Archive

Posts Tagged ‘ಚಿಟ್ಟೆ ಹೆಜ್ಜೆ ಜಾಡು’

ಚಿಟ್ಟೆ ಹೆಜ್ಜೆ ಜಾಡು

 ನಾನು ಬೆಂದಕಾಳೂರಿನಲ್ಲಿದ್ದರೆ ಭಾನುವಾರದ ಬೆಳಗು ’ಕ್ರಿಕೆಟ್’ಗೆ ಮೀಸಲು. ಆಟ, ಮಾತು, ಗೋಲಿ ಸೋಡಾ, ಕಟ್ಟೆ ಕಥೆ, ಅರ್ದರ್ಧ ಚಾ, ತಿಂಡಿ…ಪೂರ್ತಿ ಅರ್ಧ ದಿನ ಬೇಡುತ್ತದೆ ಭಾನುವಾರ. ಹಳೆ ಗೆಳೆಯರು ಸಿಗುವುದು ಅಲ್ಲೆ. ಊರು ಕೇರಿಯವರ ಭೇಟಿಯಾಗುವುದು ಅಲ್ಲೆ. ಹೊಸ ಸುದ್ದಿ ಸಿಗುವುದೂ ಅಲ್ಲೇ. ಆದರೆ ನಿನ್ನೆಯ ಮಟ್ಟಿಗೆ ಆ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಚಿಟ್ಟೆ ಹುಡುಕಿ ಹೊರಟುಬಿಟ್ಟೆ. ಮಲ್ಲೇಶ್ವರದಿಂದ ಹೊರಟ ಹತ್ತು ಹದಿನೈದು ನಿಮಿಷದಲ್ಲಿ ಚಿಟ್ಟೆಯ ಜಾಡು ಸಿಗುತ್ತೆ ಅಂದುಕೊಂಡರೂ ನಾವು ತಲುಪುವಾಗ ಹತ್ತಿರ ಹತ್ತಿರ ಹನ್ನೊಂದು. ಅಂದರೆ ಹತ್ತು ಐವತ್ತೈದು!

ಚಿಟ್ಟೆ ಅತಿಥಿಗಳ ನಡುವೆ ಕುಳಿತಿತ್ತು.

ಬಲಬಾಗಿಲಿನ ಹಿಂದಿನ ಸೀಟಿನಿಂದ ಕುತ್ತಿಗೆ ಊದ್ದ ಮಾಡಿ ನೋಡಿದರೆ ಹಿಂದಿನಿಂದ ಮುಂದಿನವರೆಗೂ ’ಚಿಟ್ಟೆ ಹೆಜ್ಜೆ ಜಾಡು’ ಹುಡುಕಿ ಬಂದವರು ಗಂಭೀರವಾಗಿ ಕುಳಿತಿದ್ದರು. ಚಿಟ್ಟೆ ಹಿಡಿಯುವುದಕ್ಕೆ ಹೊರಟವರ ಮೌನ ಅಲ್ಲಿ. ನಾವೂ ಸುಮ್ಮನೇ ನಿಂತು ಜಾಗ ಹುಡುಕುತ್ತಿದ್ದರೆ ಪಕ್ಕದಲ್ಲೇ ಸಚ್ಚಿದಾನಂದ ಕಾಣಿಸಿದ. ಆತನ ಪಕ್ಕದಲ್ಲಿ ಒಂದು ಜಾಗ, ಅದರ ಪಕ್ಕ ಊರಿನಿಂದ ಬಂದ ಕೃಷ್ಣಮೂರ್ತಿ ಹೆಬ್ಬಾರರು ಕುಳಿತಿದ್ದರು. ತಳ ಊರುವುದಕ್ಕೊಂದು ಜಾಗ ಸಿಕ್ಕ ಖುಷಿಯಲ್ಲಿ ಪಕ್ಕದಲ್ಲಿದ್ದವರಿಗೊಂದು ನಮಸ್ಕಾರ ಹೊಡೆದು ಕುಳಿತದ್ದಾಯ್ತು.

ಗಂಭೀರವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಸುಮ್ಮನೆ ಕುಳಿತಾಗಲೆಲ್ಲ ಕಿರಿಕಿರಿಗಳು ಹುಡುಕಿಕೊಂಡು ಬರುತ್ತವೆ. ನಿನ್ನೆ ಆದದ್ದೂ ಅದೇ. ಮಾತಾಡಬೇಕಿದ್ದವರು ಅತ್ಯಂತ ಸ್ಪಷ್ಟವಾಗಿ, ನಿರರ್ಗಳವಾಗಿ ಮಾತನಾಡುತ್ತಿದ್ದರೆ ಕೇಳಬೇಕಾದವರು ಮಾತ್ರ ಆ ಕೆಲಸ ಮಾಡುತ್ತಿರಲಿಲ್ಲ. ( ಗಂಭೀರವಾಗಿ ಕುಳಿತಿದ್ದಾರೆ ಅನ್ನುವ ನನ್ನ ನಂಬಿಕೆ ಮತ್ತೆ ಸುಳ್ಳಾಯ್ತು ನೋಡಿ) ಈ ಆರೋಪ ನನ್ನ ಹಿಂದೆ ಕುಳಿತ ಇಬ್ಬರು ಮಹನೀಯರನ್ನು ಕುರಿತಾದದ್ದು. ಮಾತೇ ಮಾತು ಅವರದ್ದು. ಬಾಯಿ ಬೊಂಬಾಯಿ. It was Irritating. ಬಹುಶ: ಮನೇಲಿ ಮಾತಾಡೊದಕ್ಕೆ ಪರ್ಮಿಶನ್ ಇಲ್ಲಾ ಅನ್ಸುತ್ತೆ. ಬಿಡಿ ಅದೇನೂ ಹೊಸದಲ್ಲ. ಮೊನ್ನೆ ಮೊನ್ನೆ ಸಿದ್ದು ದೇವರಮನಿಯ ಕವನ ಸಂಕಲನ ಬಿಡುಗಡೆಯಾಗಿ ನಂತರದಲ್ಲಿ ಮತ್ತೊಂದು ಚರ್ಚೆಯಾಯಿತಲ್ಲ ಅಂದು ಬಂದವರಲ್ಲಿ ಒಂದಷ್ಟು ಜನ ಸುಳ್ಳೇ ಮದುವೆ ಮನೆಯ ಸಂಭ್ರಮದಲ್ಲಿ ಓಡಾಡುತ್ತಿದ್ದರು. ಮತ್ತೊಂದಿಷ್ಟು ’ಮುಗಿಯದ ಮಾತು’. ಅದಕ್ಕೂ ಮೊದಲು ’ಮೇ ಫ್ಲವರ್’ನ ಮೋಹನ್ ತೇಜಸ್ವಿ ಕುರಿತ ಕಾರ್ಯಕ್ರಮ ಮಾಡಿದರಲ್ಲ ಅಲ್ಲೂ ಅಷ್ಟೇ. ಅವರು ಅದ್ಯಾಕೆ ಚಾಕಲೇಟು ಕೊಟ್ಟರೋ ಅಲ್ಲಿ? ಕೆಟ್ಟ ಶಬ್ಧ ಹಬ್ಬಿಬಿಡ್ತು… ಅವರು ಕೊಟ್ರು ಅಂತ ಅಷ್ಟೂ ಜನ ಪ್ಲಾಸ್ಟಿಕ್ ಶಬ್ಧ ಮಾಡ್ತಾ ಕೂತ್ರೆ ಹೆಂಗೆ? Disgusting.

ಬಿಡಿ ವಿಷಯಕ್ಕೆ ಬರುವ. ನಾಗತಿಹಳ್ಳಿಯವರ ಮಾತು ಮೊದಲ ಸಲ ಕೇಳುವ ಅವಕಾಶ ಒದಗಿಸಿದ್ದು ’ಚಿಟ್ಟೆ ಜಾಡು’. ಪುಸ್ತಕದ ಕುರಿತಾಗಿ, ಇತರ ವಿಷಯಗ್ಲ ಕುರಿತಾಗಿ ಅವರು ನಿರರ್ಗಳವಾಗಿ ಮಾತನಾಡಿದರು. ’ಹೆಜ್ಜೆ’ ಅವಶ್ಯವಿರಲಿಲ್ಲ ಅನ್ನುವ ಅಭಿಪ್ರಾಯವನ್ನು ನೀಡಿದ್ದು ಸರಿಯಿದೆ ಅನ್ನಿಸಿದ್ದು ನಿಜ. ನಾಗತಿಹಳ್ಳಿ ಚೆಂದ ಚೆಂದ ಮಾತನಾಡುತ್ತಾರೆ. ಅವರ ಸಿನೆಮಾ ನೋಡಿದ್ದಕ್ಕಿಂತ ಮಾತಿನಲ್ಲಿ ಸಿಕ್ಕ ಖುಷಿ ಜಾಸ್ತಿ.

ಹಂಸಲೇಖ ಹೊರಡುವ ಆತುರದಲ್ಲೇ ಮಾತನಾಡಿದರೂ ಸ್ವಲ್ಪ ಸಮಯವಿದ್ದಿದ್ದರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದರೇನೋ ಅನ್ನುವ ಭಾವನೆ ಮೂಡಿಸಿ ಹೊರಟುಬಿಟ್ಟರು. ಆದರೂ ನಾಲ್ಕಾರು ನಿಮಿಷಗಳಲ್ಲಿ ಅವ್ರು ’ಚಿಟ್ಟೆ’ ಹಾರಿಸಿಹೋಗಿದ್ದಂತೂ ನಿಜ.

ನಾನು ಜಿ.ಎನ್ ಮೋಹನ್ ಮಾತು ಕೇಳಿದ್ದು ಮೂರನೆ ಬಾರಿ. ಮೊದಲೆರಡು ಬಾರಿ ಮೋಹನ್ ಮಾತು ಕೇಳಿದ ಅನುಭವಕ್ಕೂ ನಿನ್ನೆಯ ಅನುಭವಕ್ಕೂ ಬಹಳ ವ್ಯತ್ಯಾಸವಿತ್ತು. ಮೋಹನ್ ನಿಜಕ್ಕೂ ಬಹಳ ಸುಂದರವಾಗಿ ಮಾತನಾಡಿದರು. ’But’ , ’So’ ಗಳೂ ಸಹ ಕಡಿಮೆಯಾಗಿದ್ದವು. ( ಇದೊಂದು ಕೆಟ್ಟ ಚಾಳಿ ನೋಡಿ. ಮಾತನಾಡುವಾಗ ಯಾರ್ಯಾರು ಎಷ್ಟೆಷ್ಟು ಸಲ ಒಂದೇ ಪದವನ್ನು ಉಪಯೋಗಿಸ್ತಾರೆ ಅಂತ ಲೆಕ್ಕ ಮಾಡುವುದು. ನನ್ನಪ್ಪ ’ಬಹುಶ:’ ಅನ್ನುವ ಪದವನ್ನ ಬಹಳ ಉಪಯೋಗಿಸ್ತಿದ್ರು). ಮೋಹನ ಜಿ (ಎನ್) ಹೇಳಿದ್ದು ನಿಜ ಅನಿಸಿತು. ಜೋಗಿಗಿಂತ ಜಾನಕಿ ಹೆಚ್ಚು ಇಷ್ಟವಾಗುತ್ತಾರೆ(ಳೆ)

ಆದರೆ ಎಲ್ಲಕ್ಕಿಂತ ಖುಷಿ ಕೊಟ್ಟಿದ್ದು ಕುಂಟನಿಯವರ ಮಾತು. ಅವರದೇ ಆದ ದೃಷ್ಟಿಕೋನ, ಬರಹದ ಕುರಿತಾಗಿ ಆಡಿದ ಮಾತು, ಜೋಗಿಯ ಅವರ ದೀರ್ಘಕಾಲದ ಗೆಳೆತನ ಎಲ್ಲಕ್ಕಿಂತ ಹೆಚ್ಚಾಗಿ ಜೋಗಿ ಕುರಿತಾಗಿ ಅವರು ಆಡಿದ ಮಾತುಗಳು ಚಿಟ್ಟೆ ಹೆಜ್ಜೆಯ ಜಾಡನ್ನು ಸರಿಯಾಗಿಯೇ ತೋರಿಸಿದವು. ಕಲಾಕಾರ ಕುಂಟನಿ. ಜೋಗಿಯನ್ನು ಬಿಡಿಸಿ ಬಿಡಿಸಿ ಇಡುತ್ತಾಹೋದರು.

ಜೋಗಿಯದು ಎಂದಿನಂತೆ ಮಾತು. ಮೊದಲೊಂದು ದಿನ ಕೆಂಪು ಅಂಗಿ ಹಾಕಿ ಬಂದವರು ಅಂಗಿಗೂ ನನ್ನ ಮಾತಿಗೂ ಸಂಬಂಧವಿಲ್ಲ ಅಂತ ಅಂದಿದ್ರು. ಇಲ್ಲಿ ಅಂತಾದ್ದೇನೂ ಇಲ್ದಿದ್ರೂ ಜಾಸ್ತಿ ಬರೀತೇನೆ ಅಂತ ಆರೊಪ ಇರೋದ್ರಿಂದ ಬರಹವನ್ನು ಕಡಿಮೆ ಮಾಡ್ತೀನಿ ಅಂತ ಸಣ್ಣದಾಗಿ ಶುರು ಹಚ್ಕೊಂಡ್ರು. ಇದಿನ್ನೂ ಶುರು ಸ್ವಾಮಿ ಈಗ್ಲೆ ಕಡಿಮೆ ಮಾಡುವ ಮಾತೆಲ್ಲಿ ಅಂದ್ಕೊಂಡು ಹೊರಗೆ ಬಂದು ಒಂದು ಚಿಟ್ಟೆ ಹಿಡಿದು ಸೀದಾ ಅವರಿದ್ದಲ್ಲಿ ಹೋದರೆ ಚಿಟ್ಟೆಯಮೆಲೆ ಒಂದು ಚಿತ್ತ್ತಾರ ಮೂಡಿಸಿ ತಿರುಗಿ ಕೊಟ್ಟವರೇ ಇವತ್ತು ಹಾಕ್ಕೋಂಡಿದೇನೆ ನೀನು ಕೊಟ್ಟಿದ್ದು ಅಂದ್ರು. ಸಣ್ಣ ಆರ್ಟಿಕಲ್ ಅದು. ’ ಅಂದಿನಂದಿನ ಬದುಕು ಮಂಕುತಿಮ್ಮ’ ಅಂತ.

ಸರಿ ಸಾರ್ ಬರ್ತೀನಿ ಅಂತ ಹೊರಗೆ ಬಂದ್ರೆ ಹಳೆಯ, ಹೊಸ ಗೆಳೆಯರು ಸಿಕ್ಕಿದರು. ಸಿಗಬೇಕಿದ್ದವರು ತಪ್ಪಿಸಿಕೊಂಡರು. ಹಾಗೇ ಹೊರಟರೆ ಕುಂಟಿನಿ ಸಿಕ್ಕರು. ಅವರಿಗೊಂದು ನಮಸ್ಕಾರ ಸಲ್ಲಿಸಿ ಮಾತಿಗೆ ನಿಂತರೆ ಅಲ್ಲೆ ಒಂದು ಪರಿಚಯದ ಎಳೆಯೂ ಸಿಕ್ಕಿತು. ನಾಲ್ಕಾರು ಮಾತಿನಲ್ಲೇ ಆತ್ಮೀಯ ಅನ್ನುವಂತಾದದ್ದು ನಿಜ. ಹಾಗೆ ನಾಲ್ಕಾರು ಜನರ ಹತ್ತಿರ ಮಾತನಾಡಿ ಹೊರಟೆ.. ಊಟಕ್ಕೆ ಸಮಯವಾಗಿತ್ತಲ್ಲ!

 ಇರಿ. ಕುಂಟಿನಿ ಹೇಳಿದ ಒಂದು ಮಾತು ಹೇಳಲೇಬೇಕು. ’ಜೋಗಿಗೆ ನೀನು ನಿನ್ನಂತವರು ಬಹಳ ಓದುಗರಿದ್ದ ಹಾಗೆ ಕಾಣಿಸುತ್ತೆ. ತುಂಬಾ ಜನ ಹುಡುಗರು ಬಂದಿದಾರೆ’. ಅವರ ಮಾತು ನಿಜ ಅಲ್ವಾ ಅಂದ್ಕೊಂಡು ಹೊರಟರೆ ಪಕ್ಕದಲ್ಲಿ ಒಂದರ ಹಿಂದೆ ಒಂದರಂತೆ ಕುಳಿತಿದ್ದ ಚಿಟ್ಟೆಗಳೆಲ್ಲ ಹಾರಿಹೋಗುತ್ತಿದ್ದವು.