ಮುಖ ಪುಟ > ಸಿನೆಮಾ > ಬೇಲಿಯ ಆಚೆ ಮತ್ತು ಈಚೆ : ಒಂದು ತಣ್ಣಗಿನ ಕತೆಯ ಸುತ್ತ

ಬೇಲಿಯ ಆಚೆ ಮತ್ತು ಈಚೆ : ಒಂದು ತಣ್ಣಗಿನ ಕತೆಯ ಸುತ್ತ

ಒಂದು ಬೇಲಿ. ಇಬ್ಬರು ಹುಡುಗರು. ಅಷ್ಟೇ ಸಾಕು ನೋಡುವವರಿಗೆ. ಮೊದಲ ನಿಮಿಷದಿಂದ ಕೊನೆಯವರೆಗೂ ಒಂದೇ ಹದದಲ್ಲಿ ಸಾಗುತ್ತದೆ ನೋಟ. ಎಲ್ಲೂ ನಿಲ್ಲುವುದಿಲ್ಲ. ’ದಿ ಎಂಡ್’ ಕಾಣಿಸಿ, ಭಾರವಾದ ಮನಸಿನೊಂದಿಗೆ ಹೊರಬರುತ್ತಾರೆ ಎಲ್ಲ. ಮೈಮುರಿಯುವುದಕ್ಕೆ, ಆಕಳಿಸುವುದಕ್ಕೆ, ಆಚೀಚೆ ನೋಡುವುದಕ್ಕೆ ಅವಕಾಶವೇ ಆಗುವುದಿಲ್ಲ. ಬದಲಿಗೆ ಮತ್ತೆ ಪ್ರಾರಂಭವಾಗುತ್ತದೆ ಚಿತ್ರ. ಒಳಗೊಳಗೆ ನಿಲ್ಲದೆ ಚಲಿಸುತ್ತದೆ ದೃಶ್ಯಾವಳಿ. ಅದು ಹಾಗೆ ಸುಮ್ಮನೆ ಮುಗಿಯುವುದಿಲ್ಲ. ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಓಡುತ್ತಿರುತ್ತದೆ. ಒಂದು ಲೆಕ್ಕದಲ್ಲಿ ’ಭಾರೀ’ ದಾಖಲೆಯಾಗಬಹುದು! ಆದರೆ ವಸ್ತುವಿನ ಒಳಹೊಕ್ಕವರಲ್ಲಿ ಮಾತ್ರ ’ದಾಖಲಾಗುತ್ತದೆ’. 

ಕಥೆಗಾರ, ಇಡೀ ಕತೆಯನ್ನು ಶುಭ್ರ ವಸ್ತ್ರದ, ನೀಟಾದ ಕ್ರಾಪಿನ, ಶಿಸ್ತುಬದ್ಧ ಎಂಟು ವರ್ಷದ ಚಿಕ್ಕ ಹುಡುಗನ ಕಣ್ಣುಗಳಲ್ಲಿ ನೋಡುತ್ತಾನೆ. ಆದರೆ ಕೇವಲ ಈ ಹುಡುಗನನ್ನೆ ಎದುರಿಗಿಟ್ಟುಕೊಂಡು ಹೆಜ್ಜೆ ಹಾಕುವುದಿಲ್ಲ ಆತ. ಆತನಿಗೊಂದು ಅವನದೇ ವಯಸ್ಸಿನ ಜೊತೆಗಾರನನ್ನು ತಂದು ನಿಲ್ಲಿಸುತ್ತಾನೆ. ಆ ಹುಡುಗನಿಗೊಂದು ಬೋಳು ಬೋಳು ತಲೆ. ಒಂದೆರಡು ಗಾಯ, ಮಣ್ಣು ಮಣ್ಣು ಬಟ್ಟೆ. ಹರಕು ಚಪ್ಪಲಿ. ಕೈಲೊಂದು ಮುರುಕು ಗಾಡಿ. ಈ ಹುಡುಗನಿಗೆ, ಸಮವಸ್ತ್ರ-ಶಾಲೆಯಾದರೆ, ಅವನಿಗೂ ಸಮವಸ್ತ್ರವಿದೆ. ಜೊತೆಗೆ ಕೆಲಸ… ಅವರಿಬ್ಬರ ಸುತ್ತ ಪಾತ್ರವರ್ಗ ಎದ್ದು ನಿಲ್ಲುತ್ತವೆ. ಹುಡುಗನಿಗೊಂದು ಅಕ್ಕ, ಅಪ್ಪ-ಅಮ್ಮ, ಅವರ ಸುತ್ತಲಿನ ಜನ, ಪರಿಸರ. ಮತ್ತೊಬ್ಬ ಹುಡುಗ ಸುತ್ತಲಿನ ಜನ, ಪರಿಸರ, ವಿಷಯ ಎನ್ನುತ್ತ ಕತೆಯ ಹಂದರ ಗಟ್ಟಿಗೊಳ್ಳುತ್ತದೆ. ಇಬ್ಬರು ಹುಡುಗರ ನಡುವೆ ಬೇಲಿ ಅಡ್ಡ ನಿಲುತ್ತದೆ. ಬೇಲಿ ಅಡ್ಡಿಯಾಗುತ್ತದೆ. ಅದೇ ಬೇಲಿ ಕಳಚಿಕೊಳ್ಳುತ್ತದೆ. ಕತೆ ಮುಂದುವರೆಯುತ್ತದೆ… 

ಹೀಗೆ ಚಿಕ್ಕ ಹುಡುಗನೊಬ್ಬನ ಕಣ್ಣಿನಲ್ಲಿ ಕಾದಂಬರಿಯೊಂದು ಅರಳಿ ಬಹಳಷ್ಟು ಚರ್ಚೆಯಾಗುತ್ತದೆ. ಮಕ್ಕಳಿಗಾಗಿ ಬರೆಯಲ್ಪಟ್ಟ ಈ ಕಾದಂಬರಿಯ ಮಾರಾಟ ಮೂರು ಮಿಲಿಯನ್ ದಾಟಿ ಮುಂದುವರೆಯುತ್ತದೆ. ಕಾಲ್ಪನಿಕ ಕತೆಯಾಗಿದ್ದರೂ,  ಒಂದು ನೈಜ ಘಟನೆಯಂತೆ ಓದಿಸಿಕೊಂಡು ಹೋಗುವ ಈ ಕಾದಂಬರಿ ತನ್ನೆಲ್ಲ ಹೆಸರು, ಚರ್ಚೆ, ವಿಮರ್ಷೆ, ಹೊಗಳಿಕೆ, ತೆಗಳಿಕೆಗಳ ನಡುವೆ ನಿರ್ದೇಶಕನೊಬ್ಬನೆ ಕೈಗೆ ಸಿಕ್ಕು, ಕೆಲವೊಂದು ಬದಲಾವಣೆಗಳೊಂದಿಗೆ,  ಸಿನೆಮಾ ಆಗಿ ತೆರೆಗೆ ಬಂದುಬಿಡುತ್ತದೆ. ಅಲ್ಲಿಂದ ಅದು ಮತ್ತೊಂದು ರೀತಿಯ ದೃಶ್ಯಾವಳಿ.

ತೊಂಬತ್ನಾಲ್ಕು ನಿಮಿಷಗಳ ಚಿತ್ರ ನಿಧಾನವಾಗಿ ಒಂದೊಂದೆ ನಿಮಿಷಗಳನ್ನು ಆಕ್ರಮಿಸುತ್ತಾ ಸಾಗುತ್ತದೆ. ಆ ನಿಮಿಷಗಳುದ್ದಕ್ಕೂ ಹಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಣಗಳು ಶಕ್ತಿಯುತವಾಗಿ ಹಾದುಹೋಗುತ್ತವೆ.  ಆದರೆ ನಿರ್ದೇಶಕರ ಗಮನ ಕೇಂದ್ರೀಕೃತವಾಗುವುದು ಇಬ್ಬರು ಹುಡುಗರ ಮೇಲೆ. ಅವರಿಬ್ಬರ ನಡುವಿನ ’ಬೇಲಿ’ಯ ಮೇಲೆ. ಬೇಲಿಯ ಎರಡೂ ಕಡೆಯಲ್ಲಿ ಯುದ್ಧವಿದೆ. ಒಂದೆಡೆಯಲ್ಲಿ ಯುದ್ಧ ಮಾಡಿಸುವವರು. ಅವರ ಯೋಧರು. ಇನ್ನೊಂದೆಡೆಯಲ್ಲಿ ಯುದ್ಧ ಸಂತ್ರಸ್ಥರು. ಕೈದಿಗಳು. ಒಬ್ಬರು ಗೆಲ್ಲುವವರಾದರೆ ಇನ್ನೊಬ್ಬರು ಸೋತವರು. ಬೇಲಿಯ ಈಚೆ ಅಟ್ಟಹಾಸವಿದ್ದರೆ, ಆಚೆ ಸಾವು. ಸಾವು ಮತ್ತು ಬದುಕಿನ ಬೇಲಿಯ ನಡುವೆ ಇನ್ನೂ ಬದುಕನ್ನು ಸರಿಯಾಗಿ ನೋಡಲಾರಂಭಿಸದ ಈ ಇಬ್ಬರು ಹುಡುಗರು. ಒಬ್ಬ ಸಾವಿನ ಯಜಮಾನನ ಯೋಧನ ಮಗನಾದರೆ, ಇನ್ನೊಬ್ಬ ಸಾವಿನ ಜೊತೆಗೇ ಬದುಕುತ್ತಿರುವವರ ಮಕ್ಕಳಲ್ಲೊಬ್ಬ.

ಯೋಧನ ಕನಸು ಕಣ್ಣುಗಳ ಮಗ ತನ್ನಪ್ಪನ ಜೊತೆ ಇರುವ ಎಲ್ಲಾ ಸೌಕರ್ಯಗಳನ್ನೂ ಬಿಟ್ಟು ಬರುತ್ತಾನೆ. ತನ್ನ ಮನೆ, ಶಾಲೆ, ಗೆಳೆಯರು, ಆಟ-ಪಾಠ…ಪ್ರತಿಯೊಂದೂ. ಈಗ ಬಂದಿರುವ ಹೊಸಮನೆಯ ಕಣ್ಣಳತೆಯಲ್ಲೇ ಬೇಲಿ. ದಿನಚರಿಯಲ್ಲಿನ ಬದಲಾವಣೆ, ಬೇಸರ ಹಾಗೂ ವೈಪರೀತ್ಯಗಳ ನಡುವೆ ಆತನಿಗೆ ಬೇಲಿಯ ಆಚಿನ ಬದುಕು ಕಾಣಿಸುತ್ತದೆ. ಅಲ್ಲಿನ ಸಮವಸ್ತ್ರದ ಜನ ಕಾಣಿಸುತ್ತಾರೆ. ಮಕ್ಕಳು ಕಾಣಿಸುತ್ತಾರೆ. ತನಗಿಂತ ಚಿಕ್ಕವನೆ ಇರಬಹುದಾದ ಹುಡುಗ ಕಾಣಿಸುತ್ತಾನೆ. ನಡುವೆ ಬೇಲಿಯಿದ್ದೂ ಅವರಿಬ್ಬರ ಮಧ್ಯೆ ಹೊಸ ಗೆಳೆತನವೊಂದು ಉದಯಿಸುತ್ತದೆ. ಬೆಳೆಯುತ್ತದೆ. ಬೇಲಿಯ ಆಚಿನ ಬದುಕು ಇವನಿಗೆ ಕುತೂಹಲದ್ದಾದರೆ, ಆಚಿನವನಿಗೆ ಈ ಬದುಕು. ಇಬ್ಬರು ಹುಡುಗರ ದೈನಂದಿನ ಭೇಟಿ ಮುಂದುವರೆಯುತ್ತದೆ. ಹಲವು ಕಾರಣಗಳಿಂದಾಗಿ ಕನಸು ಕಣ್ಣುಗಳ ಹುಡುಗನಿಗೆ ಬೇಲಿಯ ಆಚೆ ನುಸುಳುವ ಸಂದರ್ಭ ಒದಗಿಬರುತ್ತದೆ. ಆತನಿಗೀಗ ಆಚಿನ ಜಗತ್ತನ್ನು ನೋಡುವ ಆಸೆ.

ಇಬ್ಬರು ಮಕ್ಕಳ ಜೊತೆಗೇ ಸನ್ನಿವೇಶಗಳ ಬೆಳವಣಿಗೆಯಾಗುತ್ತ ಕತೆ ಮುಗಿಯುವ ಹಂತ ತಲುಪುತ್ತದೆ. ಕನಸುಗಣ್ಣಿನ ಹುಡುಗ, ತನ್ನ ಅಕ್ಕ ಮತ್ತು ಅಮ್ಮನ ಜೊತೆಗೂಡಿ ಹಿಂತಿರುಗುವ ಸಮಯ ಬರುತ್ತದೆ. ಅವರಿಗೀಗ ಹಿಂತಿರುಗುವಂತೆ ಅಪ್ಪನ ಆಜ್ನೆ ಸಿಕ್ಕಿದೆ. ಆದ್ರೆ, ತನ್ನ ಸಾಹಸ ಇನ್ನೂ ಮುಗಿದಿಲ್ಲ ಎಂಬಂತೆ ಉಟ್ಟ ಶುಭ್ರ ಬಟ್ಟೆ ಕಳಚಿಟ್ಟು, ಬೇಲಿಯಾಚಿನ ಗೆಳೆಯನ ಗೆರೆ ಗೆರೆಯಾದ ಸಮವಸ್ತ್ರ ಧರಿಸಿ ಆಚೆ ನುಸುಳಿಬಿಡುತ್ತಾನೆ. ಅವರಿಗೀಗ ಬೇಲಿಯೊಳಗಿನ ಹುಡುಗನ ಕಳೆದುಹೋಗಿರುವ ಅಪ್ಪನನ್ನು ಹುಡುಕಬೇಕು. ಆದರೆ, ಕಳೆದುಹೋದ ಅಪ್ಪ ಸಿಗದೇ ತಿರುಗಿ ಬಂದಲ್ಲಿಗೆ ಹೊರಡುವ ನಿರ್ಧಾರ ಮಾಡುವಷ್ಟರಲ್ಲಿ ಅವರಿಬ್ಬರೂ ಹಲವಷ್ಟು ಜನರಿಂದ ಸುತ್ತುವರಿಯಲ್ಪಡುತ್ತಾರೆ. ಪ್ರತಿಯೊಬ್ಬರೂ ಅವರಂತೆ ಸಮವಸ್ತ್ರದಲ್ಲಿರುವವರೇ.  ಅವರನ್ನು ಫೇರಿ ಹೊರಡಿಸಿಕೊಂಡು ಹೋಗುತ್ತದೆ ಕಾವಲುಗಾರರ ಪಡೆ. ತಾವೆಲ್ಲಿಗೆ ಹೋಗುತ್ತಿದ್ದೇವೆ ಅನ್ನುವ ವಿಚಾರ ತಿಳಿಯದೇ ನಡೆಯುತ್ತಾರೆ ಉಳಿದವರೊಡನೆ. ಅದೇ ಸಮಯಕ್ಕೆ ಬರಲಾರಂಭಿಸಿದ ಮಳೆಯಿಂದ ತಪ್ಪಿಸಿಕೊಳ್ಳಲು ತಮ್ಮನ್ನು ಸುರಕ್ಷಿತ ಜಾಗಕ್ಕೆ ತಲುಪಿಸುತ್ತಿದ್ದಾರೆ ಅನ್ನುವ ಭರವಸೆಯಲ್ಲಿ ಜನರ (ಜನರಲ್ಲದವರ?) ನಡುವೆ ನಿಲ್ಲುತ್ತಾರೆ – ಒಬ್ಬರಿಗೊಬ್ಬರು ಕೈಹಿಡಿದು.  ಅಲ್ಲಿಂದ ಮುಂದಿನ ಕೆಲವು ನಿಮಿಷಗಳಲ್ಲಿ ಎಲ್ಲ ಮುಗಿದುಹೋಗುತ್ತದೆ. ತಣ್ಣಗಿನ ಕ್ರೌರ್ಯ ಅದು… ಹೊರಬಂದ ನಂತರ ಕಾಡುವುದು ಅದೇ ಜಾಗ, ಅದೇ ಭಾಗ.

ನೀವು ನೋಡಿಲ್ಲದಿದ್ದರೆ ಕೂಡಲೇ ನೋಡಬೇಕಾದ, ನೋಡಿದಿದ್ದಲ್ಲಿ ಮತ್ತೊಮ್ಮೆ ನೋಡಬೇಕೆಂದುಕೊಳ್ಳುವ ಚಿತ್ರ ಕೊಟ್ಟಿದ್ದಾನೆ ನಿರ್ದೇಶಕ- ಮಾರ್ಕ್ ಹರ್ಮನ್. ಆತನ ಕೈಗೆ ಈ ಕತೆ ಕೊಟ್ಟವನು ಜೋನ್ ಬೋಯ್ನ್ ಎಂಬ ಕತೆಗಾರ. ಎರಡುಸಾವಿರದ ಆರರಲ್ಲಿ ಬಂದ ಈ ಕಾದಂಬರಿ ಎಂಟರಲ್ಲಿ ಸಿನೆಮಾ ಆಗಿ ಹೊರಬಂತು.  ’ The Boy In The Striped Pyjamas’

ಟಿಪ್ಪಣಿ: ನೀವು ಇತಿಹಾಸದ ವಿದ್ಯಾರ್ಥಿಯಾಗಿದ್ದು, ಈ ಸಿನೆಮಾದ ಸುತ್ತ ಸಾಗುವ ಕತೆಯ ಕುರಿತು ಮೊದಲೆ ಅಭ್ಯಸಿಸಿದ್ದರೆ ನೀವು ನೋಡುವ ರೀತಿ ಬೇರಾಗಬಹುದು. ಇಲ್ಲವಾದಲ್ಲಿ, ಚಿತ್ರ ನೋಡಿದ ನಂತರ ನೀವು, ನಾಜಿಗಳು, ಹಿಟ್ಲರ್, ಯೆಹೂದಿಗಳು, ಜೆನೋಸೈಡ್, ಹೋಲೊಕಾಸ್ಟ್.. ಇತ್ಯಾದಿಗಳ ಹಿಂದೆ ಬೀಳುತ್ತೀರಿ. ಇವತ್ತಿಗೆ ಅವುಗಳೆಲ್ಲದರ ಮೂಲ ಹುಡುಕುವುದು ಕಂಪ್ಯೂಟರಿನ ಮುಂದೆ ಕುಳಿತವರಿಗೆ ಕಷ್ಟವಂತೂ ಅಲ್ಲ. ಆದರೆ ಈ ಎಲ್ಲವುಗಳ ನಡುವೆ ಆ ಇಬ್ಬರು ಹುಡುಗರೂ, ಹಾಗೂ ಕೆಲವು ಸನ್ನಿವೇಶಗಳನ್ನು ಮರೆಯುವುದು ಮಾತ್ರ ಖಂಡಿತವಾಗಿಯೂ ಕಷ್ಟವಾಗುತ್ತದೆ.  

Advertisements
  1. 23/11/2009 ರಲ್ಲಿ 6:55 ಅಪರಾಹ್ನ

    ನೋಡಲೇಬೇಕು.

  2. 26/11/2009 ರಲ್ಲಿ 10:48 ಫೂರ್ವಾಹ್ನ

    nOdbekaaytu!

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: