ಮತ್ತೆ ಶುರು…

ಬರೆಯುವ ಹುಕಿ ಬಂದದ್ದೆ ಕೀಲಿಮಣೆ ಮುಂದಿಟ್ಟುಕೊಂಡು ಕುಳಿತಿದ್ದೇನೆ.  ಬೀಗ ಹಾಕಿ ಎಸೆದಿದ್ದ ಚಾವಿ ದೂರ ಎಲ್ಲೂ ಹೋಗದೆ ಕಾಲ ಬುಡಕ್ಕೆ ಬಿದ್ದಿದ್ದು ತಿಳಿಯಲು ಹೆಚ್ಚು ಇಷ್ಟು ಹೊತ್ತು ಬೇಕಾಯಿತು!!! ಪರದೆಯ ಮುಂದಿನ ಪೇಜಿನಲ್ಲಿ ಸಿಕ್ಕ ಖುಷಿಯ ಹಿಂದೆ ಸಣ್ಣದೊಂದು ಅಸಮಾಧಾನ ಸುಳಿದುಹೋದ ಬೆನ್ನಲ್ಲೇ ಬ್ಲಾಗಿಂಗು ಬಿಟ್ಟು ಕೆಲವಷ್ಟು ಬ್ಲಾಗುಗಳನ್ನು ಓದುವುದಷ್ಟಕ್ಕೆ ಸೀಮಿತವಾಗಿರಿಸಿಕೊಂಡಿದ್ದೆ.  ಕೈಗೆ ಸಿಗದ ಸಮಯ ಹಾಗೂ ಕೆಲಸದ ಒತ್ತಡದ ನಡುವೆ ಓದಲೆಬೇಕೆನ್ನಿಸುವ ಹಲವು ಬ್ಲಾಗುಗಳು ಮಾತ್ರ ಮುಂದಿದ್ದವು. 
 
ಇನ್ನು ಗೀಚುವುದೂ ಸೇರಿಕೊಳ್ಳುತ್ತದೆ!! ಏನೂ ಕಷ್ಟವಿಲ್ಲದೆ ತೆರೆದುಕೊಂಡಿದೆ ಬೀಗ ಈಗ.  ಮನಸಿಗೆ ಬಂದಿದ್ದು (ಬರೆದು) ಬಿಸಾಕಲು ಏನು ಕಷ್ಟ? ಎಷ್ಟು ಹೊತ್ತು?  
 
ಇಷ್ಟು ದಿನಗಳಲ್ಲಿ ಏನಿಲ್ಲವೆಂದರೂ ಹತ್ತು ಪುಸ್ತಕಗಳು ಓದಿಸಿಕೊಂಡವು. ಒಂದೆರಡು ಓಡಿಸಿಕೊಂದವು. ಮತ್ತೊಂದೆರಡು ಪುಸ್ತಕಗಳಿಗೆ ಕೆಂಪು ಹೂವು – ಕಡ್ಡಿ ಹಚ್ಚಿ ಪೂಜಾ ಸ್ಥಾನ ಸೇರಿಸಿದ್ದೇನೆ.  ಒಟ್ಟಿನಲ್ಲಿ ಓದು ಸರಾಗ.  ಓಡದಿದ್ದರೂ ಕನಿಷ್ಟಪಕ್ಷ ನಡೆಯುತ್ತಿದೆ. 
 
ಪುಸ್ತಕಗಳ ವಿಷಯ ಬಿಟ್ಟು ನೋಡಿದರೆ ಇತ್ತೀಚಿಗೆ ಮಾಡಿದ ಮತ್ತೊಂದು ಕೆಲಸ ಸಿನೆಮಾ ನೋಡಿದ್ದು. ಒಂದರ ಹಿಂದೊಂದು ಸಿನೆಮಾಗಳು ಸಾಲಾಗಿ ನೋಡಿಸಿಕೊಂಡವು.  ಒಂದೆರಡು ಸಿನೆಮಾಗಳು ನೋಡಿಸಿ-ಕೊಂದವು. ಪ್ರತಿಯೊಂದು ಸಿನೆಮಾಗಳೂ ಮಾತನಾಡಿಸಿಕೊಂಡವು. 
 
ಹಾಗೆ, ಇತ್ತೀಚಿನ ಸಿನೆಮಾಗಳ ’ಚಮತ್ಕಾರ’ ಹಾಗೂ ’ಬಲತ್ಕಾರ’ಗಳನ್ನು ನೋಡುತ್ತ, ಜಸ್ಟ್ ಮಾತ ಮಾತಲ್ಲಿ ಅವರಿವರ ಜೊತೆ ಹರಟುತ್ತ, ಮೂರಲ್ಲ ಮೂವತ್ತು ಈಡಿಯಟ್ಗಳಿರಬೇಕಿತ್ತು ಎಂದು ಹಾರಿಸುತ್ತ, ಇಲ್ಲೂ ಒಬ್ಬ ’ಚತುರ’ನಂತವನಿದ್ದಾನೆ ಎಂದು ಜೋಕುತ್ತ, ಒಬ್ಬ ಅಮೀರನನ್ನು-ಇನ್ನೊಬ್ಬ ಗರೀಬನನ್ನೂ ಹೊಗಳುತ್ತ, ಔರೊ ಪಾತ್ರಕ್ಕೆ ಬಚ್ಚನ್ನೇ ಯಾಕಾಗಬೇಕಿತ್ತು ಅಂದವರನ್ನು ಒಪ್ಪುತ್ತ, ರಾಂಚೋಡದಾಸ್ ಶ್ಯಾಮಲ್ದಾಸ್ ಚಂಚಡ್ ಇಂಡಿಯಾದಲ್ಲಿ (ಭಾರತ ಅಂದ್ರೆ ಸರಿಯಾಗಲ್ಲ ಬಿಡಿ) ಲಕ್ಷಕ್ಕೊಬ್ಬನೂ ಸಿಗಲಿಕ್ಕಿಲ್ಲ ಎಂದು ತಲೆ ತಿನ್ನುತ್ತ… ನೋಡಿದ ಚ ಲ ನ ಚಿ ತ್ರ ಗಳ ಕುರಿತು ನಾಕಕ್ಷರ ಬರೆದುಬಿಡಬೇಕೆಂಬ ಹುಕಿ ಬೆಳೆದುಬಿಟ್ಟಿತು… ಎಂದು ಬರೆದಿಟ್ಟ ನಾಕು ಸಾಲುಗಳು ಸಿಕ್ಕಿವೆ ಈಗ. ಅದನ್ನು ಹಾಗೆ ಬಳಸಿಕೊಳ್ಳುವ ಮನಸಾಗಿದೆ. 
 
ಈಗ ಬಳಸಿಕೊಳ್ಳಬೇಕಾದ ಸಾಲುಗಳು ಹೀಗಿವೆ:
 
ಬರೆಯದೆ ಬಹಳ ದಿನವಾದ ಕಾರಣಕ್ಕೋ ಅಥವಾ ಜಾಗರಣೆಗೆ ಪೂರ್ವ ತಯಾರಿಯೋ ಎಂಬಂತೆ ನಡು ಮಧ್ಯಾನ್ಹದ ಹೊತ್ತಿನಲ್ಲಿ ಬಹಳ ದಿನಗಳ ನಂತರ ಸಿಕ್ಕ ಖಾಲಿ ಸಮಯವನ್ನು ಬರೆದು ಬಿಸಾಕುವ ಅಭೂತಪೂರ್ವ ಕೆಲಸಕ್ಕೆ ಮೀಸಲಿಡಬೇಕು ಅಂದುಕೊಂಡಾಗ ಎದುರಿಗಿದ್ದುದು, ’ಹಾದರಗಿತ್ತಿ ಅವ್ಳು, ಹೋದ್ರೆ ಬರುದೇ ಇಲ್ಲ ನೋಡು. ಯಾರೋ ಕ್ಯಾಬರೆ ಮಾಡು ಹುಡ್ಗಿ ತಂದು ನಂಗೆ ಕಟ್ಟಬಿಟ್ಟರೆ…’ ಎಂದು ಕಂಟ ಭರ್ತಿ ಕುಡಿದು, ಊರಿಂದ ಫೋನಿಸಿ ದೂರು ಕೊಟ್ಟ ’ರಾಮ’ ಅನ್ನುವ ಆಸಾಮಿಯ ಪ್ರವರಗಳು, Comparitive Analysis ಹಾಗೂ ಕುದುರೆ ಲದ್ದಿ’ ಎಂಬ ಹೊಚ್ಚ ಹೊಸ ಥಿಯರಿ, ಹಾಗೂ ಇತ್ತೀಚಿಗೆ ನೋಡಿದ ಸಿನೆಮಾಗಳು. ಸಿನೆಮಾ ಆಯ್ದುಕೊಳ್ಳುವ ಸಾಹಸ ಮಾಡಿ ಮುಂದುವರೆಯುತ್ತಿದ್ದೇನೆ. ಒಪ್ಪಿಸಿಕೊಳ್ಳಿ:
ಇತ್ತೀಚಿನ ಹೆಚ್ಚಿನ ಸಿನೆಮಾಗಳನ್ನೂ, ಅವುಗಳ ಕುರಿತ ಬರಹಗಳನ್ನೂ ಓದಿ, ನೋಡಿದ ಎಲ್ಲ ಸಿನೆಮಾಗಳ ’ಮಿಸಳ್ಭಾಜಿ’ ನೆನಪನ್ನು ಎದುರಿಗಿಟ್ಟುಕೊಂಡರೆ ಬಾಕಿ ಎಲ್ಲಾ ಚತುರರರಿಗಿಂತ ಇಲಿ ಹಿಡಿಯುವ ಪ್ರಸಂಗದ ’ಎಲಿಪತ್ತಾಯಂ’ ಎಂಬ ಅಡೂರ್ ಗೋಪಾಲಕೃಷ್ಣರ ಚಿತ್ರ ಎದುರು ಬಂತು. ಅದೇ ನನ್ನ ವಸ್ತು ಎಂದುಕೊಂಡರೆ, ಅದನ್ನೂ ಮೀರಿ ಇನ್ನೊಂದು ಮೂವತ್ನಾಲ್ಕು ನಿಮಿಷದ ಚಿತ್ರ ತಲೆಗೆ ಬಂತು. ಆದಕಾರಣ, ಎಲಿಪತ್ತಾಯಂ ಹಾಗೂ, Rat Trap ಎಂಬ ಅದರ ಮತ್ತೊಂದು ರೂಪವನ್ನೂ ಮತ್ತೆಂದಾದರೂ ತಡಕಿಕೊಳ್ಳೋಣ ಎಂಬ ವಿಚಾರದೊಂದಿಗೆ ವಿಷಯಕ್ಕೆ ಬರುತ್ತೇನೆ. ನೋಡಿಲ್ಲವಾದರೆ ಈ ಚಿತ್ರವನ್ನೊಮ್ಮೆ ನೋಡಿ ನೀವು. ಅದರ ಕುರಿತು ಬರೆದ ನಂತರವಷ್ಟೇ ನೋಡಬೆಕೆಂದೇನೂ ಇಲ್ಲವಲ್ಲ? ಅಷ್ಟಕ್ಕೂ, ನೀವು ನೋಡಿರದ ಸಿನೆಮಾವೇನೂ ಆಗಿರಲಿಕ್ಕಿಲ್ಲ ಅದು…
 
ನಾನೀಗ ಹೇಳಬೇಕಿರುವುದು ಮೂವತ್ನಾಲ್ಕು ನಿಮಿಷಗಳ ಫ್ರೆಂಚ್ ಸಿನೆಮಾ ಕುರಿತು. Albert Lamorisse’ ಎಂಬ ನಿರ್ದೇಶಕ ತಾನೇ ಚಿತ್ರಕಥೆ ಬರೆದು, ತನ್ನಿಬ್ಬರು ಚಿಕ್ಕ ಮಕ್ಕಳನ್ನೇ ಹಾಕಿಕೊಂಡು ತಯಾರಿಸಿದ ಮಕ್ಕಳಲ್ಲದವರೂ ನೋಡಲೇಬೇಕಾದ ಮಕ್ಕಳ ಸಿನೆಮಾ ಅದು.  Oscar, cannes ಪ್ರಶಸ್ತಿಗಳನ್ನು ಪಡೆದ ೧೯೫೬ರ ಸಣ್ಣ ಚಿತ್ರ ಅದು. ಸಂಗೀತವಿದೆ ಅಲ್ಲಿ. ಮಾತಿಗೆ ಹೆಚ್ಚು ಅವಕಾಶವಿಲ್ಲ. ಮಕ್ಕಳಿದ್ದಾರೆ, ದೊಡ್ಡವರಿದ್ದಾರೆ ಆದರೆ ಅವರೆಲ್ಲರನ್ನೂ ಮೀರಿದ ’ಕೆಂಪು ಬಲೂನ್’ ಇದೆ. ಅದಕ್ಕೊಬ್ಬ ಜೊತೆಗಾರ ಹುಡುಗನಿದ್ದಾನೆ – ಪಾಸ್ಕಲ್ ಅವನ ಹೆಸರು. ತಾನು ಶಾಲೆಗೆ ಹೊರಟ ಸಮಯದಲ್ಲಿ ಸಿಕ್ಕ ಈ ಹೊಸ ಮಿತ್ರ, ತನ್ನಂತೇ ಯೋಚಿಸುತ್ತಾನೆ, ಆತನಿಗೂ (ಅದಕ್ಕೂ?) ಬುದ್ಧಿಯಿದೆ ಎಂದು ತಿಳಿದುಕೊಳ್ಳುತ್ತಾನೆ. ಅಲ್ಲಿಂದ ಹುಡುಗನದು ಹಾಗೂ ಬಲೂನಿನದು ಆಟ. ಮನೆ, ಶಾಲೆ, ರಸ್ತೆ, ಮಕ್ಕಳು, ಅವರು-ಇವರು ಎಲ್ಲ ಬರುತ್ತಾರೆ ನಡುವೆ. ಕೆಂಪು ಬಲೂನಿನಂತೆ ಬುದ್ಧಿಯಿರುವ ’ನೀಲಿ ಬಲೂನೊಂದು’ ಬಂದು ಹೋಗುತ್ತದೆ.
 
ತನ್ನದೇ ಆದ ವೇಗ ಪಡೆದುಕೊಳ್ಳುವ ಚಿತ್ರ ಕೆಲವೇ ಸಮಯದಲ್ಲಿ ಒಂದಿಷ್ಟು ’ಹೊಡೆದಾಟ’ವನ್ನೂ ಕಾಣಿಸುತ್ತದೆ ತನ್ನದೇ ಆದ ನೆಲೆಯಲ್ಲಿ. ಪಾಸ್ಕಲ್ ಹಾಗೂ ಆತನ ಬಲೂನಿನ ವೈರಿ ಹುಡುಗರಿಂದಾಗಿ ’ಕೆಂಪು ಬಲೂನು’ ತನ್ನ ಜೀವ ಕಳೆದುಕೊಳ್ಳುವ ಪ್ರಸಂಗ ಬಂದೊದಗುತ್ತದೆ. ನಿರ್ದೇಶಕನ ಸಾಮರ್ಥ್ಯವಿರುವುದೇ ಅಲ್ಲಿ – ಬಲೂನು ಜೀವ ಕಳೆದುಕೊಳ್ಳುವ ಸನ್ನಿವೇಶ ಬರುವಷ್ಟರಲ್ಲಿ, ಅದು ಹೀಲಿಯಂ ತುಂಬಿದ ಕೇವಲ ಕೆಂಪು ಬಲೂನು ಎಂಬುದನ್ನೂ ಮರೆತು ನೀವು ಒಳಗೊಳಗೇ ಚಿತ್ರದೊಳಗೆ ಸೇರಿಬಿಡಿಟ್ಟಿರುತ್ತದೆ. ಖಂಡಿತ. 
 
ಪ್ಯಾರೀಸಿನಲ್ಲಿ ನಡೆದ ಚಿತ್ರೀಕರಣದ ಕೊನೆಯಲ್ಲಿ ಕೆಂಪು ಬಲೂನು ಜೀವ ಕಳೆದುಕೊಂಡರೂ ಸುತ್ತಲಿನ ಹಲವಾರು ಬಣ್ಣ ಬಣ್ಣದ ಬಲೂನುಗಳು ಒಟ್ಟೊಟ್ಟಿಗೆ ಬಂದು ಆತನನ್ನು ಪ್ಯಾರಿಸ್ ಅಂಗಳದಿಂದ ಮೇಲಕ್ಕೆ ಒಯ್ಯುತ್ತವೆ ಗಾಳಿಯಲ್ಲಿ. ಮೊವತ್ನಾಲ್ಕಿ ನಿಮಿಷ ಮೂರು ನಿಮಿಷದಂತೆ ಭಾಸವಾಗುತ್ತದೆ ಅಷ್ಟರಲ್ಲಿ.  ಇನ್ನೂ ನೋಡಿಲ್ಲವಾದರೆ ಆದಷ್ಟು ಬೇಗ ನೋಡಿ – ’ದಿ ರೆಡ್ ಬಲೂನ್’ ಎಂಬ ಫ್ರೆಂಚ್ ಸಿನೆಮಾವನ್ನು. ಅದು ಕೇವಲ ಮಕ್ಕಳ ಸಿನೆಮಾವಷ್ಟೇ ಅಲ್ಲ, ಶಾಂತವಾಗಿ ಸಗುವ ಅಂದೆಂದೊ ಹುಟ್ಟಿಕೊಂಡ ’ಕ್ಯಾಪಿಟಾಲಿಸಂ’ ಕುರಿತಾದ ಸುಂದರ ರೂಪಕ.
ಮಕ್ಕಳ ಜೊತೆ ಕುಳಿತು ದೊಡ್ದವರು ನೊಡಲೆಬೇಕಾದ ಸುಂದರ ಚಿತ್ರ – ‘The red Balloon’
 
ಮತ್ತೆ ಸಿಕ್ಕಾಗ Comparitive Analysis ಹಾಗೂ ಕುದುರೆ ಲದ್ದಿ’ ಎಂಬ ವಿಷಯವಿದೆ ಹೇಳಲು.
 
Advertisements
  1. 04/06/2010 ರಲ್ಲಿ 10:40 ಫೂರ್ವಾಹ್ನ

    ಸಣ್ಣ ಕಥೆಯ ಸಿನಿಮ ಬಗ್ಗೆ ಮನಮುಟ್ಟುವಂತೆ ಬರೆದಿದ್ದೀರಿ. ಅದರಲ್ಲಿ ಬರುವ ಕೆಂಪು ಬಲೂನಿನ ವಿಷಯ ಇಷ್ಟವಾಯಿತು.

  2. 10/11/2010 ರಲ್ಲಿ 5:17 ಫೂರ್ವಾಹ್ನ

    >>ಮತ್ತೊಂದೆರಡು ಪುಸ್ತಕಗಳಿಗೆ ಕೆಂಪು ಹೂವು – ಕಡ್ಡಿ ಹಚ್ಚಿ ಪೂಜಾ ಸ್ಥಾನ ಸೇರಿಸಿದ್ದೇನೆ.<<

    ಅದ್ಯಾವ ಪುಸ್ತಕ ಅಂತ ತಿಳ್ಸಿದ್ರೆ ಚೆನ್ನಿತ್ತ್ತು. ಓದುವ ಆಸೆ, ಮತ್ತೊಂದಿಷ್ಟು ಊದಿನಕಡ್ಡಿಗಳು ಹಾಗೇ ಇವೆ ನಮ್ಮನೆಯಲಿ.

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: