Archive

Archive for the ‘ಕವನ’ Category

ಅಡ್ಡಪಟ್ಟಿಯ ಚಿತ್ರ

ವಿಳಾಸ ಇದ್ದೂ ಇಲ್ಲದ ಮನೆಯ
ಹಿಂಬಾಗಿಲ ಅಡ್ಡಪಟ್ಟಿಗೆ ಕೈ
ಹಚ್ಚಿ ನಿಂತದ್ದು ಕೇವಲ ಚಿತ್ರವಷ್ಟೇ

ಅಲ್ಲ ಎದುರಿನ ಕೆಪ್ಪು ಜೋಗವೂ
ಅಬ್ಬಿ ಬೀಳುವ ಹನಿ ನೀರೂ
ಚೂರಾಗಿ ಪಾರಾಗಿ ಹಸಿರೆಲೆಯ ಮೇಲೆ
ಕುಳಿತು ಹೊಳೆಯುವ ಮುತ್ತೂ
ಮತ್ತು ಒಂಟಿ ಉಳಿದ ಮುತ್ತುಗವೂ

ಒಂದೆಲೆಯ ಹಿಂಬಾಲಿಸಿ ಹೊರಟು
ಅಡ್ಡಬಿದ್ದೊಂದೆಳೆಗೆ ಉದ್ದುದ್ದ ಸಿಕ್ಕಿ
ತಪ್ಪಿಸಿಕೊಳ್ಳಲಾರದೆ ಬಳಲಿ ಬೆಂಡಾಗಿ ಬಿಕ್ಕಿ
ಅಂತೂ ಸರಾಗ ಹರಿದು ಸೇರಿದಲ್ಲಿ

ತೀರದ ಶಬ್ಧ
ತೀರಿದ ಬದುಕು

ಅಲೆದಲೆದು ದಡ
ಸೇರುವ ಬದಲು ಅಲೆಯೊಳಗೆ ಇಳಿದರೆ
ಒಂದು ಮತ್ತೊಂದರ ನಡುವೆ
ಇನ್ನೊಂದು ಎನ್ನುತ್ತ ಭರತಕ್ಕೆ ಸರಿಯಾಗಿ
ದಡಕ್ಕೆ ಬಿದ್ದವರೆಲ್ಲ ಎದ್ದು
ಸಾಲಾಗಿ ಹೊರಟು ದೂರ ಸೇರಿಬಿಟ್ಟರು

ತೀರಾ ತೀರವೂ ಇರದ
ಊರೇ ಅಲ್ಲದ ಊರಲ್ಲಿ ತೀರ್ಥ
ಸೇವಿಸುತ್ತ ಪ್ರಸಾದ ಸ್ವೀಕರಿಸುತ್ತ
ಇಪ್ಪತ್ತೂ ಬೆರಳು ಸೇರಿಸಿ ಲೆಕ್ಕ
ಹಾಕುತ್ತ ನೀರಿರದ ನಳಕ್ಕೆ ಹೆದರುತ್ತ
ಮೆಟ್ಟಿ ನಿಂತ ನೆಲಕ್ಕೆ ಬೆದರುತ್ತ
ಉಬ್ಬಸದ ನಡುವೆಯೂ ಎದೆಯುಬ್ಬಿಸಿ ನಿಂತದ್ದು
ಚಿತ್ರವಷ್ಟೇ ಅಲ್ಲ; ದೃಶ್ಯಕಾವ್ಯ

ಇಲ್ಲೀಗ ಪತ್ರ ಬಂದಿದೆ
ವರುಷಗಳ ಬಳಿಕ
ಶಬ್ಧ ತೀರದ ಉದ್ದಕ್ಕೂ ಅಕ್ಷರ
ಓದುತ್ತ ಹಿಮ್ಮುಖ ಹೊರಟ ಕವಿತೆ
ಹಲವು ತಾಕಲಾಟಗಳ ನಡುವೆ
ಅದೇ ಕೆಪ್ಪು ಜೋಗದ ನೆತ್ತಿ ಹತ್ತಿ ಕೂಗುತ್ತಿದೆ

ಬಾಗಿಲ ಅಡ್ದಪಟ್ಟಿಯ ಒಂಟಿ ಚಿತ್ರ
ಅಸಹಾಯಕ ದೃಷ್ಟಿ ಬೀರಿ
ಬರದ ಹನಿ ಕಣ್ಣೀರನ್ನು ಹುಡುಕುತ್ತ
ಅದೇ ಹಳೆಯ ದಾರಿಯುದ್ದ ಹೊರಟಿದೆ.

Advertisements
Categories: ಕವನ

ನಿರೀಕ್ಷೆ

ಪದ್ಮನಾಭನಿಗೊಂದು ಕೆಲಸ
ತುರ್ತಾಗಿ ಬೇಕು

ಅಂಥಾ ಗಾಬರಿಯೇನಿರಲಿಲ್ಲ ನಿನ್ನೆ
ಮೊನ್ನೆಯವರೆಗೂ
ಪಾಲುದಾರನಾಗಿದ್ದ ಕ್ಲಾಸಮೇಟು (ಕಂ ರೂಂಮೇಟು)
ನಾಳೆಯ ನಿರೀಕ್ಷೆಯಲ್ಲಿ ಜೊತೆಗಿರುವವರೆಗೆ.
ಎಂದಿನಂತಿರದ ಒಂದು ಸಂಜೆ
ಧಾರವಾಡ ಫೇಡೆ ಕೊಟ್ಟು
ಪಕಪಕ ಕಿವಿವರೆಗೆ ನಗುವವರೆಗೆ

ಅವನಿಗೆ ಸಿಕ್ಕಿದ್ದು ತನಗೂ
ಸಿಗುತ್ತದೆಂಬ ಖಾತರಿಯಿಂದ ತಿಂದ
ಸಿಹಿ ಗಂಟಲೊಳಗೆ ಇಳಿದು ಜೀರ್ಣ
ಆಗುವುದರೊಳಗೆ ದೋಸ್ತ
ಬೇರೆಯದೇ ಗೃಹದ ಜೀವಿಯಂತೆ

ಕಾಣಿಸಿ ಫಳಫಳ ಅವನ
ಅಡ್ಡಡ್ಡ ನಡಿಗೆಯಲ್ಲಿ ಆತ್ಮವಿಶ್ವಾಸ
ಇದ್ದಬದ್ದ ನಿರೀಕ್ಷೆಗಳೆಲ್ಲ
      ಅಕ್ಕ ಹೊಲಿದಿಟ್ಟ ಪಲಕಿ
      ಅಪ್ಪ ಹೆಕ್ಕಿಟ್ಟ ಉಳ್ಳೆ
      ಆಯಿ ಹಚ್ಚಿಟ್ಟ ದೀಪದಲ್ಲೇ ಅವಿತು
ಅಣಕಿಸುತ್ತಿರುವಂತೆ ಭಾಸ
ತಿನ್ನುವ ಒಂದೊಂದು ತುತ್ತಿಗೂ ಆಯಾಸ

ಕೈ ಬಿಡುತ್ತ ಕೊನೆಯ ನೋಟು
ಕೈ ಹಿಡಿಸಿದ ತಟ್ಟೆಯೊಳಗೆ
ಅದದೇ ಲೆಕ್ಕ ತಿರುಗಿ ಮುರುಗಿ
ಉಳಿದ ಚಿಲ್ಲರೆ ತಾಳೆಹಾಕುತ್ತ
ತಿಂದ ಲಿಮಿಟೆಡ್ ಮೀಲ್ಸ್ ವಗರು ವಗರು

ಬೆಳಗಾದರೆದ್ದು ಹೊರಡಬೇಕು
ಮಾಸಿದ ಫೈಲಿನೊಳಗೆ ನಾಳೆ ಹಿಡಿದಿಟ್ಟು
ಕೆಲಸವೊಂದ ಪಡೆದು ಸಂಧಾನ ಮಾಡಿಸಬೇಕು

ಕಿತ್ತೊಸೆದು ಸುಮ್ಮನಾಗಿದ್ದಾನೆ
ಬೆಚ್ಚಗೆ ಹೊದ್ದ ಮೆತ್ತಗಿನ ಚಾದರ
ನಿದ್ದೆಯ ನಿರೀಕ್ಷೆಯಲ್ಲಿ ಅಂದುಕೊಂಡಿದ್ದಾನೆ
ಫೇಡೆ ಅಂಗಡಿಗೊಂದು ವ್ಯಾಪಾರ ಆಗಲೇಬೇಕು

ಮೊದಲ ಕಂತಿನ ಋಣ ಸಂದಾಯ
ಮಾಡಿದ ನಂತರವೆ ಬೆಚ್ಚಗೆ
ಚಾದರ ಹೊದ್ದು ಮಲಗಬೇಕು

Categories: ಕವನ ಟ್ಯಾಗ್ ಗಳು:, ,

ಬರಿ ಮಾತು

ಈ ಮಾತು ಕತೆಯೆಲ್ಲ ಬರೀ ಸುಳ್ಳೇನಲ್ಲ
ಆದರೂ, ಮೌನ ಮಾತ್ರ ಪರಮ ಸತ್ಯ
 
ಈಗಂದಿದ್ದು ಈಗ ಸುಳ್ಳಾದೀತು
ಇಂದಿನ ಮಾನ-ದಂಡಗಳು
ನಾಳೆಯಾಗುವಷ್ಟರಲ್ಲಿ ಬರಿ ದಂಡ
ಹೊದ್ದು ಮಲಗಿದ ಚಾದರದೊಳಗೆ
ಚಳಿ ಹೊಕ್ಕಿ ಮೈಯೆಲ್ಲ ಬಹಳೇ ಥಂಡಾ
 
ನಿನ್ನ ಕೊರಳೊಳಗೆ ಉಳಿದ
ಶಬ್ದಕ್ಕೆ ಒಂದೆಳೆ ಸರದ ಶೃಂಗಾರ
ಎಳೆ ಎಳೆ ಹೊರಬಿದ್ದರೆ ನಾಳೆ
ಮಾನ ಸಮ್ಮಾನ ಬಹುಮಾನ ಪದಕ
ಇಲ್ಲವಾದರೆ ಸುಖಾಸುಮ್ಮನೆ ಎದೆಭಾರ
 
ಇವತ್ತಿಗಿನ್ನೂ ಬಲಿತಿರದ ಮಾತು
ನಾಳೆ ಕತೆಯೇ ಆದೀತು
ಪದ ಪದ ಸೇರಿ ಫೇರಿ ಹೊರಟರೆ
ಬೆಳಕಿನ ಕೊಲುಗಳಿಗೊಂದು ಅವಶ್ಯ ಸಾಥ ಸಿಕ್ಕೀತು
 
ಅವಕಾಶಗಳ ಜೋತು ಹೊರಳಿಕೊಂಡರೆ ನೀನು
ಮಗ್ಗುಲಿನೊಳಗೆ ಸಿಕ್ಕುಬಿದ್ದಿದೆ ನಿನ್ನೆ
ನಾಳೆ ಹೀಗೇ ಇರಬೇಕು ಅಂದುಕೊಂಡರೆ
ತಯಾರು ಕುಳಿತ ಕಳ್ಳಮಳೆ ಎಲ್ಲಿ ಹೋಗಬೇಕು ಹೇಳು
 
ನೀನು ಅಲ್ಲಿದ್ದರೆ ನಾನು ಇಲ್ಲೇ
ಅಪ್ಪಿ ತಪ್ಪಿ ಗೆರೆ ದಾಟಿದರೆ ಪಕ್ಕಾ ಮಳ್ಳೇ
ರಾಶಿ ಬಿದ್ದ ಪೇಪರಿನಿಂದೆದ್ದ ದಿನ
ಭವಿಷ್ಯದಲ್ಲಿ ನಿನ್ನದು ಸರಿಯೋ ನನ್ನದೋ?
ಭವಿಷ್ಯಕ್ಕೆ ನೂರು ನಂಟುಗಳಿದ್ದರೂ
ನೇರ ಸಂಬಂಧಿ ನಾನೆ ಅನ್ನುತ್ತಿದೆ ಭೂತ
ವರ್ತಮಾನ ಮಾತ್ರ ಇಲಾಖೆಯ ಮೇಜಿನಡಿ
ಲೆಕ್ಕಾಚಾರ ಹಾಕಿ ವಾದ ಮಂಡಿಸುತ್ತ ಮಲಗಿಬಿಟ್ಟಿದೆ 
 
ಬೆರಳುಗಳ ತುದಿಯಲ್ಲಿ ಬಿಟ್ಟಿ ಕೂತಿಲ್ಲ ಪದ
ಹೊರಬಂದರೆ ಸ್ವರ ಸೇರಿ ಮಸ್ತ್ ಮಜಾ
ಎಷ್ಟು ಹೇಳಿದರೂ ಉಳಿದದ್ದೇ ಹೆಚ್ಚು
ಉಳಿಸಿಕೊಂಡರೆ ಯಾಕೋ ಬಿಡಲಾರದ ಹುಚ್ಚು
 
ದಕ್ಕೆ ಹತ್ತಿ ಕೂತಿದೆ ಮಾತು
ದಂಡೆ ತುಂಬ ಬಿಸಿ ಬೇಳೆ ಬಾತು
ವಿಲಿವಿಲಿ ಒದ್ದಾಡಿ ಬಲೆಯ ಹಸಿಮೀನು
ಕೊನೆಗೂ ನೋಡಿದ್ದು ಹಸಿಮರಳೇ ಆತು
 
ಮಾತುಗಳ ತಕ್ಕಡಿಯಲ್ಲಿ ತೂಕದ ಕಲ್ಲು
ಹಿಡಿದು ತೂಗಿದರೆ ಲೆಕ್ಕಕ್ಕೇ ಸಿಗದು
ನನ್ನ ರಗಳೆಗಳಿಗೆಲ್ಲ ಇನ್ನು ಇಳಿತದ ಹೊತ್ತು
ಭರತಕ್ಕೆ ಸರಿಯಾಗಿ ನೀನಿನ್ನು ಹೊರಡು.

(ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆ!! ಓದಬಹುದು)

ರಾತ್ರಿ ರಾಣಿ

 

ಮೂರುಸಂಜೆಯ ನಂತರದ ಪ್ರತಿ

ನಿಮಿಷ ಬಣ್ಣ ಕಳಚಿಕೊಳ್ಳುತ್ತ ಸಾಗುವ

ದಿನಕ್ಕೆ ಕೃತಕ ಬೆಳಕಿನ ಉಸಿರು

ಇಲ್ಲದ ಹಿತ್ತಲ ಸಂದಿಯೊಳಗಿಂದ

ಹೊರಸೂಸುವ ರಾತ್ರಿ ರಾಣಿಯ ಅತ್ತರು

 

ಬಿಸಿ ಉಸಿರು ಹೊರಡಿಸುವ ಬೀದಿಗೀಗ

ತಣ್ಣಗಿನ ತುಂಡು ಸ್ನಾನ

ಸಾಲು ರಂಗೋಲಿಯ ಶೃಂಗಾರ

ಮನೆ ಬಾಗಿಲ ಮುಂದಿನ ಟಾರಿಗೆ

ಅಂಗಳವೂ ಆಗುವ ಸಂದಿಗ್ಧ

 

ಎರಡು ಮನೆಗಳ ಬೆಸೆಯುವ

ಎಂಟನೆಯ ಅದ್ಭುತದ ಸುತ್ತ

ಸಪೂರ ತೂರಿ ಬರುವ ಗಾಳಿ

ಏಳನೆಯ ಗೋಡೆಯ ಮೈತುಂಬ

ಹೆಪ್ಪುಗಟ್ಟಿದ ಅನಾಮಿಕ ಚಳಿ

 

ಅಲ್ಲೆಲ್ಲೋ ಸಿಕ್ಕ ಮೂರಂಗುಲ ಜಾಗ

ಅಲ್ಲಲ್ಲೇ ಮೊಳಕೆಯೊಡೆವ ಹಸಿ ಜೀವ

ಯಾರ ಹಂಗಿಲ್ಲದ ರಾತ್ರಿ

ರಾಣಿಯ ಮೈತುಂಬ ಹರಡಿದ ಪರಿಮಳ

 

ಅದೆ, ಆಗಿಬಿಟ್ಟಿದೆ ಬೆಳಗು

ಆವರಿಸಿಬಿಟ್ಟಿದೆ ಅವಸರದ ಹೊರಗು

ಮೈತುಂಬ ಬಣ್ಣಗಳನ್ನು ಹೊತ್ತು

ಹೊರಡುವಾಗ ಹೊಡೆದುಕೊಂಡ ಅತ್ತರಿನ

ಬಾಟಲಿಯಿಂದ ಕಾಲರಿಗೆ ಹಾರಿದೆ

ರಾತ್ರಿ ರಾಣಿಯ ಕುರುಹು


Categories: ಕವನ ಟ್ಯಾಗ್ ಗಳು:

ಅಕ್ಷಯ ಚಿತ್ರಗಳು

ಅಕ್ಷಯ್ ನನಗೆ ಹತ್ತಿರದ ಪೋರ.  ಕಾರ್ತೀಕ್ ಕೂಡಾ.  ಒಬ್ಬ ನನ್ನೂರಿನ ಬಲಬದಿಯಿಂದ ಬಂದವನಾದರೆ, ಮತ್ತೊಮ್ಮ ಎಡಬದಿಯ ಊರಿಂದ ಬಂದವನು.  ಇಲ್ಲಿ, ಎಡ ಬಲ ಇಲ್ಲದ ಬೆಂದಕಾಳೂರಿನಲ್ಲಿ ಒಂದೇ ಊರಿನವರು! ಅಕ್ಷಯ ಅದ್ಭುತವಾಗಿ ಚಿತ್ರ ಬಿಡಿಸಿದರೆ ಕಾರ್ತೀಕ್ ಸುಂದರವಾಗಿ ಬರೆಯುತ್ತಾನೆ. ಇಬ್ಬರೂ ಹುಚ್ಚು ಹಿಡಿದಂತೆ ಸಿನೆಮಾ ನೋಡುವವರು. ಬಿಡಿ, ಹೇಳುತ್ತಾ ಹೋದರೆ ಬಹಳಷ್ಟಿದೆ. ಅವೆಲ್ಲ ‘ಖಾಸಬಾತ್’ಗಳು.  ನಾನು ಹೇಳಿಯೇ ತಿಳಿಯಬೇಕಿಲ್ಲ ಅದೆಲ್ಲ. ಇವತ್ತಲ್ಲ ನಾಳೆ ತಾನೇ ತಾನಾಗಿ ತಿಳಿಯುತ್ತೆ…
ವಿಷಯ ಏನಪಾ ಅಂದ್ರೆ, ಈ ಅಕ್ಷಯ ಒಂದು – ಒಂದಲ್ಲ ಐದಾರು – ಚಿತ್ರ ಬಿಡಿಸಿದ. ಆ ಎಲ್ಲ ಚಿತ್ರಗಳ ಪ್ರದರ್ಶನವಾಯಿತು.  ನಾವು ಆರೆಂಟು ಜನ ಅಲ್ಲಿ ಕುಳಿತು ಹರಟಿದ್ದೂ ಆಯಿತು.  ಹರಟೆಯ ನಡುವೆ ಚಿತ್ರವೊಂದನ್ನು ಹೊಗಳಿದ್ದೂ ಆಯಿತು..  ಚಿತ್ರ ಇಲ್ಲಿದೆ:
ಇಷ್ಟಕ್ಕೆ ಮುಗಿಯಬೇಕಿದ್ದುದನ್ನು ಕಾರ್ತೀಕ ಮುಂದುವರೆಸಿದ.  ಮೈಯೆಲ್ಲಾ ಶಾಯಿ ತುಂಬಿಕೊಂಡವನಂತೆ ಪದ್ಯವೊಂದನ್ನು ಬರೆದು ಜಿ-ಮೇಲಿಸಿ ಹೇಗಿದೆ? ಅಂದ.  ಇದು ಅದಲ್ಲ, ಅದು ಇದಲ್ಲ ಅನ್ನುತ್ತ ನಾನೂ ಒಂದು ಕೈ ನೋಡೋಣವೆಂದು ನಾಲ್ಕಕ್ಷರ ಗೀಚಿಬಿಟ್ಟೆ..   ಕಾರ್ತೀಕನ ಸಾಲುಗಳನ್ನು ನೋಡಿ:
ಮೈಯೆಲ್ಲಾ ಶಾಯಿ
ಎಲ್ಲಿದ್ದೀಯಾ ತಾಯಿ…

ಕಣ್ಣುಗಳಲ್ಲಿ
ಅರೆ ಕುಡಿದ ಕಾಫಿ ಲೋಟ
ಮುಖದ ಎಳೆಯ ಗೆರೆ
ಟ್ರಾಫಿಕ್ಕು ಜಾಮಿನ ಹೆದ್ದಾರಿ

ಭೂಪಟದಲ್ಲಿ ಮಲಗಿದ ಮಗು
ಲೇಔಟಿನ ಗೆರೆಗಳೇ ಅಮ್ಮನ ಸಾಂತ್ವನ
ಚಾಚಿದ ಕೈಗಳಲ್ಲಿ ಕಾಣುತ್ತಿದೆ
ಎಕರೆಗಳು
ಬೊಗಸೆಯೂ ಮೇಸ್ತ್ರಿಗಳಿಗೆ ಗುತ್ತಿಗೆಗಿದೆ

ಅದೇನು ಅವಕಾಶದ ಕೈಯೋ
ಆಕಾಶದ ಕೈಯೋ
ಬಸಿರೇ ಒಡೆದು ಬಡಬಡಿಸುವಂತೆ
ನೆತ್ತರಿಗೆ ಹಸಿರು, ನೀಲಿ, ಹಳದಿ ಬಣ್ಣ ಸಿಕ್ಕಂತೆ
ಬೆರಳಿಗೆಲ್ಲ ಬಿಳುಪಿನ ಹೊಳಪು
ಕೊಳೆ ಕೊಳೆ ಉಗುರಲ್ಲಿ
ಹೊಳೆಯುತಿದೆ ಹಾಲು
ಬಣ್ಣದ ಚಂದ್ರನಂಚು
ಮೈಯೆಲ್ಲಾ ಶಾಯಿ
ಎಲ್ಲಿದ್ದೀಯಾ ತಾಯಿ…

ಒಂದೇ ಬಿಂದುವಿನಿಂದ
ಹರಿದ ರೇಖೆಗಳು
ಹರಿದಿವೆ, ಬೆಸೆದಿವೆ
ಮತ್ತೊಂದು ಕೂಡಿಕೊಂಡು
ಮಗದೊಂದು ಹರಿದುಕೊಂಡು
ಎಲ್ಲವೂ ಹರಿಚಿತ್ತ
ಕ್ಷಣಕೆಲ್ಲ ಪರಚಿತ್ತ

ಬೇಡುತ್ತಿವೆ ಕೈಗಳು
ಉರುಳಬೇಡ ಹೊರಳಬೇಡ
ಚಪ್ಪಟೆಯಾದೀತು ಭೂಪಟ
ಬೀಳುತ್ತಿದೆ ನಿದ್ದೆಯಲ್ಲಿ ಕನಸು
ಚಾಮರ ಬೀಸಿದಂತೆ ಗೂಗಲ್ ಮ್ಯಾಪು

ಹುಡುಗನ ಕಣ್ಣಿನ
ಗಾಜಿನ ಲೋಟ ಒಡೆದು
ಕಾಲವಾಗಿರುವುದು
ಗೊತ್ತಿದ್ದೂ ಗೊತ್ತಿಲ್ಲದ ಸತ್ಯ

ಅಕ್ಷಯನ ಚಿತ್ರಗಳು, ಕಾರ್ತೀಕನ ಬರಹಗಳ ಜೊತೆಗೆ ನಾನು ಗೀಚಿದ ಸಾಲುಗಳೂ ಸೇರಿಕೊಂಡು, ಈಗ ಮಯೂರದಲ್ಲಿವೆ. ಜೊತೆಗೆ ನಾಕು ಮಾತುಗಳು.  ಚಿತ್ರಕ್ಕೆ, ಅದರ ಜೊತೆಗಿನ ಸಾಲುಗಳಿಗೆ ನಿಮ್ಮದೊಂದು ಅಭಿಪ್ರಾಯ ಸಿಗಲಿ.  ನನ್ನ ಗೀಚುವಿಕೆಯ ಫಲ ಇಲ್ಲಿದೆ.

ಈ ಶಹರದ ಅಂಗೈಯೊಳಗೆ

ಒಡಲ ಜೀವದ ಜಾಲ
ಹಿಡಿದಿಟ್ಟ ಹೊಕ್ಕಳ ಬಳ್ಳಿ ಹರಿದು
ಪಿಳಿಗುಡುತ್ತ ಪಡೆದ ಅಂಗೈ ಆಸರೆಯಲ್ಲಿ
ಮೊದಲ ಉಸಿರು ಮೊದಲ ಅಳು
ಮೊದಲ ನೋಟ ಮೊದಲ ಮಾಟ
ಅಂಗೈಯಿಂದ ಅಂಗೈಗೆ ಬದಲಾಟ

ಕೈ ಮಿಲಾಯಿಸಿ ಬಿಗಿದಪ್ಪಿ ನಕ್ಕು
ಅಸಂಖ್ಯ ರೇಖೆಗಳ ರಸ್ತೆಯಂತಿರುವ
ಅಂಗೈ ತುಂಬಾ ಸಿಹಿಯಿಟ್ಟು
ಸೆಕೆಂಡೂ ಬಿಡದೆ ಬರೆಸಿಟ್ಟ ಜಾತಕ
ಈಗಲೇ ಭವಿಷ್ಯ ನೋಡುವ ತವಕ

ಬಿಗಿದ ಮುಷ್ಟಿಯೊಳಗೆ
ಬಂಧಿಯಾಗಿರುವ ಭವಿಷ್ಯದ ಗೆರೆ
ಬಿಡಿಸಿ ನೋಡಬೇಕು ಕೂಡಲೇ

ಅಕೋ, ಆಗಲೆ ಶುರು ಅಲ್ಲಿ
ಇದು ನನ್ನಂತೆ ಇದೆ ನಿನ್ನಂತಲ್ಲ
ಕಣ್ಣು ಮೂಗು ಹುಬ್ಬು ಎಲ್ಲ ತಿದ್ದಿಟ್ಟಂತೆ
ಇದರ ಹೆಸರು ’ಹ’ದಿಂದಲೇ ಶುರುವಾಗಬೇಕು
ಚೈಲ್ಡ್ ಪ್ಲಾನಿನ ಮೊತ್ತ ಇಷ್ಟೇ ಇರಬೇಕು

ಇದೇ ಶಹರದ ಅಂಗೈಯೊಳಗೆ
ಹರಡಿದ ಅಸಂಖ್ಯ ರೇಖೆಗಳ ನಡುವೆ
ನಿರಂತರ ಚಲಿಸುವ ಜೀವಗಳ ಸಾಲಿಗೆ
ಅಪರಿಮಿತ ಸಂತೊಷದ ಪಾಲಿಗೆ
ಸೇರುತ್ತಿವೆ ಈ ಎಳೇ ರೇಖೆಗಳು
ಬಲಿತು ಉಪ ರೇಖೆಗಳನ್ನು ತನ್ನೊಡಲಿಗೆ ಸೇರಿಸಿಕೊಳ್ಳಲು

ಇವುಗಳ ನಡುವೆಯೇ ಇವೆ ನೋಡಿ
ಶಹರದ ಅಂಗೈ ಹುಣ್ಣಿನಂತೆ
ಯಾರದೋ ತಪ್ಪಿಗೆ ತಾವು ಶಿಕ್ಷೆ ಅನುಭವಿಸುತ್ತ
ಸಂಕೀರ್ಣ ರೇಖೆಗಳ ಬೆರಳ ತುದಿಯ
ಉಗುರ ಕೆಲ್ಲು ತೋರಿಸುತ್ತ
ಮತ್ತೆ ಹೊಕ್ಕಳ ಬಳ್ಳಿಯನ್ನು ಅರಸುವ
ಅನಾಮಿಕ ಎಳೆಯ ಪಾದಗಳು

ಎಲ್ಲ ಕಡೆದಿಟ್ಟಂತಿದೆ
ಕಣ್ಣು ಹುಬ್ಬು ಮೂಗು ಮೈಮಾಟ..
ಇದು ಥೇಟು ನಿನ್ನಂತೆ ಅನ್ನುವವರು ಮಾತ್ರ
ಹುಡುಕಿದರೂ ಸಿಗುತ್ತಿಲ್ಲ

ಸೋತು ಹೋಗಿವೆ
ಬಲಿಯುವ ಬಹಳ ಮುನ್ನವೇ
ಭವಿಷ್ಯದ ಅಸಂಖ್ಯ ಗೆರೆಗಳ ಹೊತ್ತ
ಶಹರದ ಒಳಗೆ
ಪದೇ ಪದೆ ಕಳೆದು ಹೋಗಿವೆ.

ಕಣ್ಣಂಚಿನ ಕಡಲು

ನಾಗರಾಜ್ ಅಪಗಾಲ್ ಹೊನ್ನವರದ ಎಸ್.ಡಿ.ಎಮ್ ಕಾಲೇಜಿನಲ್ಲಿ ಉಪನ್ಯಾಸಕರು. ವರ್ಷಗಳ ಹಿಂದೆ ಬರೆದ ಕವಿತೆ -’ಜೋಡಣೆ’ ಮಯೂರ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಈಗ ’ಅಭಿನವ’ ಅವರದೊಂದು ಕವನ ಸಂಕಲನವನ್ನು ಹೊರತರುತ್ತಿದೆ. ಬರುವ ಜನವರಿಯಲ್ಲಿ ’ಕಣ್ಣಂಚಿನ ಕಡಲು’ ಕೈಗೆ ಸಿಗಲಿದೆ.  

ಜೋಡಣೆ

ಈ ಬೆಡಗಿ
ಪ್ರೆಸ್ಸಿನಲಿ ಮೊಳೆ ಜೋಡಿಸುವ
ಹುಡುಗಿ

ಹೆಕ್ಕಿ ಹೆಕ್ಕಿ ನಾಲ್ಕಕ್ಷರವ ಕಲಿತು
ಈಗ ನಿತ್ಯವೂ ನೂರಾರು ಅಕ್ಷರಗಳ
ಹೆಕ್ಕಿ ಹೆಕ್ಕಿ ಜೋಡಿಸುವೀಕೆ
ಥೇಟ್ ಗೂಡು ಹೆಣೆಯುವ
ಗುಬ್ಬಚ್ಚಿ

ಕೈಯೊಳಗೋ
ಸದಾ ಯಾರ್ಯಾರದೋ ಹಸ್ತಪ್ರತಿ;
ತೆಗೆಯುತ್ತಾಳೆ ನಿತ್ಯ
ಯಥಾಪ್ರತಿ

ಮೂಲದಲಿ
ತಿರುವು-ಮುರುವಾಗಿ
ಅರ್ಥ ಆಕಾರವೊಂದು ಇರದ
ಈ ಮೊಳೆಗಳು ಅಕ್ಷರದ ಅಚ್ಚುಗಳಾಗಿ
ಒಂದಕೊಂದು ಸುಸಂಭದ್ದವಾಗಿ ಸೇರಿ ಶಬ್ಧವಾಗಿ
ಸಾವಿರ(ದ) ಸದ್ದಾಗಿ, ಸಾಲು ಸಾಲಾಗಿ
ಗಿಡ್ಡ ಸಾಲಿನ ಕವಿತೆಯಾಗಿ
ದೊಡ್ಡ ಸಾಲಿನ ಕತೆಯೋ ಕಾದಂಬರಿಯೋ ಆಗಿ
ನಾ-ನಾ ಆಕೃತಿಯಾಗಿ
ನವಿರಾದ ಕೃತಿಯಾಗಿ
’ನಾದದ ನವನೀತ’ವಾಗಿ
ಪ್ರಶಸ್ತಿ-ಪುರಸ್ಕಾರ; ಹಾರ-ತುರಾಯಿ…
ಎಂದೆಲ್ಲ ಹಾರಾಡಿ
ಮನೆ ಮನೆಯ ಮಾತಾಗಿ ಹೋಗುವ ಪರಿಗೆ
ಈಕೆಗೆ ಎಲ್ಲಿಲ್ಲದ ಬೆರಗು

ಇದ್ದಿಲು ವಜ್ರವಾಗುವಂತೆ…
ಥಟ್ಟನೆ ಎನೋ ಹೊಳೆದಂತೆ…
ಅಂದುಕೊಳ್ಳುತ್ತಾಳೆ:

’ಒಹ್, ಈ ಜಗದ ಅಣು ಅಣುವಿನ
ಸುಸಂಗತ ಜೋಡಣೆ, ಬರೀ ಜೋಡಣೆಯಲ್ಲ;
ಅದು ಹೊಸ-ಹೊಸ ಹುಟ್ಟಿನ
’ಜೀವಧಾರಣೆ’ ಎಂದು.

 

ಒದ್ದೆ ಕೊಡೆ

ಒದ್ದೆ ಕೊಡೆ

ಸುರಿವ ಮಳೆಯಲ್ಲಿ ಬಂದು ನಿಂತ ಬಸ್ಸಿನೊಳಗೆ
ನಿಂತಲ್ಲಿ ಅರಳಿ ಆಶ್ರಯವಾಗಿದ್ದ ಕೊಡೆ ಮುದುರಿ
ಒದ್ದೆ ಕಾಲುಗಳ ಕೆಳಗೆ ಅನಾಥ ವಾಸನೆ ಹೊತ್ತ
ಚಪ್ಪಲಿಗಳ ಜೊತೆ ಅಸಾಹಯಕವಾಗಿ ನಡುಗುತ್ತ ಬಿದ್ದಿದೆ

ಬಿಮ್ಮಗೆ ಹಿಡಿಕೆ ಸಮೇತ ಸುತ್ತಿಕೊಂಡಿದ್ದ ಛತ್ರಿಗೀಗ
ಅಲ್ಲಲ್ಲೇ ಅಂಟಿಕೊಂಡು ಮುದ್ದೆಯಾಗುವ ಕಾಲ
ಕಡ್ಡಿಗಳ ತುದಿಯಿಂದ ತೊಟ್ಟಿಕ್ಕುವ ನೀರು
ತಲೆಕೆಳಗಾಗಿ ಟಪಕ್ಕನೆ ಒಣ ಪ್ರತಿಷ್ಟೆಯಮೇಲೆ ಬಿದ್ದಾಗ
ಮರುಮಾತಿಲ್ಲದೆ ಅಲ್ಲೇ ಒಂದು ಮೂಲೆ ಸೇರಬೇಕು
ಅಟ್ಟದ ಮೇಲೋ ಕಪಾಟಿನೊಳಗೋ ಬೆಚ್ಚಗೆ ಮಲಗಿರುವ
ಇಲ್ಲಾ ರೆಕ್ಕೆ ಬಿಚ್ಚಿ ಜೋತುಬಿದ್ದು ಬಾವಲಿಯಂತೆ
ಗರಿಗರಿಯಾಗುವ ಬೆಚ್ಚಗಿನ ಅವಕಾಶ ಇಲ್ಲವಿಲ್ಲಿ

ಹಿಡಿಕೆ ತುಂಬಾ ಮಾಯದ ಗಾಯ
ಉಳಿದಿರಬಹುದು ನೆರಿಗೆ ಬಿದ್ದ ಮೈತುಂಬ
ಇನ್ನೂ ಮುಗಿಯದ ಉತ್ಸಾಹ
ಇದ್ದೀತೇ ಇದರೊಳಗೆ ಮೊದಲ ಮಳೆ ನೆನಪು
ಹೊಳೆವ ಬಟನ್ ಒತ್ತಿದಾಗ ಸಟಕ್ಕನೆ
ಬಿಚ್ಚಿಕೊಂಡು ನೀರೊಳಗೆ ಮಿರುಗುವ ಸೊಗಸು

ಒಂದು ಕಡ್ಡಿ ನಡುವಲ್ಲಿ ಮುರಿದು ಹೊರಬಿದ್ದಿದೆ
ನೀರೆಲ್ಲಾ ಸೋರಿ ಬಿದ್ದಲ್ಲೆ ಒಣಗಿ
ಮುದುರಿ ಮುದ್ದೆಯಾದಲ್ಲೇ ಸುಧಾರಿಸಿಕೊಂಡು ಗರಿಗೆದರಿಕೊಳ್ಳುತ್ತಿದೆ
ಸರಕ್ಕನೆ ಬಿಚ್ಚಿಕೊಂಡು ತಲೆಯಮೇಲೊಂದು ಸಣ್ಣಾಕಾಶ ಸೃಷ್ಟಿಸುವುದಕ್ಕೆ
ಸೂರಿನ ಹೊರಬಂದವನ ಒಳಗಿನ ಬೆಚ್ಚಗನ್ನು ಕಾಯುವುದಕ್ಕೆ