Archive

Archive for the ‘ಹಾಗೆ ಸುಮ್ಮನೆ’ Category

ಘಟ್ಟದ ಮೇಲೆ – ಘಟ್ಟದ ಕೆಳಗೆಉತ್ತರ ಕನ್ನಡದಲ್ಲೊಂದು ರೇಖೆ ಹಾದು ಹೋಗುತ್ತದೆ. ಕೇವಲ ಈ ಜಿಲ್ಲೆಗಷ್ಟೇ ಸೀಮಿತವಾಗಿರುವ ರೇಖೆ – ಘಟ್ಟದ ಮೇಲೆ ಹಾಗೊ ಘಟ್ಟದ ಕೆಳಗೆ ಎಂದು ’ಉ.ಕ’ವನ್ನು ವಿಭಜಿಸಿ ನಡುವೆ ತಟಸ್ಥವಾಗಿ ಉಳಿದುಬಿಟ್ಟಿದೆ. ಯಾವ ಮಹತ್ವದ ಕಾರಣಕ್ಕಾಗಿ ಇದೊಂದು ಹೆಚ್ಚುವರಿ ರೇಖೆ ಹುಟ್ಟಿಕೊಂಡಿತು ಹಾಗೂ ಯಾರು ಈ ರೇಖೆಯನ್ನೆಳೆದು ಉಧ್ಗಾಟಿಸಿದರು ಅನ್ನುವುದು ಈ ಹೊತ್ತಿನವರೆಗೂ ಮಹತ್ವದ ವಿಷಯವಲ್ಲ. ಘಟ್ಟದ ಮೇಲಿನವರು, ’ಘಟ್ಟದ ಕೆಳಗೆ’ ಹಾಗೂ ಘಟ್ಟದ ಕೆಳಗಿನವರು, ’ಘಟ್ಟದ ಮೇಲೆ’ ಅನ್ನುವಷ್ಟಕ್ಕೆ ಮಾತ್ರ ಸೀಮಿತ. ಅಷ್ಟರ ಹೊರತಾಗಿಯೂ ಒಮ್ಮೊಮ್ಮೆ ’ಸೂಕ್ಷ್ಮ’ವಾಗುತ್ತದೆ ಈ ರೇಖೆ – ಒಂದು ರೀತಿಯಲ್ಲಿ ಮನೆಯೊಳಗಿನ ವ್ಯವಹಾರ ಅದು. ಪಾತ್ರಗಳು ಅದಲು-ಬದಲಾಗುತ್ತಿರುತ್ತವೆ!!

ಭೌಗೋಳಿಕ ಕಾರಣಗಳಿಂದಾಗಿ ಇಂಥದ್ದೊಂದು – ಉಪದ್ರವಕಾರಿಯಲ್ಲದ – ವಿಭಜನೆ ಆಗಿಲ್ಲವಾದರೂ ಸರಿ.  ಅದೇ ಕಾರಣಕ್ಕೆ ಆಗಿದ್ದರೆ ಮತ್ತೂ ಸರಿ. ಘಟ್ಟದ ಕೆಳಗಿನ ಊರುಗಳಿಗೆ ತೀರದ ಶಬ್ದದ ಆಸರೆಯಾದರೆ, ಘಟ್ಟದ ಮೇಲಿನ ಪ್ರದೇಶಕ್ಕೆ ಮಲೆಯ ಆಸರೆ. ಘಟ್ಟದ ಕೆಳಗಿನ ಉತ್ತರ ಕನ್ನಡ ಅಲೆಯ ಸೆರಗು ಬೀಸಿದರೆ, ಘಟ್ಟದ ಮೇಲೆ ಮಲೆಯ ಸೆರಗು. ಬಹಳ ಸೆಖೆಯೆಂದೂ, ಸಿಕ್ಕಾಪಟ್ಟೆ ಚಳಿಯೆಂದೂ ಅವರು ಇವರಿಗೆ, ಇವರು ಅವರಿಗೆ ಹೇಳುತ್ತಿರುವುದು ಜನರ ಆಪ್ತತೆಯನ್ನು ತೋರಿಸುತ್ತದಷ್ಟೆ. ಜೊತೆಗೆ-  ನಿರ್ಲಿಪ್ತತೆಯನ್ನೂ. 

ತನ್ನೊಳಗೆ ಒಡೆದು ಎರಡಾಗುವ ಸಂದರ್ಭವೊಂದನ್ನೂ ಎದುರುಗೊಂಡಿದ್ದ ಉತ್ತರ ಕನ್ನಡ ಇವತ್ತಿಗೂ ಇಡಿಯಾಗಿ ಹಿಡಿದುಕೊಂಡಿದ್ದರೆ, ಒಂದು ಬದಿಯಲ್ಲಿ ವಿಪರೀತ ಸೆಖೆ ತಟ್ಟದಿದ್ದುದೂ, ಇನ್ನೊಂದು ಬದಿಯಲ್ಲಿ  ಹೆಚ್ಚೇ ಅನ್ನುವಷ್ಟು ಚಳಿಯಾಗದೆ ಇದ್ದುದೇ ಕಾರಣವಾ? ವ್ಯಾಪಕವಾಗಿ ಬೆಳೆಯುತ್ತಿರುವ ದಕ್ಷಿಣ ಕನ್ನಡ, ನಿರೀಕ್ಷೆ ಮೀರಿದ ಚಟುವಟಿಕೆಗಳನ್ನು ನೋಡುತ್ತಿರುವ ಶಿವಮೊಗ್ಗ, ತನ್ನದೇ ಆದ ಮಣ್ಣ ವಾಸನೆ ಹೊತ್ತ ಹುಬ್ಬಳ್ಳಿ-ಧಾರವಾಡಗಳ ನಡುವೆ, ಇನ್ನೂ ಘಟ್ಟದ ಮೇಲೆ, ಘಟ್ಟದ ಕೆಳಗೆ ಅನ್ನುತ್ತ ಮೇಲೆ-ಕೆಳಗೆ ನೋಡುತ್ತಿದೆ ಉತ್ತರ ಕನ್ನಡ. ಒಂದು ರೀತಿ ತ್ರಿಶಂಕು ಸ್ವರ್ಗದಲ್ಲಿರುವಂತೆ ಭಾಸವಾಗುವ ಜಿಲ್ಲಾ ಕೇಂದ್ರದ ಮೈತುಂಬ ಸರಕಾರೀ ಗಾಯ. ಅಲ್ಲೀಗ ತರಕಾರಿ ಬೆಳೆಯುವುದೂ ಸಹ ಕಷ್ಟಸಾಧ್ಯ.  

ಪ್ರತಿಯೊಂದು ವಿಷಯದಲ್ಲೂ ’ವಿಪರೀತ’ಕ್ಕೆ ಹೆಚ್ಚಿನ ಮಹತ್ವವಿರುವ, ನೈತಿಕತೆ, ಸ್ಪರ್ಧೆ, ವ್ಯಾಪಾರ -ವ್ಯವಹಾರ ಮುಂತಾದ ಶಬ್ಧಗಳ ಪರಿಭಾಷೆಯೇ ಬದಲಾಗುತ್ತಿರುವ ದಿನದಲ್ಲಿ, ಉತ್ತರ ಕನ್ನಡ ಇಡಿಯಾಗಿ ತನ್ನನ್ನು ರೂಪಿಸಿಕೊಳ್ಳಬೇಕಾ ಈಗ? ಪೂರ್ತಿಯಾಗಿ ತನ್ನನ್ನು ಬೆಳೆಸಿಕೊಡಬಹುದಾದ ರೇಖೆಯೊಂದನ್ನು ತನ್ನದೇ ಮೈಸುತ್ತ ಎಳೆದುಕೊಳ್ಳಬೇಕಾ? ತನ್ನನ್ನು ತಾನೇ ರೂಪಿಸಿಕೊಂಡು ಸುತ್ತಲಿನ ಜಿಲ್ಲೆಗಳ ಸಮಕ್ಕೆ ನಿಲ್ಲುವ ದಾರಿ ಒಂದಾದರೆ, ದೊಡ್ದ ಯೋಜನೆಗಳಿಗೆ ತನ್ನನ್ನು ಒಡ್ಡಿಕೊಂಡು ಕಾಣದ ಕೈಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವುದು ಇನ್ನೊಂದು ದಾರಿ. ಅಷ್ಟು ಬಿಟ್ಟರೆ,  ಮೂರನೆಯ ದಾರಿ ಯಾವುದು?

ಒಂದು ತಲೆಮಾರಿನವರು ಊರು ಬಿಟ್ಟು ಮುಂಬೈ ಸೇರಿಕೊಂಡರೆ, ನಂತರದವರು ಬೆಂಗಳೂರು ಸೇರಿದರು. ಹಲವಾರು ಕಾರಣಗಳಿಗೆ ಮುಂಬೈ ಹೊಕ್ಕವರು ಅಲ್ಲಿನವರೇ ಆಗಿ, ಬೆಂಗಳೂರು ಸೇರಿದವರು – ಕೆಲವು ಸಂದರ್ಭದಲ್ಲಿ – ಎಲ್ಲಿಯವರೂ ಆಗದೇ ಉಳಿದುಬಿಟ್ಟಂತಿದೆ. ನಂತರದ ಬೆಳವಣಿಗೆ ವೈಮಾನಿಕ. ಒಂದು ಸ್ವರ್ಗದಿಂದ ಸೀದಾ ಇನ್ನೊಂದು ಸ್ವರ್ಗಕ್ಕೆ ಪ್ರಯಾಣ ಈಗ. ವರ್ಷಕ್ಕೊಮ್ಮೆ ಕುಲದೇವರಿಗೋ!, ಜಾತ್ರೆಗೋ ಅಥವಾ ಊರಿನ ಸೆಳೆತವೆಂದೋ ಒಮ್ಮೆ ಬಂದು ಹೋಗುವ ಸಾಧ್ಯತೆಯೂ ಸಹ ಕಡಿಮೆ. ಇಂತಹ ಬೆಳವಣಿಗೆ ಉತ್ತರ ಕನ್ನಡಕ್ಕೆ ಮಾತ್ರ ಸೀಮಿತವಲ್ಲದಿದ್ದರೂ, ಅಲ್ಲಿನ ಬಾಕಿ ಸಂಗತಿಗಳೊಂದಿಗೆ ಹೋಲಿಸಿದಾಗ ಹೆಚ್ಚು ಪ್ರಸ್ತುತವಾಗುತ್ತದೆ.

ಒಂದು ಹಂತದಲ್ಲಿ ಹೆಚ್ಚಿನವರೆಲ್ಲ ಮಾಸ್ತರುಗಳಾಗಿಬಿಟ್ಟರು, ತಮ್ಮ ತಮ್ಮ ಊರಲ್ಲಿ. ಇದ್ದ ಹತ್ತಿಪತ್ತು ಗುಂಟೆ ಜಾಗ(ಜಾಸ್ತಿ ಇದ್ದರೂ ಅದು ಅವರಿಗೇ ತಾನೆ?) ಹಾಗೂ ಬಂದ ಪಗಾರಿನಲ್ಲಿ ತಮ್ಮ ಬದುಕು ಕಟ್ಟಿಕೊಂಡರು. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೊರಟವರು, ತಮ್ಮ ಜಿಲ್ಲೆ ಬಿಟ್ಟು ಹೊರಬಂದು – ಮತ್ತದೇ ನೆಲೆಯಲ್ಲಿ ಜೀವನ ಮಾಡಿದರು. ಮುಂದಿನ ತಯಾರಿಯಾಗಿ, ಪ್ರಕಾಶಿಸುತ್ತ ನಡೆದ ಬೃಹತ್ ಭಾರತ ದೇಶದಲ್ಲಿ, ಹತ್ತು ಹಲವು ಅವಕಾಶಗಳು ಬಂದವು. ಉತ್ತರ ಕನ್ನಡಿಗರು ಪೂರ್ವ, ಪಶ್ಚಿಮ, ದಕ್ಷಿಣಕ್ಕೆ ನಡೆದರು. ಸಂಬಳ ಹೆಚ್ಚಾಯಿತು. ಜೊತೆಗೆ ಖರ್ಚೂ. ಊರು ಮಾತ್ರ ಉತ್ತರವಿಲ್ಲದೇ ಉಳಿದುಬಿಟ್ಟಿತು.

ಎಲ್ಲ ಬೆಳವಣಿಗೆಗಳೂ ಆಗಲೇಬೇಕಿತ್ತು, ಹೀಗಿದ್ದರೇ ಸರಿ/ಹೀಗಾಗುವುದೇ ಸರಿ, ಉತ್ತರ ಕನ್ನಡ ಉತ್ತರ ಕನ್ನಡವಾಗಿಯೆ ಇರಲಿ – ಅದು ದಕ್ಷಿಣ ಕನ್ನಡವೋ ಅಥವಾ ಮತ್ತೊಂದು ಜಿಲ್ಲೆಯಂತೋ ಆಗುವುದು ಬೇಡ, ಉತ್ತರ ಕನ್ನಡ ಹೀಗಿದ್ದರೇ ಒಳ್ಳೆಯದು…. ಹಲವು ಸುದ್ದಿಗಳು ಹೊರಬೀಳುತ್ತಿವೆ ಈಗ. ತಮ್ಮ ಮನೆಯಲ್ಲೆ ಉಳಿದುಕೊಂಡ ಉತ್ತರ ಕನ್ನಡಿಗರಿಗೆ ಸಾಲ ತೀರಿಸುವುದೋ, ಮನೆ ಉಳಿಸಿಕೊಳ್ಳುವುದೋ, ಪಕ್ಕದ ಜಿಲ್ಲೆಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಪಡೆಯುವುದೋ… ಯಾವುದೂ ತಿಳಿಯದ ಸ್ಥಿತಿ. ಸ್ವಲ್ಪ ಗೆಲುವಾದರೆ (ಅಥವಾ ಗೆಲುವಿದ್ದವರಾದರೆ?), ಎಲ್ಲೋ ಇರುವ ಮಕ್ಕಳು ಮರಿಯ ಜೊತೆ ಚಾಟ್ ಮಾಡಬೇಕು. ಅನುಕೂಲವಾದರೆ ಒಂದೆರಡು ವಾರ ಹೋಗಿ ಇದ್ದು ಬರಬೇಕು. ಎಲ್ಲ ಹೋಗಿ ಬರುವವರ ಆಟ…

ಉತ್ತರ ಕನ್ನಡವೀಗ ತನ್ನೊಳಗೆ ಸೃಷ್ಟಿಯಾದ ರೇಖೆಯನ್ನೇ ಹಿಡಿದಿದುಕೊಂಡಿದೆ ಆಸರೆಗಾಗಿ. ಊರುಗಳು ತಾಲೂಕನ್ನೂ, ತಾಲೂಕುಗಳು ಜಿಲ್ಲೆಯನ್ನೂ ನೋಡುತ್ತಿವೆ. ಜಿಲ್ಲಾ ಕೇಂದ್ರದ ಸುತ್ತ ಕೇಂದ್ರ ಮತ್ತು ರಾಜ್ಯದ ಹದ್ದುಗಣ್ಣು. ಒಂದರ ಹಿಂದೊಂದು, ಅಭಿವೃಧಿ ಪಥದತ್ತ ಹೊರಟ, ಯೋಜನೆಗಳು.  ಗಟ್ಟಿಯಾಗಿ – ಬೇಕು ಅಥವಾ ಬೇಡ ಎನ್ನಲೂ ಆಗದಂಥಾ ಪರಿಸ್ಥಿತಿ. ನಿರಂತರವಾಗಿ ಬೆಳೆಯುತ್ತಿರುವ ಜಗತ್ತಿನ ನಡುವೆ, ಆದಷ್ಟೇ ಬೆಳವಣಿಗೆಯೆಂಬಂತೆ ತನ್ನನ್ನು ತೋರಿಸಿಕೊಳ್ಳುತ್ತಿದೆ ಉತ್ತರ ಕನ್ನಡ.

ಭರ್ತಿ ಮಳೆ, ತೀರದ ಶಬ್ಧದ ಜೊತೆಗಿದ್ದೂ ತನ್ನನ್ನು ತೊಳೆದುಕೊಳ್ಳಲಾರದ ಸ್ಥಿತಿಯಾ ಇದು?

ಜಿಲ್ಲೆಯ ಹೊರಗಿರುವವರೆಲ್ಲ, ವರ್ಷದ ಅಂತ್ಯದಲ್ಲಿ ಸಿಗಬೇಕಾದ ಬಡ್ತಿ, ಹೆಚ್ಚಿನ ಸಂಬಳ, ಭವಿಷ್ಯದ ಲೆಕ್ಕ ಹಾಕುತ್ತಿದ್ದಾರೆ. ಅವರೆಲ್ಲ ಖಂಡಿತವಾಗಿಯೂ ತಮ್ಮ ತಮ್ಮ ಊರು/ಜಿಲ್ಲೆಗಿಂತ ಹೆಚ್ಚಿನ ತೊಂದರೆಯನ್ನು ವಯಕ್ತಿಕವಾಗಿ ಅನುಭವಿಸುತ್ತಿದ್ದಾರೆ. ಡಾರ್ವಿನ್ನನ ಥಿಯರಿ ಎಂದಿಗಿಂತ ಹೆಚ್ಚು ಈ ಊರು ಬಿಟ್ಟವರಿಗೆ ಅನ್ವಯವಾಗುತ್ತಿದೆ. ಉತ್ತರ ಕನ್ನಡಿಗರಿಗೆ ಮಾತ್ರ ಘಟ್ಟದ ಮೇಲೆ ಯಾವುದು, ಘಟ್ಟದ ಕೆಳಗೆ ಯಾವುದು ಎಂಬುದೂ ಮರೆತುಹೋದಂತಿದೆ!!

(KS (!) Link – http://www.kendasampige.com/article.php?id=4194)

Advertisements

ಮತ್ತೆ ಮತ್ತೆ ಉದ್ಧರಿಸುವವರ ನಡುವೆ ಮತ್ತೊಂದು ಸಮ್ಮೇಳನ…

 ಈ ಸಂದರ್ಭದಲ್ಲಿ ಬೆಂಗಳೂರನಲ್ಲಿಲ್ಲದಿದ್ದರೆ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯದೆ ಇದ್ದಿದ್ದರೆ, ಪ್ರತಿ ವರ್ಷದಂತೆ ಮತ್ತೆ – ಪತ್ರಿಕೆ, ಟೀವಿ, ಮತ್ತಿತರ ಮಾಧ್ಯಮಗಳ ನಡುವೆ ಮತ್ತೊಂದು ಸಮ್ಮೇಳನ ಮುಗಿದು ಹೋಗುತ್ತಿತ್ತು. ವಯಕ್ತಿಕವಾಗಿ ಇಲ್ಲಿಯವರೆಗೆ ಒಂದೂ ಸಮ್ಮೇಳನಕ್ಕೆ ಹಾಜರಿ ಹಾಕದ ಕಾರಣ ಹಾಗೂ ಸಣ್ಣದೊಂದು ಕುತೂಹಲ ಇಟ್ಟುಕೊಂಡು ಈ ಬಾರಿ ಮೊದಲೆರಡು ದಿನ ಹಾಜರಿ ಹಾಕಿ ಕಾಲುಳುಕಿಸಿಕೊಂಡು ಬಂದವರ ಪೈಕಿ ನಾನೂ ಒಬ್ಬನಾಗಿ ಈ ಮಾತು.

ಸಾಹಿತ್ಯ, ಸಾಹಿತಿ, ಸಮಿತಿ, ಪರಿಷತ್ತು, ಪುಸ್ತಕ, ಮಳಿಗೆ, ಮಾರಾಟ, ಮೈಕು, ಮೈಕಾಸುರರು, ಬ್ಯಾಂಡು, (ಬತ್ತಾಸು!), ಬಿಂದಿ, ಬಿಂದಿಗೆ, ಸ್ವಾಗತ, ಸತ್ಕಾರ, ಸಂಭ್ರಮ, ಸಂಭಾಷಣೆ, ಸಂ-ಭಾಷಣ…ಮುಂತಾದವುಗಳ ಒಳಗೊಳಗೆ ನಡೆದ ಮೂರು ದಿನಗಳ ಈ ಒಳಾಂಗಣ ಆಟ, ಮೂರು ವರ್ಷದಿಂದಲೂ ಅರ್ಧ ನಿರ್ಮಿತ ನಗರದಂತೆ ಕಾಣಿಸಿಕೊಳ್ಳುತ್ತಿರುವ – ಅಸಾಮಾನ್ಯ ಸಂಯಮದ – ಬೆಂಗಳೂರಿಗೆ, ನಿನ್ನದಾದರೂ ನಿರ್ಮಾಣ ಸ್ಥಿತಿ, ತನ್ನದು ಮಾತ್ರ ನಿರ್ನಾಮದ ಸ್ಥಿತಿ ಎಂದು ಸಾರುತ್ತಿದೆಯಾ ಎಂಬುದೊಂದು ಅನುಮಾನ ಸುಳಿಯುವಂತೆ ಮಾಡಿಸಿದ್ದು ಸುಳ್ಳಲ್ಲ. ಆದರೂ, ಬೆಂಗಳೂರು half constructed, ಕನ್ನಡ half destructed ಎಂದು ಸುಮ್ಮನೆ ಹೇಳುವುದು ಸಾಧ್ಯವಿಲ್ಲ. ಅದಕ್ಕೊಂದು ಆಧಾರವಿಲ್ಲದಿರುವ ಕಾರಣ, ಬೆಂಗಳೂರು ನಿರ್ಮಾಣ ಹಂತದಲ್ಲಿರುವ ಮತ್ತೊಂದು ಸಿಂಗಾಪುರವೆಂದೂ, ಕನ್ನಡ ಇವತ್ತಿಗೂ ’ಕಸ್ತೂರಿ ಕನ್ನಡ’ ಎಂದುಕೊಂಡೇ ಸಮ್ಮೇಳನವನ್ನು ಅನುಭವಿಸಬಹುದಾ ಅಂದುಕೊಂಡರೆ – ನಮ್ಮ ನಮ್ಮದೇ ಆದ ವಿಚಾರಗಳು ಅದಕ್ಕೂ ಅಡ್ಡಿಪಡಿಸುವ ಸಮಯ ಇದು.

ವ್ಯವಸ್ಥೆಯ ದೃಷ್ಟಿಯಿಂದ ಸಮ್ಮೇಳನವೂ ಸಹ ಬಹಳಷ್ಟು ಕಾರಣಗಳಿಂದಾಗಿ – ಕಡಿಮೆ ಸಾಹಿತ್ಯಿಕ ಮತ್ತು ಹೆಚ್ಚು ಮಾರುಕಟ್ಟೆ ಕೇಂದ್ರಿತ ವ್ಯವಹಾರದಂತೆ ಕಾಣಿಸಿದ್ದು ಸುಳ್ಳಲ್ಲ. ಕಿಶೋರ್ ಬಿಯಾನಿ ಎಂಬ ಬಿಗ್ ಬಝಾರ್ ಜನಕನೇನಾದರೂ ಈ ಸಾಹಿತ್ಯ ಸಮ್ಮೇಳನವನ್ನೂ, ಅದರ ಸುತ್ತ ಬೆಳೆದು-ನಿಂತ ಮಾರುಕಟ್ಟೆಯನ್ನೂ ನೋಡಿದ್ದರೆ ತಾನು ತಿಂಗಳಿಗೊಂದು ಸಮ್ಮೇಳನ ಮಾಡುತ್ತೇನೆಂದು ಘೋಷಿಸಿ, ಅದರ ಸುತ್ತ ಮತ್ತೊಂದು ಯಶಸ್ವೀ ವ್ಯವಹಾರ ಬೆಳೆಸುವ ಉದ್ದೇಶವೊಂದಕ್ಕೆ ಚಾಲನೆ ನೀಡುತ್ತಿದ್ದುದು ಖಂಡಿತ. ಬೌದ್ಧಿಕ ವಲಯವಾಗಬೇಕಿದ್ದ ಮೂರು ದಿನಗಳ ಸಮ್ಮೇಳನ, ಕೆಲವೇ ಕೆಲವು ಸಂದರ್ಭಗಳಲ್ಲಿ ನಿರೀಕ್ಷಿತ ಯಶಸ್ಸು, ಸಂಭ್ರಮ ಕಂಡಿದ್ದರೆ ಅದು ಕನ್ನಡದ ಪುಣ್ಯವೇ ಹೌದು. ಆದರೆ, ಆ ಯಶಸ್ಸಿಗೆ, ಸಂಭ್ರಮಕ್ಕೆ ಮಾನದಂಡ ಯಾವುದು? ಸೇರಿದ್ದ ಜನರ ದೃಷ್ಟಿಯಿಂದ ಇದು ಯಶಸ್ವೀ ಸಮ್ಮೇಳನ ಅಂದುಕೊಳ್ಳಲು ಯಾವ ಅಡ್ಡಿಯೂ ಇಲ್ಲ ಅನ್ನುವುದು ಒಂದು ಮಾನದಂಡ ಆಗಬಹುದಾ? ಸಾಹಿತ್ಯ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟ ನಿರ್ದಿಷ್ಟ ವ್ಯಕ್ತಿ, ವಸ್ತು, ವಿಷಯದ ಸುತ್ತ ಕೇಂದ್ರೀಕೃತವಾಗಬೇಕಿದ್ದ ಸಮ್ಮೇಳನ ಅದೊಂದು ಬಿಟ್ಟು ಮತ್ತೆಲ್ಲ ಆಗಿದೆಯಾ? ಅಥವಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೆಂಬುದು ಹೀಗೆಯೇ, ಇಂತೆಯೇ ಇರಬೇಕೆಂದು ಭಾಷ್ಯ ಬರೆದಿಡಲಾಗಿದೆಯಾ? ನಗರ ಕೇಂದ್ರಿತವಾಗುತ್ತಿರುವ ಬದುಕಿನಲ್ಲಿ ಕಳೆದುಹೋಗುತ್ತಿರುವ ಊರು, ಜಾತ್ರೆ, ಹಬ್ಬ… ಎಲ್ಲ ವರ್ಷಕ್ಕೊಮ್ಮೆ ಒಂದೇ ಊರಿನಲ್ಲಿ ಒಟ್ಟಾರೆ ಸಿಗುವ ಅಲಿಖಿತ ಒಪ್ಪಂದದಂತೆ ನಡೆಯುತ್ತದಾ ಈ ಕನ್ನಡದ ಜಾತ್ರೆ?

ಆಯೋಜಿಸುವುದು ಸರಿ. ಆದರೆ, ಯಾವ ಮೂಲ ಉದ್ದೇಶದ ಈಡೇರಿಕೆಗಾಗಿ, ’ಈ ರೂಪದಲ್ಲಿ’ ನಡೆಯಬೇಕು ಸಮ್ಮೇಳನ? ಹೀಗೇ ನಡೆಯುವುದೇ ಸರಿಯಾದ ರೀತಿಯಾ? ಇದಕ್ಕೊಂದು ಬೇರೆಯದೇ ಆದ ರೂಪ ಕೊಡುವುದು ಸಾಧ್ಯವಿಲ್ಲವಾ? ಅಥವಾ ಅಂಥದ್ದೊಂದು ವಿಚಾರದ ಅವಶ್ಯಕತೆಯೇ ಇಲ್ಲವಾ?

ಒಂದರ ಹಿಂದೊಂದು ಪ್ರಶ್ನೆಗಳು..

ಪ್ರಶ್ನೆಗೊಂದು ಉತ್ತರದ ಅವಶ್ಯಕತೆಯೇ ಇಲ್ಲವೆಂಬಂತೆ ಒಂದರ ಹಿಂದೊಂದು ಸಮ್ಮೇಳನಗಳು, ಸಂಭ್ರಮಗಳು.. ಪ್ರತಿಯೊಂದೂ ಗುಂಪಿನಲ್ಲಿ ಗೋವಿಂದ. ನಿರೂಪಣೆಯೆಂಬ ಸಣ್ಣ (?) ವಿಷಯವನ್ನು  ಉದಾಹರಣೆಯಾಗಿ ತೆಗೆದುಕೊಂಡರೆ – ಸಮ್ಮೇಳನದ ವೇದಿಕೆಯ ಒಂದು ತುದಿಯಲ್ಲಿ ಮೈಕಿಗೆ ಬಾಯಿ ಹಚ್ಚಿ ಒದರುತ್ತಿದ್ದವ ಹಲವಾರು ನಿರೂಪಕರಲ್ಲೊಬ್ಬ. ಉಚ್ಚಾರ ಸ್ಪಷ್ಟವಿತ್ತು, ಗಂಟಲ ಗಟ್ಟಿಯಿತ್ತು ಎನ್ನುವುದು ಆತನ ಗುಣ. ಅದೇ ಸಮಯಕ್ಕೆ ಆತ – ’ದರ್ಪ ಮೆಟ್ಟಿದ ಸರ್ಪ’ ಎಂಬ ಜಗತ್ಪಸಿದ್ಧ ನಾಟಕದ ’ಕಾಳಿಂಗ’ನ ಪಾತ್ರಧಾರಿಯಂತೆ ಆಡುತ್ತಿದ್ದುದೂ, ಅವನ ಭಯಂಕರ ಮಾತಿನ ಮೋಡಿಯಲ್ಲಿ ವೇದಿಕೆಯ ಮೇಲೆ ಕೆಳಗಿದ್ದವೆರೆಲ್ಲ ಸಂಪೂರ್ಣವಾಗಿ ಕಳೆದು ಹೋದದ್ದೂ ಸುಳ್ಳಲ್ಲ. ಒಬ್ಬ ನಿರೂಪಕನಿಗೂ, ಅರ್ಥಧಾರಿಗೂ, ನಾಟಕ ಪಾತ್ರಧಾರಿಗೂ ಇರಬೇಕಾದ ಮತ್ತು ಅವರು ಅಳವಡಿಸಿಕೊಳ್ಳಬೇಕಾದ ಮಾತಿನ ಧಾಟಿಯೇ ಬೇರಲ್ಲವಾ? ಸಮ್ಮೇಳನದ ನಿರೂಪಕ ನಾಟಕ ಮಾಡತೊಡಗಿದರೆ ಹೇಗೆ?

ಇರಲಿ. ನಿರೂಪಣೆ, ಧ್ವನಿ, ಬಿಸಿಲು, ಧೂಳು… ಮುಂತಾದ ಸಣ್ಣಪುಟ್ಟ ದೂರುಗಳನ್ನೆಲ್ಲ ಸುತ್ತಿಟ್ಟ ಸಮ್ಮೇಳನದ ಪೆಂಡಾಲುಗಳಲ್ಲಿ ಮುಚ್ಚಿ ಅದೇ ಮೈದಾನದಲ್ಲಿ ಮೂರಡಿ ಅಗೆದು ಹೂತಿಟ್ಟು, ಅದರ ಮೇಲೊಂದು ವೇಲಂಟೈನ್ ಡೇಗಾಗಿ ಬಂದ ಕೆಂಪು ಹೂವಿಟ್ಟುಬಿಡುವ. ಆದರೆ, ಗಮನ ವಹಿಸಬೇಕಾದ ವಿಷಯಗಳಿವೆಯಲ್ಲ – ಅವನ್ನೇನು ಮಾಡಬೇಕು? ಯಾವ ನಿರೀಕ್ಷಿತ ಕಾರಣಕ್ಕಾಗಿ ಸಮ್ಮೇಳನವನ್ನು ಅನುಭವಿಸಬೇಕು? ಯಶಸ್ವಿಯೆಂದು ಗುರುತಿಸಬೇಕು?

ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ, ಕನ್ನಡ – ಕನ್ನಡಪರ ಸಂವೇದನೆಯ ದಿಕ್ಕಿನಿಂದ, ಸಾಹಿತಿಗಳ ಇರುವು ಮತ್ತು ಅವರ ಕೃತಿಗಳ ಲಭ್ಯತೆಯಿಂದ, ವಿಮರ್ಷಾತ್ಮಕ ದೃಷ್ಟಿಕೋನದಿಂದ…. ಮತ್ತೆ ಇನ್ನೂ ಯಾವ ಯಾವ ಕಾರಣಕ್ಕಾಗಿ ಈ ಸಮ್ಮೇಳನ? ಇಲ್ಲಾ, ಇವೆಲ್ಲ ಕಾರಣಗಳನ್ನು ಒಟ್ಟಿಗೆ ಸೇರಿಸಿ ಒಂದು ಸಮ್ಮೇಳನ ಅನ್ನುವುದಾದರೆ, ಆ ಎಲ್ಲ ಅಂಶಗಳನ್ನೂ ಒಳಗೊಂಡಿತ್ತಾ ಈ ಸಮ್ಮೇಳನ? 

ಹೌದು ಅನ್ನುವುದು ಉತ್ತರವಾಗುತ್ತದಾದರೆ ಸರಿ. ಇಲ್ಲವಾದರೆ, ಒಟ್ಟಾರೆ/ಶೇಕಡಾವಾರು ಲೆಕ್ಕವಾಗುತ್ತದೆ. ಅದೂ ಇಲ್ಲದಿದ್ದರೆ, ಮತ್ತೇನಿಲ್ಲ – ಮುಂದಿನ ತಯಾರಿ.

ರಥ ಗಂಗಾವತಿಗೆ ಹೊರಡುತ್ತದೆ. ಮತ್ತೊಂದು ವಿಶೇಷ. ಮತ್ತೆ ಮುಖಪುಟ ಸುದ್ದಿ. ವರದಿ, ವಿಶೇಷಾಂಕ. ನೀವಲ್ಲಿ,  ಪೆಂಡಾಲಿನೊಳಗೋ, ಮರದ ಕೆಳಗೋ ನಿಂತಿದ್ದರೆ, ಪಕ್ಕದಲ್ಲೊಬ್ಬರು ವೀರಾವೇಶದಲ್ಲಿ ಘೋಷಿಸುತ್ತಿರುತ್ತಾರೆ – ’ನಾನು ಮತ್ತೆ ಮತ್ತೆ ಉದ್ಧರಿಸಿದೆ. ಎಷ್ಟು ಹೇಳಿದರೇನು ಪ್ರಯೋಜನ? ಇವರೆಲ್ಲಾ ನಾಲಾಯಖ್ಖು I say. ಖನ್ನಡಾ ಉದ್ಧಾರಾ ಆದಾಂಗೆ…  I will not tolerate this. Too much it is….’ ಕಿವಿ ತುಂಬಿಕೊಂಡು ಜಾಗ ಬದಲಿಸಿದರೆ, ಸಮ್ಮೇಳನ, ಭಾಷಣ, ಘೋಷಣೆ, ವರದಿ – ವಾಚನ, ಜನ, ಸದ್ದು, ಗದ್ದಲ, ಮಳಿಗೆ – ಮಾರಾಟ….ಈ ಲೊಕದ ಪರಿವೆಯೇ ಇಲ್ಲದೆ ನಾಲ್ಕು ಬೆರಳುಗಳ ನಡುವೆ ಹುಡಿ ಹಾರಿಸಿ ಶೇಂಗಾ ತಿನ್ನುವ ಸಪೂರ ಹೆಂಗಸು. ಅವಳನ್ನೂ ಸೇರಿಸಿ ಪೂರ್ತಿ ಸಮ್ಮೇಳನವನ್ನು ಕಾಣಿಸುವ ಟೀವಿಗಳು. ಭಯಂಕರ ಕೆಲಸ ಸಿಕ್ಕ ಖುಷಿಯಲ್ಲಿ ಹಾರ ಹಾಕಿಕೊಂಡು ಓಲಾಡುವ ಪತ್ರಕರ್ತ ಮಿತ್ರರು. ಮಳಿಗೆಳೊಳಗೆ ಸುಮ್ಮನೆರಡು ಪುಸ್ತಕ ಕದಿಯುವವರು, ಜಗತ್ತಿನಲ್ಲೆಲ್ಲೂ ಸಿಗಲಾರದೆಂಬಂತೆ ಇಪ್ಪತ್ತೇ ಇಪ್ಪತ್ತು ರುಪಾಯಿ ಕೊಟ್ಟು ಚೆಡ್ಡಿ ಖರೀದಿಸುವವರು…. ಒಂದಾ ಎರಡಾ? ದಿನವೊಂದನ್ನು ನಾಲ್ಕು ಭಾಗ ಮಾಡಿದಂತೆ ಕಂತಿನಲ್ಲಿ ಬಂದು, ಕುರ್ಚಿ ತುಂಬಿಸಿ, ಕಂತಿನಲ್ಲೇ ಹೋಗುವ ಕನ್ನಡಿಗರು, ವಿಶೇಷ ವಲಯದಲ್ಲಿ ಆಸೀನರಾಗುವ VVIP, VIPಗಳು. ಬಾಸಿಂಗವೊಂದು ಬಿಟ್ಟು ಉಳಿದೆಲ್ಲ ಎರಿಸಿಕೊಂಡೇ ಇರುವ ವಿಶೇಷ ವ್ಯಕ್ತಿತ್ವಗಳು…. ಎಲ್ಲವುಗಳ ನಡುವೆ ಅಧ್ಯಕ್ಷರ ಕೇಳಲೇಬೆಕಾದ ಮಾತುಗಳು,  ಮತ್ತಿಷ್ಟು ವಿಶೇಷ ಭಾಷಣಗಳು, ಹೇಳಿಕೆಗಳು, ಘೋಷಣೆಗಳು, ಹಾಡುಗಳು….

ಎಲ್ಲ ಒಟ್ಟಿನಲ್ಲಿ ದಕ್ಕಿಸಿಕೊಳ್ಳಬಹುದಾ?

ಅದು ಸಾಧ್ಯವಾಗದೇ ಹೋದರೆ, ಮಧ್ಯಮದ ಸಹಾಯ ಪಡೆಯಬೆಕು. ವರದಿಗಳನ್ನು ಕೇಳಬೇಕು, ಓದಬೇಕು… ಸಮ್ಮೆಳನದ ಜಾಗವೇನಿದ್ದರೂ ಜಾತ್ರೆ ಪೇಟೆಯಷ್ಟೆ.

ಸಮ್ಮೇಳನಕ್ಕೊಂದು ಹಾಜರಿ ಹಾಕಿ, ಪೂರ್ತಿಯಾಗಿ ಅನುಭವಿಸುವುದಕ್ಕೂ, ಮಾಧ್ಯಮದ ಮೂಲಕ ತಿಳಿದುಕೊಳ್ಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂದೇ ನನ್ನ ನಂಬಿಕೆ. ಅದು Virtual ಜಗತ್ತಿಗೂ Actual ಜಗತ್ತಿಗೂ ಇರುವ ವ್ಯತ್ಯಾಸ. (ಈ ವ್ಯತ್ಯಾಸ ಇಂತಹ ಸಂದರ್ಭಗಳಲ್ಲಿ,  ಅದಲು ಬದಲಾಗುತ್ತಿರುವ ಸಂಭವವೂ ಇದೆ.) ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ತಿಯಾಗಿ ಮಾಧ್ಯಮದ ಮುಖಾಂತರವೇ ಸಿಗುವುದಾದರೆ ಮತ್ತು ಆಯೋಜಿಸಲ್ಪಟ್ಟ ಕಾರ್ಯಕ್ರಮ ದೊಡ್ಡ ಪ್ರಮಾಣದ ಜಾತ್ರೆಯೇ ಆಗುವುದಾದರೆ, ಓಟ್ಟಾಗಿ ಆಯೋಜಿಸಲ್ಪಡುವ ಈ ಕಾರ್ಯಕ್ರಮ ಎರಡು ಬೇರೆ ಬೇರೆ ರೂಪದಲ್ಲಿ ದೊರೆಯಬಾರದು??

ಎಷ್ಟೆಲ್ಲ (?) ಖರ್ಚು ಮಾಡುವ, ಖರ್ಚಿನ ವಿಷಯದಲ್ಲಿ ಎಲ್ಲರನ್ನೂ/ಸಂದರ್ಭಗಳಲ್ಲಿ  ಕನ್ಪ್ಯೂಜ್ ಮಾಡುವ (ಚುಲ್ ಬುಲ್?) ಎಲ್ಲ ದೊಡ್ಡ ಜನರಲ್ಲಿ ಇಷ್ಟೇ ಅಲ್ಲ ಮತ್ತೂ ಬೇಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಶಕ್ತಿಯಿದೆ. ಅದಿಲ್ಲದಿದ್ದಲಿ, ಕನ್ನಡಮಾತೆ ಎಲ್ಲರಿಗೂ ಆ ಶಕ್ತಿಯನ್ನು ಕೊಡಲಿ…

ವರ್ಲ್ಡ್ ಸ್ಪೇಸ್

ಮಧುರ ಹಾಡುಗಳ ಮರೆಯಲ್ಲಿ ಸದ್ದಿಲ್ಲದೆ ನಡೆದಿರುವ ಸೂಕ್ಷ್ಮ ಅವನತಿಯ ಕುರಿತು ಓದುತ್ತಿದ್ದರೆ, ಇಹದ ಅಶರೀರವಾಣಿಗಳ ಅಸಾಮಾನ್ಯ ಸದ್ದನ್ನು ಕೇಳಿಸಿಕೊಳ್ಳುತ್ತ ತೀರಿಹೋದ ’ವರ್ಲ್ಡ್ ಸ್ಪೇಸ್’ ರೇಡಿಯೊ- ಪರದಲ್ಲಿ ಚಿಕ್ಕದೊಂದು ಮರುಹುಟ್ಟಿನ ಚಿಂತನೆಯನ್ನೂ ನಡೆಸದೆ ಮಲಗಿಬಿಟ್ಟಿರುವುದು ಗಮನಕ್ಕೆ ಬರುತ್ತದೆ.

ಆಕಾಶವಾಣಿಯ ಹಾಡುಗಳ ಮಾಧುರ್ಯ, ಇತಿ ವಾರ್ತಾ: ಟಿಪಿಕಲ್ ಹಿನ್ನೆಲೆ ಸಂಗೀತ, ಕಾಮೆಂಟರಿ- ಅದರ ಜೊತೆಗಿನ ಪುಕ್ಕಟೆ ಸದ್ದು, ಗದ್ದಲ, ಗಾಳಿ… ಪ್ರತಿಯೊಂದೂ ಗಾಳಿಯೊಳಗೆ ಲೀನವಾಗುತ್ತ ನಡೆದು ಎಫ್. ಎಮ್. ಎಂಬ ಮಾಯಾ ಬಝಾರು ಚಾಲ್ತಿಗೆ ಬಂದು ಪಕ್ಕಾ ಅಸಂಬದ್ಧಗಳಿಗೆಲ್ಲ ಒಂದೊಂದು ಸಂಬಂಧ ಕಲ್ಪಿಸಿ, ತಾನು ನಡೆದದ್ದೇ ದಾರಿ ಎಂಬಂತೆ ಹೊರಟಿರುವಾಗ ಕಳೆದುಹೋಗುತ್ತಿರುವ ಆಕಾಶವಾಣಿ ಹಾಗೂ ಕಳೆದುಹೋಗಿರುವ WorldSpace ರೇಡಿಯೊಗಳು ನೆನಪಿಗೆ ಬರದಿದ್ದರೆ, ಅದಕ್ಕೆ ಕಾರಣ- ಈ ಎಫೆಮ್ಮುಗಳ ಗದ್ದಲವೇ ಇರಬಹುದು ಅನ್ನಿಸಿಬಿಡುತ್ತದೆ.

ಕನಿಷ್ಟ ಎರಡೆರಡು ನಿಮಿಷಗಳ ಕಾಲ ನಿಲ್ಲಿಸುವ ಸಿಗ್ನಲ್ಲುಗಳಿಗಿಂತ ಒಂದು ಕೈ ಮೇಲು ಈ ಚಾನಲ್ಲುಗಳು. ೨೪/೭ ವಟವಟ. ನಡುವಲ್ಲೊಂದು ಹಾಡು ಸಿಗುತ್ತದೆನ್ನುವುದು, ’ಇದು ರೇಡಿಯೊ ಎಂಬುದಕ್ಕೆ ಸಾಕ್ಷಿ ಮಾತ್ರ’. ಅವಕಾಶವಾದಿಗಳ ನಗರದಲ್ಲಿ ಈ ಎಫೆಮ್ಮುಗಳು ಆಕಾಶವಾದಿಗಳು ಅಷ್ಟೆ! ಮಾಧ್ಯಮದ ಯಾವ ಗುಣ ಲಕ್ಷಣಗಳನ್ನೂ ಮೈಗೂಡಿಸಿಕೊಳ್ಳದೆ, ಕೇವಲ ಆರ್ಥಿಕ ಹಿತಾಸಕ್ತಿಯನ್ನು ಮಾತ್ರ ಬೆಳೆಸಿಕೊಂಡು, ಪೋಷಿಸಿಕೊಂಡು ಬರುತ್ತಿರುವ ಭಾರತೀಯ ಎಫೆಮ್ ಚಾನೆಲ್ಲು ಜನಕರಿಗೆ ಗರಿಷ್ಟ ಎರಡು ನಿಮಿಷದ ಉದ್ಧಂಡ ನಮಸ್ಕಾರವಿರಲಿ. ಕಡಿಮೆಯಾಗುತ್ತ ಹೋಗುವ ಹಸಿರಿನ ನಡುವೆ, ನಾನೂ ಪಕ್ಕಾ ಹಸಿರೆ ಎನ್ನುತ್ತ ಬೆಳೆಯುವ ಕಳೆಗಳಂತೆ ಇವು..

ಪಕ್ಕಾ ಭಾರತೀಯ ಚಾನಲ್ಲುಗಳು ಅನ್ನುವಾಗ- ಈ WorldSpace, Liberty Media, Sirius XM ಮುಂತಾದ ಚಾನಲ್ಲುಗಳು ನೆನಪಿಗೆ ಬರುತ್ತವೆ. ದಿವಾಳಿಯೆದ್ದ WorldSpace, ದಿವಾಳಿಯ ನಂತರ ಸುದ್ದಿಗೆ ಬಂದ Liberty/Sirius ಮುಂತಾದ ಸಂಸ್ಥೆಗಳು ಇವತ್ತಿಗೂ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರೆ ಅದಕ್ಕೆ ಮೂಲ ಕಾರಣ- ಅಲ್ಲಿಂದ ಹೊರಟ ಉತ್ಕೃಷ್ಟ ಸಂಗೀತ. ಉತ್ತಮ ಹಾಡುಗಳು. ಅಲ್ಲೊಂದು ವೈವಿಧ್ಯತೆ ಇತ್ತು. ಆಯ್ಕೆಗೆ ಹಲವು ಅವಕಾಶಗಳಿದ್ದವು. ಶೇಕಡಾ ನೂರರಷ್ಟು ಡಿಜಿಟಲ್ ಗುಣಮಟ್ಟ ಇತ್ತು. ಎಲ್ಲಕ್ಕಿಂತ ಹೆಚ್ಚು– RJಗಳ ಅರಚುವಿಕೆ, ಜಾಹೀರಾತುಗಳ ಅಬ್ಬರವಿರಲಿಲ್ಲ.

ಮೂಲ ವ್ಯತ್ಯಾಸವಿರುವುದೇ ಆಯ್ಕೆಯಲ್ಲಿ. ಎಫೆಮ್ಮುಗಳ ಸೇವೆ ವರ್ಷ ಪೂರ್ತಿ ಬಿಟ್ಟಿ ಬೀಳುತ್ತದೆ ಬಾಗಲಲ್ಲಿ. ಕನಿಷ್ಟ ಎರಡೂವರೆ ರೂಪಾಯಿಯನ್ನು ಸಹ ಕೊಡುವ ಅವಶ್ಯಕತೆಯಿಲ್ಲ. (ಅದಕ್ಕಿಂತ ಜಾಸ್ತಿ ರದ್ದಿ ಸಿಗುವ ದುರಾಸೆಯೂ ಇಲ್ಲ ಬಿಡಿ) ಐದು ನಿಮಿಷ ಹಾಡು, ಹತ್ತು ನಿಮಿಷ ಆರ್ಜೆಗಳ ಅತಿರೇಕಗಳ ಜೊತೆ ಹದಿನೈದು ನಿಮಿಷ ಜಾಹೀರಾತು ಪ್ರಸಾರ ಮಾಡುವಾಗ ಎಲ್ಲಾ ಚಾನುಲ್ಲಗಳ ಪೂರ್ತಿ ಗಮನವಿರುವುದು- ಜಾಹೀರಾತಿನ ಮೇಲಷ್ಟೆ. ಯಾವ ಹಾಡು, ಯಾರ ಹಾಡು, ಯಾರ ಸಂಗೀತ.. ಅದೆಲ್ಲ ಯಾರಿಗೆ ಬೇಕು? ಹಾಡು ಮಾತ್ರ ಜಾಹೀರಾತಿನ ಅಲೆಗಳ ನಡುವೆ ಆಗಾಗ ಸಿಗುವ ಸಿಹಿ ಅಪಘಾತಗಳಷ್ಟೆ.

ಇಂದಿಗೆ, ಎಫೆಮ್ಮುಗಳಿಗೆ- ಅವರ ಭಯಂಕರ Schedule ಗಳಿಗೆ ನಾವು ಸೀಮಿತವಾಗಿದ್ದರೆ ಅದಕ್ಕೆ ಕಾರಣವೂ ಸಹ ನಾವೇ.

ಎರಡು ಸಾವಿರದಷ್ಟು ಬಂಡವಾಳ, ಹದಿನೆಂಟುನೂರು ರೂಪಾಯಿ ವಾರ್ಷಿಕ ಚಂದಾ ಕಟ್ಟಿಬಿಟ್ಟರೆ ದಿನಪೂರ್ತಿ ಕೇಳಬಹುದಾದ ಸಂಗೀತವನ್ನು ಸೀದ ಚಟ್ಟಕ್ಕೆ ಹತ್ತಿಸಿ ವರ್ಷದ ಮೇಲೂ ಒಂದು ತಿಂಗಳಾಯಿತು. ವರ್ಲ್ಡ್ ಸ್ಪೇಸ್ ಕೇಳಿದ್ದೇ ಅಷ್ಟಲ್ಲವಾ? ತಾನು ದಿವಾಳಿಯೆದ್ದಿದ್ದರೂ ಕೆಲಕಾಲ ಸೇವೆ ಮುಂದುವರೆಸಿದ ಕಂಪನಿಯನ್ನು ಬದುಕಿಸಿಡುವ ಆಯ್ಕೆ ನಮ್ಮದೇ ಆಗಿತ್ತಲ್ಲವಾ? ಜಗತ್ತಿನ ಮೂರರಲ್ಲಿ ಎರಡು ಭಾಗ ತಲುಪುತ್ತಿತ್ತು ವರ್ಲ್ದ್ಸ್ಪೆಸ್- With its own satellite. With six beams. ಒಂದೊಂದು beam ೮೦ ಚಾನೆಲುಗಳನ್ನು ಪ್ರಸಾರ ಮಾಡುವ ಶಕ್ತಿ ಹೊಂದಿದೆಯೆಂದು ಅವರ Web ಈಗಲೂ ಹೇಳುತ್ತ ಕುಳಿತಿದೆ. ಆದರೆ, ಅವರಿಗೀಗ ಕೇಳಿಸುವ ಚೈತನ್ಯ ಕಳೆದುಕೊಂಡಿದ್ದೇವೆಂದು ಸಾರಿ, ಕೈತೊಳೆದುಕೊಂಡು ಎರಡನೆ ವರ್ಷ. ನೂರಾನಲವತ್ತಕ್ಕೂ ಅಧಿಕ ದೇಶಗಳಲ್ಲಿ ಅವರು ಕೇಳಿಸಿದ ಸಂಗೀತ ಎಲ್ಲಿ? ಈ ಪ್ರಾದೇಶಿಕ ಚಾನೆಲ್ಲುಗಳ ಇವತ್ತಿನ ಅಬ್ಬರ ಎಲ್ಲಿ? ನಮಗೆ ಒಳ್ಳೆಯದು ಬೇಕು. ಆದರದು ಹೇಗೆ ಸಿಗಬೇಕು ಅನ್ನುವುದರ ಕುರಿತು ಯಾವ ಕಾಳಜಿಯೂ ಇಲ್ಲವಾಗಿದೆಯಾ? ಅಥವಾ ಅಂಥದ್ದೊಂದು ಕಾಳಜಿ, ಆಸಕ್ತಿ, ಸಿದ್ಧತೆ ಇರುವವರನ್ನು ಏಳದಂತೆ ಮಲಗಿಸಿಬಿಡುತ್ತದಾ ಇಂದಿನ ’Revenue Generating Module’ಗಳು? ನಾವು ನಾವೇ ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗುವ ಸುದ್ದಿ ಬಿಡಿ, ಕನಿಷ್ಟ ಪಕ್ಷ ಆಗಲೇಬೇಕಾದ ಬದಲಾವಣೆಗಳಾದರೂ ಆಗಬಹುದಾ?

ಅದು ಸಾಧ್ಯವಿಲ್ಲದ ಮಾತೇ ಇರಬಹುದು..

ಇಷ್ಟದವರಿಗೆ ಉಡುಗೊರೆಯಾಗಿ ಕೊಟ್ಟೆ, ದಿನದ ೨೪ ಗಂಟೆಯೂ ಹಚ್ಚಿಟ್ಟೇ ಕಳೆದೆ, ನಿಂತಲ್ಲಿ, ಕುಳಿತಲ್ಲಿ, ಮಲಗಿದಲ್ಲಿ, ಸಾಧ್ಯವಾದಲ್ಲೆಲ್ಲ ಕೇಳಿಸಿಕೊಂಡೆ, ಕನಿಷ್ಟ ನಾಲ್ಕು ಜನರಿಗೆ ಕೊಡಿಸಿದೆ…. ಎಂಬೆಲ್ಲ ಮಾತುಗಳೂ ಮುಗಿದು, ಈಗ, ಅದೊಂದು ಸಿಸ್ಟಮ್ ಹಾಗೇ ಬಿದ್ದಿದೆ, ನೆನೆಸಿಕೊಂಡರೆ ಇನ್ನೂ ಸಂಕಟ, ಬಾಕಿ ಉಳಿದ ಹಣ ಹಾಗೆ ಇರಲಿ- ಉತ್ಕೃಷ್ಟ ಸೇವೆಗೆ ಸಲ್ಲಲಿ ಅದು, ನನ್ನದೇ ಒಂದು ಭಾಗ ಕಳೆದುಕೊಂಡಂತಾಗಿದೆ…. ಇತ್ಯಾದಿ ಮಾತುಗಳು ಕೇಳಿಸುತ್ತವೆ. ಅಲ್ಲಲ್ಲಿ. ಅಷ್ಟು ಮಾತೂ ಕೇಳಿಸದ ಜಾಗದಲ್ಲೆಲ್ಲ ಎಫೆಮ್ಮೇ ಎಫೆಮ್ಮು!

ಸಹಿಸಿಕೊಳ್ಳಲೇಬೇಕು, ಈಗ ಸಿಗುತ್ತಿರುವ ಪುಕ್ಕಟೆ ಮನರಂಜನೆಯನ್ನು. ಸದಸ್ಯರಾಗಿದ್ದವರೆಲ್ಲ, ವರ್ಲ್ದ್ ಸ್ಪೇಸ್ ಉಳಿಸಿಹೋಗಿರುವ ಖಾಲಿ ಡಬ್ಬಿಯನ್ನು ಸವರಿ ಕನಿಷ್ಟ ಒಂದು ನಿಮಿಷ ಮೌನಾಚರಣೆ ಮಾಡಬೇಕು..

ಸಜದಾ..

 

ಕನಿಷ್ಠ ಹತ್ತು ಹಿಂದಿ ಚಿತ್ರಗೀತೆಗಳು ಇಷ್ಟವಾಗಿವೆ.  ಹಾಡುಗಳ ಜೊತೆ ಜೊತೆಗೆ ಸಂಗೀತ ನಿರ್ದೇಶಕರು ಹಾಗೂ ಗೀತ ರಚನಕಾರರು

ಲೆಕ್ಕ ಹಾಕಿ ಹೇಳುವುದಾದರೆ ಈ ಹತ್ತು ಹಾಡುಗಳು ಹತ್ತು ಬೇರೆ ಬೇರೆ ಸಿನೆಮಾಗಳ ಕೊಡುಗೆ. ಎಲ್ಲಾ ಸಿನೆಮಾಗಳನ್ನೂ ನೋಡುವ ಹಂಬಲವಿದ್ದರೂ, ಕೇವಲ ಮೂರೇ ನೋಡಿದ್ದು. ಬಾಕಿ, ಕೇಳಿದ್ದು.  ಉಳಿದಂತೆ, ಅನ್ಯ ಭಾಷೆಯ ಬಹಳಷ್ಟು ಸಿನೆಮಾಗಳನ್ನು ನೋಡಿದರೂ, ಅವೆಲ್ಲ ‘ಹಾಡು ರಹಿತ’ವಾದವು.

ಇಲ್ಲ ಎನ್ನಲಾಗದಂತೆ, ನಮ್ಮಲ್ಲೂ ಹಾಡುಗಳಿಲ್ಲದ ಚಿತ್ರಗಳಿವೆ. ಆದರೆ, ಹಾಡುಗಳಿಲ್ಲದ ಸಿನೆಮಾಗಳು ಇವತ್ತಿಗೂ ಸಪ್ಪೆ ನಮಗೆ. ಒಂದಲ್ಲ, ಎರಡಲ್ಲ ಡಜನುಗಟ್ಟಲೆ ಹಾಡು ಬೇಕು ನಮಗೆ ಪ್ರತಿ ಸಿನೆಮಾದಲ್ಲಿ. ಅಥವಾ, ಅಷ್ಟು ಹಾಡುಗಳನ್ನು ತುರುಕಿ ನಮ್ಮ ಮುಂದಿಡಲಾಗುತ್ತದೆ. ಸಿನೆಮಾ ಮಾಡುವವರ ಆಸೆಯೋ ಇಲ್ಲಾ ನೋಡುವವರ ಬೇಡಿಕೆಯೋ ಎಂಬ ವಿಷಯದ  ನಡುವೆ ಲೆಕ್ಕವಿಲ್ಲದಷ್ಟು ಸಿನೆಮಾಗಳೂ, ಅದರೊಳಗಿಂದ ಸರಾಸರಿ ಆರೆಂಟು ಹಾಡುಗಳೂ ಹೊರಬರುತ್ತವೆ.   

ನೋಡುವವರ/ಕೇಳುವವರ ಕರ್ಮ!!!

ಆದರೆ, ಬರುವ ಎಲ್ಲಾ ನಮೂನೆಯ ಸಿನೆಮಾಗಳ Output ಏನೇ ಇರಲಿ, ಅದರೊಳಗಿನ ಎಲ್ಲಾ ಹಾಡುಗಳು ಹೇಗೆ ಇರಲಿ – ಒಟ್ಟಾರೆ ಸಿನೆಮಾ, ಅದಕ್ಕೆ ತಕ್ಕ ಹಾಡಿನ ತಯಾರಿಗಳನ್ನು ಮೀರಿ ಕೆಲವೊಂದು ಹಾಡುಗಳು ಇಷ್ಟವಾಗಿಬಿಡುತ್ತವೆ. ಚಿತ್ರ ಉಳಿಯದಿದ್ದರೂ, Overall Impact ಸರಿಯಾಗಿಲ್ಲಡಿದರೂ – ಯಾವುದೋ ಒಂದು ಭಾಗ ಬೆಳೆದುಬಿಡುತ್ತದೆ!  ಹಾಗಾಗಿಯೇ, ಈ ಹಲವು ಸಾಧ್ಯತೆಗಳ ಜಗತ್ತಿನಲ್ಲಿ ಹೆಕ್ಕಿಕೊಳ್ಳಲು ಬಹಳಷ್ಟು ಸಿಗುವುದು. ಒಂದು ಜೊಳ್ಳು ಸಿನೆಮಾದಿಂದ ಒಬ್ಬ ಉತ್ತಮ  ಕಲಾವಿದ, ಸಂಗೀತ ನಿರ್ದೇಶಕ, ಅದ್ಭುತ ಹಾಡುಗಾರ, ಒಂದೊಳ್ಳೆಯ ನರ್ತಕಿ, ಒಬ್ಬ ಸಿನೆಮಾಟೊಗ್ರಾಫರ್… ಏನೆಲ್ಲಾ ಸಿಗಬಹುದು.   

ಸಿನೆಮಾ ಯಾವುದೆಂದು ನೆನಪಿಲ್ಲದಿದ್ದರೂ, ನಮಗಿಂದು ಕಿಶೋರ್ ಬಹಳ ಹತ್ತಿರದವನು ಎಂಬಷ್ಟು ಸಲುಗೆಯಿದೆ. ರಫಿ ಇಂದಿಗೂ ಫ್ರೆಶ್. ಮುಕೇಶ್ ಪಕ್ಕದಲ್ಲೇ ಉಳಿದುಬಿಡುತ್ತಾನೆ.  ಅವರ ಜೊತೆಗೆ ಲತಾ, ಆಶಾ. ಅದೇ ಸಮಯಕ್ಕೆ,  ಆಗಾ ಕಾಶ್ಮೀರಿ, ಪಿ ಎಲ್ ಸಂತೋಷಿ, ಕಿದಾರ್ ಶರ್ಮಾ ಮುಂತಾದವರ ಪರಿಚಯ – ಸಾಮಾನ್ಯವಾಗಿ – ಇಲ್ಲದೆ ಹೋದರೂ ಅವರೆಲ್ಲರನ್ನೂ ಸೇರಿಸಿ ಬರ್ಮನ್, ಮಜರೂಹ್ ಸುಲ್ತಾನಪುರಿ, ಗುಲ್ಜಾರ್, ಆನಂದ್ ಬಕ್ಷಿ, ಜಾವೇದ್ ಅಕ್ತರ್ ಮುಂತಾದವರು ತಮ್ಮ ಕೆಲಸಗಳಿಂದಲೇ ಉಳಿದುಬಿಡುತ್ತಾರೆ.  ಗುಲ್ಜಾರ್, ಈ ವಯಸ್ಸಿಗೂ ‘ಬೀಡಿ ಜಲಾಯ್ಲೇ ಜಿಗರಸೆ ಪಿಯಾ..’ ಎಂದು ಬರೆಯುತ್ತಾರೆ.

 ‘ಚಿತ್ರಹಾರ್’ ಸಮಯ ಮುಗಿದಿದೆ. ಆದರೂ, ಅದಕ್ಕೂ ಮೊದಲು ಹಾಗೂ ಆ ಸಮಯದಲ್ಲಿ ಸಿಕ್ಕ ಹಾಡುಗಳು ಮತ್ತು ಹೆಸರುಗಳು ಇವತ್ತಿಗೂ ಅಂದಿನಷ್ಟೇ ತಾಜಾ.  ಉಳಿದಂತೆ ಎಂಬತ್ತು ತೊಂಬತ್ತರಲ್ಲಿ ಬಂದ ಹಾಡುಗಳಲ್ಲೂ ನೆಪಪಿಟ್ಟುಕೊಳ್ಳುವ ಸಂಗತಿಯಿದ್ದರೂ, ಅವು ಹಿಂದಿನ ಹಾಡುಗಳ ಪ್ರಭಾವದಿಂದ ಹೊರಬಂದು ಇಂದಿನ ಬಹಳಷ್ಟು ‘ಅಸಾಮಾನ್ಯ’  ಹಾಡುಗಳಿಗೆ ಮುನ್ನುಡಿಯಂತಿದ್ದವು ಅಂದರೂ ತಪ್ಪಾಗಲಾರದು.  ಬಿಡಿ, ಬಹಳ ವ್ಯಾಪ್ತಿ ಇರುವ debatable  ವಿಷಯ ಅದು.   

ಸಧ್ಯಕ್ಕೆ, ಯಾರ ಕುರಿತಾಗಿಯೂ ಅಥವಾ ಯಾವ ಹಾಡಿನ ಕುರಿತಾಗಿಯೂ  ವಿವರಣೆಗೆ ಹೋಗುವಂತಿಲ್ಲ. ಇತ್ತೀಚಿಗೆ ಕೇಳಿಸಿಕೊಳ್ಳುತ್ತಿರುವ ಕೆಲವು ಒಳ್ಳೆಯ ಹಿಂದಿ ಹಾಡುಗಳ ಕುರಿತು note ಮಾಡುವಾಗ ಸಾಂದರ್ಭಿಕವಾಗಿ ಹೇಳಿದ್ದು ಅಷ್ಟೇ!  

ಹೆಚ್ಚಾಗಿ ಪ್ರತಿಯೊಬ್ಬರೂ ಕೇಳಿರಬಹುದಾದ ಹಾಡುಗಳೇ ಇವು.  ಆದರೆ, ಉಳಿದೆಲ್ಲ ಹಾಡುಗಳಿಗಿಂತ ವಿಭಿನ್ನವಾಗಿವೆ. ಹಳೆಯ ಹಾಡುಗಳನ್ನು ನೆನಪಿಸುವಂತಿದೆ. ಹೊಸ ಸ್ಪರ್ಶದೊಂದಿಗೆ.  ಒಳ್ಳೆಯ ಹಾಡುಗಳನ್ನು ಹುಡುಕಿಕೊಳ್ಳುವ Turbulant Exercise ನಡುವೆ, ಸಿನೆಮಾದ ಹಾಡಾಗಿಯೂ, ಪ್ರತ್ಯೇಕವಾಗಿಯೂ ಗಟ್ಟಿ ನಿಲ್ಲಬಹುದಾದ ಹಾಡುಗಳು ಅವು. ಅವುಗಳಲ್ಲೊಂದು lyrical beauty,  ಸುಂದರ ಕಂಠ ಇದೆ. ಉತ್ತಮ ಸಂಯೋಜನೆಯಿದೆ.  

ಉಳಿದ ಎಲ್ಲ ಪ್ರಕಾರಗಳಿಗಿಂತ ಹೊರತಾಗಿ ನಿಲ್ಲುವ ಆದರೆ ಅವುಗಳನ್ನೂ ತನ್ನದಾಗಿಸಿಕೊಳ್ಳುವ ಸಿನೆಮಾ ಹಾಡುಗಳಲ್ಲಿ ನಾವು ಮಾಧುರ್ಯವನ್ನು ಹುಡುಕಬಹುದು. Romance ಕಾಣಬಹುದು. ಅಲ್ಲೊಂದು soul searching ಇರಬಹುದು. ವಿಷಾದ ಬರಬಹುದು.  ಅವುಗಳಿಗೆ (ಒಳ್ಳೆಯದಿದ್ದಲ್ಲಿ) ನಮ್ಮದಾಗುವ ಶಕ್ತಿಯಿದೆ.  

ಹುಡುಕಿ ಹೊರಟರೆ, ಮತ್ತದೇ ಅಕ್ತರ್, ಗುಲ್ಜಾರ್ ಸಿಗುತ್ತಾರೆ. ಪ್ರಸೂನ್ ಜೋಷಿ ಕಾಣುತ್ತಾರೆ. ಒಬ್ಬ ನಿರಂಜನ್ ಅಯ್ಯಂಗಾರ್ ದೊರಕುತ್ತಾನೆ ಈ ಹೊಸ ಹಾಡುಗಳಲ್ಲಿ. ಅವರ ಜೊತೆ ಇಂದಿನ composerಗಳು ಹಾಗೂ finally ಹಾಡನ್ನು ನಮಗೆ ಮುಟ್ಟಿಸುವ ಗಾಯಕರು ಸಿಗುತ್ತಾರೆ.     ಓರೆ ಮನವಾ ತು ತೊಹ್ ಬಾವರಾ ಹೈ… ಎಂದು ಆರಂಭವಾಗುವ ‘ಇಕ್ತಾರಾ’ ಹಾಡಿರಬಹುದು, ಡೆಲ್ಲಿ 6ನ ‘ಭೋರ ಭಯಿ..’ ಎಂಬ ಗೀತೆಯಿರಬಹುದು, ವಿಭಿನ್ನ ಹಾಗೂ ಯಶಸ್ವಿ ಪ್ರಯತ್ನವಾದ ‘ದಿಲ್ ತೊಹ್ ಬಚ್ಚಾ ಹೈ ಜಿ..’ ಇರಬಹುದು. ಪ್ರತಿಯೊಂದೂ ನೆಲೆ ಕಂಡುಕೊಳ್ಳುವ ಹಾಡುಗಳಾಗುವ ಎಲ್ಲಾ ಲಕ್ಷಣವನ್ನೂ ತೋರಿಸುತ್ತವೆ. 

ಸಜದಾ (Worship) ಹಾಡನ್ನೇ ನೋಡಿ.  ನಿರಂಜನ್ ಅಯ್ಯಂಗಾರ್ ಬಹಳ ಸೂಕ್ಷವಾಗಿ ಹಾಡನ್ನು ಕಟ್ಟಿಕೊಡುತ್ತಾರೆ.  S E L  ಸಂಯೋಜಿನೆ ಅದಕ್ಕೊಂದು ಟಚ್ ನೀಡುತ್ತದೆ. ನಂತರದಲ್ಲಿ ಅದಕ್ಕೊಂದು ಬಣ್ಣ/ಗರಿ  ಕೊಡುವ ಕೆಲಸ ಮಾಡಿದ್ದು – ರಾಹತ್ ಫತೆ ಅಲಿ ಖಾನ್, ಶಂಕರ್ ಮಹಾದೇವನ್ ಹಾಗೂ ರಿಚಾ ಶರ್ಮಾ.  

ಹಳೆಯ ಹಾಡುಗಳನ್ನು ಕೆಲವು ದಿನಗಳ ಮಟ್ಟಿಗೆ ಬದಿಗಿಟ್ಟು, ಒಂದಿಷ್ಟು ಒಳ್ಳೆಯ ಹೊಸ ಹಾಡುಗಳ ಹಿಂದೆ ಬಿದ್ದಿದ್ದೇನೆ. ಮನೆಯಲ್ಲಿದ್ದಷ್ಟೂ ಹೊತ್ತು ಆಯ್ದ ಹತ್ತು ಹಾಡುಗಳು repeat ಆಗುತ್ತಲೇ ಇರುತ್ತವೆ.

ಮತ್ತೆ ಶುರು…

ಬರೆಯುವ ಹುಕಿ ಬಂದದ್ದೆ ಕೀಲಿಮಣೆ ಮುಂದಿಟ್ಟುಕೊಂಡು ಕುಳಿತಿದ್ದೇನೆ.  ಬೀಗ ಹಾಕಿ ಎಸೆದಿದ್ದ ಚಾವಿ ದೂರ ಎಲ್ಲೂ ಹೋಗದೆ ಕಾಲ ಬುಡಕ್ಕೆ ಬಿದ್ದಿದ್ದು ತಿಳಿಯಲು ಹೆಚ್ಚು ಇಷ್ಟು ಹೊತ್ತು ಬೇಕಾಯಿತು!!! ಪರದೆಯ ಮುಂದಿನ ಪೇಜಿನಲ್ಲಿ ಸಿಕ್ಕ ಖುಷಿಯ ಹಿಂದೆ ಸಣ್ಣದೊಂದು ಅಸಮಾಧಾನ ಸುಳಿದುಹೋದ ಬೆನ್ನಲ್ಲೇ ಬ್ಲಾಗಿಂಗು ಬಿಟ್ಟು ಕೆಲವಷ್ಟು ಬ್ಲಾಗುಗಳನ್ನು ಓದುವುದಷ್ಟಕ್ಕೆ ಸೀಮಿತವಾಗಿರಿಸಿಕೊಂಡಿದ್ದೆ.  ಕೈಗೆ ಸಿಗದ ಸಮಯ ಹಾಗೂ ಕೆಲಸದ ಒತ್ತಡದ ನಡುವೆ ಓದಲೆಬೇಕೆನ್ನಿಸುವ ಹಲವು ಬ್ಲಾಗುಗಳು ಮಾತ್ರ ಮುಂದಿದ್ದವು. 
 
ಇನ್ನು ಗೀಚುವುದೂ ಸೇರಿಕೊಳ್ಳುತ್ತದೆ!! ಏನೂ ಕಷ್ಟವಿಲ್ಲದೆ ತೆರೆದುಕೊಂಡಿದೆ ಬೀಗ ಈಗ.  ಮನಸಿಗೆ ಬಂದಿದ್ದು (ಬರೆದು) ಬಿಸಾಕಲು ಏನು ಕಷ್ಟ? ಎಷ್ಟು ಹೊತ್ತು?  
 
ಇಷ್ಟು ದಿನಗಳಲ್ಲಿ ಏನಿಲ್ಲವೆಂದರೂ ಹತ್ತು ಪುಸ್ತಕಗಳು ಓದಿಸಿಕೊಂಡವು. ಒಂದೆರಡು ಓಡಿಸಿಕೊಂದವು. ಮತ್ತೊಂದೆರಡು ಪುಸ್ತಕಗಳಿಗೆ ಕೆಂಪು ಹೂವು – ಕಡ್ಡಿ ಹಚ್ಚಿ ಪೂಜಾ ಸ್ಥಾನ ಸೇರಿಸಿದ್ದೇನೆ.  ಒಟ್ಟಿನಲ್ಲಿ ಓದು ಸರಾಗ.  ಓಡದಿದ್ದರೂ ಕನಿಷ್ಟಪಕ್ಷ ನಡೆಯುತ್ತಿದೆ. 
 
ಪುಸ್ತಕಗಳ ವಿಷಯ ಬಿಟ್ಟು ನೋಡಿದರೆ ಇತ್ತೀಚಿಗೆ ಮಾಡಿದ ಮತ್ತೊಂದು ಕೆಲಸ ಸಿನೆಮಾ ನೋಡಿದ್ದು. ಒಂದರ ಹಿಂದೊಂದು ಸಿನೆಮಾಗಳು ಸಾಲಾಗಿ ನೋಡಿಸಿಕೊಂಡವು.  ಒಂದೆರಡು ಸಿನೆಮಾಗಳು ನೋಡಿಸಿ-ಕೊಂದವು. ಪ್ರತಿಯೊಂದು ಸಿನೆಮಾಗಳೂ ಮಾತನಾಡಿಸಿಕೊಂಡವು. 
 
ಹಾಗೆ, ಇತ್ತೀಚಿನ ಸಿನೆಮಾಗಳ ’ಚಮತ್ಕಾರ’ ಹಾಗೂ ’ಬಲತ್ಕಾರ’ಗಳನ್ನು ನೋಡುತ್ತ, ಜಸ್ಟ್ ಮಾತ ಮಾತಲ್ಲಿ ಅವರಿವರ ಜೊತೆ ಹರಟುತ್ತ, ಮೂರಲ್ಲ ಮೂವತ್ತು ಈಡಿಯಟ್ಗಳಿರಬೇಕಿತ್ತು ಎಂದು ಹಾರಿಸುತ್ತ, ಇಲ್ಲೂ ಒಬ್ಬ ’ಚತುರ’ನಂತವನಿದ್ದಾನೆ ಎಂದು ಜೋಕುತ್ತ, ಒಬ್ಬ ಅಮೀರನನ್ನು-ಇನ್ನೊಬ್ಬ ಗರೀಬನನ್ನೂ ಹೊಗಳುತ್ತ, ಔರೊ ಪಾತ್ರಕ್ಕೆ ಬಚ್ಚನ್ನೇ ಯಾಕಾಗಬೇಕಿತ್ತು ಅಂದವರನ್ನು ಒಪ್ಪುತ್ತ, ರಾಂಚೋಡದಾಸ್ ಶ್ಯಾಮಲ್ದಾಸ್ ಚಂಚಡ್ ಇಂಡಿಯಾದಲ್ಲಿ (ಭಾರತ ಅಂದ್ರೆ ಸರಿಯಾಗಲ್ಲ ಬಿಡಿ) ಲಕ್ಷಕ್ಕೊಬ್ಬನೂ ಸಿಗಲಿಕ್ಕಿಲ್ಲ ಎಂದು ತಲೆ ತಿನ್ನುತ್ತ… ನೋಡಿದ ಚ ಲ ನ ಚಿ ತ್ರ ಗಳ ಕುರಿತು ನಾಕಕ್ಷರ ಬರೆದುಬಿಡಬೇಕೆಂಬ ಹುಕಿ ಬೆಳೆದುಬಿಟ್ಟಿತು… ಎಂದು ಬರೆದಿಟ್ಟ ನಾಕು ಸಾಲುಗಳು ಸಿಕ್ಕಿವೆ ಈಗ. ಅದನ್ನು ಹಾಗೆ ಬಳಸಿಕೊಳ್ಳುವ ಮನಸಾಗಿದೆ. 
 
ಈಗ ಬಳಸಿಕೊಳ್ಳಬೇಕಾದ ಸಾಲುಗಳು ಹೀಗಿವೆ:
 
ಬರೆಯದೆ ಬಹಳ ದಿನವಾದ ಕಾರಣಕ್ಕೋ ಅಥವಾ ಜಾಗರಣೆಗೆ ಪೂರ್ವ ತಯಾರಿಯೋ ಎಂಬಂತೆ ನಡು ಮಧ್ಯಾನ್ಹದ ಹೊತ್ತಿನಲ್ಲಿ ಬಹಳ ದಿನಗಳ ನಂತರ ಸಿಕ್ಕ ಖಾಲಿ ಸಮಯವನ್ನು ಬರೆದು ಬಿಸಾಕುವ ಅಭೂತಪೂರ್ವ ಕೆಲಸಕ್ಕೆ ಮೀಸಲಿಡಬೇಕು ಅಂದುಕೊಂಡಾಗ ಎದುರಿಗಿದ್ದುದು, ’ಹಾದರಗಿತ್ತಿ ಅವ್ಳು, ಹೋದ್ರೆ ಬರುದೇ ಇಲ್ಲ ನೋಡು. ಯಾರೋ ಕ್ಯಾಬರೆ ಮಾಡು ಹುಡ್ಗಿ ತಂದು ನಂಗೆ ಕಟ್ಟಬಿಟ್ಟರೆ…’ ಎಂದು ಕಂಟ ಭರ್ತಿ ಕುಡಿದು, ಊರಿಂದ ಫೋನಿಸಿ ದೂರು ಕೊಟ್ಟ ’ರಾಮ’ ಅನ್ನುವ ಆಸಾಮಿಯ ಪ್ರವರಗಳು, Comparitive Analysis ಹಾಗೂ ಕುದುರೆ ಲದ್ದಿ’ ಎಂಬ ಹೊಚ್ಚ ಹೊಸ ಥಿಯರಿ, ಹಾಗೂ ಇತ್ತೀಚಿಗೆ ನೋಡಿದ ಸಿನೆಮಾಗಳು. ಸಿನೆಮಾ ಆಯ್ದುಕೊಳ್ಳುವ ಸಾಹಸ ಮಾಡಿ ಮುಂದುವರೆಯುತ್ತಿದ್ದೇನೆ. ಒಪ್ಪಿಸಿಕೊಳ್ಳಿ:
ಇತ್ತೀಚಿನ ಹೆಚ್ಚಿನ ಸಿನೆಮಾಗಳನ್ನೂ, ಅವುಗಳ ಕುರಿತ ಬರಹಗಳನ್ನೂ ಓದಿ, ನೋಡಿದ ಎಲ್ಲ ಸಿನೆಮಾಗಳ ’ಮಿಸಳ್ಭಾಜಿ’ ನೆನಪನ್ನು ಎದುರಿಗಿಟ್ಟುಕೊಂಡರೆ ಬಾಕಿ ಎಲ್ಲಾ ಚತುರರರಿಗಿಂತ ಇಲಿ ಹಿಡಿಯುವ ಪ್ರಸಂಗದ ’ಎಲಿಪತ್ತಾಯಂ’ ಎಂಬ ಅಡೂರ್ ಗೋಪಾಲಕೃಷ್ಣರ ಚಿತ್ರ ಎದುರು ಬಂತು. ಅದೇ ನನ್ನ ವಸ್ತು ಎಂದುಕೊಂಡರೆ, ಅದನ್ನೂ ಮೀರಿ ಇನ್ನೊಂದು ಮೂವತ್ನಾಲ್ಕು ನಿಮಿಷದ ಚಿತ್ರ ತಲೆಗೆ ಬಂತು. ಆದಕಾರಣ, ಎಲಿಪತ್ತಾಯಂ ಹಾಗೂ, Rat Trap ಎಂಬ ಅದರ ಮತ್ತೊಂದು ರೂಪವನ್ನೂ ಮತ್ತೆಂದಾದರೂ ತಡಕಿಕೊಳ್ಳೋಣ ಎಂಬ ವಿಚಾರದೊಂದಿಗೆ ವಿಷಯಕ್ಕೆ ಬರುತ್ತೇನೆ. ನೋಡಿಲ್ಲವಾದರೆ ಈ ಚಿತ್ರವನ್ನೊಮ್ಮೆ ನೋಡಿ ನೀವು. ಅದರ ಕುರಿತು ಬರೆದ ನಂತರವಷ್ಟೇ ನೋಡಬೆಕೆಂದೇನೂ ಇಲ್ಲವಲ್ಲ? ಅಷ್ಟಕ್ಕೂ, ನೀವು ನೋಡಿರದ ಸಿನೆಮಾವೇನೂ ಆಗಿರಲಿಕ್ಕಿಲ್ಲ ಅದು…
 
ನಾನೀಗ ಹೇಳಬೇಕಿರುವುದು ಮೂವತ್ನಾಲ್ಕು ನಿಮಿಷಗಳ ಫ್ರೆಂಚ್ ಸಿನೆಮಾ ಕುರಿತು. Albert Lamorisse’ ಎಂಬ ನಿರ್ದೇಶಕ ತಾನೇ ಚಿತ್ರಕಥೆ ಬರೆದು, ತನ್ನಿಬ್ಬರು ಚಿಕ್ಕ ಮಕ್ಕಳನ್ನೇ ಹಾಕಿಕೊಂಡು ತಯಾರಿಸಿದ ಮಕ್ಕಳಲ್ಲದವರೂ ನೋಡಲೇಬೇಕಾದ ಮಕ್ಕಳ ಸಿನೆಮಾ ಅದು.  Oscar, cannes ಪ್ರಶಸ್ತಿಗಳನ್ನು ಪಡೆದ ೧೯೫೬ರ ಸಣ್ಣ ಚಿತ್ರ ಅದು. ಸಂಗೀತವಿದೆ ಅಲ್ಲಿ. ಮಾತಿಗೆ ಹೆಚ್ಚು ಅವಕಾಶವಿಲ್ಲ. ಮಕ್ಕಳಿದ್ದಾರೆ, ದೊಡ್ಡವರಿದ್ದಾರೆ ಆದರೆ ಅವರೆಲ್ಲರನ್ನೂ ಮೀರಿದ ’ಕೆಂಪು ಬಲೂನ್’ ಇದೆ. ಅದಕ್ಕೊಬ್ಬ ಜೊತೆಗಾರ ಹುಡುಗನಿದ್ದಾನೆ – ಪಾಸ್ಕಲ್ ಅವನ ಹೆಸರು. ತಾನು ಶಾಲೆಗೆ ಹೊರಟ ಸಮಯದಲ್ಲಿ ಸಿಕ್ಕ ಈ ಹೊಸ ಮಿತ್ರ, ತನ್ನಂತೇ ಯೋಚಿಸುತ್ತಾನೆ, ಆತನಿಗೂ (ಅದಕ್ಕೂ?) ಬುದ್ಧಿಯಿದೆ ಎಂದು ತಿಳಿದುಕೊಳ್ಳುತ್ತಾನೆ. ಅಲ್ಲಿಂದ ಹುಡುಗನದು ಹಾಗೂ ಬಲೂನಿನದು ಆಟ. ಮನೆ, ಶಾಲೆ, ರಸ್ತೆ, ಮಕ್ಕಳು, ಅವರು-ಇವರು ಎಲ್ಲ ಬರುತ್ತಾರೆ ನಡುವೆ. ಕೆಂಪು ಬಲೂನಿನಂತೆ ಬುದ್ಧಿಯಿರುವ ’ನೀಲಿ ಬಲೂನೊಂದು’ ಬಂದು ಹೋಗುತ್ತದೆ.
 
ತನ್ನದೇ ಆದ ವೇಗ ಪಡೆದುಕೊಳ್ಳುವ ಚಿತ್ರ ಕೆಲವೇ ಸಮಯದಲ್ಲಿ ಒಂದಿಷ್ಟು ’ಹೊಡೆದಾಟ’ವನ್ನೂ ಕಾಣಿಸುತ್ತದೆ ತನ್ನದೇ ಆದ ನೆಲೆಯಲ್ಲಿ. ಪಾಸ್ಕಲ್ ಹಾಗೂ ಆತನ ಬಲೂನಿನ ವೈರಿ ಹುಡುಗರಿಂದಾಗಿ ’ಕೆಂಪು ಬಲೂನು’ ತನ್ನ ಜೀವ ಕಳೆದುಕೊಳ್ಳುವ ಪ್ರಸಂಗ ಬಂದೊದಗುತ್ತದೆ. ನಿರ್ದೇಶಕನ ಸಾಮರ್ಥ್ಯವಿರುವುದೇ ಅಲ್ಲಿ – ಬಲೂನು ಜೀವ ಕಳೆದುಕೊಳ್ಳುವ ಸನ್ನಿವೇಶ ಬರುವಷ್ಟರಲ್ಲಿ, ಅದು ಹೀಲಿಯಂ ತುಂಬಿದ ಕೇವಲ ಕೆಂಪು ಬಲೂನು ಎಂಬುದನ್ನೂ ಮರೆತು ನೀವು ಒಳಗೊಳಗೇ ಚಿತ್ರದೊಳಗೆ ಸೇರಿಬಿಡಿಟ್ಟಿರುತ್ತದೆ. ಖಂಡಿತ. 
 
ಪ್ಯಾರೀಸಿನಲ್ಲಿ ನಡೆದ ಚಿತ್ರೀಕರಣದ ಕೊನೆಯಲ್ಲಿ ಕೆಂಪು ಬಲೂನು ಜೀವ ಕಳೆದುಕೊಂಡರೂ ಸುತ್ತಲಿನ ಹಲವಾರು ಬಣ್ಣ ಬಣ್ಣದ ಬಲೂನುಗಳು ಒಟ್ಟೊಟ್ಟಿಗೆ ಬಂದು ಆತನನ್ನು ಪ್ಯಾರಿಸ್ ಅಂಗಳದಿಂದ ಮೇಲಕ್ಕೆ ಒಯ್ಯುತ್ತವೆ ಗಾಳಿಯಲ್ಲಿ. ಮೊವತ್ನಾಲ್ಕಿ ನಿಮಿಷ ಮೂರು ನಿಮಿಷದಂತೆ ಭಾಸವಾಗುತ್ತದೆ ಅಷ್ಟರಲ್ಲಿ.  ಇನ್ನೂ ನೋಡಿಲ್ಲವಾದರೆ ಆದಷ್ಟು ಬೇಗ ನೋಡಿ – ’ದಿ ರೆಡ್ ಬಲೂನ್’ ಎಂಬ ಫ್ರೆಂಚ್ ಸಿನೆಮಾವನ್ನು. ಅದು ಕೇವಲ ಮಕ್ಕಳ ಸಿನೆಮಾವಷ್ಟೇ ಅಲ್ಲ, ಶಾಂತವಾಗಿ ಸಗುವ ಅಂದೆಂದೊ ಹುಟ್ಟಿಕೊಂಡ ’ಕ್ಯಾಪಿಟಾಲಿಸಂ’ ಕುರಿತಾದ ಸುಂದರ ರೂಪಕ.
ಮಕ್ಕಳ ಜೊತೆ ಕುಳಿತು ದೊಡ್ದವರು ನೊಡಲೆಬೇಕಾದ ಸುಂದರ ಚಿತ್ರ – ‘The red Balloon’
 
ಮತ್ತೆ ಸಿಕ್ಕಾಗ Comparitive Analysis ಹಾಗೂ ಕುದುರೆ ಲದ್ದಿ’ ಎಂಬ ವಿಷಯವಿದೆ ಹೇಳಲು.
 

‘304’ ಬುದ್ಧಿವಂತರಿಗೆ ಮಾತ್ರ!

ಊರಂದ್ರೆ ಊರಪಾ. ಅದೆಂಥಾ ಮಳೆ ಅಲ್ಲಿ? ಅಬ್ಬರ ಅಬ್ಬರ! ಸಂಜೆ ಮನೆಲಿ ಕೂತ್ರೆ ಅದೆಂಥಾ ಮಾತು-ಕತೆ. ಮಾತೇ ಬಂಗಾರ ಅಲ್ಲಿ. ಬಿಸ್ಸಿಬಿಸಿ ಚಾ, ಕರಿದ ಹಪ್ಪಳ ಮತ್ತೊಂದು ಇನ್ನೊಂದು ತಿಂತಾ ಕೂತ್ರೆ ಅಹಾ.. ಊರೇ ಊರು. ಬೇಕಾದ್ದು ಬೇಕಾದಾಂಗೆ. ಬೇಕಿಲ್ಲದ್ದು ಬೇಕಿಲ್ಲದಾಂಗೆ. ವೀಕೆಂಡು ಮತ್ತೊಂದು ಅಲ್ಲಿಗೆ ಬರಲಾರದು. ಅದೆಲ್ಲ ಬರೀ ಮಳ್ಳು, ನೀವೇ ನೋಡಿ – ವಾರದ ಕೊನೆಯ ಎರಡು ದಿನ ತೆಗೆದು ಅದನ್ನ ನಿಮ್ದೇ ಊರಿನ ವಾರಾಂತ್ಯದ ಜೊತೆ ಹೋಲಿಸಿ ನೋಡಿ. ಪಕ್ಕಾ ಗೊತ್ತಗುತ್ತೆ…

ವರ್ಷಗಳಿಂದ ಬೆಂಗಳೂರಲ್ಲಿರುವ ’ಅಣ್ಣ’ (ಒಂಥರಾ ಅಣ್ಣಾವ್ರು ಇದ್ದಾಂಗೆ ಈ ಜನ) ಹಿಂದಿನ ತಿಂಗಳು ಶಿವಮೊಗ್ಗೆಗೆ ಹೋಗಿ ಅಲ್ಲಿಂದ ಘಟ್ಟ ಇಳಿದು, ಫೋಟೊ ಹೊಡೆದು, ಶರಾವತಿಯ ನೀರು ಕುಡಿದು, ಹೊನ್ನಾವರಕ್ಕೆ ಹೋಗಿ ಉಳಿದು, ಆ ವಾರದಲ್ಲಿ ಅಪ್ಸರಕೊಂಡದಲ್ಲಿ ಮೂರು ಸಂಜೆ ಕಳೆದು, ರಾಮತೀರ್ಥದ ಗುಡ್ಡೆ ಹತ್ತಿ ಕತ್ತಲ ಕರೆದು, ರಾತ್ರಿ ಪೂರ್ತಿ ಜಾಗರಣೆ ಮಾಡಿ ವಾರ ಮುಗಿಸಿ… ಅಲ್ಲಿಂದ ಗೆರುಸೊಪ್ಪೆ ಘಟ್ಟ ಹತ್ತಿ ಮಾಯನಗುಂಡಿಯಲ್ಲಿ (ಮಾವಿನಗುಂಡಿ) ಒಂದರ್ಧ ಗಂಟೆ ನಿಂತು ಎರಡರಲ್ಲಿ ಮೂರು ಚಾ ಆರ್ಡರ್ ಮಾಡಿ, ’ಇದೆಂತಾ ನೆಗಸನ ನೀರು’ ಅಂದು ಹತ್ತು ರೂಪಾಯಿ ಕೊಟ್ಟು ಅಂಗಡಿಯವನ ಮುಂದೇ ಚಾ ಚೆಲ್ಲಿ, ಊರಲ್ಲಿ ರೂಢಿಮಾಡಿಕೊಂಡು ಬಂದ ’ತಥ್ಥೆರಿಕಿ’ ಎರಡೆರಡು ಬಾರಿ ಹೇಳಿ, ಭುಂ ಅಂತ ಬೆಂಗಳೂರಿಗೆ ಬಂದು, ಅರೆತಲೆ ನೋವು ಅನ್ನುತ್ತ ಅಮೃತಾಂಜನ ಹಚ್ಚಿಕೊಂಡು ಬೋಳು ತಿಕ್ಕುತ್ತಾ…. ನಮ್ಮನ್ನು ಕರೆದು ಅಂದದ್ದು. ’ಒಂದು ಕೆಲ್ಸ ಮಾಡಿ..’

ಬೆಂಗಳೂರು ಸಧ್ಯಕ್ಕೆ ಜಾಗ ಕೊಟ್ಟ ಊರು, ಹೊನ್ನಾವರ ಮೂಲ ಊರು ಅನ್ನುತ್ತ ಊರಿನ ಆಯ್ಕೆ ಮಾಡಿದ್ದಾಯ್ತು. ಈಗ ಮುಂದೇನು? ಅನ್ನುವ ವಿಷಯ ಬಂತು. ಅಣ್ಣನ ಪ್ರಶ್ನೆ ಮುಂದುವರೆಯಿತು… ಬೆಂಗಳೂರಲ್ಲಿದ್ದು ವಾರದ ಕೊನೆಯ ಎರಡು ದಿನ ಏನ್ ಮಾಡ್ತೀರಿ? ಮಾಡಬಹುದು? ಊರಲ್ಲಿದ್ದವರು ಏನು ಮಾಡ್ತಾರೆ? ಮಾಡಬಹುದು? ಅಥವಾ ನೀವೆ ಅಲ್ಲಿ ಇದ್ದಿದ್ರೆ ಏನು ಮಾಡ್ತಿದ್ರಿ? ಪಟ್ಟಿ ಮಾಡಿ.

ಕೆಲಸ ಪ್ರಾರಂಭವಾಗುವ ಮೊದಲೇ ನಮ್ಮ ಬೆಂದಕಾಳೂರಿನ ಹುಡುಗ ಮೂಲ ಊರು ಸಿಗದೆ ಒದ್ದಾಡುತ್ತಿದ್ದ. ಅವ, ಅವನಪ್ಪ ಹುಟ್ಟಿದ್ದು ಬೆಂಗಳೂರಲ್ಲಂತೆ. ಅದಕ್ಕೂ ಮೊದಲಿನ ಊರು ಈಗ ಸಂಪರ್ಕದಲ್ಲಿಲ್ಲವಾದ್ದರಿಂದ, ಹುಟ್ಟಿದಾಗಿಂದ ಆ ಊರನ್ನು ನೋಡದೆ ಇರುವುದರಿಂದ, ಆಯ್ಕೆಮಾಡಲು ಮತ್ತೊಂದು ಊರು ಇಲ್ಲದಿರುವುದರಿಂದ ಆತನ ಮೂಲ ಊರೇ ಬೆಂಗಳೂರು ಹಾಗೂ ಬೆಂಗಳೂರಿನವರು ಈ ಪ್ರಶ್ನೆಗೆ ಉತ್ತರಿಸುವ ಅಗತ್ಯ ಇಲ್ಲ ಅನ್ನುವ ತೀರ್ಮಾನವನ್ನು ನಮ್ಮ ’ಅಣ್ಣ’ ನಿಮಿಷದೊಳಗೆ ಬಿಸಾಕಿದ. ಅಲ್ಲಿಗೆ ನಮ್ಮ ಬೆಂಗಳೂರು ಹುಡುಗ ಪ್ರಶ್ನೆಯ ವ್ಯಾಪ್ತಿಯಿಂದ ಹೊರಗೆ. ಒಂದು ವಿಷಯ ತಿಳಿಸಲೇ ಬೇಕು – ನಮ್ಮ ಅಲಿಖಿತ ನಿಯಮದಂತೆ ಬೆಂಗಳೂರನ್ನು ’ಸ್ವಂತಊರು’, ’ಮೂಲಊರು’ ಅನ್ನುವಂತಿಲ್ಲ. ಮೂಲತ: ಬೆಂಗಳೂರಿಗರಿಗೂ ಇವತ್ತಿಗೆ ಸ್ವಂತ ಊರಾಗಿ ಉಳಿದಿಲ್ಲವಾದ್ದರಿಂದ ಅವರೆಡೆಗೆ ಅನುಕಂಪ ತೋರಿಸಬೇಕು. ಹೆಚ್ಚೆಂದರೆ ಬಾಡಿಗೆ ವಸೂಲಿ ಮಾಡಿಕೊಂಡಿರುವವರಿಗೆ ಬದುಕಿಕೊ ಬಡಜೀವವೆ ಎಂದು ಸರಿಯಾದ ಸಮಯಕ್ಕೆ ದುಡ್ಡು ತಲುಪಿಸಬೇಕು….

ಹೀಗೆ. ಪಟ್ಟಿ ಶುರುವಾಗುವ ಮೊದಲು ಬೆಂಗಳೂರಿನ ವಾರಾಂತ್ಯದ ಹಾಗೂ ಮೂಲ ಊರಿನ ವಾರದ ಎಲ್ಲಾ ದಿನಗಳ ಸಾಧ್ಯತೆಯ ಪಟ್ಟಿ ಮಾಡುವುದು ಅನ್ನುವ ಚಿಕ್ಕ ಬದಲಾವಣೆಯಾಗಿ ಕಿರಾಣಿ ಸಾಮಾನಿನ ಪಟ್ಟಿಯಂತೆ ಶುರುವಾದ ಕೆಲಸ ಬೆಳೆದು ಬೆಳೆದು ಯಡ್ಡಿಯ ಬಜೆಟ್ಟಿಗಿಂತ ದೊಡ್ಡದಾಗುತ್ತಿರುವ ಎಲ್ಲಾ ಲಕ್ಷಣಗಳೂ ಕಂಡು ಬಂತು. ಹಾಗೆ ಬೆಳೆಯುತ್ತ ಹೋದ ಪಟ್ಟಿ ಒಂದು ಹಂತಕ್ಕೆ ಬಂದು ವಿಷಯಾಂತರವಾದದ್ದು ’304’ರಿಂದಾಗಿ. ಆ ಹೆಸರು ಕೇಳುತ್ತಲೆ ನಮ್ಮ ’ಅಣ್ಣ’ನ ಕಿವಿಯ ಬಿಳಿ ಕೂದಲೂ ಸಹ ನೆಟ್ಟಗಾಗಿ, ಅವನೊಳಗೆ (ನಮ್ಮೊಳಗೂ..)ಒಂದು ನಮೂನಿಯ ರೋಮಾಂಚನಾವಾಗಿ… ಕರ್ರಗೆ ಮಿಂಚುವ ಬಾಕ್ಸಿನೊಳಗಿನ ಐವತ್ತೆರಡು ಹಾಳೆಗಳ ನಡುವಿಂದ ’ಎಕ್ಕ, ರಾಜ, ರಾಣಿ, ಗುಲಾಮ.. ಎಲ್ಲ ಹೊರಬಿದ್ದವು’. ಗುಲಾಮನ ಹಿಂದೆ ಹತ್ತು, ಒಂಬತ್ತು, ಎಂಟು… ಜರ್ಮನಿಯ ತುದಿಯಿಂದ ಹಾಳೆಗಳ ನಡುವೆ ತೂರಿಕೊಂಡು ಬಂದ ’ಜೋಕರ’ ನಮ್ಮನ್ನೆಲ್ಲ ನೋಡಿ ಭರ್ತಿ ನಗಲಾರಂಭಿಸಿದ. ಅಣ್ಣಂಗೆ ಆಟದ ಮಧ್ಯೆ ಯಾರೂ ನಗುವಂತಿಲ್ಲ. ಜೋಕರ್ ಜೋಡಿಯನ್ನು ಹೆಕ್ಕಿ ಬಾಕ್ಸಿನಲ್ಲಿ ಬಂಧಿಸಿಟ್ಟ. ಆರರಿಂದ ಮುಂದಿನ ಎಲ್ಲಾ ಕಾರ್ಡುಗಳು ಒಂದೆಡೆ, ಅದಕ್ಕೂ ಮೊದಲಿನ ಕಾರ್ಡುಗಳು ಕೆಂಪು ಕಪ್ಪು ಆಗಿ ಇನ್ನೊಂದೆಡೆ ಜಾಗ ಪಡೆದವು. ಮೂರು ತಾಸಿಗೆ ಬೇಕಾದ ಎಲ್ಲ ವ್ಯವಸ್ಥೆಯೂ ಆಯಿತು. ಒಂದೇ ಒಂದು ಫೋನು, ಒಂದು ಎಸ್ಸೆಮ್ಮೆಸ್ಸು – ಘಟಾನುಘಟಿಗಳ ಆಗಮನವಾಯಿತು. ಆರು ಜನರ ದುಂಡು ಮೇಜಿನ ಪರಿಷತ್ತು ಯಾವ ಮೂರು ಜನ ಒಂದೊಂದು ಪಾರ್ಟಿ ಅನ್ನುವ ತೀರ್ಮಾನಕ್ಕೆ ಬಂದು Toss ಆಗಿ ಆಟ ಪ್ರಾರಂಭವಾಯಿತು. –  ’304’

 ಇಸ್ಪೀಟು ಅಂದ್ರೆ ಬರೀ – ಇಸ್ಪೀಟು (Spades), ಆಟೀನು (Hearts), ಚೌಕಟಿ (Diamonds), ಕಳಾವರ (Clubs) ಅಲ್ಲ. ಆಟ ಅಂದ್ರೆ ಬರೀ ಕತ್ತೆ, ಸೊಗ್ಗತ್ತೆ, ರಮ್ಮಿ… ಅಲ್ಲ. ಇಸ್ಪೀಟು ಅಂದ್ರೆ ಕ್ಲಬ್ಬಿಗೆ ಹೋಗಿ ಇಲ್ಲಾ ಇದ್ದಲ್ಲೇ ಒಂದು ಕ್ಲಬ್ಬು ಮಾಡಿಕೊಂಡು ದುಡ್ಡು ಕಳೆಯುವುದಲ್ಲ. ಚಟ ಮಾಡುವುದಲ್ಲ. ಇಸ್ಪೀಟು ಅಂದ್ರೆ ಕಾಲಹರಣ ಅಲ್ಲ. ಇಸ್ಪೀಟು ಅಂದ್ರೆ ತಮಾಷೆಯಲ್ಲ.

ಇಸ್ಪೀಟು ಅಂದ್ರೆ – ‘304’. ಅಣ್ಣನ ಮಾತು ಇದು.

ಚುರುಕು ತಲೆಯವರು ಮಾತ್ರ ಆಡಬಹುದಾದ ಆಟ. ಲೆಕ್ಕ ಬರುವವರು ಮಾತ್ರ ಆಡಬಹುದಾದ ಆಟ. ಲೆಕ್ಕ ತಪ್ಪಿದರೆ ಮುಜುಗರಕ್ಕೀಡುಮಾಡುವ ಆಟ… ಹೀಗೆ ಈ ಆಟದ ಗುಣಗಾನ ಮಾಡ್ತಾರೆ ನಮ್ಮ ಅಣ್ಣಾವ್ರು. ಊರಲ್ಲಿ ವಾರಗಟ್ಲೆ ಆಡಿ ಬಂದವ್ರು ಹದಿನೈದು ದಿನ ಆದ್ರೂ ಅದರ ಸುದ್ದಿ ಮಾತ್ರ ಬಿಟ್ಟಿಲ್ಲ. ವಿಜಯೋತ್ಸವದ್ದು ದೊಡ್ಡ ಸುದ್ದಿ. ಸೋತಲ್ಲೆಲ್ಲ ವಿಮರ್ಷೆ. ಕಾರಣ ಹುಡುಕುವಿಕೆ. ಬರೀ ಅದೇ ಸುದ್ದಿ.

ನಿಜ, ಇಸ್ಪೀಟು ಒಮ್ಮೆ ತಮಾಷೆ, ಮತ್ತೊಮ್ಮೆ ಗಂಭೀರ. ಒಮ್ಮೊಮ್ಮೆ ಮಾತು, ಒಮ್ಮೊಮ್ಮೆ ಮೌನ. ಇಸ್ಪೀಟು ರಾಗ, ವಿರಾಗ, ನೆನಪು, ಮರೆವು, ಸಂತೋಷ, ದು:ಖ, ಸಮಾನತೆ, ಅಸಮಾನತೆ, ರೂಪ, ವಿರೂಪ.. ಇಸ್ಪೀಟು ಎಲ್ಲ. ಇಸ್ಪೀಟು ಏನೂ ಅಲ್ಲ.

ಅಷ್ಟೇ ಅಲ್ಲ, ಒಮ್ಮೊಮ್ಮೆ ಇಸ್ಪೀಟು ಚಟ. ಇಸ್ಪೀಟು ಚಟ್ಟ.

ಅಣ್ಣ ಅಪರೂಪಕ್ಕೊಮ್ಮೆ ಆಡ್ತಾನೆ. ಆಟ ಅಂದ್ರೆ ‘304’, ಅಷ್ಟೆ. ಬಾಕಿ ಎಲ್ಲಾ ಬರಿ ಓಳು! ಅಂತಾನೆ. ಆಡುವವರು ಗಂಡು ಆಟ ಆಡಿ, ಬುದ್ದಿಯಿರುವವರಿಗಾಗಿ ಮಾತ್ರ ಇರುವ ಇದೊಂದೆ ಆಟ ಆಡಿ ಅಂದಿದಾನೆ. ಅದೂ ಆಗಾಗ, ಕೆಲವು ಹೊತ್ತು ಮಾತ್ರ.

ಆಡ್ಬೇಕು ಅಂತಿದ್ರೆ, ಲೆಕ್ಕಾಚಾರದ ಹಿಂದೆ ಬೀಳ್ಬೇಕು ಅಂತಿದ್ರೆ ಅಣ್ಣನ ಸಂಪರ್ಕ ಮಾಡಬಹುದು. ಆತ ಮನಸು ಮಾಡಿದರೆ ಉಚಿತ ತರಬೇತಿ. ಇಲ್ಲದಿದ್ದರೆ ಇಲ್ಲ. ಆತ ಇಲ್ಲಿಗೆ ಬಂದು ಆಟವನ್ನು ವಿವರಿಸಲೂಬಹುದು. ಇಲ್ಲ ಅಣ್ಣನನ್ನು ಸಂಪರ್ಕಿಸಬಹುದು – ’ispeetaata@gmail.com’

ಅಣ್ಣನ ಸೂಚನೆ: ಇಸ್ಪೀಟು ಆಡಿಬಿಡಿ. ಆಡಿ. ಬಿಡಿ. 304 ಕಲಿತುಬಿಡಿ. ಕಲಿತು ಬಿಡಿ. ಆದ್ರೆ ಯಾವ್ದನ್ನೂ ಚಟ ಮಾಡ್ಬೇಡಿ. ಅದೆಲ್ಲ ನಮ್ದಲ್ಲ ಅನ್ನೋರು ವಾರಾಂತ್ಯದ ಎರಡು ದಿನ ನಿಮ್ಮ ಮೂಲ ಊರಲ್ಲಿ ಏನು ಮಾಡ್ತಾರೆ, ನೀವಿರುವ ಊರಲ್ಲಿ ಏನು ಮಾಡ್ತಾರೆ ಅಂತ ಒಂದು ಪಟ್ಟಿ ಮಾಡಿ. ನಂಗೆ ಕಳ್ಸಿ.

ವಿ ಸೂಚನೆ: ಈ ಅಣ್ಣನಿಗೂ ಮಲ್ಲೇಶ್ವರ ಮಿತ್ರಮಂಡಳಿಯ ಅಣ್ಣನಿಗೂ ಯಾವುದೇ ಸಂಬಂಧ ಇಲ್ಲಾ..

Categories: ಹಾಗೆ ಸುಮ್ಮನೆ ಟ್ಯಾಗ್ ಗಳು:, ,

ಭವಿಷ್ಯ.

ಆತ ತನ್ನದೇ ಆದ ಹೆಸರಿಲ್ಲದ ಆಸಾಮಿ. ಅಥವಾ ಅವಶ್ಯಕತೆಗೆ ತಕ್ಕಂತೆ ಹೆಸರಿಟ್ಟುಕೊಳ್ಳುವ ಮನುಷ್ಯಪ್ರಾಣಿ ಅಂತಂದುಕೊಳ್ಳಬಹುದು. ತನ್ನ ಪರಿಚಿತರ ನಡುವೆ ಅಪರಿಚಿತವಾಗಿಯೇ ಉಳಿದುಬಿಡುತ್ತಾನೆ. ಅಪರಿಚಿತರ ನಡುವೆ ಆತನ ಮಾತಿನ ಮೋಡಿ ಸರಾಗವಾಗಿ ಕೆಲಸ ಮಾಡುತ್ತದೆ. ಆತ ಉಳಿದುಕೊಂಡ ಬಾಡಿಗೆಮನೆಯ ಸುತ್ತಲಿನವರಿರಬಹುದು, ಜೊತೆಗೆ ಕೆಲಸ ಮಾಡುವವರೂ, ಅವರ ನೆಂಟರು, ಇಷ್ಟರು..ಹೀಗೆ ಯಾರಾದರೂ ಅಗಬಹುದು. ಒಟ್ಟಿನಲ್ಲಿ ಹೊಸಬರಾಗಿರಬೇಕು. ದೂರದ ಯಾವ ಪರಿಚಯದ ಎಳೆಯೂ ಸಿಗದಂತಿರಬೇಕು. ಅಷ್ಟೆ.

ಅನುಕೂಲಕ್ಕಾಗಿ ಆಗಾಗ ಆತ ತನಗೆ ತಾನೇ ಇಟ್ಟುಕೊಳ್ಳುವಂತೆ ಈಗ ನಾವೂ ಸಹ ಒಂದು ಹೆಸರು ಕೊಡುವ – ವಿವೇಕ. ಆತ ಇಟ್ಟುಕೊಳ್ಳುವ ಹೆಸರುಗಳು ಸಹ ಹೀಗೆ ಇರುತ್ತವೆ. ಶರಣ, ಸಂದೀಪ, ವಿಕಾಸ, ವಿನೋದ, ಗುಣ, ಗಣೇಶ.. ಪ್ರತಿಯೊಂದು ಹೆಸರಿನಲ್ಲೂ ಭರ್ತಿ ಬೆಳಕು! ಒಂದೊಂದು ಕೆಲಸ, ಮನೆ, ಊರು ಬದಲಾಯಿಸುವಾಗಲೂ ಒಂದೊಂದು ಹೆಸರಿನೊಂದಿಗೆ ಹೊರಡುತ್ತಾನೆ. ತನ್ನ ಕೆಲಸ ಮುಗಿಯುವುದೇ ತಡ ಮತ್ತೊಂದು ಪ್ರಾಜೆಕ್ಟ್ ಕೈಗಿತ್ತಿಕೊಳ್ಳುತ್ತಾನೆ.

ಯಥಾಪ್ರಕಾರ ಮತ್ತೊಂದು ಹೆಸರು. 

ತಿಂಗಳಿನ ಹಿಂದೆ ಬೆಂಗಳೂರು ಸೇರಿಕೊಂಡ ವಿವೇಕ ತನ್ನ ಮಾತಿನ ಮೋಡಿಯಿಂದ ನಾಕು ಚಕ್ರದ ದುಬಾರಿ ಗಾಡಿಗಳನ್ನು ಮಾರುವ ಜಾಗದಲ್ಲಿ ಸೇರಿಕೊಂಡ. ಜೊತೆಗೆ ಪ್ರತಿನಿತ್ಯ ಬೆಳಗಾಗುವುದರೊಳಗೆ ಮತ್ತು ಕತ್ತಲಾದಮೆಲೆ ಚಿಕ್ಕಮಕ್ಕಳಿಗೆ ಪಾಠ ಹೇಳಲು ಟ್ಯೂಷನ್ ಕೆಂದ್ರವೊಂದರಲ್ಲಿ ಮಾಸ್ತರನಾದ. ಎರಡು ಪ್ಲಸ್ ಎರಡು ಹೇಗೆ ನಾಲ್ಕಲ್ಲ ಅನ್ನುವುದನ್ನು ಕಲಿಸಲಾರಂಭಿಸಿದ.

ಭರ್ತಿ ಕೆಲಸ.

ಕಾರು ಖರೀದಿಸುವವರಿಗೆ, ಪಾಠ ಕೇಳುವವರಿಗೆ ತೃಪ್ತಿಯಾಗುವಂತೆ ಪಾಠ ಮಾಡಿದ. ಸಿಕ್ಕ ಸಮಯದಲ್ಲೆಲ್ಲ ತನ್ನ ಮಾತಿನ ಜಾಲ ಬೀಸಿದ – ಕೆಲಸಕೊಟ್ಟವನಿಂದ ಹಿಡಿದು ಕೆಲಸಮಾಡುವವರ ತನಕ. ಗ್ರಾಹಕರಿಂದ ಹಿಡಿದು ಪಾಲಕರ ತನಕ. ತಿಂಗಳಿನೊಳಗೆ ಎಲ್ಲಾ.

ವೇದಿಕೆ ಸಿದ್ಧವಾಯಿತು.

ದೇವರ ಫೋಟೊ, ಮೂರ್ತಿಗಳು ಬಂದವು. ದೀಪ ಹಚ್ಚಲ್ಪಟ್ಟಿತು. ಊದುಬತ್ತಿಯ ಪರಿಮಳ ಹರಡಿತು. ಅದರ ಹಿಂದೆ ಅಲ್ಲೊಬ್ಬ ಮಹಾಪುರುಷರ ಅಗಮನವಾಯಿತು. ವಿಭೂತಿ ತಟ್ಟೆ ಬಂತು. ಜಮಖಾನಾ ಹಾಸಲ್ಪಟ್ಟಿತು. ಪೀಠದಮೇಲೆ ಹೊಸರೂಪದ ಸ್ಥಾಪನೆಯಾಯಿತು. ಅವರಿಗೂ ಸಹ ಅವರದೇ ಆದ ಹೆಸರಿಲ್ಲ. ಅಥವಾ ಹೋದಲ್ಲೆಲ್ಲ ಒಂದೊಂದು ಹೆಸರಿದೆ. ನಮ್ಮ ಅನುಕೂಲಕ್ಕೆ ತಕ್ಕಂತೆ, ಶ್ರೀ. ಯೋಗಾನಂದ ಜೀ ಅಂದುಕೊಳ್ಳುವ.

ಯೊಗಾನಂದರದು ಅಸಮಾನ್ಯ ಬುದ್ಧಿವಂತಿಕೆ. ಅವರದು ಜ್ಯೋತಿಷ್ಯದಲ್ಲಿ ಹಲವು ವರ್ಷಗಳ ತಪಸ್ಸು. ಆದರೂ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಸಿಕ್ಕಿದಷ್ಟು ಯಶಸ್ಸು ಮೊದಲೆಂದೂ ಸಿಕ್ಕಿರಲಿಲ್ಲ. ಜ್ಯೋತಿಷಿಗಳಿಗೆ ಹೇಳುವುದೆಲ್ಲವನ್ನೂ ಪಕ್ಕಾ ಮಾಡಿಸುವ ಕಲೆಯಿರಬೇಕು ಅನ್ನುವುದನ್ನು ತಿಳಿದುಕೊಂಡಮೇಲೆ ಈ ಯಶಸ್ಸು ಸಿಕ್ಕಿದ್ದು.  ಈ ಯಶಸ್ಸಿನ ಮಂತ್ರವನ್ನು ಹೇಳಿಕೊಟ್ಟಿದ್ದು ವಿವೇಕ. ಆತನೂ ಯೋಗಾನಂದರ ಕೈಲಿ ತನ್ನ ಕೈ ನೀಡಲು ಬಂದವನೇ.

ವಿವೇಕನ ಕಿವಿ ನೆಟ್ಟಗಾಯಿತು. ಜ್ಯೋತಿಷಿಗಳ ಮಾತು ಹರಿಯಿತು. ಇನ್ನೆರಡು ವರ್ಷಗಳಲ್ಲಿ ನಿನಗೆ ಯಶಸ್ಸು ಕೈ ಹಿಡಿಯುತ್ತದೆ. ನಂತರದ ದಿನಗಳಲ್ಲಿ ನಿನ್ನನ್ನು ಹಿಡಿಯುವವರಿಲ್ಲ… ಭವಿಷ್ಯದ ಕನಸು ಟಿಸಿಲೊಡೆದು ದಿಕ್ಕುದಿಕ್ಕಿಗೆ ಹರಡಿತು. ಅವರ ಕೈಯಿಂದ ತನ್ನ ಕೈ ವಾಪಸು ಪಡೆಯುವಾಗ ವಿವೇಕನ ತಲೆಯೊಳಗೆ ಚಿತ್ರ ಸ್ಪಷ್ಟವಾಗಿ ಮೂಡಿತ್ತು.

ಯೋಗಾನಂದರು ವಿವೇಕನ ಹಿರಿಯ ಗೆಳೆಯರಾದರು. ಅವರಿಗೆ ಆರವತ್ತು. ಇವನಿಗೆ ಇಪ್ಪತ್ತು. ಅಂದಿನಿಂದ ಇಂದಿನವರೆಗೂ ಕೈತುಂಬಾ ಕೆಲಸ. ಜೇಬು ತುಂಬಾ ದುಡ್ಡು. ಸುಖೀ ಜೀವನ. ಯೊಗಾನಂದರು ಬೆಳಗಿನಿಂದ ಸಂಜೆಯವರೆಗೂ ಭವಿಷ್ಯ ನುಡಿಯುತ್ತಾರೆ. ದಿನವೊಂದಕ್ಕೆ ಸರಿಯಾದ ನಾಲ್ಕು ಜನ ಸಿಕ್ಕರೂ ಸಾಕು ಅನ್ನುವಂತೆ ಭವಿಷ್ಯವನ್ನು ವಿವರಿಸಿ ವಿವರಿಸಿ ನುಡಿಯುತ್ತಾರೆ. ಪೂಜೆ ಮಾಡಿಸುತ್ತಾರೆ. ಹೋಮ ಹವನ ಏರ್ಪಡಿಸುತ್ತಾರೆ.

ಸ್ವಲ್ಪವೂ ಪುರುಸೊತ್ತಿಲ್ಲ ಅವರಿಗೆ. ಬಂದು ತಿಂಗಳಾಗುವುದರೊಳಗೆ ಯೋಗಾನಂದ ಬ್ರಾಂಡ್ ಸುತ್ತಲೆಲ್ಲ ಪ್ರಸಿದ್ಧಿ ಪಡೆದುಬಿಟ್ಟಿದೆ. ಈಗ ಅವರಿರುವ ಕೋಣೆಯ ಹೊರಗೆ ಒಬ್ಬೊಬ್ಬರಾಗಿ ಹೆಸರು ಗೊತ್ತಿಲ್ಲದ ಜನರ ಆಗಮನವಾಗುತ್ತಿದೆ. ಪ್ರತಿಯೊಬ್ಬರ ಅಂಗೈಯೊಳಗೂ ನೂರು ನೂರು ಗೆರೆಗಳು. ಜೇಬಿನೊಳಗೆ ಜಾತಕ. ಹಣೆಯಮೇಲೆ ಬೆವರು. 

ಗೇಟಿನ ಪಕ್ಕದಲ್ಲೇ ನಿಂತ ಹುಡುಗನೊಬ್ಬ ಯಾರನ್ನೂ ಒಳಗೆ ಬಿಡುತ್ತಿಲ್ಲ. ಹಸಿರು ಬಣ್ಣದ ಯಾವುದೋ ತಿಳಿಯದ ಭಾಷೆಯಲ್ಲಿ ಬರೆದ ಚೀಟಿಯನ್ನು ತೊರಿಸಿದವರ ಹೊರತಾಗಿ. ಹೆಚ್ಚು ಮಾತನಾಡದ ಆತ ತನ್ನೆರಡು ಕೈಗಳಿಂದಲೇ ಪರಿಸ್ಥಿತಿಯನ್ನು ನಿಭಾಯಿಸುತ್ತಾನೆ.

ಆದರೂ ಹೊರಗೆ ಗದ್ದಲ.

ವಿವೇಕನ ಮತ್ತೊಂದು ಪ್ರಾಜೆಕ್ಟು ಮುಗಿಯುವ ಹಂತಕ್ಕೆ ಬಂದಿದೆ. ಆತನಿಗೀಗ ತನ್ನ ವೃತ್ತಿಯ ಕುರಿತಾಗಿ ಹೊಸದೊಂದು ಆಯಮ ದೊರಕಿದೆ. ಅದಕ್ಕೆ ಕುರುಹೆಂಬಂತೆ ಮುಂಬೈ, ದಿಲ್ಲಿ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ಇನ್ನೂ ದೊಡ್ಡ ಪ್ರಮಾಣದ ಕೆಲಸ ಸಿಗುವ ಎಲ್ಲಾ ಲಕ್ಷಣವಿದೆ. ಇನ್ನೆರಡು ದಿನ ಕಾದರಾಯಿತು ಗೇಟಿನ ಹುಡುಗ.

ನಂತರದ ಕೆಲವು ಸಮಯ ಯೋಗಾನಂದರಿಗೆ ಮೌನ ವಿಶ್ರಾಂತಿ. ವಿವೇಕ ಹೊರಡುವ ಎಲ್ಲಾ ತಯಾರಿಯನ್ನೂ ಮಾಡುತ್ತಿದ್ದಾನೆ. ಆತನ ಹೆಸರೂ ಬದಲಾಗುತ್ತದೆ.

ಯೋಗಾನಂದರ ಭವಿಷ್ಯ ನಿಜವಾಗುತ್ತಿದೆ!