸಿದ. ಅಂದರೆ ಪತಂಜಲಿ ನಾಳೆ ಬೆಳಿಗ್ಗೆ ಬೇಗ ಏಳುವ ಲೆಕ್ಕಾಚಾರದಲ್ಲಿ ಮಲಗಿದ.

ಎಂದಿಗಿಂತ ಮೊದಲೇ ಬೆಳಕಿನ ಕೋಲುಗಳು ಬಣ್ಣ ಹೊತ್ತು ಬಂದಿವೆ. ಎದ್ದು ಕಿಟಕಿಯ ಹೊರಗೆ ನೋಡಿದರೆ ಎದುರಿಗಿದ್ದ ಗೆಳೆಯನ ಮುಖದಲ್ಲಿ ವರ್ಷಗಳ ಬಳಿಕ ಗೆಳೆಯನನ್ನು ನೋಡುತ್ತಿದ್ದೇನೆಂಬ ಸಡಗರ. ಬಸ್ಸಿಳಿಯುವಾಗಲೇ ಕವಳ ತುಂಬಿಕೊಂಡಿದ್ದನೆನೋ? ಮನೆ ತಲುಪುವಷ್ಟರಲ್ಲಿ ಆತನ ಕೆಂಪು ಕೆಂಪು ಮುಖ ಕವಳದ ರಂಗೇರಿಸಿಕೊಂಡ ತುಟಿಯ ರಕ್ತಗೆಂಪಿಗೆ ಜೊತೆಯಾಗಿ ಲವಲವಿಕೆಯಿಂದ ಕೂಡಿದೆ. ಅದಕ್ಕೆ ಬೆಳಕಿನ ಬಣ್ಣಗಳ ಸಾಥ್ ಬೇರೆ.  ಕೈಲೊಂದು ನೀಲಿ ಕವರ್ ಹಿಡಿದಿದ್ದಾನಲ್ಲ.. ಅದರೊಳಗಿರುವುದು ಕೇದಿಗೆಯಲ್ಲದೆ ಬೇರೆನೂ ಆಗಿರುವುದಕ್ಕೆ ಸಾಧ್ಯವೇ ಇಲ್ಲ. ಅಷ್ಟೊಂದು ಘಮ ಶಶಿಧರನ ಸುತ್ತಲೂ ಹರಡಿದೆ. ಎದ್ದು ಕುಳಿತರೆ, ಹೊರಗೆ ಸುಶ್ರಾವ್ಯ ಗೀತೆ ’ಕೇತಕಿಯ ಬನಗಳಲಿ…’  ಹೋಗಿ ಬಾಗಿಲು ತೆಗೆದರೆ ಒಳಬಂದ ಶಶಿ ಯಾಕೋ ನನಗಿಂತ ಮುದುಕನಾಗಿಬಿಟ್ಟಿದ್ದಾನಲ್ಲ? ಮೊದಲಿನ ಮಜಬೂತು ಮೈಕಟ್ಟು ಕರಗಿಹೋಗಿದೆ ಅನ್ನಿಸಿಬಿಟ್ಟಿತು ಪತಂಜಲಿಗೆ. ಆದರೂ ಈ ಮನಷನ ಹುಮ್ಮಸ್ಸು ಇನ್ನೂ ಕಡಿಮೆಯಾಗಿಲ್ಲ. ಕಣ್ಣೊಳಗಿನ ಚುಂಬಕದಂಥಾ ಸೆಳೆಯುವ ಚುರುಕು ಹಾಗೇ ಉಳಿದುಕೊಂಡಿದೆ. ಸಮಯಕ್ಕೆ ಬೆಲೆ ನೀಡುವುದು ಯಾವತ್ತು ಕಲಿತುಕೊಂಡ? ಬಾ ಎಂದರೆ ಬೆಳಗಾಗುವುದರೊಳಗೆ ಬಂದುಬಿಟ್ಟನಲ್ಲ..ಆತನನ್ನು ಇಷ್ಟು ಅರ್ಜೆಂಟಾಗಿ ಹೊರಡಿಸಬಾರದಿತ್ತು, ಅದೆಷ್ಟು ಕಷ್ಟಪಟ್ಟು ಹೂವು ತಂದನೋ? ಕುಳಿತುಕೋ ಶಶಿಧರ, ಒಂದು ಗರಂ ಗರಂ ಚಾ ಮಾಡಿತರುತ್ತೇನೆ. ನಿನಗಾಗಿ ನಾಲ್ಕು ಜನ ಕುಡಿಯುವಷ್ಟು ಅನ್ನುತ್ತ ಒಳಹೊಕ್ಕ ಪತಂಜಲಿ. ಹಿಂದಿನಿಂದ ’ನಿನಗಾಗಿ ನುಗ್ಗೆಕಾಯಿ ತಂದಿದ್ದೇನೆ, ಸಾರು ಮಾಡಿಕೊಂಡು ಸುಶೀಲೆಯನ್ನು ನೆನಪು ಮಾಡಿಕೊಳ್ಳುತ್ತ ತಿನ್ನು’ ಅಂದುಬಿಟ್ಟ ಶಶಿ.

ಸುಶೀಲೆಯೆನ್ನುತ್ತಲೇ ಪತಂಜಲಿಯ ಮುಖದ ನರಗಳೆಲ್ಲ ಕದಲಿ, ಕಣ್ಣು ಅದುರಲಾರಂಭಿಸಿ ಧಡ್ಡೆಂದು ಎದ್ದು ಕುಳಿತ.  ಎಲ್ಲಿಯ ಶಶಿ? ಯಾವ ನುಗ್ಗೆ? ಎಲ್ಲಿಯ ಕೇದಿಗೆ? ಎಲ್ಲಿಯ ಪರಿಮಳ? ಬೆಳಗಾಗುವುದಕ್ಕಿನ್ನೂ ಅರ್ಧ ಗಂಟೆ ಬಾಕಿಯಿದೆ. ಸ್ವಪ್ನಕ್ಕೂ ತನ್ನನ್ನು ಕಂಡರಾಗುವುದಿಲ್ಲವೆಂದುಕೊಳ್ಳುತ್ತ ಹೊರಗೆ ನೋಡಿದರೆ ಇನ್ನೂ ಕತ್ತಲು.. ಮತ್ತೇನು ಮಲಗುವುದೆಂದುಕೊಂಡು ಎಂದಿನ ಕೆಲಸಗಳನ್ನೆಲ್ಲ ಪಟಪಟನೆ ಮುಗಿಸಿ ಸ್ನಾನವನ್ನೂ ಮಾಡಿ ಗಾರ್ಡನ್ನಿಗೆ ಕಾಲಿಟ್ಟು ಬೆಳಕು ಹರಿಯುವುದನ್ನೇ ಕಾಯತೊಡಗಿದ.

ಬೆಳಗಾಯಿತು. ಹೂವುಗಳಿಗೆ ಮೆರುಗು ಬರಲಾರಂಭಿಸಿತು. ಮೊಗ್ಗು ಹೂವಾಗಿ ಅರಳಿ ಶಶಿಗೆ ಚೆಂದದ ನಗು ಕಳುಹಿಸಿದವು. ಇನ್ನು ದಿನಪೂರ್ತಿ ನಾನೇ ನೋಡುತ್ತಿರುತ್ತೇನೆ ಅನ್ನುತ್ತ ಸೂರ್ಯ ಬಲಿಯತೊಡಗಿದ. ಹೂವುಗಳೂ ಅಷ್ಟೇ, ಪರಿಮಳ ಬೀರಲಾರಂಭಿಸಿದವು.  ಹಳದಿ ಹೂವು ಇಂದೂ ಅರಳಿದೆಯೆಂದು ಖಾತ್ರಿಪಡಿಸಿಕೊಂಡು ಮನೆಯತ್ತ ಮುಖ ತಿರುಗಿಸಿ ಪತಂಜಲಿ ಎರಡು ಹೆಜ್ಜೆ ಹಾಕುತ್ತಿದ್ದರೆ – ಶಶಿಧರ. ಆಶ್ಚರ್ಯವಾಗುವಂತೆ ಗೇಟಿನ ಮುಂದೆ ಬಂದು ನಿಂತಿದ್ದ. ಅದೇ ಶಶಿಧರ. ಈಗಷ್ಟೆ ಕವಳ ತುಂಬಿಕೊಂಡು ನಗುತ್ತಾ ಬಂದಿದ್ದ ಶಶಿಧರ. ’ಇಲ್ಲ, ನನ್ನ ಸ್ವಪ್ನ ಪೂರ್ತಿ ಸುಳ್ಳಾಗುವುದಿಲ್ಲ. ಕೈಯಲ್ಲಿ ನೀಲಿ ಕವರಿಲ್ಲದಿದ್ದರೂ ಕೈಚೀಲವಿದೆ, ಅದರಲ್ಲಿ ನುಗ್ಗೆದಡಿಯಿದ್ದರೂ ಇರಬಹುದು. ಕೇದಿಗೆ ಮಾತ್ರ ಇಲ್ಲ’ ಅಂತ ಮನಸಿನಲ್ಲೇ ಅಂದುಕೊಳ್ಳುತ್ತ, ಅರ್ಧಸತ್ಯವಾದ ಸ್ವಪ್ನವನ್ನು ಹೇಳುತ್ತ ಮನೆಯೊಳಗೆ ಕರೆದುತಂದ ಪತಂಜಲಿ.  ಶಶಿಯಾದರೂ ಅಷ್ಟೆ, ಸಂಕ್ಷಿಪ್ತವಾಗಿ ಊರಿನ ಸುದ್ದಿಯನ್ನು, ಗುಡ್ಡ ಬೆಟ್ಟ, ಹೊಳೆ ಹಳ್ಳದ ಸುದ್ದಿಯನ್ನೂ ಹೇಳಿ, ಊರು ಮೊದಲಿನಂತಿಲ್ಲವೆಂದು ತಿಳಿಸಿದ.  ’ಅಲ್ಲೆಲ್ಲಾ ಈಗ ಪರಿಮಳವಿಲ್ಲ. ಬರೀ ವಾಸನೆ, ಕೇದಿಗೆ ಕಾಡು ಇರಲಿ, ಒಂದು ಹಿಂಡೂ ಉಳಿದಿಲ್ಲ ಮಾರಾಯ’ ನಾವು ನೋಡಿದ್ದಷ್ಟೆ ಬಂತು ಈಗಿನ ಮಕ್ಕಳಿಗೆ ತಿಳಿಸಿ ಹೇಳುವುದೂ ಕಷ್ಟ ನೋಡು ಅಂದು ಉಸಿರುಬಿಟ್ಟ.  ಪತಂಜಲಿ ಮತ್ತೆ ಆ ಕುರಿತು ಮಾತಾಡಲಿಲ್ಲ. ಕೇದಿಗೆ ಸಿಗದಿದ್ದರೆ ಇಲ್ಲ. ಅದರ ಪರಿಮಳ ಇನ್ನೂ ನನ್ನೊಳಗೆ ಇದೆ, ನಾನಿರುವವರೆಗೂ ಇರುತ್ತೆ ಅಂದುಕೊಂಡು ಶಶಿಯನ್ನು ಬೇರೆಯದೇ ಮಾತಿಗೆಳೆದ. ನಾಲ್ಕಾರು ಮಾತು, ಬೆಳಗಿನ ತಿಂಡಿ ಮುಗಿಸಿದ ಶಶಿ ’ನಾನಿನ್ನು ಹೊರಡುತ್ತೇನೋ’ ಅಂದರೆ, ಯಾಕೆ? ಇರು ಅನ್ನುವ ಪ್ರಶ್ನೆಯಿಲ್ಲದೆ ಸಪ್ಪೆ ಸಪ್ಪೆ ನಗು ತೋರಿಸುತ್ತಾ ಕಳುಹಿಸಿದ ಪತಂಜಲಿ. ಶಶಿ ಬಂದಿದ್ದು ತನ್ನ ಮಗ, ಮಗಳನ್ನು ನೋಡಲು ಅನ್ನುವ ಆತನ ಅನುಮಾನ ನಿಜವೆನ್ನುವಂತೆ ಶಶಿಯ ಮಗ ಗಾಡಿಯಲ್ಲಿ ಬಂದು ಕರೆದುಕೊಂಡು ಹೋದ. 

ಗಂಟೆ ಎಂಟಾಯಿತು. ಎಂಟೂವರೆ, ಒಂಬತ್ತು ಒಂಬತ್ತೂವರೆಯಾಯಿತು. ಪತಂಜಲಿ ಕಾದೇ ಕಾದ. ಹುಡುಗಿಯರ ಪತ್ತೆಯಿಲ್ಲ. ಬರಬೇಕಿತ್ತಲ್ಲ ಅಂದುಕೊಂಡರೂ ಪತಂಜಲಿಯ ಒಳಮನಸು ಅವರಿಂದು ಬರುವುದಿಲ್ಲವೆಂದೇ ಹೇಳುತ್ತಿತ್ತು. ಅದೇ ಮನಸ್ಸು ಬರದಿದ್ದರೇನು?  ಬಿಡು, ನಾನು ಅವರನ್ನು ತೋರಿಸುತ್ತೇನೆ ಅಂದಿದ್ದರಿಂದ ಅಚಾನಕ್ಕಾಗಿ ಪತಂಜಲಿಯೊಳಗೆ ಒಂದು ಪತ್ತೇದಾರಿಯವನ ಲಕ್ಷಣ ಕಾಣಿಸಿತು.  ಉಟ್ಟ ಲುಂಗಿ, ಬನಿಯನ್ನು ಬಿಚ್ಚೆಸೆದು ಬೇರೆ ಬಟ್ಟೆ ತೊಟ್ಟು ಹೊರಟು ಮನೆಯಿಂದ ಕೆಳಮುಖವಾಗಿ ನಡೆಯಲಾರಂಭಿಸಿದ. ಮೊದಲಿಗೆ ಎಡಕ್ಕೆ ತಿರುಗಿ, ಸೀದಾ ನಡೆದು, ಬಲಕ್ಕೆ ತಿರುಗಿ ದೊಡ್ಡದೊಂದು ಕಿರಾಣಿ ಅಂಗಡಿಯ ಮುಂದೆ ನಿಂತ. ’ಹೌದು, ಇದೇ ಬಿಲ್ಡಿಂಗಿನಲ್ಲಿ ಹುಡುಗಿಯರಿಗಾಗೊಂದು ಪೇಯಿಂಗ್ ಗೆಸ್ಟ್ ವ್ಯವಸ್ತೆಯಿದೆ’ ಈ ಅಂಗಡಿಯವನನ್ನು ಕೇಳಿದರೆ ಸರಿಯಾದ ಬಾಗಿಲು ಸಿಕ್ಕೀತು ಅಂದುಕೊಂಡು ಅಂಗಡಿಯೊಳಗೆ ಬಗ್ಗಿ ನೋಡಿದ.   ಧಡೂತಿ ಹೆಂಗಸೊಬ್ಬಳು ಪ್ಲಾಸ್ಟಿಕ್ ಖುರ್ಚಿಯನ್ನು ತುಂಬಿ – ಆ ಕುರ್ಚಿ ತನ್ನ ಆಕಾರವನ್ನೆ ಹೆಚ್ಚಿಸಿಕೊಂಡುಬಿಟ್ಟಿದೆ – ಕುಳಿತಿದ್ದಾಳೆ. ವಿಚಾರಿಸಿದರೆ  ’ನಾನೇ ಈ ಮನೆಯ ಮಾಲಕಿ, ಏನಾಗಬೇಕಿತ್ತು? ಯಾರನ್ನು ನೋಡಲು ಬಂದದ್ದು?’ ಅನ್ನುವ ಉತ್ತರ ಪತಂಜಲಿಯ ಮುಖಕ್ಕೆಸೆದಂತೆ ಬಂದು ಬಿತ್ತು. ಇನ್ನೇನು ವಿವರವಾಗಿ ಹೇಳಬೇಕೆಂದುಕೊಂಡು, ’ಅದು ಹೊಸದಾಗಿ ಬಂದ ಹುಡುಗಿಯೊಬ್ಬಳು…’ ಅನ್ನುವಷ್ಟರಲ್ಲಿ ಮಾತಿಗೆ ಅವಕಾಶವಿಲ್ಲದೆ, ’ಹೊಸ ಹುಡುಗಿಯೊಬ್ಬಳು ಮೊನ್ನೆಯಷ್ಟೇ ಬಂದಿದ್ದಾಳೆ, ಅವರ ಅಪ್ಪ ಅಮ್ಮ ಈ ಊರಿಗೆ ಬರುವವರೆಗೆ ಇಲ್ಲಿ ಬಿಟ್ಟು ಹೋಗಿದ್ದಾರೆ ವ್ಯವಸ್ಥಿತವಾಗಿರಲೆಂದು. ನೀವೇನಾಗಬೇಕು ಹುಡುಗಿಗೆ? ಮಾವನಾ? ಚಿಕ್ಕಪ್ಪ ದೊಡ್ಡಪ್ಪ ಏನಾದರೂ? ಇಲ್ಲಾ ಅವಳಪ್ಪ ಅಮ್ಮಂಗೇನಾದರೂ ಪರಿಚಯದವರಾ? ಮತ್ತೇನಕ್ಕಲ್ಲ ಕೇಳಿದ್ದು ಹುಡುಗಿ ಸ್ವಲ್ಪ ಹುಡುಗು ಬುದ್ಧಿಯವಳು, ಯಾವುದೋ ಹುಡುಗನ ಜೊತೆ ಈ ವಯಸ್ಸಿಗೆ ಅಲ್ಲಸಲ್ಲದ್ದು ಮಾಡಿಕೊಂಡವಳು ನೋಡಿ. ಜವಾಬ್ದಾರಿ ಇರುತ್ತಲ್ಲ. ನೀವ್ಯಾರೋ ಅವರ ಕಡೆಯವರೇ ಇರಬೇಕು ಅನ್ಸುತ್ತೆ. ಕರೀತೇನೆ ಇರಿ ಅನ್ನುತ್ತ ಮಹಡಿ ಹತ್ತ ತೊಡಗಿದಳು.. ನಾನು ಆ ಹುಡುಗಿಗೆ ಏನೂ ಆಗಬೇಕಿಲ್ಲ ಅನ್ನಲು ಹೊರಟ ಪತಂಜಲಿಯ ಮಾತು ಗಂಟಲಿನಲ್ಲೇ ಉಳಿದು ಹೋಯಿತು. ಆದರೂ ಬಂದ ಕೆಲಸ ಸರಾಗವಾಗಿ ಆಯಿತೆನ್ನುವ ಖುಷಿಯಲ್ಲಿ – ತನ್ನ ಪರಿಚಯವನ್ನೂ ಹೇಳಬೇಕಾಗಿ ಬರಲಿಲ್ಲವೆನ್ನುವ ವಿಚಾರವೇ ಆಶ್ಚರ್ಯವುಂಟುಮಾಡಿತ್ತು ಆತನಿಗೆ – ಮೂರು ಕಾಲಿನ ಬೆಂಚಿನ ಮೇಲೆ ಕುಳಿತು ಕಾಯತೊಡಗಿದ. ಕಣ್ಣ ಮುಂದೆ ಸುಶೀಲೆಯ ಚಿತ್ರ. ಸುಶೀಲೆಯಂತೆ ಕಂಡ ಹುಡುಗಿಯ ಚಿತ್ರ. 

ಈ ಕ್ಷಣಕ್ಕೆ ಅವಳು ತನ್ನೆದುರು ಬಂದು ನಿಂತರೆ ಏನು ಮಾಡಬೇಕು, ಏನು ಹೇಳಬೇಕು ಅನ್ನುವ ಪ್ರಶ್ನೆ ಕಾಡಲಾರಂಭಿಸಿತು ಪತಂಜಲಿಗೆ.. ಅದಕ್ಕಿಂತ ಹೆಚ್ಚು ಹಾಸ್ಟೆಲಿನ ಹುಡುಗಿಗೆ ನಾನೇನಾಗಬೇಕು ಅನ್ನುವುದರೊಳಗೆ ಆದ ಬೆಳವಣಿಗೆಗಳು ಕಂಗಾಲು ಮಾಡಿಬಿಟ್ಟವು.. ಹದಿನೆಂಟನೆಯ ವಯಸ್ಸಿಗೆ ಭಾನಗಡಿಯಾ? ಸುಶೀಲೆಯ ಮಗಳೇ ಹೌದಾ ಇವಳು? ಇರಲಿಕ್ಕಿಲ್ಲವೇನೊ? ಆದರೂ ಇದ್ಯಾಕೋ ಸುತ್ತಿಕೊಳ್ಳುತ್ತಿದೆ ಅನ್ನಿಸಿ ಸುಮ್ಮನಾದ.  ಬೆಂಚು ಕಾಯಿಸುತ್ತ ಕ್ಷಣ ಕಳೆದವನು, ಯಜಮಾನಿ ಇನ್ನೂ ಬರದಿದ್ದು ನೋಡಿ,  ಮಟ್ಟಿಲು ನೋಡುತ್ತ, ಹತ್ತಿದಂತೆ ಮಾಡುತ್ತ ತಿರುಗಿ ಇಳಿದು, ಮತ್ತೆ ಮತ್ತೆ ಹಾಗೇ ಮಾಡುತ್ತ ಕೊನೆಗೂ ಮಟ್ಟಿಲು ಹತ್ತತೊಡಗಿದ. ಹತ್ತಿಪ್ಪತ್ತು ಮೆಟ್ಟಿಲುಗಳಷ್ಟೆ. ಎದುರಿಗೆ ಬಗ್ಗಿ ನೋಡಿದರೆ ಮಹಡಿ ಮೇಲಿನ ದೊಡ್ಡ ಕೋಣೆಯ ಬಾಗಿಲು ತೆರೆದಿದೆ. ಒಳಗೆ ಧಡೂತಿ ಹೆಂಗಸೂ, ಆಕೆಯ ಎದುರಿಗೆ ಹುಡುಗಿಯರೂ ಕುಳಿತು ಏನೋ ಚರ್ಚೆಯಲ್ಲಿ ತೊಡಗಿದಂತಿತ್ತು. ಪತಂಜಲಿಯನ್ನು ಕಂಡವಳೇ ಗಾಬರಿಯಾದಂತೆ ಎದ್ದು ಬಂದ ಹೆಂಗಸು, ’ಬನ್ನಿ ಬನ್ನಿ ನಾನೇ ಕೆಳಗೆ ಬರುವವನಿದ್ದೆ ನೋಡಿ. ನೀವು ಬಂದಿದ್ದು ಒಳ್ಳೆಯದೇ ಆಯಿತು, ಸ್ವಲ್ಪ ಈ ಕಡೆ ಬನ್ನಿ’ ಅನ್ನುತ್ತಾ ಪತಂಜಲಿಯ ರಟ್ಟೆ ಹಿಡಿದು ಪಕ್ಕದ ರೂಮಿನ ಮೂಲೆಗೆ ಎಳೆಯಲಾರಂಭಿಸಿದಳು. ಒಂದು ಮಾತಿಗೂ ಅವಕಾಶವಿಲ್ಲದಂತೆ – ಅಷ್ಟುಹೊತ್ತಿಗೆ ಪತಂಜಲಿ ತಾನ್ಯಾವುದೊ ಬೇಡದ ರಗಳೆಗೆ ಸಿಕ್ಕಿ ಹಾಕಿಕೊಂಡೆ ಅನ್ನುವುದನ್ನು ಖಾತ್ರಿ ಮಾಡಿಕೊಂಡುಬಿಟ್ಟಿದ್ದ-  ನಿಮಗೆ ವಿಷಯ ತಿಳಿದಿದೆ ಹಾಗಾದರೆ? ಏನಾದರೂ ಸೂಚನೆಯಿತ್ತಾ? ಈ ಹುಡುಗಿಯರಿಗೂ ಏನೂ ತಿಳಿದಿಲ್ಲ ನೋಡಿ? ನನಗೂ ಅನುಮಾನ ಬರಲಿಲ್ಲ. ಆಕೆ ಇದ್ದಾಳಂತ ನಾನು, ನನಗೆ ಹೇಳಿ ಹೋಗಿರುತ್ತಾಳೆ ಅಂತ ಅವರು. ಸರಿಯಾಗಿ ನಾಮ ಹಾಕಿಬಿಟ್ಲು … ಹೆಸರು ಮಾತ್ರ ಸುಮತಿ ಸಾರ್. ಬುದ್ಧಿಗೇಡಿ ಕೆಲಸ ಮಾಡಿದಾಳೆ.. ನೀವೆ ಹೇಳ್ಬೇಕು ಈಗ. ಅವಳ ಅಪ್ಪ ಅಮ್ಮಂಗೆ ಏನು ಉತ್ತರ ಕೊಡ್ಲಿ ನಾನು? ಹೆಂಗಸು ತನಗೂ ಮಾತನಾಡುವುದಕ್ಕೆ ಅವಕಾಶ ನೀಡುತ್ತಿಲ್ಲ, ತಾನೂ ಮಾತು ನಿಲ್ಲಿಸುತ್ತಿಲ್ಲ. ತಾನು ಹುಡುಕಿಕೊಂಡು ಬಂದ ಹುಡುಗಿ- ಸುಮತಿ ಕಾಣಿಸುತ್ತಿಲ್ಲವೆಂದು ಈಗಷ್ಟೇ ಇವರಿಗೆ ತಿಳಿದಿದೆ ಅನ್ನುವುದು ಖಾತ್ರಿಯಾಯಿತು ಪತಂಜಲಿಗೆ. ಹೆಂಗಸು ಗೋಡೆಗಳೂ ಕೇಳಿಸಿಕೊಂಡುಬಿಡುತ್ತವೇನೋ ಎಂಬಂತೆ ಮತ್ತೆ ಪಿಸಿಗುಡಲಾರಂಭಿಸಿದಳು, ’ಈಗೇನು ಮಾಡೋಣ ಸರ್, ನೀವು ಸರಿಯಾದ ಸಮಯಕ್ಕೆ ಬಂದ್ರಿ…’ ಆಕೆಯನ್ನು ಅಲ್ಲಿಗೇ ತಡೆದು, ತನ್ನ ಪರಿಚಯವನ್ನೂ, ತಾನು ಬಂದ ಕಾರಣವನ್ನೂ ಹೇಳಿ ಸುಮತಿಯ ಅಪ್ಪನಿಗೆ ಫೋನು ಮಾಡುವಂತೆ ತಿಳಿಸಿ ಹೊರಡುವ ತೀರ್ಮಾನವನ್ನು ಮಾಡಿಕೊಂಡರೂ ಹಾಗೆ ಮಾಡದೆ ಅಲ್ಲಿದ್ದ ಉಳಿದ ಇಬ್ಬರು ಹುಡುಗಿಯರನ್ನು ಕರೆದು ಮಾತಿಗೆ ನಿಂತ. ಆ ಮಕ್ಕಳಾದರೂ ಏನು ಹೇಳಿದರೊ? ಏನು ಬಿಟ್ಟರೊ?  ಅವರಿಗಾದರೂ ಸುಮತಿಯ ಪರಿಚಯವಾದದ್ದು ಎರಡು ದಿನಗಳ ಹಿಂದಷ್ಟೆ. ಇದು ಪ್ರಯೋಜನಕ್ಕೆ ಬಾರದ ಕೆಲಸವೆನ್ನಿಸಿ ಸದ್ದಿಲ್ಲದ ಹೆಜ್ಜೆ ಹಾಕುತ್ತ ಅಂಗಡಿಯ ಪಕ್ಕದ ಹೆಂಗಸಿನ ಮನೆಯ ಬಾಗಿಲು ತಟ್ಟಿ ’ಇವರೇ ಅವಶ್ಯವಿದ್ದರೆ ಕರೀರಿ ನನ್ನ. ನನ್ನ ಕೈಲಾದ್ದು ಮಾಡುತ್ತೇನೆ. ಇಲ್ಲೇ ನಾಲ್ಕು ಹೆಜ್ಜೆ ಹಾಕಿದರೆ ನನ್ನ ಮನೆ. ಆ ಹುಡುಗಿಯರಿಗೆ ಗೊತ್ತು’ ಅಂದು ಹೊರಡುವಾಗ ಒಳಗಿನಿಂದ ಫೋನು ರಿಂಗಾದ ಸದ್ದು. ಅದರ ಹಿಂದೆಯೇ, ’ನಿಮ್ಮ ಮಗಳು ಯಾರ ಜೊತೆಗೊ ಓಡಿಹೋಗಿದ್ದಾಳೆ. ನಿನ್ನೆ ಸಂಜೆ ಬಂದವಳು ರಾತ್ರಿ ಎಷ್ಟು ಹೊತ್ತಿಗೆ ಪರಾರಿ ಆಗಿದಾಳೋ? ಇಂತಾ ದರಿದ್ರ ಹುಡುಗಿಯರಿಂದ ನಮಗೂ ಕೆಟ್ಟ ಹೆಸರು. ಇದ್ದವರಿಗೂ ಕಿರಿಕಿರಿ. ನಾನು ಜವಾಬ್ದಾರಲಲ್ಲ. ಬಂದು ಅದೇನು ಮಾಡ್ಕೋತೀರೊ ಮಾಡ್ಕೊಳ್ಳಿ’ ಅನ್ನುತ್ತಿರುವು ಕೇಳಿಸಿತು. ಭಾರವಾದ ಹೆಜ್ಜೆ ಹಾಕುತ್ತ ನಡೆಯತೊದಗಿದ… ಈ ವಿಚಾರವಾಗಿ ಏನೂ ಮಾಡಲು ಸಾಧ್ಯವಿಲ್ಲವೆಂಬಂತೆ.  

ಪತಂಜಲಿಯ ತಲೆಯಲ್ಲಿ ನೂರು ವಿಚಾರಗಳು. ಒಂದಕ್ಕೊಂದು ಸೇರಿ ಸಿಕ್ಕಾಗಿಬಿಟ್ಟಿವೆಯೆನ್ನಿಸುತ್ತಿತ್ತು. ನಿನ್ನೆಯಷ್ಟೆ ಹುಡುಕಿ ಹುಡುಕಿ ಹೂವು ಆರಿಸಿಕೊಂಡು ಹೋಗಿದ್ದ ಹುಡುಗಿ ಮತ್ತೆ ಬೆಳಗಾಗುವುದರೊಳಗೆ ಕಾಣಿಸುತ್ತಿಲ್ಲವೆಂದರೆ? ಆಕೆ ಆಕೆಯಾಗೇ ಹೋದಳಾ ಇಲ್ಲಾ ಏನಾದರೂ ಹೆಚ್ಚುಕಮ್ಮಿಯಾಯಿತಾ? ಓಡಿಹೋಗಿರುತ್ತಾಳಾ ಯಾವುದಾದರೂ ಹುಡುಗನೊಡನೆ?   ಸುಮತಿ ಸುಶೀಲೆಯಂತೆ ಕಾಣಿಸಲಾರಂಭಿಸಿದ್ದಳು ಪತಂಜಲಿಗೆ. ಹಾಗಾದರೆ ತಾನಿದ್ದ ಜಾಗದಲ್ಲಿ ಆ ಹುಡುಗನಿದ್ದಾನಾ?  ಇರಲಿಕ್ಕಿಲ್ಲ ಅಂದುಕೊಂಡ. ತಾನು ಒಮ್ಮೆಯಷ್ಟೆ ನೋಡಿದ ಈ ಹುಡುಗಿಯನ್ನು ಸುಶೀಲೆಗೆ ಯಾಕೆ ಹೋಲಿಸಬೇಕು? ರೂಪ ಹೊಂದಿಕೆಯಾದ ಮಾತ್ರಕ್ಕೆ ಗುಣವೂ ಹಾಗೇ ಇರಬೇಕಾ? ಅಂದು ಸುಶೀಲೆಯಿದ್ದ ಪರಿಸ್ಥಿತಿಗೂ ಈ ಹುಡುಗಿಯ ಪರಿಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ. ಇಪ್ಪತ್ತೈದು ವರ್ಷಗಳ ಅಂತರವೂ ಇದೆ. ನಿಜವಾಗಿ ಸುಶೀಲೆಯೇ ಸಿಕ್ಕಿದರೂ ತಾನೇನುಮಾಡುತ್ತಿದ್ದೆ ಅನ್ನುವ ವಿಷಯಕ್ಕೇ ತನಗೆ ಉತ್ತರ ಗೊತ್ತಿಲ್ಲದಿರುವಾಗ ಇದಕ್ಕ್ಯಾಕೆ ತೆಲೆಕೆಡಿಸಿಕೊಳ್ಳುವುದು ಅಂದುಕೊಂಡರೂ ತಲೆ ಕೆಡುತ್ತಲೇ ಇತ್ತು. ಹೆಜ್ಜೆ ಮಾತ್ರ ಒಂದರ ಮುಂದೆ ಮತ್ತೊಂದು ಸಾಗುತ್ತ ಮನೆಯ ಮುಂದೆ ತಲುಪಿಸಿತು. ಯಾಂತ್ರಿಕವಾಗಿ ಗೇಟುಗಳನ್ನು ತೆಗೆದು ಇನ್ನೂ ಯಾಂತ್ರಿಕವಾಗೆಂಬಂತೆ ಮನೆ ಸೇರಿದ ಪತಂಜಲಿ ಆರಾಮು ಕುರ್ಚಿಯಮೇಲೆ ಕುಳಿತ. ಹಿಂದೆಯೇ ತೆರೆದ ಬಾಗಿಲಿನ ಒಳಗಿಂದ ನಿಧಾನವಾಗಿ ಪರಿಮಳ ಬರಲಾರಂಭಿಸಿತು. ಅದೇ ಕೇದಿಗೆಯ ಪರಿಮಳ. ಪತಂಜಲಿ ಹಾಗೇ ಕಣ್ಣುಮುಚ್ಚಿದ…

(‘ಮಯೂರ’ದಲ್ಲಿ ಪ್ರಕಟಿತ)

Advertisements
 1. minchulli
  17/09/2009 ರಲ್ಲಿ 3:40 ಅಪರಾಹ್ನ

  idannu bareda ninna kaigaligondu salaamu ..

 2. 17/09/2009 ರಲ್ಲಿ 7:53 ಅಪರಾಹ್ನ

  ಶಮಾ,

  🙂

  ಕಲ್ಲರೆ ಸರ್,

  ಚೆನ್ನಾಗಿದೆ ಕಥೆ, ವಿವರಣೆಗಳೂ ಕಣ್ಣೆದುರು ಹಾದುಹೋಗುವ ದೃಶ್ಯಗಳಂತಿವೆ,

  ಪರಿಮಳಗಳಿಗೆ ನೆನಪುಗಳನ್ನು ಹೊತ್ತು ತರುವ ಚಟವಿರುವುದು ನೂರಕ್ಕೆ ನೂರು ದಿಟ ಸರ್. ಇದೇ ಚಟ ರಾಗಗಳಿಗೂ ಇದೆ. (ಹಳೆಯ ಗೀತೆ ಕೇಳಿದಾಗ, ಮೊದಲು ಆ ಗೀತೆಯನ್ನು ಕೇಳಿದ ಪರಿಸ್ಥಿತಿಯ ನೆನಪು ಪಕ್ಕನೆ ಆಗುತ್ತದೆ)

  ಮುಖ್ಯವಾಗಿ ಕಥೆ ಹೇಳಲು ಬಳಸಿದ ತಂತ್ರ ಇಷ್ಟವಾಯಿತು.

 3. 18/09/2009 ರಲ್ಲಿ 8:42 ಫೂರ್ವಾಹ್ನ

  kedige sowgandike adaddu hege? adruu gud narration***

 4. Suvarna
  18/09/2009 ರಲ್ಲಿ 10:41 ಫೂರ್ವಾಹ್ನ

  very nice

 5. 23/09/2009 ರಲ್ಲಿ 11:39 ಅಪರಾಹ್ನ

  ಉತ್ತಮ ನಿರೂಪಣೆಯಿಂದ ಕೂಡಿದ ಕಥೆಯಲ್ಲಿ ಕೇದಿಗೆಯ ಪರಿಮಳವೂ ತುಂಬಿದೆ. ಕುತೂಹಲವನ್ನು ಕಾಯ್ದುಕೊಳ್ಳುವಲ್ಲಿ ಸಫಲವೂ ಆಗಿದೆ. ಸುಶೀಲೆ ಹಾಗೂ ಸುಮತಿಯರನ್ನು ಓದುಗರ ಕಲ್ಪನೆಗೆ ಬಿಟ್ಟಿದ್ದು ಇಷ್ಟವಾಯಿತು. ಈಗ ಕಥೆ ನಮ್ಮ ನಮ್ಮ ಕಲ್ಪನೆಯೊಳಗೇ ಬೆಳೆಯಬಲ್ಲದು 🙂

  ಅಂದಹಾಗೆ ಸೌಗಂಧಿಕ ಶೀರ್ಷಿಕೆ ಮಾತ್ರ ಪೂರ್ತಿಯಾಗಿ ಅರ್ಥವಾಗಲಿಲ್ಲ! ಇದರರ್ಥ ಸುಗಂಧವನ್ನು ಹೊಂದಿದವಳು.. ಪರಿಮಳವನ್ನು ಬೀರುವವಳು ಎಂದಾಗಿರಬಹುದೇ? ಹಾಗಿದ್ದರೆ ಅರ್ಥವಾಯಿತೆನ್ನಬಹುದು 🙂

 6. 07/10/2009 ರಲ್ಲಿ 11:53 ಫೂರ್ವಾಹ್ನ

  Nice narration, I could visualize the happenings 🙂

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: