ಭವಿಷ್ಯ.

ಆತ ತನ್ನದೇ ಆದ ಹೆಸರಿಲ್ಲದ ಆಸಾಮಿ. ಅಥವಾ ಅವಶ್ಯಕತೆಗೆ ತಕ್ಕಂತೆ ಹೆಸರಿಟ್ಟುಕೊಳ್ಳುವ ಮನುಷ್ಯಪ್ರಾಣಿ ಅಂತಂದುಕೊಳ್ಳಬಹುದು. ತನ್ನ ಪರಿಚಿತರ ನಡುವೆ ಅಪರಿಚಿತವಾಗಿಯೇ ಉಳಿದುಬಿಡುತ್ತಾನೆ. ಅಪರಿಚಿತರ ನಡುವೆ ಆತನ ಮಾತಿನ ಮೋಡಿ ಸರಾಗವಾಗಿ ಕೆಲಸ ಮಾಡುತ್ತದೆ. ಆತ ಉಳಿದುಕೊಂಡ ಬಾಡಿಗೆಮನೆಯ ಸುತ್ತಲಿನವರಿರಬಹುದು, ಜೊತೆಗೆ ಕೆಲಸ ಮಾಡುವವರೂ, ಅವರ ನೆಂಟರು, ಇಷ್ಟರು..ಹೀಗೆ ಯಾರಾದರೂ ಅಗಬಹುದು. ಒಟ್ಟಿನಲ್ಲಿ ಹೊಸಬರಾಗಿರಬೇಕು. ದೂರದ ಯಾವ ಪರಿಚಯದ ಎಳೆಯೂ ಸಿಗದಂತಿರಬೇಕು. ಅಷ್ಟೆ.

ಅನುಕೂಲಕ್ಕಾಗಿ ಆಗಾಗ ಆತ ತನಗೆ ತಾನೇ ಇಟ್ಟುಕೊಳ್ಳುವಂತೆ ಈಗ ನಾವೂ ಸಹ ಒಂದು ಹೆಸರು ಕೊಡುವ – ವಿವೇಕ. ಆತ ಇಟ್ಟುಕೊಳ್ಳುವ ಹೆಸರುಗಳು ಸಹ ಹೀಗೆ ಇರುತ್ತವೆ. ಶರಣ, ಸಂದೀಪ, ವಿಕಾಸ, ವಿನೋದ, ಗುಣ, ಗಣೇಶ.. ಪ್ರತಿಯೊಂದು ಹೆಸರಿನಲ್ಲೂ ಭರ್ತಿ ಬೆಳಕು! ಒಂದೊಂದು ಕೆಲಸ, ಮನೆ, ಊರು ಬದಲಾಯಿಸುವಾಗಲೂ ಒಂದೊಂದು ಹೆಸರಿನೊಂದಿಗೆ ಹೊರಡುತ್ತಾನೆ. ತನ್ನ ಕೆಲಸ ಮುಗಿಯುವುದೇ ತಡ ಮತ್ತೊಂದು ಪ್ರಾಜೆಕ್ಟ್ ಕೈಗಿತ್ತಿಕೊಳ್ಳುತ್ತಾನೆ.

ಯಥಾಪ್ರಕಾರ ಮತ್ತೊಂದು ಹೆಸರು. 

ತಿಂಗಳಿನ ಹಿಂದೆ ಬೆಂಗಳೂರು ಸೇರಿಕೊಂಡ ವಿವೇಕ ತನ್ನ ಮಾತಿನ ಮೋಡಿಯಿಂದ ನಾಕು ಚಕ್ರದ ದುಬಾರಿ ಗಾಡಿಗಳನ್ನು ಮಾರುವ ಜಾಗದಲ್ಲಿ ಸೇರಿಕೊಂಡ. ಜೊತೆಗೆ ಪ್ರತಿನಿತ್ಯ ಬೆಳಗಾಗುವುದರೊಳಗೆ ಮತ್ತು ಕತ್ತಲಾದಮೆಲೆ ಚಿಕ್ಕಮಕ್ಕಳಿಗೆ ಪಾಠ ಹೇಳಲು ಟ್ಯೂಷನ್ ಕೆಂದ್ರವೊಂದರಲ್ಲಿ ಮಾಸ್ತರನಾದ. ಎರಡು ಪ್ಲಸ್ ಎರಡು ಹೇಗೆ ನಾಲ್ಕಲ್ಲ ಅನ್ನುವುದನ್ನು ಕಲಿಸಲಾರಂಭಿಸಿದ.

ಭರ್ತಿ ಕೆಲಸ.

ಕಾರು ಖರೀದಿಸುವವರಿಗೆ, ಪಾಠ ಕೇಳುವವರಿಗೆ ತೃಪ್ತಿಯಾಗುವಂತೆ ಪಾಠ ಮಾಡಿದ. ಸಿಕ್ಕ ಸಮಯದಲ್ಲೆಲ್ಲ ತನ್ನ ಮಾತಿನ ಜಾಲ ಬೀಸಿದ – ಕೆಲಸಕೊಟ್ಟವನಿಂದ ಹಿಡಿದು ಕೆಲಸಮಾಡುವವರ ತನಕ. ಗ್ರಾಹಕರಿಂದ ಹಿಡಿದು ಪಾಲಕರ ತನಕ. ತಿಂಗಳಿನೊಳಗೆ ಎಲ್ಲಾ.

ವೇದಿಕೆ ಸಿದ್ಧವಾಯಿತು.

ದೇವರ ಫೋಟೊ, ಮೂರ್ತಿಗಳು ಬಂದವು. ದೀಪ ಹಚ್ಚಲ್ಪಟ್ಟಿತು. ಊದುಬತ್ತಿಯ ಪರಿಮಳ ಹರಡಿತು. ಅದರ ಹಿಂದೆ ಅಲ್ಲೊಬ್ಬ ಮಹಾಪುರುಷರ ಅಗಮನವಾಯಿತು. ವಿಭೂತಿ ತಟ್ಟೆ ಬಂತು. ಜಮಖಾನಾ ಹಾಸಲ್ಪಟ್ಟಿತು. ಪೀಠದಮೇಲೆ ಹೊಸರೂಪದ ಸ್ಥಾಪನೆಯಾಯಿತು. ಅವರಿಗೂ ಸಹ ಅವರದೇ ಆದ ಹೆಸರಿಲ್ಲ. ಅಥವಾ ಹೋದಲ್ಲೆಲ್ಲ ಒಂದೊಂದು ಹೆಸರಿದೆ. ನಮ್ಮ ಅನುಕೂಲಕ್ಕೆ ತಕ್ಕಂತೆ, ಶ್ರೀ. ಯೋಗಾನಂದ ಜೀ ಅಂದುಕೊಳ್ಳುವ.

ಯೊಗಾನಂದರದು ಅಸಮಾನ್ಯ ಬುದ್ಧಿವಂತಿಕೆ. ಅವರದು ಜ್ಯೋತಿಷ್ಯದಲ್ಲಿ ಹಲವು ವರ್ಷಗಳ ತಪಸ್ಸು. ಆದರೂ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಸಿಕ್ಕಿದಷ್ಟು ಯಶಸ್ಸು ಮೊದಲೆಂದೂ ಸಿಕ್ಕಿರಲಿಲ್ಲ. ಜ್ಯೋತಿಷಿಗಳಿಗೆ ಹೇಳುವುದೆಲ್ಲವನ್ನೂ ಪಕ್ಕಾ ಮಾಡಿಸುವ ಕಲೆಯಿರಬೇಕು ಅನ್ನುವುದನ್ನು ತಿಳಿದುಕೊಂಡಮೇಲೆ ಈ ಯಶಸ್ಸು ಸಿಕ್ಕಿದ್ದು.  ಈ ಯಶಸ್ಸಿನ ಮಂತ್ರವನ್ನು ಹೇಳಿಕೊಟ್ಟಿದ್ದು ವಿವೇಕ. ಆತನೂ ಯೋಗಾನಂದರ ಕೈಲಿ ತನ್ನ ಕೈ ನೀಡಲು ಬಂದವನೇ.

ವಿವೇಕನ ಕಿವಿ ನೆಟ್ಟಗಾಯಿತು. ಜ್ಯೋತಿಷಿಗಳ ಮಾತು ಹರಿಯಿತು. ಇನ್ನೆರಡು ವರ್ಷಗಳಲ್ಲಿ ನಿನಗೆ ಯಶಸ್ಸು ಕೈ ಹಿಡಿಯುತ್ತದೆ. ನಂತರದ ದಿನಗಳಲ್ಲಿ ನಿನ್ನನ್ನು ಹಿಡಿಯುವವರಿಲ್ಲ… ಭವಿಷ್ಯದ ಕನಸು ಟಿಸಿಲೊಡೆದು ದಿಕ್ಕುದಿಕ್ಕಿಗೆ ಹರಡಿತು. ಅವರ ಕೈಯಿಂದ ತನ್ನ ಕೈ ವಾಪಸು ಪಡೆಯುವಾಗ ವಿವೇಕನ ತಲೆಯೊಳಗೆ ಚಿತ್ರ ಸ್ಪಷ್ಟವಾಗಿ ಮೂಡಿತ್ತು.

ಯೋಗಾನಂದರು ವಿವೇಕನ ಹಿರಿಯ ಗೆಳೆಯರಾದರು. ಅವರಿಗೆ ಆರವತ್ತು. ಇವನಿಗೆ ಇಪ್ಪತ್ತು. ಅಂದಿನಿಂದ ಇಂದಿನವರೆಗೂ ಕೈತುಂಬಾ ಕೆಲಸ. ಜೇಬು ತುಂಬಾ ದುಡ್ಡು. ಸುಖೀ ಜೀವನ. ಯೊಗಾನಂದರು ಬೆಳಗಿನಿಂದ ಸಂಜೆಯವರೆಗೂ ಭವಿಷ್ಯ ನುಡಿಯುತ್ತಾರೆ. ದಿನವೊಂದಕ್ಕೆ ಸರಿಯಾದ ನಾಲ್ಕು ಜನ ಸಿಕ್ಕರೂ ಸಾಕು ಅನ್ನುವಂತೆ ಭವಿಷ್ಯವನ್ನು ವಿವರಿಸಿ ವಿವರಿಸಿ ನುಡಿಯುತ್ತಾರೆ. ಪೂಜೆ ಮಾಡಿಸುತ್ತಾರೆ. ಹೋಮ ಹವನ ಏರ್ಪಡಿಸುತ್ತಾರೆ.

ಸ್ವಲ್ಪವೂ ಪುರುಸೊತ್ತಿಲ್ಲ ಅವರಿಗೆ. ಬಂದು ತಿಂಗಳಾಗುವುದರೊಳಗೆ ಯೋಗಾನಂದ ಬ್ರಾಂಡ್ ಸುತ್ತಲೆಲ್ಲ ಪ್ರಸಿದ್ಧಿ ಪಡೆದುಬಿಟ್ಟಿದೆ. ಈಗ ಅವರಿರುವ ಕೋಣೆಯ ಹೊರಗೆ ಒಬ್ಬೊಬ್ಬರಾಗಿ ಹೆಸರು ಗೊತ್ತಿಲ್ಲದ ಜನರ ಆಗಮನವಾಗುತ್ತಿದೆ. ಪ್ರತಿಯೊಬ್ಬರ ಅಂಗೈಯೊಳಗೂ ನೂರು ನೂರು ಗೆರೆಗಳು. ಜೇಬಿನೊಳಗೆ ಜಾತಕ. ಹಣೆಯಮೇಲೆ ಬೆವರು. 

ಗೇಟಿನ ಪಕ್ಕದಲ್ಲೇ ನಿಂತ ಹುಡುಗನೊಬ್ಬ ಯಾರನ್ನೂ ಒಳಗೆ ಬಿಡುತ್ತಿಲ್ಲ. ಹಸಿರು ಬಣ್ಣದ ಯಾವುದೋ ತಿಳಿಯದ ಭಾಷೆಯಲ್ಲಿ ಬರೆದ ಚೀಟಿಯನ್ನು ತೊರಿಸಿದವರ ಹೊರತಾಗಿ. ಹೆಚ್ಚು ಮಾತನಾಡದ ಆತ ತನ್ನೆರಡು ಕೈಗಳಿಂದಲೇ ಪರಿಸ್ಥಿತಿಯನ್ನು ನಿಭಾಯಿಸುತ್ತಾನೆ.

ಆದರೂ ಹೊರಗೆ ಗದ್ದಲ.

ವಿವೇಕನ ಮತ್ತೊಂದು ಪ್ರಾಜೆಕ್ಟು ಮುಗಿಯುವ ಹಂತಕ್ಕೆ ಬಂದಿದೆ. ಆತನಿಗೀಗ ತನ್ನ ವೃತ್ತಿಯ ಕುರಿತಾಗಿ ಹೊಸದೊಂದು ಆಯಮ ದೊರಕಿದೆ. ಅದಕ್ಕೆ ಕುರುಹೆಂಬಂತೆ ಮುಂಬೈ, ದಿಲ್ಲಿ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಇನ್ನೂ ದೊಡ್ಡ ಪ್ರಮಾಣದ ಕೆಲಸ ಸಿಗುವ ಎಲ್ಲಾ ಲಕ್ಷಣವಿದೆ. ಇನ್ನೆರಡು ದಿನ ಕಾದರಾಯಿತು ಗೇಟಿನ ಹುಡುಗ.

ನಂತರದ ಕೆಲವು ಸಮಯ ಯೋಗಾನಂದರಿಗೆ ಮೌನ ವಿಶ್ರಾಂತಿ. ವಿವೇಕ ಹೊರಡುವ ಎಲ್ಲಾ ತಯಾರಿಯನ್ನೂ ಮಾಡುತ್ತಿದ್ದಾನೆ. ಆತನ ಹೆಸರೂ ಬದಲಾಗುತ್ತದೆ.

ಯೋಗಾನಂದರ ಭವಿಷ್ಯ ನಿಜವಾಗುತ್ತಿದೆ!

Advertisements
  1. 22/10/2009 ರಲ್ಲಿ 6:50 ಅಪರಾಹ್ನ

    Chenaagide. ishTavaaytu. bareda dhaaTi khushi kodtu

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: