ಮುಖ ಪುಟ > ಶೃದ್ಧಾಂಜಲಿ > ಅಸ್ತಿತ್ವದ ಒಂದು ಪ್ರಶ್ನೆ ಹಾಗೂ ಒಂದು ನಿಮಿಷದ ಮೌನ…

ಅಸ್ತಿತ್ವದ ಒಂದು ಪ್ರಶ್ನೆ ಹಾಗೂ ಒಂದು ನಿಮಿಷದ ಮೌನ…

ಆ ಸಭೆಗೆ ಸಕಲ ಸಿದ್ಧತೆ ನಡೆದಿದೆ. ಬಣ್ಣ ಬಣ್ಣದ ಕರೆಯೋಲೆ ತೆರೆಯಿಂದ ತೆರೆಗೆ ಹರಿದಿದೆ. ತೆರೆಯಿಂದ ಮರೆಗೆ ಸರಿದಿದೆ. ಕರೆಯೋಲೆಯಲ್ಲಿ ಚಿತ್ರ – ಅದಕ್ಕೀಗ ವಿಶೇಷ ಕಳೆ. ಕಣ್ಣಿನಲ್ಲಿ ಕಾಂತಿ. ತುಟಿಯಂಚಿನಲ್ಲಿ ನಗು. ತಿದ್ದಿಟ್ಟ ಕ್ರಾಪು… ಕಿವಿಯಿಂದ ಕಿವಿಗೆ ಮಾತು ತಲುಪಿದೆ. ಈ ಕಿವಿಯಿಂದ ಆ ಕಿವಿಗೆ ದಾಟಿದೆ. ಮಾತಿನಲ್ಲಿ ನೆನಪು – ಅದಕ್ಕೀಗ ವಿಶೇಷ ಕಾಳಜಿ. ವಿಶಿಷ್ಟ ಮಮಕಾರ. ವಿಚಿತ್ರ ಸಂಕಟ.

ಒಂದೊಂದಾಗಿ ಮುಂದುವರಿದು – ಮುಗಿದು ಈಗ ಉದ್ದೇಶಿತ ಕಾರ್ಯಕ್ರ್‍ಅಮ ಆರಂಭವಾಗಬೇಕು. ನೆಲಹಾಸು, ಕುರ್ಚಿಯಿಂದ ಹಿಡಿದು ದೀಪ ಧೂಪದವರೆಗೆ ಎಲ್ಲ ತಂತಮ್ಮ ಸ್ಥಾನ ಅಲಂಕರಿಸಿವೆ. ಬಾಟಲಿಯೊಳಗಿನ ನೀರು, ಅದರ ಪಕ್ಕ ಗ್ಲಾಸು ’ಸ್ವಚ್ಚ’ವಾಗಿ ಸಭೆಯ ನಡುವೆ ತಲುಪಿವೆ. ಎಲ್ಲ ನಿರ್ಜೀವ ವಸ್ತುಗಳೂ ಅಪ್ಪ ಹೇಳಿದ್ದು ಕೇಳುವ ಗಂಭೀರ ಮಕ್ಕಳಂತೆ ಸಪ್ಪೆ ಮೋರೆ ಹೊತ್ತಿವೆ. ಸನ್ಮಾನ್ಯರ ತುಂಬು ನಗೆಯ ಭಾವಚಿತ್ರವೂ ಅತೀ ಮುಖ್ಯ ಸ್ಥಾನ ಅಲಂಕರಿಸಿದೆ. ಅವರೆದುರು ಸುವಾಸನಾಯುಕ್ತ ಊದುಬತ್ತಿಯ ಘಮ. ಅಲ್ಲಲ್ಲಿ ಹರಡಿಕೊಂಡಿರುವ ಸಜೀವ ವಸ್ತುಗಳು ಕಾಲು ಕೆರೆದುಕೊಳ್ಳುತ್ತಲೋ, ತೋಳು ಏರಿಸುತ್ತಲೋ, ಕೂದಲು ತಿದ್ದುತ್ತಲೋ, ಮತ್ತೊಂದರ ಹೆಗಲ ಮೆಲೆ ಕೈಹಾಕುತ್ತಲೋ, ಪೆಕರು ಪೆಕರು ನೋಡುತ್ತಲೋ… ತಮ್ಮದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿವೆ. ಗೇಟೆಂಬ ಪ್ರವೇಶದ್ವಾರದಿಂದ ಮತ್ತಿಷ್ಟು ಅತಿಥಿಗಳು ಬರುತ್ತಿವೆ. ಕಡುಗಪ್ಪು ಅಂಗಿ-ಕೆಂಪು ಗಾಡಿಯೂ, ನೀಲಿಹಾಕಿದ ಬಿಳಿ ಜುಬ್ಬಾ- ಟರ್ಕಿ ಟವೆಲ್ಲುಗಳೂ, ಗಣ್ಯವೂ, ನಗಣ್ಯವೂ ಎಲ್ಲ ನಮೂನೆಗಳಿವೆ. ಅವುಗಳ ಹಿಂದೆ ಮುಂದೆ ವ್ಯಾನಿಟಿ ಬ್ಯಾಗುಗಳೂ, ಹೈಹೀಲ್ಡ್ ಚಪ್ಪಲಿಗಳೂ, ಲಿಪ್’ಸ್ಟಿಕ್ಕುಗಳೂ, ಚಿಕ್ಕ ಚಿಕ್ಕ ಚುರುಕು ಕಣ್ಣುಗಳೂ ಸುತ್ತುತ್ತಿವೆ. ಈವರೆಗೆ ಹರಡಿದ್ದ ಒಂದು ಬಿಗು ವಾತಾವರಣ ತಾನೇ ತಾನಾಗಿ ತಿಳಿಯಾಗುತ್ತಿದೆ. 

ಇನ್ನು ’ನನ್ನದೇನಿಲ್ಲ’ ಎಲ್ಲ ಅವರದೇ ಎಂಬಂತೆ ಒಂದೊಂದಾಗಿ ಎಲ್ಲ ಸಜೀವಿಗಳು ಜಾಗ ಹಿಡಿದಿವೆ. ’ಮೊನ್ನೆ ಮೊನ್ನೆ ನೋಡಿದ್ದೆ, ಎರಡು ದಿನ ಮೊದಲು ನಮ್ಮನೆಗೆ ಬಂದಿದ್ದ, ಭಯಂಕರ ತಲೆ, ಅದ್ಭುತ ಪ್ರತಿಭೆ, ಕಡೆಯ ಊಟದ ಋಣ ನಂಜೊತೆ ಇತ್ತು, ಈಗೀಗ ಸೋತು ಹೋಗಿದ್ದ, ಒಳ್ಳೆ ರಸಿಕ, ಕಳಕೊಳ್ಳುವುದು ಅಂದರೆ ಇದು, ಸರಿ ಸಮಯಕ್ಕೆ ಹೋದ, ಗಟ್ಟಿ ಇರುವಾಗಲೆ ಹೋಗಿಬಿಡಬೇಕು, ಇಲ್ಲಿಗೆ ಎಲ್ಲ ಮುಗೀತು..’ ಎಲ್ಲ ಮುಗಿದು ಎಲ್ಲ ಸಜೀವಿಗಳು ನಿರ್ಜೀವದ ಮೌನಕ್ಕೆ ಹೊಂದಿಕೊಳ್ಳುವ ದಿಶೆಯಲ್ಲಿ ಪ್ರಯತ್ನ ಪ್ರಾರಂಭವಾಗಿದೆ. ಊದುಬತ್ತಿಯ ಪರಿಮಳದ ಮುಂದೆ ಶ್ರೀಯುತರದ್ದು ಮಾತ್ರ ಅದೇ ಮಾಸದ ನಗೆ. ಎದುರಿನಿಂದ ನೋಡುತ್ತಿರುವ ಸಜೀವಿಗಳ ಮುಸುಡಿಯಲ್ಲಿ ಇದ್ದಕ್ಕಿದ್ದಂತೆ ಸತ್ತ ಕಳೆ. ಇದ್ಯಾವುದರ ಪರಿವೆ ಇಲ್ಲದಂತೆ ಮಕ್ಕಳು ಬೆರಳು ಬೆಸೆಯುತ್ತಿವೆ, ನಿರೂಪಕ ಹಾಳೆ ಬದಲಿಸುತ್ತಿದೆ, ಹಲೋ ಮೈಕ್ ಚೆಕ್-ಮೈಕ್ ಚೆಕ್ ನಡೆಯುತ್ತಿದೆ, ಬಿಳಿ ಜುಬ್ಬಾ, ಕೆಂಪು-ಬಿಳಿ-ಕಪ್ಪು ತಲೆ ಸಭೆಯೇರುತ್ತಿದೆ. ಇನ್ನೇನು ಸಭೆ ಆರಂಭ…

ಒಂದು ನಿಮಿಷದ ಮೌನಕ್ಕೆ ಒಂದು ವಾರಕ್ಕೂ ಹೆಚ್ಚಿನ ತಯಾರಿ ನಡೆಸಿದ ಸಜೀವಿಗಳ ಕಣ್ಣು ಏನನ್ನೋ ಹುಡುಕುತ್ತಿದೆ. ಬತ್ತಿ ತುದಿ ದೀಪವಾಗುವ ಮೊದಲೆ ಸೂತ್ರದಾರನ ತಳಮಳ ಹೆಚ್ಚಾಗಿದೆ. ಅತಿಥಿಗಳು ಒಂದರ ಕಿವಿ ಒಂದು ಕಚ್ಚಿಕೊಳ್ಳುತ್ತಿವೆ. ಆಗಲೆ ಮೂರನೆಯ ಬಾರಿ ವಾಚು ನೋಡಿಕೊಂಡವುಗಳ ಸಂಖ್ಯೆ ಇದ್ದವುಗಳ ಅರ್ಧದಷ್ಟಾಗಿದೆ. ಇನ್ನೇನು ಮುಖ್ಯ ಉದ್ದೇಶ ಈಡೇರಬೇಕು – ತೊಡೆ ಬಿರಿದು ಹೊರಬಂದುಬಿಡುತ್ತೇನೆ ಅನ್ನುವಂತೆ ಯಾವನದೋ ಜಂಗಮವಾಣಿ ’ಜಗದಗಲ ಮುಗಿಲಗಲ’ ಕೂಗಿದೆ. ಅಳುವ ಮಗಳನ್ನು ಸಂತೈಸುವ ತಾಯಂತೆ ಎರಡೂ ತೊಡೆಗೆ ಕೈಹಾಕುತ್ತ ಓಡಿದೆ ಆಸಾಮಿ. ದೂರದಲ್ಲಿ, ’ಹಲೋ.. ಒನ್ನಿಮಿಷ ಮೌನಾಚರಣೆ ಮುಗ್ಸಿ ಕಾಲ್ ಮಾಡ್ತೀನಿ. ಎರಡ್ನಿಮಿಷ’ ಕೇಳುತ್ತಿದೆ. 

ಈಗ ಪ್ರಯತ್ನಪೂರ್ವಕವಾಗಿ ಮಾತು, ಸನ್ನೆ, ಶಬ್ಧ ಇತ್ಯಾದಿಗಳಿಗೆ ವಿರಾಮ ಸಿಕ್ಕಿದೆ. ಸಭೆಯ ತುಂಬಾ ನಿಧಾನ ನಿಧಾನವಾಗಿ ತಣ್ಣಗಿನ ಮೌನ ಆವರಿಸಿಕೊಳ್ಳುತ್ತಿದೆ. ಕುರ್ಚಿ ಕಾಲಿನ ಸದ್ದು, ವಯಸ್ಸಿನ ವಾಸನೆ, ಹೆಣ್ಣು ಪರಿಮಳ, ದೂರದ ಗಾಡಿ ಸದ್ದು.. ಎಲ್ಲ ಒಂದೊಂದಾಗಿ ಮರೆಯಾಗುತ್ತಿದೆ. ಕಳ್ಳ ಕಣ್ಣು, ಮಳ್ಳ ಮನಸು ಮಾತ್ರ ಜಿದ್ದಿಗೆ ಬಿದ್ದವರಂತೆ ಬೇಲಿ ಹಾರಿ ಹೊರಟಿವೆ. ಒಂದೊಂದರದ್ದೂ ಒಂದೊಂದು ಕತೆ. ಹಲವು ನೋಟ. ಹಲವಾರು ಕಾಟ. ಸಭೆಯನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುವಂತೆ ನಿರೂಪಕ ಮೌನಕ್ಕೆ ಭಾಷ್ಯ ಬರೆಯಲು ಹೊರಟಿದ್ದಾನೆ – ’… ಈಗ ಒಂದು ನಿಮಿಷದ ಮೌನ’ 

ಅರವತ್ತು ಸೆಕೆಂಡು ಈಗ ಮುಗಿಯಿತಾ, ಈಗ ಮುಗಿಯಿತಾ ಅನ್ನುವ ತಳಮಳದಲ್ಲಿ ಚಡಪಡಿಸಿಬಿಟ್ಟಿವೆ ಒಂದೊಂದೂ ಸಜೀವ ವಸ್ತುಗಳು. ಆ ಒಂದು ನಿಮಿಷದಲ್ಲಿ ಎದುರಿಗಿದ್ದ ಮಾನ್ಯರ ಭಾವಚಿತ್ರ ಅಲ್ಲಲ್ಲಿ ಕೆಲವು ವಿಷಾದಭರಿತ ಕಣ್ಣುಗಳಿಗೆ ಮಾತ್ರ ಕಂಡಿದೆ. ಅವರ ನಗೆ ದೀಪದ ಬೆಳಕಿನಲ್ಲಿ ನಿಚ್ಚಳವಾಗಿ ಕಂಡು ಊದುಬತ್ತಿಯ ಘಮದೊಂದಿಗೆ ನಿಧಾನವಾಗಿ ಪಸರಿಸುತ್ತ ಅನಂತದತ್ತ ವಿಹಾರ ಹೊರಟಿದೆ.    

ಈಗ ಸಭೆಗೆ ಜೀವ ಬರುತ್ತದೆ. ಜೊತೆಗೆ ಮಾನ್ಯ ಅಧ್ಯಕ್ಷರ ನಾಲ್ಕು ಅಮೂಲ್ಯ ಮಾತುಗಳು. ಎದುರಿನಲ್ಲಿ ಪಿಸುಮಾತು. ಮತ್ತೆ ಗದ್ದಲ…ಮುಂದಿನ ತಯಾರಿ. ಆಗಷ್ಟೆ ಹಚ್ಚಿದ ದೀಪ ಆರಿದ್ದು ಗಮನಿಸುವ ಅವಶ್ಯಕತೆಯೇನಿದೆ?  ಮತ್ತೊಂದು ಮೌನಾಚರಣೆ ಬರುವವರೆಗೆ ಬರೀ ಮಾತು. ಬರೀ ಕತೆ. ಭಾಷಣ, ಬರಹ, ಹಾರ-ತುರಾಯಿ, ಸನ್ಮಾನ, ಸಮಾರಂಭ. ಮತ್ತೊಂದು ಇನ್ನೊಂದು. ವರ್ತಮಾನದಲ್ಲೆನಿದ್ದರೂ ಅಸ್ತಿತ್ವದ ಒಂದು ಪ್ರಶ್ನೆ ಹಾಗೂ ಒಂದು ನಿಮಿಷದ ಮೌನ…

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: