ಬರಿ ಮಾತು

ಈ ಮಾತು ಕತೆಯೆಲ್ಲ ಬರೀ ಸುಳ್ಳೇನಲ್ಲ
ಆದರೂ, ಮೌನ ಮಾತ್ರ ಪರಮ ಸತ್ಯ
 
ಈಗಂದಿದ್ದು ಈಗ ಸುಳ್ಳಾದೀತು
ಇಂದಿನ ಮಾನ-ದಂಡಗಳು
ನಾಳೆಯಾಗುವಷ್ಟರಲ್ಲಿ ಬರಿ ದಂಡ
ಹೊದ್ದು ಮಲಗಿದ ಚಾದರದೊಳಗೆ
ಚಳಿ ಹೊಕ್ಕಿ ಮೈಯೆಲ್ಲ ಬಹಳೇ ಥಂಡಾ
 
ನಿನ್ನ ಕೊರಳೊಳಗೆ ಉಳಿದ
ಶಬ್ದಕ್ಕೆ ಒಂದೆಳೆ ಸರದ ಶೃಂಗಾರ
ಎಳೆ ಎಳೆ ಹೊರಬಿದ್ದರೆ ನಾಳೆ
ಮಾನ ಸಮ್ಮಾನ ಬಹುಮಾನ ಪದಕ
ಇಲ್ಲವಾದರೆ ಸುಖಾಸುಮ್ಮನೆ ಎದೆಭಾರ
 
ಇವತ್ತಿಗಿನ್ನೂ ಬಲಿತಿರದ ಮಾತು
ನಾಳೆ ಕತೆಯೇ ಆದೀತು
ಪದ ಪದ ಸೇರಿ ಫೇರಿ ಹೊರಟರೆ
ಬೆಳಕಿನ ಕೊಲುಗಳಿಗೊಂದು ಅವಶ್ಯ ಸಾಥ ಸಿಕ್ಕೀತು
 
ಅವಕಾಶಗಳ ಜೋತು ಹೊರಳಿಕೊಂಡರೆ ನೀನು
ಮಗ್ಗುಲಿನೊಳಗೆ ಸಿಕ್ಕುಬಿದ್ದಿದೆ ನಿನ್ನೆ
ನಾಳೆ ಹೀಗೇ ಇರಬೇಕು ಅಂದುಕೊಂಡರೆ
ತಯಾರು ಕುಳಿತ ಕಳ್ಳಮಳೆ ಎಲ್ಲಿ ಹೋಗಬೇಕು ಹೇಳು
 
ನೀನು ಅಲ್ಲಿದ್ದರೆ ನಾನು ಇಲ್ಲೇ
ಅಪ್ಪಿ ತಪ್ಪಿ ಗೆರೆ ದಾಟಿದರೆ ಪಕ್ಕಾ ಮಳ್ಳೇ
ರಾಶಿ ಬಿದ್ದ ಪೇಪರಿನಿಂದೆದ್ದ ದಿನ
ಭವಿಷ್ಯದಲ್ಲಿ ನಿನ್ನದು ಸರಿಯೋ ನನ್ನದೋ?
ಭವಿಷ್ಯಕ್ಕೆ ನೂರು ನಂಟುಗಳಿದ್ದರೂ
ನೇರ ಸಂಬಂಧಿ ನಾನೆ ಅನ್ನುತ್ತಿದೆ ಭೂತ
ವರ್ತಮಾನ ಮಾತ್ರ ಇಲಾಖೆಯ ಮೇಜಿನಡಿ
ಲೆಕ್ಕಾಚಾರ ಹಾಕಿ ವಾದ ಮಂಡಿಸುತ್ತ ಮಲಗಿಬಿಟ್ಟಿದೆ 
 
ಬೆರಳುಗಳ ತುದಿಯಲ್ಲಿ ಬಿಟ್ಟಿ ಕೂತಿಲ್ಲ ಪದ
ಹೊರಬಂದರೆ ಸ್ವರ ಸೇರಿ ಮಸ್ತ್ ಮಜಾ
ಎಷ್ಟು ಹೇಳಿದರೂ ಉಳಿದದ್ದೇ ಹೆಚ್ಚು
ಉಳಿಸಿಕೊಂಡರೆ ಯಾಕೋ ಬಿಡಲಾರದ ಹುಚ್ಚು
 
ದಕ್ಕೆ ಹತ್ತಿ ಕೂತಿದೆ ಮಾತು
ದಂಡೆ ತುಂಬ ಬಿಸಿ ಬೇಳೆ ಬಾತು
ವಿಲಿವಿಲಿ ಒದ್ದಾಡಿ ಬಲೆಯ ಹಸಿಮೀನು
ಕೊನೆಗೂ ನೋಡಿದ್ದು ಹಸಿಮರಳೇ ಆತು
 
ಮಾತುಗಳ ತಕ್ಕಡಿಯಲ್ಲಿ ತೂಕದ ಕಲ್ಲು
ಹಿಡಿದು ತೂಗಿದರೆ ಲೆಕ್ಕಕ್ಕೇ ಸಿಗದು
ನನ್ನ ರಗಳೆಗಳಿಗೆಲ್ಲ ಇನ್ನು ಇಳಿತದ ಹೊತ್ತು
ಭರತಕ್ಕೆ ಸರಿಯಾಗಿ ನೀನಿನ್ನು ಹೊರಡು.

(ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆ!! ಓದಬಹುದು)

ರಾತ್ರಿ ರಾಣಿ

 

ಮೂರುಸಂಜೆಯ ನಂತರದ ಪ್ರತಿ

ನಿಮಿಷ ಬಣ್ಣ ಕಳಚಿಕೊಳ್ಳುತ್ತ ಸಾಗುವ

ದಿನಕ್ಕೆ ಕೃತಕ ಬೆಳಕಿನ ಉಸಿರು

ಇಲ್ಲದ ಹಿತ್ತಲ ಸಂದಿಯೊಳಗಿಂದ

ಹೊರಸೂಸುವ ರಾತ್ರಿ ರಾಣಿಯ ಅತ್ತರು

 

ಬಿಸಿ ಉಸಿರು ಹೊರಡಿಸುವ ಬೀದಿಗೀಗ

ತಣ್ಣಗಿನ ತುಂಡು ಸ್ನಾನ

ಸಾಲು ರಂಗೋಲಿಯ ಶೃಂಗಾರ

ಮನೆ ಬಾಗಿಲ ಮುಂದಿನ ಟಾರಿಗೆ

ಅಂಗಳವೂ ಆಗುವ ಸಂದಿಗ್ಧ

 

ಎರಡು ಮನೆಗಳ ಬೆಸೆಯುವ

ಎಂಟನೆಯ ಅದ್ಭುತದ ಸುತ್ತ

ಸಪೂರ ತೂರಿ ಬರುವ ಗಾಳಿ

ಏಳನೆಯ ಗೋಡೆಯ ಮೈತುಂಬ

ಹೆಪ್ಪುಗಟ್ಟಿದ ಅನಾಮಿಕ ಚಳಿ

 

ಅಲ್ಲೆಲ್ಲೋ ಸಿಕ್ಕ ಮೂರಂಗುಲ ಜಾಗ

ಅಲ್ಲಲ್ಲೇ ಮೊಳಕೆಯೊಡೆವ ಹಸಿ ಜೀವ

ಯಾರ ಹಂಗಿಲ್ಲದ ರಾತ್ರಿ

ರಾಣಿಯ ಮೈತುಂಬ ಹರಡಿದ ಪರಿಮಳ

 

ಅದೆ, ಆಗಿಬಿಟ್ಟಿದೆ ಬೆಳಗು

ಆವರಿಸಿಬಿಟ್ಟಿದೆ ಅವಸರದ ಹೊರಗು

ಮೈತುಂಬ ಬಣ್ಣಗಳನ್ನು ಹೊತ್ತು

ಹೊರಡುವಾಗ ಹೊಡೆದುಕೊಂಡ ಅತ್ತರಿನ

ಬಾಟಲಿಯಿಂದ ಕಾಲರಿಗೆ ಹಾರಿದೆ

ರಾತ್ರಿ ರಾಣಿಯ ಕುರುಹು


Categories: ಕವನ ಟ್ಯಾಗ್ ಗಳು:

ಸಜದಾ..

 

ಕನಿಷ್ಠ ಹತ್ತು ಹಿಂದಿ ಚಿತ್ರಗೀತೆಗಳು ಇಷ್ಟವಾಗಿವೆ.  ಹಾಡುಗಳ ಜೊತೆ ಜೊತೆಗೆ ಸಂಗೀತ ನಿರ್ದೇಶಕರು ಹಾಗೂ ಗೀತ ರಚನಕಾರರು

ಲೆಕ್ಕ ಹಾಕಿ ಹೇಳುವುದಾದರೆ ಈ ಹತ್ತು ಹಾಡುಗಳು ಹತ್ತು ಬೇರೆ ಬೇರೆ ಸಿನೆಮಾಗಳ ಕೊಡುಗೆ. ಎಲ್ಲಾ ಸಿನೆಮಾಗಳನ್ನೂ ನೋಡುವ ಹಂಬಲವಿದ್ದರೂ, ಕೇವಲ ಮೂರೇ ನೋಡಿದ್ದು. ಬಾಕಿ, ಕೇಳಿದ್ದು.  ಉಳಿದಂತೆ, ಅನ್ಯ ಭಾಷೆಯ ಬಹಳಷ್ಟು ಸಿನೆಮಾಗಳನ್ನು ನೋಡಿದರೂ, ಅವೆಲ್ಲ ‘ಹಾಡು ರಹಿತ’ವಾದವು.

ಇಲ್ಲ ಎನ್ನಲಾಗದಂತೆ, ನಮ್ಮಲ್ಲೂ ಹಾಡುಗಳಿಲ್ಲದ ಚಿತ್ರಗಳಿವೆ. ಆದರೆ, ಹಾಡುಗಳಿಲ್ಲದ ಸಿನೆಮಾಗಳು ಇವತ್ತಿಗೂ ಸಪ್ಪೆ ನಮಗೆ. ಒಂದಲ್ಲ, ಎರಡಲ್ಲ ಡಜನುಗಟ್ಟಲೆ ಹಾಡು ಬೇಕು ನಮಗೆ ಪ್ರತಿ ಸಿನೆಮಾದಲ್ಲಿ. ಅಥವಾ, ಅಷ್ಟು ಹಾಡುಗಳನ್ನು ತುರುಕಿ ನಮ್ಮ ಮುಂದಿಡಲಾಗುತ್ತದೆ. ಸಿನೆಮಾ ಮಾಡುವವರ ಆಸೆಯೋ ಇಲ್ಲಾ ನೋಡುವವರ ಬೇಡಿಕೆಯೋ ಎಂಬ ವಿಷಯದ  ನಡುವೆ ಲೆಕ್ಕವಿಲ್ಲದಷ್ಟು ಸಿನೆಮಾಗಳೂ, ಅದರೊಳಗಿಂದ ಸರಾಸರಿ ಆರೆಂಟು ಹಾಡುಗಳೂ ಹೊರಬರುತ್ತವೆ.   

ನೋಡುವವರ/ಕೇಳುವವರ ಕರ್ಮ!!!

ಆದರೆ, ಬರುವ ಎಲ್ಲಾ ನಮೂನೆಯ ಸಿನೆಮಾಗಳ Output ಏನೇ ಇರಲಿ, ಅದರೊಳಗಿನ ಎಲ್ಲಾ ಹಾಡುಗಳು ಹೇಗೆ ಇರಲಿ – ಒಟ್ಟಾರೆ ಸಿನೆಮಾ, ಅದಕ್ಕೆ ತಕ್ಕ ಹಾಡಿನ ತಯಾರಿಗಳನ್ನು ಮೀರಿ ಕೆಲವೊಂದು ಹಾಡುಗಳು ಇಷ್ಟವಾಗಿಬಿಡುತ್ತವೆ. ಚಿತ್ರ ಉಳಿಯದಿದ್ದರೂ, Overall Impact ಸರಿಯಾಗಿಲ್ಲಡಿದರೂ – ಯಾವುದೋ ಒಂದು ಭಾಗ ಬೆಳೆದುಬಿಡುತ್ತದೆ!  ಹಾಗಾಗಿಯೇ, ಈ ಹಲವು ಸಾಧ್ಯತೆಗಳ ಜಗತ್ತಿನಲ್ಲಿ ಹೆಕ್ಕಿಕೊಳ್ಳಲು ಬಹಳಷ್ಟು ಸಿಗುವುದು. ಒಂದು ಜೊಳ್ಳು ಸಿನೆಮಾದಿಂದ ಒಬ್ಬ ಉತ್ತಮ  ಕಲಾವಿದ, ಸಂಗೀತ ನಿರ್ದೇಶಕ, ಅದ್ಭುತ ಹಾಡುಗಾರ, ಒಂದೊಳ್ಳೆಯ ನರ್ತಕಿ, ಒಬ್ಬ ಸಿನೆಮಾಟೊಗ್ರಾಫರ್… ಏನೆಲ್ಲಾ ಸಿಗಬಹುದು.   

ಸಿನೆಮಾ ಯಾವುದೆಂದು ನೆನಪಿಲ್ಲದಿದ್ದರೂ, ನಮಗಿಂದು ಕಿಶೋರ್ ಬಹಳ ಹತ್ತಿರದವನು ಎಂಬಷ್ಟು ಸಲುಗೆಯಿದೆ. ರಫಿ ಇಂದಿಗೂ ಫ್ರೆಶ್. ಮುಕೇಶ್ ಪಕ್ಕದಲ್ಲೇ ಉಳಿದುಬಿಡುತ್ತಾನೆ.  ಅವರ ಜೊತೆಗೆ ಲತಾ, ಆಶಾ. ಅದೇ ಸಮಯಕ್ಕೆ,  ಆಗಾ ಕಾಶ್ಮೀರಿ, ಪಿ ಎಲ್ ಸಂತೋಷಿ, ಕಿದಾರ್ ಶರ್ಮಾ ಮುಂತಾದವರ ಪರಿಚಯ – ಸಾಮಾನ್ಯವಾಗಿ – ಇಲ್ಲದೆ ಹೋದರೂ ಅವರೆಲ್ಲರನ್ನೂ ಸೇರಿಸಿ ಬರ್ಮನ್, ಮಜರೂಹ್ ಸುಲ್ತಾನಪುರಿ, ಗುಲ್ಜಾರ್, ಆನಂದ್ ಬಕ್ಷಿ, ಜಾವೇದ್ ಅಕ್ತರ್ ಮುಂತಾದವರು ತಮ್ಮ ಕೆಲಸಗಳಿಂದಲೇ ಉಳಿದುಬಿಡುತ್ತಾರೆ.  ಗುಲ್ಜಾರ್, ಈ ವಯಸ್ಸಿಗೂ ‘ಬೀಡಿ ಜಲಾಯ್ಲೇ ಜಿಗರಸೆ ಪಿಯಾ..’ ಎಂದು ಬರೆಯುತ್ತಾರೆ.

 ‘ಚಿತ್ರಹಾರ್’ ಸಮಯ ಮುಗಿದಿದೆ. ಆದರೂ, ಅದಕ್ಕೂ ಮೊದಲು ಹಾಗೂ ಆ ಸಮಯದಲ್ಲಿ ಸಿಕ್ಕ ಹಾಡುಗಳು ಮತ್ತು ಹೆಸರುಗಳು ಇವತ್ತಿಗೂ ಅಂದಿನಷ್ಟೇ ತಾಜಾ.  ಉಳಿದಂತೆ ಎಂಬತ್ತು ತೊಂಬತ್ತರಲ್ಲಿ ಬಂದ ಹಾಡುಗಳಲ್ಲೂ ನೆಪಪಿಟ್ಟುಕೊಳ್ಳುವ ಸಂಗತಿಯಿದ್ದರೂ, ಅವು ಹಿಂದಿನ ಹಾಡುಗಳ ಪ್ರಭಾವದಿಂದ ಹೊರಬಂದು ಇಂದಿನ ಬಹಳಷ್ಟು ‘ಅಸಾಮಾನ್ಯ’  ಹಾಡುಗಳಿಗೆ ಮುನ್ನುಡಿಯಂತಿದ್ದವು ಅಂದರೂ ತಪ್ಪಾಗಲಾರದು.  ಬಿಡಿ, ಬಹಳ ವ್ಯಾಪ್ತಿ ಇರುವ debatable  ವಿಷಯ ಅದು.   

ಸಧ್ಯಕ್ಕೆ, ಯಾರ ಕುರಿತಾಗಿಯೂ ಅಥವಾ ಯಾವ ಹಾಡಿನ ಕುರಿತಾಗಿಯೂ  ವಿವರಣೆಗೆ ಹೋಗುವಂತಿಲ್ಲ. ಇತ್ತೀಚಿಗೆ ಕೇಳಿಸಿಕೊಳ್ಳುತ್ತಿರುವ ಕೆಲವು ಒಳ್ಳೆಯ ಹಿಂದಿ ಹಾಡುಗಳ ಕುರಿತು note ಮಾಡುವಾಗ ಸಾಂದರ್ಭಿಕವಾಗಿ ಹೇಳಿದ್ದು ಅಷ್ಟೇ!  

ಹೆಚ್ಚಾಗಿ ಪ್ರತಿಯೊಬ್ಬರೂ ಕೇಳಿರಬಹುದಾದ ಹಾಡುಗಳೇ ಇವು.  ಆದರೆ, ಉಳಿದೆಲ್ಲ ಹಾಡುಗಳಿಗಿಂತ ವಿಭಿನ್ನವಾಗಿವೆ. ಹಳೆಯ ಹಾಡುಗಳನ್ನು ನೆನಪಿಸುವಂತಿದೆ. ಹೊಸ ಸ್ಪರ್ಶದೊಂದಿಗೆ.  ಒಳ್ಳೆಯ ಹಾಡುಗಳನ್ನು ಹುಡುಕಿಕೊಳ್ಳುವ Turbulant Exercise ನಡುವೆ, ಸಿನೆಮಾದ ಹಾಡಾಗಿಯೂ, ಪ್ರತ್ಯೇಕವಾಗಿಯೂ ಗಟ್ಟಿ ನಿಲ್ಲಬಹುದಾದ ಹಾಡುಗಳು ಅವು. ಅವುಗಳಲ್ಲೊಂದು lyrical beauty,  ಸುಂದರ ಕಂಠ ಇದೆ. ಉತ್ತಮ ಸಂಯೋಜನೆಯಿದೆ.  

ಉಳಿದ ಎಲ್ಲ ಪ್ರಕಾರಗಳಿಗಿಂತ ಹೊರತಾಗಿ ನಿಲ್ಲುವ ಆದರೆ ಅವುಗಳನ್ನೂ ತನ್ನದಾಗಿಸಿಕೊಳ್ಳುವ ಸಿನೆಮಾ ಹಾಡುಗಳಲ್ಲಿ ನಾವು ಮಾಧುರ್ಯವನ್ನು ಹುಡುಕಬಹುದು. Romance ಕಾಣಬಹುದು. ಅಲ್ಲೊಂದು soul searching ಇರಬಹುದು. ವಿಷಾದ ಬರಬಹುದು.  ಅವುಗಳಿಗೆ (ಒಳ್ಳೆಯದಿದ್ದಲ್ಲಿ) ನಮ್ಮದಾಗುವ ಶಕ್ತಿಯಿದೆ.  

ಹುಡುಕಿ ಹೊರಟರೆ, ಮತ್ತದೇ ಅಕ್ತರ್, ಗುಲ್ಜಾರ್ ಸಿಗುತ್ತಾರೆ. ಪ್ರಸೂನ್ ಜೋಷಿ ಕಾಣುತ್ತಾರೆ. ಒಬ್ಬ ನಿರಂಜನ್ ಅಯ್ಯಂಗಾರ್ ದೊರಕುತ್ತಾನೆ ಈ ಹೊಸ ಹಾಡುಗಳಲ್ಲಿ. ಅವರ ಜೊತೆ ಇಂದಿನ composerಗಳು ಹಾಗೂ finally ಹಾಡನ್ನು ನಮಗೆ ಮುಟ್ಟಿಸುವ ಗಾಯಕರು ಸಿಗುತ್ತಾರೆ.     ಓರೆ ಮನವಾ ತು ತೊಹ್ ಬಾವರಾ ಹೈ… ಎಂದು ಆರಂಭವಾಗುವ ‘ಇಕ್ತಾರಾ’ ಹಾಡಿರಬಹುದು, ಡೆಲ್ಲಿ 6ನ ‘ಭೋರ ಭಯಿ..’ ಎಂಬ ಗೀತೆಯಿರಬಹುದು, ವಿಭಿನ್ನ ಹಾಗೂ ಯಶಸ್ವಿ ಪ್ರಯತ್ನವಾದ ‘ದಿಲ್ ತೊಹ್ ಬಚ್ಚಾ ಹೈ ಜಿ..’ ಇರಬಹುದು. ಪ್ರತಿಯೊಂದೂ ನೆಲೆ ಕಂಡುಕೊಳ್ಳುವ ಹಾಡುಗಳಾಗುವ ಎಲ್ಲಾ ಲಕ್ಷಣವನ್ನೂ ತೋರಿಸುತ್ತವೆ. 

ಸಜದಾ (Worship) ಹಾಡನ್ನೇ ನೋಡಿ.  ನಿರಂಜನ್ ಅಯ್ಯಂಗಾರ್ ಬಹಳ ಸೂಕ್ಷವಾಗಿ ಹಾಡನ್ನು ಕಟ್ಟಿಕೊಡುತ್ತಾರೆ.  S E L  ಸಂಯೋಜಿನೆ ಅದಕ್ಕೊಂದು ಟಚ್ ನೀಡುತ್ತದೆ. ನಂತರದಲ್ಲಿ ಅದಕ್ಕೊಂದು ಬಣ್ಣ/ಗರಿ  ಕೊಡುವ ಕೆಲಸ ಮಾಡಿದ್ದು – ರಾಹತ್ ಫತೆ ಅಲಿ ಖಾನ್, ಶಂಕರ್ ಮಹಾದೇವನ್ ಹಾಗೂ ರಿಚಾ ಶರ್ಮಾ.  

ಹಳೆಯ ಹಾಡುಗಳನ್ನು ಕೆಲವು ದಿನಗಳ ಮಟ್ಟಿಗೆ ಬದಿಗಿಟ್ಟು, ಒಂದಿಷ್ಟು ಒಳ್ಳೆಯ ಹೊಸ ಹಾಡುಗಳ ಹಿಂದೆ ಬಿದ್ದಿದ್ದೇನೆ. ಮನೆಯಲ್ಲಿದ್ದಷ್ಟೂ ಹೊತ್ತು ಆಯ್ದ ಹತ್ತು ಹಾಡುಗಳು repeat ಆಗುತ್ತಲೇ ಇರುತ್ತವೆ.

ಅಕ್ಷಯ ಚಿತ್ರಗಳು

ಅಕ್ಷಯ್ ನನಗೆ ಹತ್ತಿರದ ಪೋರ.  ಕಾರ್ತೀಕ್ ಕೂಡಾ.  ಒಬ್ಬ ನನ್ನೂರಿನ ಬಲಬದಿಯಿಂದ ಬಂದವನಾದರೆ, ಮತ್ತೊಮ್ಮ ಎಡಬದಿಯ ಊರಿಂದ ಬಂದವನು.  ಇಲ್ಲಿ, ಎಡ ಬಲ ಇಲ್ಲದ ಬೆಂದಕಾಳೂರಿನಲ್ಲಿ ಒಂದೇ ಊರಿನವರು! ಅಕ್ಷಯ ಅದ್ಭುತವಾಗಿ ಚಿತ್ರ ಬಿಡಿಸಿದರೆ ಕಾರ್ತೀಕ್ ಸುಂದರವಾಗಿ ಬರೆಯುತ್ತಾನೆ. ಇಬ್ಬರೂ ಹುಚ್ಚು ಹಿಡಿದಂತೆ ಸಿನೆಮಾ ನೋಡುವವರು. ಬಿಡಿ, ಹೇಳುತ್ತಾ ಹೋದರೆ ಬಹಳಷ್ಟಿದೆ. ಅವೆಲ್ಲ ‘ಖಾಸಬಾತ್’ಗಳು.  ನಾನು ಹೇಳಿಯೇ ತಿಳಿಯಬೇಕಿಲ್ಲ ಅದೆಲ್ಲ. ಇವತ್ತಲ್ಲ ನಾಳೆ ತಾನೇ ತಾನಾಗಿ ತಿಳಿಯುತ್ತೆ…
ವಿಷಯ ಏನಪಾ ಅಂದ್ರೆ, ಈ ಅಕ್ಷಯ ಒಂದು – ಒಂದಲ್ಲ ಐದಾರು – ಚಿತ್ರ ಬಿಡಿಸಿದ. ಆ ಎಲ್ಲ ಚಿತ್ರಗಳ ಪ್ರದರ್ಶನವಾಯಿತು.  ನಾವು ಆರೆಂಟು ಜನ ಅಲ್ಲಿ ಕುಳಿತು ಹರಟಿದ್ದೂ ಆಯಿತು.  ಹರಟೆಯ ನಡುವೆ ಚಿತ್ರವೊಂದನ್ನು ಹೊಗಳಿದ್ದೂ ಆಯಿತು..  ಚಿತ್ರ ಇಲ್ಲಿದೆ:
ಇಷ್ಟಕ್ಕೆ ಮುಗಿಯಬೇಕಿದ್ದುದನ್ನು ಕಾರ್ತೀಕ ಮುಂದುವರೆಸಿದ.  ಮೈಯೆಲ್ಲಾ ಶಾಯಿ ತುಂಬಿಕೊಂಡವನಂತೆ ಪದ್ಯವೊಂದನ್ನು ಬರೆದು ಜಿ-ಮೇಲಿಸಿ ಹೇಗಿದೆ? ಅಂದ.  ಇದು ಅದಲ್ಲ, ಅದು ಇದಲ್ಲ ಅನ್ನುತ್ತ ನಾನೂ ಒಂದು ಕೈ ನೋಡೋಣವೆಂದು ನಾಲ್ಕಕ್ಷರ ಗೀಚಿಬಿಟ್ಟೆ..   ಕಾರ್ತೀಕನ ಸಾಲುಗಳನ್ನು ನೋಡಿ:
ಮೈಯೆಲ್ಲಾ ಶಾಯಿ
ಎಲ್ಲಿದ್ದೀಯಾ ತಾಯಿ…

ಕಣ್ಣುಗಳಲ್ಲಿ
ಅರೆ ಕುಡಿದ ಕಾಫಿ ಲೋಟ
ಮುಖದ ಎಳೆಯ ಗೆರೆ
ಟ್ರಾಫಿಕ್ಕು ಜಾಮಿನ ಹೆದ್ದಾರಿ

ಭೂಪಟದಲ್ಲಿ ಮಲಗಿದ ಮಗು
ಲೇಔಟಿನ ಗೆರೆಗಳೇ ಅಮ್ಮನ ಸಾಂತ್ವನ
ಚಾಚಿದ ಕೈಗಳಲ್ಲಿ ಕಾಣುತ್ತಿದೆ
ಎಕರೆಗಳು
ಬೊಗಸೆಯೂ ಮೇಸ್ತ್ರಿಗಳಿಗೆ ಗುತ್ತಿಗೆಗಿದೆ

ಅದೇನು ಅವಕಾಶದ ಕೈಯೋ
ಆಕಾಶದ ಕೈಯೋ
ಬಸಿರೇ ಒಡೆದು ಬಡಬಡಿಸುವಂತೆ
ನೆತ್ತರಿಗೆ ಹಸಿರು, ನೀಲಿ, ಹಳದಿ ಬಣ್ಣ ಸಿಕ್ಕಂತೆ
ಬೆರಳಿಗೆಲ್ಲ ಬಿಳುಪಿನ ಹೊಳಪು
ಕೊಳೆ ಕೊಳೆ ಉಗುರಲ್ಲಿ
ಹೊಳೆಯುತಿದೆ ಹಾಲು
ಬಣ್ಣದ ಚಂದ್ರನಂಚು
ಮೈಯೆಲ್ಲಾ ಶಾಯಿ
ಎಲ್ಲಿದ್ದೀಯಾ ತಾಯಿ…

ಒಂದೇ ಬಿಂದುವಿನಿಂದ
ಹರಿದ ರೇಖೆಗಳು
ಹರಿದಿವೆ, ಬೆಸೆದಿವೆ
ಮತ್ತೊಂದು ಕೂಡಿಕೊಂಡು
ಮಗದೊಂದು ಹರಿದುಕೊಂಡು
ಎಲ್ಲವೂ ಹರಿಚಿತ್ತ
ಕ್ಷಣಕೆಲ್ಲ ಪರಚಿತ್ತ

ಬೇಡುತ್ತಿವೆ ಕೈಗಳು
ಉರುಳಬೇಡ ಹೊರಳಬೇಡ
ಚಪ್ಪಟೆಯಾದೀತು ಭೂಪಟ
ಬೀಳುತ್ತಿದೆ ನಿದ್ದೆಯಲ್ಲಿ ಕನಸು
ಚಾಮರ ಬೀಸಿದಂತೆ ಗೂಗಲ್ ಮ್ಯಾಪು

ಹುಡುಗನ ಕಣ್ಣಿನ
ಗಾಜಿನ ಲೋಟ ಒಡೆದು
ಕಾಲವಾಗಿರುವುದು
ಗೊತ್ತಿದ್ದೂ ಗೊತ್ತಿಲ್ಲದ ಸತ್ಯ

ಅಕ್ಷಯನ ಚಿತ್ರಗಳು, ಕಾರ್ತೀಕನ ಬರಹಗಳ ಜೊತೆಗೆ ನಾನು ಗೀಚಿದ ಸಾಲುಗಳೂ ಸೇರಿಕೊಂಡು, ಈಗ ಮಯೂರದಲ್ಲಿವೆ. ಜೊತೆಗೆ ನಾಕು ಮಾತುಗಳು.  ಚಿತ್ರಕ್ಕೆ, ಅದರ ಜೊತೆಗಿನ ಸಾಲುಗಳಿಗೆ ನಿಮ್ಮದೊಂದು ಅಭಿಪ್ರಾಯ ಸಿಗಲಿ.  ನನ್ನ ಗೀಚುವಿಕೆಯ ಫಲ ಇಲ್ಲಿದೆ.

ಈ ಶಹರದ ಅಂಗೈಯೊಳಗೆ

ಒಡಲ ಜೀವದ ಜಾಲ
ಹಿಡಿದಿಟ್ಟ ಹೊಕ್ಕಳ ಬಳ್ಳಿ ಹರಿದು
ಪಿಳಿಗುಡುತ್ತ ಪಡೆದ ಅಂಗೈ ಆಸರೆಯಲ್ಲಿ
ಮೊದಲ ಉಸಿರು ಮೊದಲ ಅಳು
ಮೊದಲ ನೋಟ ಮೊದಲ ಮಾಟ
ಅಂಗೈಯಿಂದ ಅಂಗೈಗೆ ಬದಲಾಟ

ಕೈ ಮಿಲಾಯಿಸಿ ಬಿಗಿದಪ್ಪಿ ನಕ್ಕು
ಅಸಂಖ್ಯ ರೇಖೆಗಳ ರಸ್ತೆಯಂತಿರುವ
ಅಂಗೈ ತುಂಬಾ ಸಿಹಿಯಿಟ್ಟು
ಸೆಕೆಂಡೂ ಬಿಡದೆ ಬರೆಸಿಟ್ಟ ಜಾತಕ
ಈಗಲೇ ಭವಿಷ್ಯ ನೋಡುವ ತವಕ

ಬಿಗಿದ ಮುಷ್ಟಿಯೊಳಗೆ
ಬಂಧಿಯಾಗಿರುವ ಭವಿಷ್ಯದ ಗೆರೆ
ಬಿಡಿಸಿ ನೋಡಬೇಕು ಕೂಡಲೇ

ಅಕೋ, ಆಗಲೆ ಶುರು ಅಲ್ಲಿ
ಇದು ನನ್ನಂತೆ ಇದೆ ನಿನ್ನಂತಲ್ಲ
ಕಣ್ಣು ಮೂಗು ಹುಬ್ಬು ಎಲ್ಲ ತಿದ್ದಿಟ್ಟಂತೆ
ಇದರ ಹೆಸರು ’ಹ’ದಿಂದಲೇ ಶುರುವಾಗಬೇಕು
ಚೈಲ್ಡ್ ಪ್ಲಾನಿನ ಮೊತ್ತ ಇಷ್ಟೇ ಇರಬೇಕು

ಇದೇ ಶಹರದ ಅಂಗೈಯೊಳಗೆ
ಹರಡಿದ ಅಸಂಖ್ಯ ರೇಖೆಗಳ ನಡುವೆ
ನಿರಂತರ ಚಲಿಸುವ ಜೀವಗಳ ಸಾಲಿಗೆ
ಅಪರಿಮಿತ ಸಂತೊಷದ ಪಾಲಿಗೆ
ಸೇರುತ್ತಿವೆ ಈ ಎಳೇ ರೇಖೆಗಳು
ಬಲಿತು ಉಪ ರೇಖೆಗಳನ್ನು ತನ್ನೊಡಲಿಗೆ ಸೇರಿಸಿಕೊಳ್ಳಲು

ಇವುಗಳ ನಡುವೆಯೇ ಇವೆ ನೋಡಿ
ಶಹರದ ಅಂಗೈ ಹುಣ್ಣಿನಂತೆ
ಯಾರದೋ ತಪ್ಪಿಗೆ ತಾವು ಶಿಕ್ಷೆ ಅನುಭವಿಸುತ್ತ
ಸಂಕೀರ್ಣ ರೇಖೆಗಳ ಬೆರಳ ತುದಿಯ
ಉಗುರ ಕೆಲ್ಲು ತೋರಿಸುತ್ತ
ಮತ್ತೆ ಹೊಕ್ಕಳ ಬಳ್ಳಿಯನ್ನು ಅರಸುವ
ಅನಾಮಿಕ ಎಳೆಯ ಪಾದಗಳು

ಎಲ್ಲ ಕಡೆದಿಟ್ಟಂತಿದೆ
ಕಣ್ಣು ಹುಬ್ಬು ಮೂಗು ಮೈಮಾಟ..
ಇದು ಥೇಟು ನಿನ್ನಂತೆ ಅನ್ನುವವರು ಮಾತ್ರ
ಹುಡುಕಿದರೂ ಸಿಗುತ್ತಿಲ್ಲ

ಸೋತು ಹೋಗಿವೆ
ಬಲಿಯುವ ಬಹಳ ಮುನ್ನವೇ
ಭವಿಷ್ಯದ ಅಸಂಖ್ಯ ಗೆರೆಗಳ ಹೊತ್ತ
ಶಹರದ ಒಳಗೆ
ಪದೇ ಪದೆ ಕಳೆದು ಹೋಗಿವೆ.

ವಿಜಯಲಕ್ಷ್ಮಿ

ಹೆಸರು ಮಾತ್ರ – ವಿಜಯಲಕ್ಷ್ಮಿ.

ಆದರೆ  ಆಕೆ ಸೋತಿದ್ದಾಳೆ. ನನಗೆ ಹಾಗೂ ಆಕೆಯ ಇತರೆ ಮಿತ್ರರಿಗೂ ಸಹ ಸೋಲು ಇದು.
 
 
ಕೋಳಿ ಎಂದೇ ಕರೀತಿದ್ವಿ ಅವಳನ್ನ. ಹೆಚ್ಚಿನ ಸಂದರ್ಭಗಳಲ್ಲಿ ನೀಲಿ ಅಥವಾ ನೀಲಿಯ ಆಸುಪಾಸಿನದೊಂದು ಜೀನ್ಸು, ಸ್ವಲ್ಪ ಮಂದವೆನ್ನಿಸುವ ಬಣ್ಣದ, ಗರಿಗರಿಯಾದ ಟೀಶರ್ಟಿನಲ್ಲಿರುತ್ತಿದ್ದ ವಿಜಯಲಕ್ಷ್ಮಿ ಮೊದಲು ಸಿಕ್ಕಿದ್ದು ಬೆಳಗಾವಿಯ ಕೆಎಲ್ಈ ಆವರಣದಲ್ಲಿ. ಮೊದಲ ಮಾತಿಗೆ ಸಿಕ್ಕಿದ್ದು ಅದೇ ಕಾಲೇಜಿನ ಬದಿಯಲ್ಲಿರುವ ಪವ್ಯಾ ಎಂಬವನ ಅಂಗಡಿಯಲ್ಲಿ. ಬಗಲಲ್ಲೊಂದು ಚೀಲ ಹಾಕಿಕೊಂಡು ಬೆಳಗಾವಿಗೆ ಬಂದಿಳಿದಿದ್ದವರ ಪೈಕಿ ಮೊದಲಿಗೆ ಹತ್ತಿರವಾದರಲ್ಲಿ ಇವಳೂ ಒಬ್ಬಳು.
 
 
ಹೆಚ್ಚೂ ಕಡಿಮೆ ಆರು ಫೂಟು ಎತ್ತರವಿದ್ದ ನಾವು, ಐದೂವರೆಯ ಆಸುಪಾಸಿನ ಉದ್ದವಿದ್ದ ಹುಡುಗಿಯರ ನಡುವೆ ಐದಕ್ಕೂ ಚೂರು ಕಡಿಮೆಯೇ ಇದ್ದ ಈ ವಿಜಯಲಕ್ಷ್ಮಿ – ಒಂದು ಸಂದರ್ಭದಲ್ಲಿ – Centre Of Attraction ಆಗಿದ್ದಳು ಎಂದರೆ ತಪ್ಪೇನಿಲ್ಲ. ಕುತ್ತಿಗೆಯನ್ನು ಮೀರಿ ಬರದ ಕ್ರಾಪ್ ಹಾರಿಸುತ್ತ ಬರುತ್ತಿದ್ದವಳು ಹೆಚ್ಚೇ ಅನ್ನಿಸುವಷ್ಟು ’Traditional’ ಮನಸ್ಥಿತಿ ಹೊಂದಿದ್ದಾಳೆ ಎಂಬುದು ಆಕೆಯ ಕುರಿತಾಗಿ ಇನ್ನಷ್ಟು ಆಸಕ್ತಿ ಮೂಡಿಸಿತ್ತು.
 
 
ಗುಂಡುಗುಂಡಾಗಿದ್ದ ವಿಜಯಲಕ್ಷ್ಮಿ ತನ್ನಷ್ಟೇ ಬೆಳ್ಳಗೆ ನಗುತ್ತ, ತಮಾಷೆ ಮಾಡುತ್ತ, ಒಮ್ಮೊಮೆ ಇದ್ದಕ್ಕಿದ್ದಂತೆ ಯಾರಿಗೂ ಸಿಗದೆ ಯಾವುದೋ ಲೋಕದಲ್ಲಿ ಇರುತ್ತಿದ್ದವಳು. ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಮೃದು ಮಾತು. ಅದಕ್ಕಿಂತ ಸ್ವಲ್ಪ ದೊಡ್ದ ನಗು. ಆವತ್ತಿಗೆ ನಾನಿರುತ್ತಿದ್ದ ಭಾಗ್ಯನಗರದ ಮನೆಗೆ ಖಾಯಂ ಅತಿಥಿ ಆಕೆ. ಅಲ್ಲೇ ಇರುತ್ತಿದ್ದ ಅಕ್ಕನಿಗೂ ಹತ್ತಿರಾಗಿದ್ದಳು. ಪಟ್ಟಾಗಿ ಓದಲು ಕುಳಿತರೆ ದಿನಗಟ್ಟಲೆ ಓದುತ್ತಿದ್ದಳು. ಬೇಕಷ್ಟು ಜಾಗವಿದ್ದ ಆ ಮನೆಯಲ್ಲಿ ಕನಿಷ್ಟ ನಾಲ್ಕೈದು ಜನ ಸೇರುತ್ತಿದ್ದೆವು. ಅಲ್ಲೇ ಊಟ. ಅಲ್ಲೇ ಓದು. ಅಲ್ಲೆ ಹರಟೆ. ಅಲ್ಲೆ ನಿದ್ದೆ. ಅಲ್ಲಿದ್ದವರ ಪೈಕಿ ಓದುವುದೊಂದು ಕೆಲಸ ಮಾಡದಿರುತ್ತಿದ್ದವನು ನಾನೊಬ್ಬ ಮಾತ್ರ. ಆದರೆ ನಾನು ಉಳಿದೆಲ್ಲವರಿಗಿಂತ ಹೆಚ್ಚು ನೋಟ್ಸ್ ಮಾಡುತ್ತಿದ್ದೆ. ಉಳಿದಂತೆ ನನಗೆ ನನ್ನದೇ ಆದ ಹತ್ತು ಹಲವುಗಳಿದ್ದವು!! ಒಂದು ಹಂತದಲ್ಲಿ ಅವೆಲ್ಲವನ್ನೂ ಬಿಟ್ಟು ತಕ್ಕ ಮಟ್ಟಿಗೆ ಓದುವಂತೆ ಮಾಡಿದ್ದು ಈ ವಿಜಯಲಕ್ಷ್ಮಿಯೇ ಎಂದರೂ ತಪ್ಪಗಲಿಕ್ಕಿಲ್ಲ.
 
 
ನಾವು ನಾಲ್ಕೈದು ಜನ ಒಟ್ಟಿಗೆ – ಬುಡಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಮಾತ್ರ – ಓದುವಾಗೆಲ್ಲ ಈ ವಿಜಯಲಕ್ಷ್ಮಿಯ ಜೊತೆ ಆಕೆಯ ಸಂಬಂಧಿಯೊಬ್ಬ ಬರುತ್ತಿದ್ದ. ವಾಸು. ಆತನಿಗೊಂದು ಕೆಲಸವಿದೆ, ಅದಕ್ಕಾಗಿ ಬೆಳಗಾವಿಯಲ್ಲಿರುತ್ತಾನೆ ಎನ್ನುವ ಉತ್ತರವೊಂದು ನಮಗೆ ಸಿಕ್ಕಿತ್ತಾದರೂ – ಆತ ಏನು, ಕೆಲಸ ಯಾವ ತರದ್ದು, ಕೆಲಸವಿದ್ದವನು ದಿನ ಪೂರ್ತಿ ಯಾಕೆ ಕುಳಿತಿರುತ್ತಾನೆ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ಒಂದು ಮಾತ್ರ ಸ್ಪಷ್ಟವಿತ್ತು – ವಾಸುವಿಗೆ ಆಕೆಯ ಮೇಲೆ ಮನಸಿತ್ತು. ಆಕೆ ದೂರವಿಟ್ಟಷ್ಟೂ ಆತ ಹತ್ತಿರಾಗುವ ಪ್ರಯತ್ನ ಮಾಡುತ್ತಿದ್ದ ಎನ್ನುವುದು ನಮ್ಮ ಗಮನಕ್ಕೆ ಬಂದಿತ್ತು. ಆದರೆ, ಪ್ರತಿಯೊಂದೂ ಅಸ್ಪಷ್ಟ.
 
 
ವಿಜಯಲಕ್ಷ್ಮಿ ಬೆಳಗಾವಿಯಲ್ಲಿರುವಾಗಲೇ ಅಮ್ಮನನ್ನು ಕಳೆದುಕೊಂಡವಳು. ಅಷ್ಟರ ನಂತರ ತಾನಾಯಿತು, ತನ್ನ ಓದಾಯಿತು ಎಂದು ತನ್ನದೇ ಆದ ಪರಿಧಿಯೊಳಗಿದ್ದವಳು. ಬೆಳಗಾವಿಯಿಂದ ಹೊರಬರುವ ಹೊತ್ತಿಗೆ ಆಕೆ ಎಷ್ಟೇ ಹತ್ತಿರವಿದ್ದಳು ಎಂದರೂ ಮೊದಲಿದ್ದಷ್ಟು ಹತ್ತಿರ ಇರಲಿಲ್ಲ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೊರಟ ನಂತರದಲ್ಲಿ ಹೆಚ್ಚಿನವರ ಸಂಪರ್ಕವೂ ಕಡಿದು ಹೋದಂತಾಗಿತ್ತು. ನಡುವಲ್ಲೊಮ್ಮೆ ದಾರಿಯಲ್ಲಿ, ಮತ್ತೊಮ್ಮೆ ಟ್ರೈನಿನಲ್ಲಿ ಸಿಕ್ಕಿದ್ದು ಬಿಟ್ಟರೆ ಪೂರ್ತಿ ಮೂರು ವರ್ಷಗಳ ಕಾಲ ಎಲ್ಲಿ, ಎನು ಅನ್ನುವುದೂ ಗೊತ್ತಿಲ್ಲದಂತೆ ಕಳೆದು ಹೋಗಿತ್ತು. ಆಕೆ, ‘Toshiba’ದಲ್ಲಿ ಕೆಲಸ ಮಾಡುತ್ತಾಳೆ ಎಂಬ ವಿಷಯದ ಹೊರತಾಗಿ.
 
 
ಮತ್ತೆ ಸಂಪರ್ಕವಾದದ್ದು ಈಗ ಹತ್ತಿರತ್ತಿರ ಒಂದು ವರ್ಷದ ಹಿಂದೆ. ಬರೀ ಮಾತು, mail, Chattingನಲ್ಲೇ ವಿಷಯ ವಿನಿಮಯವಾದದು ಬಿಟ್ಟರೆ ಭೇಟಿ ಇನ್ನೂ ಆಗಬೇಕಿತ್ತು. ಆಕೆಗೆ ಅನುಕೂಲವಿದ್ದ ಸಮಯದಲ್ಲಿ, ಮಲ್ಲೇಶ್ವರಕ್ಕೆ ಬಂದ ಹೊತ್ತಿನಲ್ಲಿ ನಾನಿಲ್ಲದಿದ್ದರೆ, ನನಗೆ ಅನುಕೂಲವಿದ್ದ ಹೊತ್ತಿನಲ್ಲಿ ಆಕೆಗ್ಯಾವುದೋ ತೊಂದರೆ. ಎರಡು ಬಾರಿ ಅವರ ಮನೆಗೆ ಹೋಗಬೇಕಿದ್ದವನು, ಒಮ್ಮೆ ಆಕೆಯ ತಮ್ಮನಿಗೇನೋ ಆಕ್ಸಿಡೆಂಟ್ ಆಗಿದೆಯೆಂದೂ, ಮತ್ತೊಮ್ಮೆ ಆಕೆಯ ಅಪ್ಪನ ಶ್ರಾದ್ಧವಿದೆಯೆಂದೂ ಹೋಗಲಾಗದೆ ಉಳಿದೆ. ಅಪ್ಪನೂ ಹೋದ ವಿಷಯ ತಿಳಿದದ್ದು ಆಗಲೇ..
 
 
ಇತ್ತೀಚಿಗೆ ಅಕೆಯ ತಮ್ಮನಿಗೊಂದು ಕೆಲಸ ಸಿಕ್ಕಿತ್ತು. ಚೆನ್ನೈಯಲ್ಲಿ. ಈಕೆ ಒಬ್ಬಳೇ ಇರುತ್ತಿದ್ದಳು. ನಡುವೆ ಬೇರೆ ಕೆಲಸ ಹುಡುಕಬೇಕು ಅನ್ನುತ್ತಿದ್ದವಳು, ಈಗ ಒಂದು ತಿಂಗಳಿನಿಂದ ಮಾತಿಗೂ ಸಿಕ್ಕಿರಲಿಲ್ಲ. Online ಬರುತ್ತಲೇ ಇರಲಿಲ್ಲ..
 
 
ನಿನ್ನೆ ರಾತ್ರಿ ನಂಬಲೇ ಆಗದ ಸುದ್ದಿ ಬಂದಿದೆ. ವಿಜಯಲಕ್ಷ್ಮಿ ಇನ್ನಿಲ್ಲ. ಈಗಷ್ಟೇ ಇಪ್ಪತ್ತೆಂಟು ಮುಗಿಸಿದವಳು, ಬದುಕನ್ನೇ ಮುಗಿಸಿ ಹೋಗಿದ್ದಾಳೆ. ಯಾಕೆ, ಏನು, ಹೇಗೆ.. ಎಂಬೆಲ್ಲ ಪ್ರಶ್ನೆಗಳನ್ನು ಕೇಳದೇ ಉತ್ತರಗಳು ಬರುತ್ತಿವೆ. ಉತ್ತರದ ಜೊತೆ ಮತ್ತೆರಡು ಪ್ರಶ್ನೆ.
 
ಮತ್ತೆ ಸಿಗುವುದೊಂದು ವಿಚಾರ ಅನಿರೀಕ್ಷಿತವಾಗಿ ಹಾಗೆ ಉಳಿದು ಹೋಗಿದೆ.
 
 
ಅಲ್ಲಿ, ಊರಲ್ಲಿ, ಮನೆಗೆ ಹತ್ತಿರವೇ ಇರುವ ಶಾಲೆಯ ಮಾಸ್ತರಾಗಿದ್ದ – ನಮ್ಮ ಗೆಳೆಯರೂ ಆಗಿದ್ದ – ಪೀಕೆ ನಲವತ್ತೈದಕ್ಕೇ ಬದುಕು ಮುಗಿಸಿದ್ದಾರೆ. ಅದ್ಯಾವುದೋ ನಾಲ್ಕು ದಿನಕ್ಕೇ ಕೊಂದು ಬಿಡುವ ರೊಗ ಬಂದಿದೆ ಅಲ್ಲೀಗ. ಪೀಕೆ ಹೆಂಡತಿ ಹಾಗೂ ಮೂರು ಸಣ್ಣ ಮಕ್ಕಳನ್ನು ಬಿಟ್ಟು ಹೊರಟಾಗಿದೆ.
ಇಲ್ಲಿ, ಬದುಕು ನಿಲ್ಲುವಂತಿಲ್ಲ. ನಿನ್ನೆಯಿಂದ ಯಾಂತ್ರಿಕವಾಗಿ ಸಾಗುತ್ತಿದೆ ಪ್ರತಿಯೊಂದೂ. Such ruthless world this is..