Archive

Posts Tagged ‘ಕೆಂಡಸಂಪಿಗೆ’

ಬರಿ ಮಾತು

ಈ ಮಾತು ಕತೆಯೆಲ್ಲ ಬರೀ ಸುಳ್ಳೇನಲ್ಲ
ಆದರೂ, ಮೌನ ಮಾತ್ರ ಪರಮ ಸತ್ಯ
 
ಈಗಂದಿದ್ದು ಈಗ ಸುಳ್ಳಾದೀತು
ಇಂದಿನ ಮಾನ-ದಂಡಗಳು
ನಾಳೆಯಾಗುವಷ್ಟರಲ್ಲಿ ಬರಿ ದಂಡ
ಹೊದ್ದು ಮಲಗಿದ ಚಾದರದೊಳಗೆ
ಚಳಿ ಹೊಕ್ಕಿ ಮೈಯೆಲ್ಲ ಬಹಳೇ ಥಂಡಾ
 
ನಿನ್ನ ಕೊರಳೊಳಗೆ ಉಳಿದ
ಶಬ್ದಕ್ಕೆ ಒಂದೆಳೆ ಸರದ ಶೃಂಗಾರ
ಎಳೆ ಎಳೆ ಹೊರಬಿದ್ದರೆ ನಾಳೆ
ಮಾನ ಸಮ್ಮಾನ ಬಹುಮಾನ ಪದಕ
ಇಲ್ಲವಾದರೆ ಸುಖಾಸುಮ್ಮನೆ ಎದೆಭಾರ
 
ಇವತ್ತಿಗಿನ್ನೂ ಬಲಿತಿರದ ಮಾತು
ನಾಳೆ ಕತೆಯೇ ಆದೀತು
ಪದ ಪದ ಸೇರಿ ಫೇರಿ ಹೊರಟರೆ
ಬೆಳಕಿನ ಕೊಲುಗಳಿಗೊಂದು ಅವಶ್ಯ ಸಾಥ ಸಿಕ್ಕೀತು
 
ಅವಕಾಶಗಳ ಜೋತು ಹೊರಳಿಕೊಂಡರೆ ನೀನು
ಮಗ್ಗುಲಿನೊಳಗೆ ಸಿಕ್ಕುಬಿದ್ದಿದೆ ನಿನ್ನೆ
ನಾಳೆ ಹೀಗೇ ಇರಬೇಕು ಅಂದುಕೊಂಡರೆ
ತಯಾರು ಕುಳಿತ ಕಳ್ಳಮಳೆ ಎಲ್ಲಿ ಹೋಗಬೇಕು ಹೇಳು
 
ನೀನು ಅಲ್ಲಿದ್ದರೆ ನಾನು ಇಲ್ಲೇ
ಅಪ್ಪಿ ತಪ್ಪಿ ಗೆರೆ ದಾಟಿದರೆ ಪಕ್ಕಾ ಮಳ್ಳೇ
ರಾಶಿ ಬಿದ್ದ ಪೇಪರಿನಿಂದೆದ್ದ ದಿನ
ಭವಿಷ್ಯದಲ್ಲಿ ನಿನ್ನದು ಸರಿಯೋ ನನ್ನದೋ?
ಭವಿಷ್ಯಕ್ಕೆ ನೂರು ನಂಟುಗಳಿದ್ದರೂ
ನೇರ ಸಂಬಂಧಿ ನಾನೆ ಅನ್ನುತ್ತಿದೆ ಭೂತ
ವರ್ತಮಾನ ಮಾತ್ರ ಇಲಾಖೆಯ ಮೇಜಿನಡಿ
ಲೆಕ್ಕಾಚಾರ ಹಾಕಿ ವಾದ ಮಂಡಿಸುತ್ತ ಮಲಗಿಬಿಟ್ಟಿದೆ 
 
ಬೆರಳುಗಳ ತುದಿಯಲ್ಲಿ ಬಿಟ್ಟಿ ಕೂತಿಲ್ಲ ಪದ
ಹೊರಬಂದರೆ ಸ್ವರ ಸೇರಿ ಮಸ್ತ್ ಮಜಾ
ಎಷ್ಟು ಹೇಳಿದರೂ ಉಳಿದದ್ದೇ ಹೆಚ್ಚು
ಉಳಿಸಿಕೊಂಡರೆ ಯಾಕೋ ಬಿಡಲಾರದ ಹುಚ್ಚು
 
ದಕ್ಕೆ ಹತ್ತಿ ಕೂತಿದೆ ಮಾತು
ದಂಡೆ ತುಂಬ ಬಿಸಿ ಬೇಳೆ ಬಾತು
ವಿಲಿವಿಲಿ ಒದ್ದಾಡಿ ಬಲೆಯ ಹಸಿಮೀನು
ಕೊನೆಗೂ ನೋಡಿದ್ದು ಹಸಿಮರಳೇ ಆತು
 
ಮಾತುಗಳ ತಕ್ಕಡಿಯಲ್ಲಿ ತೂಕದ ಕಲ್ಲು
ಹಿಡಿದು ತೂಗಿದರೆ ಲೆಕ್ಕಕ್ಕೇ ಸಿಗದು
ನನ್ನ ರಗಳೆಗಳಿಗೆಲ್ಲ ಇನ್ನು ಇಳಿತದ ಹೊತ್ತು
ಭರತಕ್ಕೆ ಸರಿಯಾಗಿ ನೀನಿನ್ನು ಹೊರಡು.

(ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆ!! ಓದಬಹುದು)

ನಾನೀಗ ರಾಧೆಯಲ್ಲ….

ನಾನೀಗ ರಾಧೆಯಲ್ಲ….
ಯಾವುದೂ ನನ್ನದಲ್ಲ, ಯಾರೂ ಕೂಡಾ
ಒಬ್ಬ ಕೃಷ್ಣನ ಹೊರತಾಗಿ.
ಜಗತ್ತಿನ ಎಲ್ಲವನ್ನೂ ನೋಡುತ್ತಿದ್ದೇನೆ..
ಆದರೆ ಬೆರಗು ಹುಟ್ಟಿಸಿದ್ದು ಅವ ಮಾತ್ರ
 
ನಿಮ್ಮೆಲ್ಲರ ನಡುವೆ ಮನದೊಳಗೆ     
ಅಪರಿಚಿತಳಾದರೂ ಅಪರಾಜಿತೆ ನಾನು 
ಅವನ ನೆನಪೂ ಸುಖ ನೀಡುತ್ತಿದೆ
ಕಣ್ಣೀರು ಒರೆಸುವ ಹಕ್ಕು ಆ ಕೃಷ್ಣನಿಗೆ ಮಾತ್ರ
 
ನಿರೀಕ್ಷೆ ಮೀರಿ ಬೆಳೆದಿದೆ, ಬೆಳೆಯುತ್ತಿದೆ
ನಾನೇ ನೆಟ್ಟ ಪ್ರೇಮದ ಬೀಜ
ವಿಷವುಣಿಸಿದರೂ ಉಂಡೀತು ಖುಷಿಯಿಂದ
ಕೃಷ್ಣನ ಮಡಿಲಲ್ಲಿ ಏನೂ ಆಗಲಿಕ್ಕಿಲ್ಲ.
 
ನಾನೀಗ ರಾಧೆಯಷ್ಟೇ ಅಲ್ಲ ರಾಗವೂ ಹೌದು
ಗೋಕುಲದ ಕೊಳಲ ನಾದವೂ ಹೌದು.
*****************************

ಅನುಮಾನಿಸುತ್ತಲೇ ಬಂದವನಿಗೊಂದು ಅನಿರೀಕ್ಷಿತ ಸ್ವಾಗತ…

ಬ್ಲಾಗುಗಳ ಲೋಕಕ್ಕೊಂದು ಚಂದದ, ಅನಿರೀಕ್ಷಿತವೂ ಆದ, ಸ್ವಾಗತ ಸಿಕ್ಕಿದ್ದಾಗಿದೆ. ಆದೂ ಬ್ಲಾಗುಗಳ ಜಗತ್ತಿಗೆ ಹೊಕ್ಕು ಒಂದೆರಡೆ ದಿನದೊಳಗೆ . ( ನನ್ನದು ಅನ್ನೋ ಬ್ಲಾಗ್ ಕಳೆದೆರಡು ತಿಂಗಳಿಂದ ಇದ್ದರೂಶ್ರಂಗಾರ ಮಾಡಿ ನಾಲ್ಕು ಜನರಿಗೆ ಸಿಗುವಂತೆ ಆದದ್ದು ವಾರದಲ್ಲೇ). ಅನುಮಾನಿಸುತ್ತಲೇ ಬಂದವನ ಆದರದಿಂದ ಬರಮಾಡಿಕೊಂಡ ಕೆಂಡಸಂಪಿಗೆಯ‘  ಜತೆಂದ್ರ ಅವರಿಗೆ ಧನ್ಯವಾದ ಹೇಗೆ ತಿಳಿಸಬೇಕೋ ತಿಳಿತಾ ಇಲ್ಲ…. ಕಳೆದೆರಡು ದಿನದಲ್ಲೇ ಹಲವು ಅತಿಥಿಗಳು ಬಂದು ಹೋಗಿದ್ದೂ ಆಯ್ತು ನನ್ನ ಮನೆಗೆ.. ಒಂದು ಚಿಕ್ಕ ಸಂತೋಷ ಅನುಭವಿಸಿದ್ದೇನೆ

ಚಿಕ್ಕದೊಂದು ಆಸೆಯಿದೆ. ಬ್ಲಾಗುಗಳ ಸಾಮ್ರಾಜ್ಯದ ಚಿರಪರಿಚಿತ ಹೆಸರುಗಳ ಆಶೀರ್ವಾದ ತಗೋಬೇಕು ಅಂತ. ಜೊತೆಗೆ ನಿಮ್ಮೆಲ್ಲರದೂ….. ಮನೆಗೊಮ್ಮೆ ಬಂದ್ಹೋಗಿ

ನಿಮ್ಮವ

ಕಲ್ಲರೆ