ಕಣ್ಣಂಚಿನ ಕಡಲು

24/12/2009 by Kallare

ನಾಗರಾಜ್ ಅಪಗಾಲ್ ಹೊನ್ನವರದ ಎಸ್.ಡಿ.ಎಮ್ ಕಾಲೇಜಿನಲ್ಲಿ ಉಪನ್ಯಾಸಕರು. ವರ್ಷಗಳ ಹಿಂದೆ ಬರೆದ ಕವಿತೆ -’ಜೋಡಣೆ’ ಮಯೂರ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. ಈಗ ’ಅಭಿನವ’ ಅವರದೊಂದು ಕವನ ಸಂಕಲನವನ್ನು ಹೊರತರುತ್ತಿದೆ. ಬರುವ ಜನವರಿಯಲ್ಲಿ ’ಕಣ್ಣಂಚಿನ ಕಡಲು’ ಕೈಗೆ ಸಿಗಲಿದೆ.  

ಜೋಡಣೆ

ಈ ಬೆಡಗಿ
ಪ್ರೆಸ್ಸಿನಲಿ ಮೊಳೆ ಜೋಡಿಸುವ
ಹುಡುಗಿ

ಹೆಕ್ಕಿ ಹೆಕ್ಕಿ ನಾಲ್ಕಕ್ಷರವ ಕಲಿತು
ಈಗ ನಿತ್ಯವೂ ನೂರಾರು ಅಕ್ಷರಗಳ
ಹೆಕ್ಕಿ ಹೆಕ್ಕಿ ಜೋಡಿಸುವೀಕೆ
ಥೇಟ್ ಗೂಡು ಹೆಣೆಯುವ
ಗುಬ್ಬಚ್ಚಿ

ಕೈಯೊಳಗೋ
ಸದಾ ಯಾರ್ಯಾರದೋ ಹಸ್ತಪ್ರತಿ;
ತೆಗೆಯುತ್ತಾಳೆ ನಿತ್ಯ
ಯಥಾಪ್ರತಿ

ಮೂಲದಲಿ
ತಿರುವು-ಮುರುವಾಗಿ
ಅರ್ಥ ಆಕಾರವೊಂದು ಇರದ
ಈ ಮೊಳೆಗಳು ಅಕ್ಷರದ ಅಚ್ಚುಗಳಾಗಿ
ಒಂದಕೊಂದು ಸುಸಂಭದ್ದವಾಗಿ ಸೇರಿ ಶಬ್ಧವಾಗಿ
ಸಾವಿರ(ದ) ಸದ್ದಾಗಿ, ಸಾಲು ಸಾಲಾಗಿ
ಗಿಡ್ಡ ಸಾಲಿನ ಕವಿತೆಯಾಗಿ
ದೊಡ್ಡ ಸಾಲಿನ ಕತೆಯೋ ಕಾದಂಬರಿಯೋ ಆಗಿ
ನಾ-ನಾ ಆಕೃತಿಯಾಗಿ
ನವಿರಾದ ಕೃತಿಯಾಗಿ
’ನಾದದ ನವನೀತ’ವಾಗಿ
ಪ್ರಶಸ್ತಿ-ಪುರಸ್ಕಾರ; ಹಾರ-ತುರಾಯಿ…
ಎಂದೆಲ್ಲ ಹಾರಾಡಿ
ಮನೆ ಮನೆಯ ಮಾತಾಗಿ ಹೋಗುವ ಪರಿಗೆ
ಈಕೆಗೆ ಎಲ್ಲಿಲ್ಲದ ಬೆರಗು

ಇದ್ದಿಲು ವಜ್ರವಾಗುವಂತೆ…
ಥಟ್ಟನೆ ಎನೋ ಹೊಳೆದಂತೆ…
ಅಂದುಕೊಳ್ಳುತ್ತಾಳೆ:

’ಒಹ್, ಈ ಜಗದ ಅಣು ಅಣುವಿನ
ಸುಸಂಗತ ಜೋಡಣೆ, ಬರೀ ಜೋಡಣೆಯಲ್ಲ;
ಅದು ಹೊಸ-ಹೊಸ ಹುಟ್ಟಿನ
’ಜೀವಧಾರಣೆ’ ಎಂದು.

 

ನೋ..ನೋ..ನೋ.. ಕ್ರಿಕೆಟ್ ಎಂದರೆ ಅಷ್ಟೇ ಅಲ್ಲ

09/12/2009 by Kallare
ಮೊದಲ ಬಾರಿಗೆ ಬ್ಯಾಟು ಹಿಡಿದಾಗ ನಾನು ಆ ಬ್ಯಾಟೆಂಬ ಬ್ಯಾಟಿಗಿಂತ ಸಣ್ಣಗಿದ್ದೆ. ಅದಕ್ಕೂ ಮೊದಲು ಊರಿನ ಲಾರ್ಡ್ಸ್’ನಲ್ಲಿ Second Wicket Keeper. ಹಿಂದೆ ಬಂದ ಬಾಲನ್ನು ಹೆಕ್ಕುವುದಷ್ಟೆ ನನ್ನ-ನನ್ನಂತವರ ಕೆಲಸ. ಅಲ್ಲಿಂದ ನಿಧಾನವಾಗಿ ಮೂರು ಗೂಟದ ಮುಂದೆ ಬ್ಯಾಟು ಹಿಡಿದು ನಿಲ್ಲುವ ಅವಕಾಶವಾಯಿತು. ಬಲಗೈ ಒಂದು ಸುತ್ತು ಸರಿಯಾಗಿ ಬಂದು ಎದುರಿದ್ದವನಿಗೆ ಆರು ಬಾರಿ ಶಾಸ್ತ್ರೋಕ್ತವಾಗಿ ಆಡಿಸುವಂತಾಯಿತು. ಆಕಾಶಕ್ಕೆ ಮುಖ ಮಾಡಿದ ಬ್ಯಾಟಿನಿಂದ ಹೊರಟ ’ಒಲಂಪಿಕ್’ ಬಾಲು! (ಬಾಲ್?) ನೆಲಕ್ಕೆ ಬೀಳುವ ಮೊದಲು ಕೈಸೇರುವಷ್ಟು ಅಭ್ಯಾಸವಾಯಿತು… ಹಾಗೆ ಕ್ರಿಕೆಟ್ ಎಂಬ ಆಟದ ಹಿಂದೆ ಬೀಳುವ ಹೊತ್ತಿಗೆ ನಾನು ಒಂದನೇ ಕ್ಲಾಸಿನಲ್ಲಿದ್ದೆ. ಲಾರ್ಡ್ಸ್ ಪಕ್ಕದಲ್ಲೇ ಹಿರಿಯ ಪ್ರಾಥಮಿಕ ಶಾಲೆಯಿತ್ತು. ಅಲ್ಲಿಗೆ ಹೋಗುವಾಗ ಹಾಕುತ್ತಿದ್ದ ಖಾಕಿ ಚಡ್ಡಿಯ ಬಾಗಿಲು ಯಾವತ್ತೂ ತೆರೆದೇ ಇರುತ್ತಿತ್ತು. ಆಡುವಾಗ ಸಹ!
 
ವಿಷಯ ಅದಲ್ಲ. ನಾನು, ನನ್ನಂತವರು, (ಕೆಲವು ಹುಡುಗಿಯರೂ ಸಹ ಈ ಬ್ಯಾಟು ಹಿಡಿಯುವ, ಗೇರು ಮರಕ್ಕೆ ಕಲ್ಲು ಹೊಡೆಯುವ ಮುಂತಾದ ವಿಫಲ ಕೆಲಸ ಮಾಡುತ್ತಾರೆ ಅಲ್ಲವಾ?) ಮತ್ತು ಆಟದ ಕುರಿತು ಆಸಕ್ತಿಯಿರುವವರು ದಿನದ ಕೆಲವು ಸಮಯವನ್ನು ಅದಕ್ಕಾಗಿಯೇ ಮೀಸಲಿಡುವುದು ಯಾವ ದೊಡ್ದ ಸುದ್ದಿಯೂ ಅಲ್ಲ. ಹೆಚ್ಚೂ ಕಡಿಮೆ ಆರು-ಏಳನೆ ವರ್ಷಕ್ಕೆ ಆಡಲು ಪ್ರಾರಂಭಿಸಿದರೆ ಯಾವತ್ತಿಗೆ ಮುಗಿಸುತ್ತಾರೆ ಎನ್ನುವುದು ಅವರವರ ಆಸಕ್ತಿ, ಪರಿಸ್ಥಿತಿಗಳನ್ನು ಅವಲಂಬಿಸಿದ ವಿಷಯ. ನನ್ನ ಮಟ್ಟಿಗೆ ಇವತ್ತಿಗೂ ವಾರಾಂತ್ಯ ಹಾಗೂ ವರ್ಷಕ್ಕೆರಡು, ಮೂರು Tournamentಗಳ ಮಟ್ಟಕ್ಕೆ ನಡೆಯುತ್ತಿದೆ ನೇರಾನೇರ ಸಂಬಂಧ. ಆದರೆ Highest Level ಆಟದ ಕುರಿತಾದ ಮಾತು, ಚರ್ಚೆ, ಅಂಕಣ, ಓದು, ಅಂಕಿ-ಸಂಖ್ಯೆ.. ಇತ್ಯಾದಿಗಳ ವಿಷಯಕ್ಕೆ ಬಂದರೆ ಅದಕ್ಕೊಂದು ಮಿತಿಯೇ ಇಲ್ಲ ಎಂಬಷ್ಟು ಬೆಳೆದಿದೆ ಕ್ರಿಕೆಟ್ ಎಂಬ ದೈತ್ಯ! ಆಟ. ಆಟಗಾರರು. ಅದಕ್ಕಿಂತ ಹೆಚ್ಚು ಸುತ್ತಲಿನ ವ್ಯವಸ್ಥೆ ಬೆಳೆದಿದೆ. ಬೆಳೆಯುತ್ತಿದೆ. ಗಮನಿಸಬೇಕಾದ ವಿಷಯ ಅದು.
 
ಒಬ್ಬ ಸೆಹವಾಗ್, ತೆಂಡೂಲ್ಕರ್, ದ್ರಾವಿಡ್, ಧೋನಿ, ಅಥವಾ ಒಂದು ಟೀಮ್ ಇಂಡಿಯಾ ಕುರಿತು ಮಾತನಾಡುವಾಗ ನಮಗೆ ಅವರನ್ನಷ್ಟೇ ಗಣನೆಗೆ ತೆಗೆದುಕೊಂಡು, ಅಷ್ಟಕ್ಕೇ ಮುಗಿಸುವ ಸಾಧ್ಯತೆಗಳನ್ನು ಇಂದಿನ ವ್ಯವಸ್ಥೆ ಕಸಿದುಕೊಂಡಿದೆ. ಉದಾಹರಣೆಗೆ: ಇಂದಿಗೆ ಅಂಕಿ ಅಂಶದ ಪ್ರಕಾರ ನಂ ೧ ಸ್ಥಾನದಲ್ಲಿರುವ ನಮಗೆ, ನಾಳೆ ಆಫ್ರಿಕ, ಆಸ್ಟ್ರೇಲಿಯಾಗಳು ಎಲ್ಲೆಲ್ಲಿ ಹೇಗೆ ಹೇಗೆ ಗೆದ್ದರೆ, ಅಥವಾ ಸೋತರೆ ಏನಾಗುತ್ತದೆ ಅನ್ನುವ ಕುತೂಹಲವಿದೆ. ಅದಕ್ಕೆ ಉತ್ತರವೂ ಇದೆ. ಅಷ್ಟರ ಮಟ್ಟಿಗೆ ನಮ್ಮ ವಿಚಾರ ’ಇವತ್ತಿಗೆ’ ನಿಲ್ಲದೆ ’ಮುಂದೆ’ ಹರಿಯುತ್ತದೆ! ಆದರೂ ಆಟ ನಡೆಯುವ ಸಮಯವನ್ನಷ್ಟೇ ಗಣನೆಗೆ ತೆಗೆದುಕೊಂಡು, ಅಂದಿನ ವಿಶೇಷತೆ, ಟೀಮು, ಆಟಗಾರರು ಇತ್ಯಾದಿಗಳ ಹಿನ್ನೆಲೆಯಲ್ಲಷ್ಟೇ ನೊಡುವ ಸಾಧ್ಯತೆಗಳನ್ನೂ, ವ್ಯಕ್ತಿಗತವಾದ ಅಭಿಪ್ರಾಯಗಳನ್ನೂ ಬೆಳೆಸಿಕೊಂಡು ಬಂದಿದ್ದರೆ ಅದು ಕ್ರಿಕೆಟ್ ಎಂಬ ಆಟಕ್ಕಿರುವ ಜನರನ್ನು ಸೆಳೆದುಕೊಳ್ಳುವ ಶಕ್ತಿ ಮಾತ್ರ. ಅದನ್ನು ಟೀವಿ, ಸ್ಟೇಡಿಯಮ್ಮು, ಐಸಿಸಿ, ಬಿಸಿಸಿಐ ಮುಂತಾದವುಗಳೂ, ಮೋದಿ, ಬೋಗ್ಲೆ, ಶಾಸ್ತ್ರಿ… ಮುಂತಾದವರೂ ಬಳಸಿಕೊಳ್ಳುತ್ತಿದ್ದರೆ ಅಷ್ಟೆ.  ಅದರಿಂದಾಗಿ ಕ್ರಿಕೆಟ್ಟಿಗೊಂದು ಹೊಸ ರೂಪ ಬಂದಿದೆ. ರೂಪವತಿಯರು ಸಹ ಬಂದು ಸೇರಿದ್ದಾರೆ. ಬರಲಿ ಬಿಡಿ. ಅದೂ ಒಂದು ವ್ಯವಸ್ಥೆ ಇವತ್ತಿನ ಅವಶ್ಯಕತೆಗಳಿಗೆ ತಕ್ಕಂತೆ.  We need glamour too.
 
ಸಧ್ಯಕ್ಕೆ ಮಾತಿಗೆ ಬೇಕಷ್ಟು ಸರಕು ಇದೆ. ನಾವು No. 1 test Team.  ನಮಗೊಬ್ಬ ಗಂಭೀರ್ ಸಿಕ್ಕಿದ್ದಾನೆ. ದ್ರಾವಿಡ್ ಎಂಬ ಕಲೆ ಮತ್ತೆ ಮೈದಾನಕ್ಕೆ ಬಣ್ಣ ಹಾಕಲಾರಂಭಿಸಿದೆ. ತೆಂಡೂಲ್ಕರ್ ಮುಖದ ಕಳೆ ಮಾತ್ರ ಬೇರಾಗಿದೆ, ಆಟ ಇಪ್ಪತ್ತು ವರ್ಷಗಳ ಹಿಂದಿದ್ದಂತೆ. ಲಕ್ಷಣ್ ತನ್ನ ಆಟ ಆಡುತ್ತಿದ್ದಾನೆ. ಸೆಹವಾಗ್ ಇವತ್ತಿಡೀ ಆಡಿದರೆ? ಎಂಬ ಸನ್ನಿವೇಶವನ್ನು ಆತ ವರ್ಷಗಳಿಂದ ನಮ್ಮ ಮುಂದಿಟ್ಟಿದ್ದಾನೆ. ಧೋನಿ ಎಂಬ ಲೆಕ್ಕಾಚಾರಸ್ಥ ಕುಂಬ್ಳೆಯನ್ನು ಹೆಗಲ ಮೇಲೆ ಹೊತ್ತ ದಿನದಿಂದ ಮತ್ತೆ ಹಿಂದಿರುಗಿ ನೋಡಿಲ್ಲ. ಆತನಿಗೆ ಆತನದ್ದೇ ಆದ ಬ್ಯಾಟಿಂಗಿದೆ. ಅದನ್ನು ತೂಗಿಸಿಕೊಂಡು ಹೋಗುವ ತಲೆಯಿದೆ. ಜಹೀರ್ ವಾಪಾಸು ಬಂದಿದ್ದಾನೆ. ಹರಭಜನ್ ಭಜನೆಗೆ ಸಧ್ಯಕ್ಕೆ ತೊಂದರೆಯಿಲ್ಲ. ಆದರೆ?
 
ಆದರೆ, ಯುವರಾಜ್ ಇನ್ನೂ ಗಟ್ಟಿಯಾಗಿಲ್ಲ. ಇಶಾಂತ್ ಅಷ್ಟಿಷ್ಟು ಆಡಿ ಶ್ರೀಶಾಂತನಿಗೆ ಜಾಗ ಕೊಟ್ಟಿದ್ದಾನೆ. ಇಬ್ಬರಿಗೂ ಲಯದ ತೊಂದರೆ. ಓಝಾ ಎಂಬ ಹುಡುಗ ಇನೂ ಹೊಸಬ. ಒಂದುವೇಳೆ ಮೊದಲ ನಾಲ್ಕು ಐದು ಜನರು ಸುಮ್ಮನಾಗಿಬಿಟ್ಟರೆ ಆಟ ಬೆಳೆಸುವ ಅಥವಾ ಅವರನ್ನು ಸಮರ್ಥಿಸುವಂತೆ ಆಟವನ್ನು ನಿಯಂತ್ರಿಸುವ ಪ್ರತಿಭೆ ಇವರಲ್ಲಿದೆಯಾ? ಉತ್ತರ ಹೌದು ಅಂತಾದರೆ ನಾವು No. 1 Team ಎಂದು ಒಪ್ಪಬಹುದು. ಇಲ್ಲವಾದರೆ ಅಲ್ಲಿಗೆ ಮತ್ತೊಬ್ಬರು ಬರುವುದಕ್ಕೆ ಹೆಚ್ಚು ಸಮಯವೇನೂ ಬೇಕಿಲ್ಲ. ಇವತ್ತಿನ ನಮ್ಮ ಬೌಲಿಂಗ್ ತಾಕತ್ತು ಗಮನಿಸಿದರೆ ನಾವು ಅಂದಿನ ವೆಸ್ಟ್ ಇಂಡೀಸ್, ಆ ನಂತರದ ಆಸ್ಟ್ರೇಲಿಯಾ ಟೀಮಿನ ಮಟ್ಟ ತಲುಪಿಲ್ಲ ಅನ್ನುವುದು ಕೂಡಲೇ ತಿಳಿಯುತ್ತದೆ. ನಮ್ಮೊಳಗೆ ಒಬ್ಬ ಮಾರ್ಷಲ್, ರಾಬರ್ಟ್ಸ್, ಆಂಬ್ರೋಸ್, ವಾಲ್ಶ್ ಇನ್ನೂ ಇಲ್ಲ. ಅವರ ನಂತರದ ಮೆಗ್ರಾತ್, ವಾರ್ನೆ ಅಥವಾ ಕೊನೇಪಕ್ಷ ಮೆಕ್’ಡರ್ಮಟ್, ಗಿಲ್ಲೆಸ್ಪಿಯವರಂಥವರೂ ಇಲ್ಲ. ಒಂದಿದ್ದರೆ ಒಂದಿಲ್ಲ ಎನ್ನುವ ಸ್ಥಿತಿಯಿರುವಾಗ ನಾವು ನಂ ೧ ಎಂದು ಒಪ್ಪುವುದಾದರೂ ಹೇಗೆ?
 
ಹೀಗಿದ್ದೂ ನಾವು ಆ ಸ್ಥಾನದಲ್ಲಿ ಉಳಿಯುತ್ತೇವೆ ಅನ್ನುವುದಾದರೆ ಅದಕ್ಕೆ ನಾವು ಕಾರಣರಲ್ಲ. ಒಂದು ಆಸ್ಟ್ರೇಲಿಯಾ, ಮತ್ತೊಂದು ದಕ್ಷಿಣ ಆಫ್ರಿಕಾ ಕಾರಣವಾಗುತ್ತದೆ. ಅವರಲ್ಲೂ ಸಹ ನಮ್ಮೊಳಗಿರುವಂತಹುದೇ ತೊಂದರೆಯಿದೆ ಈಗ. ನಿನ್ನೆ ಗೆದ್ದವರು ಇಂದು ಸೋಲುತ್ತಾರೆ. ಇಂದು ಟೀಮಿನಲ್ಲಿದ್ದವನು ನಾಳೆ ಇರಲಾರ. ಅಥವಾ ಆತನಿಗೆ ದೈಹಿಕವಾದ ತೊಂದರೆ ಬರುತ್ತದೆ. (T20, ODI, test ಮತ್ತೊಂದು ಅನ್ನುತ್ತ ಅಷ್ಟು ಆಡಿರುತ್ತಾನೆ ಆತ) ಟೀಮಿನೊಳಗೆ, ಆಟಗಾರೊಳಗೆ ಲಯ ಕಂಡುಕೊಳ್ಳುವುದೇ ಕಷ್ಟವಾಗುತ್ತದೆ. ಇವತ್ತಿನ ಕ್ರಿಕೆಟ್ಟಿನ ಸ್ಥಿತಿ ಅಕ್ಷರಶ: ಅದೇ. ಯಾವ ಟೀಮಿಗೂ ತನ್ನದೇ ಆದ ಗೆಲುವಿನ ಲಯವಿಲ್ಲ.
 
ಅಂದಿಗೂ ಇಂದಿಗೂ ಲಯ ಕಂಡುಕೊಂಡಿರುವ ಬಹಳಷ್ಟು ಆಟಗಾರರಿದ್ದಾರೆ. ಸ್ವ-ಸಾಮರ್ಥ್ಯದಿಂದ ಗೆಲುವನ್ನು ತಂದುಕೊಡಬಲ್ಲವರು. ಆಟಕ್ಕೆ ತನ್ನದೇ ಆದ ರೂಪ, ಸೌಂದರ್ಯ, ಸೆಳೆತ ಕೊಡುವವರು. ಮಾನ್ಯತೆ ತಂದುಕೊಡುವವರು. ಆದರೆ ಅಂತವರು ಒಂದೇ ಟೀಮಿನ ಎಲ್ಲಾ ವಿಭಾಗಳಲ್ಲೂ ಸಿಗುತ್ತಿಲ್ಲ, ಮೊದಲು ಆಗಿಹೋದ ಶ್ರೇಷ್ಟ ಟೀಮುಗಳಲ್ಲಿ ಇದ್ದಂತೆ. ಅದು ಇವತ್ತಿನ ತೊಂದರೆ. ನಮ್ಮ ಮಟ್ಟಿಗೆ, ಒಬ್ಬ ಸೆಹವಾಗ್ ಮುನ್ನೂರರ ಅಂಕೆ ದಾಟಿದ ಕ್ಷಣಕ್ಕೆ ಗೆಲುವಿನ ಸಾಧ್ಯತೆಗಳು ಬಹಳಷ್ಟು ಕಾಣಿಸಬಹುದು. ಆದರೆ, ಆತ ಮೂವತ್ತೂ ದಾಟದಿದ್ದರೆ? ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ನಮಗೆ ಸೆಹವಾಗ್ ಆಟ ಬೇಕು. ಬೌಲರ್ ಒಬ್ಬನ ಐದು ಅಥವಾ ಅದಕ್ಕೂ ಹೆಚ್ಚು ವಿಕೆಟ್ಟಿನ ಸಾಧನೆ ಬೇಕಿಲ್ಲ. (ಮುರಳಿಯ ಪರಿಸ್ಥಿಯನ್ನು ಗಮನಿಸಿ) ತೆಂಡೂಲ್ಕರ್ ಇಪ್ಪತ್ತು ವರ್ಷ ಪೂರೈಸಿ ಇನ್ನೂ ಇಪ್ಪತ್ತರ ಹುಡುಗನಂತೆ ಆಡುವುದು ನಮ್ಮ ಕಣ್ಣಿಗೆ ಕಟ್ಟುತ್ತದೆ. ದ್ರಾವಿಡ್ ಕಲಾತ್ಮಕತೆಯನ್ನು ಬೋಗ್ಲೆ ಹಾಗೂ ಶಾಸ್ತ್ರಿ ಬಣ್ಣಿಸಿದರೆ ಆಟ ಇನ್ನೂ ಕಳೆಗಟ್ಟುತ್ತದೆ. ಅದು ನಿಜವೂ ಹೌದು. ಆದರೆ, ಅದೊಂದೇ ಶ್ರೇಷ್ಟ ಟೀಮೊಂದರ ಲಕ್ಷಣವಾ? ಶ್ರೇಷ್ಟ ಆಟಗಾರರ ಲಕ್ಷಣವಾಗಬಹುದು ಅಷ್ಟೆ.
ಇತ್ತೀಚಿನ ತೆಂಡೂಲ್ಕರ್, ದ್ರಾವಿಡ್, ಗಂಭೀರ್ ಹಾಗೂ ಸೆಹವಾಗ್ ಇನ್ನಿಂಗ್ಸ್ ನೋಡಿ, ನಾವು ಮೊದಲ ಬಾರಿ ನಂ. 1 ಆದ ನಂತರ, ಅದೇ ಸಮಯಕ್ಕೆ ಸೆಹವಾಗ್ ಕುರಿತ ಇಂಟರ್ವ್ಯೂ ಹಾಗೂ ಅಂಕಣಗಳನ್ನು ಓದಿದ ಮೇಲೆ ಇಷ್ಟು ಹೇಳದೇ ಇರಲಾಗಲಿಲ್ಲ.
 

ಕ್ರಿಕೆಟ್ ಕುರಿತಾಗಿ ಬರೆಯಲ್ಪಡುವ ಒಳ್ಳೆಯ ಬರಹಗಳು ಓದುವುದಕ್ಕೆ ಯಾವತ್ತಿಗೂ ಖುಷಿ ಕೊಡುತ್ತವೆ. ಒಳ್ಳೆಯ ಬರವಣಿಗೆಯೂ ಸಹ ಲಯಬದ್ಧ ಆಟದಂತೆ. ಆದರೆ, ಮೊನ್ನೆ ಮೊನ್ನೆ ಪ್ರತಾಪ್ ಬರೆದ ಸೆಹವಾಗ್ ಕುರಿತ ಅಂಕಣ ಅದಕ್ಕೆ ತದ್ವಿರುದ್ಧವಾಗಿತ್ತು. ಒಮ್ಮೊಮ್ಮೆ ಸೆಹವಾಗ್ ತನ್ನ ವಿಕೆಟ್ ದಾನ ಕೊಟ್ಟಂತೆ. ಅವರು ಕ್ರಿಕ್’ಇನ್ಫ಼ೋ ಹೆಸರು ಹೇಳಿಕೊಂಡೇ ಬರೆದಿದ್ದಾರಾದರೂ, ’ತಿಕ, ಗೂಸಾ’ ಇತ್ಯಾದಿ ಶಬ್ಧಗಳನ್ನು ಯತೇಚ್ಚವಾಗಿ ಬಳಸಿದ್ದಾರೆ. ಯಾಕೆ ಹಾಗೋ?  ಅವರು ಕ್ರಿಕೆಟ್ ಕುರಿತಾಗಿ, ಸೆಹವಾಗ್ ಕುರಿತಾಗಿ ಇನ್ನೂ ಒಳ್ಳೆಯದಾಗಿ ಬರೆಯಬಹುದಿತ್ತು.  ಇಲ್ಲಿ ಚಿಕ್ಕದೊಂದು ತುಣುಕಿದೆ ನೋಡಿ:

Tendulkar has been an integral part of your career. What’s you favourite Tendulkar innings?

When he was there in Multan during my first triple-century. Because I batted the full day with him. He always likes to chat and can get serious and caution you not to hit unnecessary shots. During that innings he told me, “If you try to hit a six I will hit you on the bum.” He gave me a simple example – about my Melbourne innings  in 2003, when I tried to hit a six on 195 and got out. Till then India were in a good position, but after that we couldn’t make a big score and we lost the Test. So he made me realise my mistake. That is why I didn’t hit sixes in Multan, but when I was near 300 I told him that I was going to hit Saqlain [Mushtaq] and he could hit me on my bum!

ಇದನ್ನಿಟ್ಟುಕೊಂಡು ಪ್ರತಾಪ್ ಬರೆದುದನ್ನೂ ಸಹ ನೋಡಿ. (VK, Sat,5th Dec’2009)  

ಅಂಕಣಕಾರರಿಂದ ಉತ್ತಮ ಬರಹದ ನಿರೀಕ್ಷೆ ಮಾಡುವುದು ತಪ್ಪಾ?

ಬೇಲಿಯ ಆಚೆ ಮತ್ತು ಈಚೆ : ಒಂದು ತಣ್ಣಗಿನ ಕತೆಯ ಸುತ್ತ

23/11/2009 by Kallare

ಒಂದು ಬೇಲಿ. ಇಬ್ಬರು ಹುಡುಗರು. ಅಷ್ಟೇ ಸಾಕು ನೋಡುವವರಿಗೆ. ಮೊದಲ ನಿಮಿಷದಿಂದ ಕೊನೆಯವರೆಗೂ ಒಂದೇ ಹದದಲ್ಲಿ ಸಾಗುತ್ತದೆ ನೋಟ. ಎಲ್ಲೂ ನಿಲ್ಲುವುದಿಲ್ಲ. ’ದಿ ಎಂಡ್’ ಕಾಣಿಸಿ, ಭಾರವಾದ ಮನಸಿನೊಂದಿಗೆ ಹೊರಬರುತ್ತಾರೆ ಎಲ್ಲ. ಮೈಮುರಿಯುವುದಕ್ಕೆ, ಆಕಳಿಸುವುದಕ್ಕೆ, ಆಚೀಚೆ ನೋಡುವುದಕ್ಕೆ ಅವಕಾಶವೇ ಆಗುವುದಿಲ್ಲ. ಬದಲಿಗೆ ಮತ್ತೆ ಪ್ರಾರಂಭವಾಗುತ್ತದೆ ಚಿತ್ರ. ಒಳಗೊಳಗೆ ನಿಲ್ಲದೆ ಚಲಿಸುತ್ತದೆ ದೃಶ್ಯಾವಳಿ. ಅದು ಹಾಗೆ ಸುಮ್ಮನೆ ಮುಗಿಯುವುದಿಲ್ಲ. ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಓಡುತ್ತಿರುತ್ತದೆ. ಒಂದು ಲೆಕ್ಕದಲ್ಲಿ ’ಭಾರೀ’ ದಾಖಲೆಯಾಗಬಹುದು! ಆದರೆ ವಸ್ತುವಿನ ಒಳಹೊಕ್ಕವರಲ್ಲಿ ಮಾತ್ರ ’ದಾಖಲಾಗುತ್ತದೆ’. 

ಕಥೆಗಾರ, ಇಡೀ ಕತೆಯನ್ನು ಶುಭ್ರ ವಸ್ತ್ರದ, ನೀಟಾದ ಕ್ರಾಪಿನ, ಶಿಸ್ತುಬದ್ಧ ಎಂಟು ವರ್ಷದ ಚಿಕ್ಕ ಹುಡುಗನ ಕಣ್ಣುಗಳಲ್ಲಿ ನೋಡುತ್ತಾನೆ. ಆದರೆ ಕೇವಲ ಈ ಹುಡುಗನನ್ನೆ ಎದುರಿಗಿಟ್ಟುಕೊಂಡು ಹೆಜ್ಜೆ ಹಾಕುವುದಿಲ್ಲ ಆತ. ಆತನಿಗೊಂದು ಅವನದೇ ವಯಸ್ಸಿನ ಜೊತೆಗಾರನನ್ನು ತಂದು ನಿಲ್ಲಿಸುತ್ತಾನೆ. ಆ ಹುಡುಗನಿಗೊಂದು ಬೋಳು ಬೋಳು ತಲೆ. ಒಂದೆರಡು ಗಾಯ, ಮಣ್ಣು ಮಣ್ಣು ಬಟ್ಟೆ. ಹರಕು ಚಪ್ಪಲಿ. ಕೈಲೊಂದು ಮುರುಕು ಗಾಡಿ. ಈ ಹುಡುಗನಿಗೆ, ಸಮವಸ್ತ್ರ-ಶಾಲೆಯಾದರೆ, ಅವನಿಗೂ ಸಮವಸ್ತ್ರವಿದೆ. ಜೊತೆಗೆ ಕೆಲಸ… ಅವರಿಬ್ಬರ ಸುತ್ತ ಪಾತ್ರವರ್ಗ ಎದ್ದು ನಿಲ್ಲುತ್ತವೆ. ಹುಡುಗನಿಗೊಂದು ಅಕ್ಕ, ಅಪ್ಪ-ಅಮ್ಮ, ಅವರ ಸುತ್ತಲಿನ ಜನ, ಪರಿಸರ. ಮತ್ತೊಬ್ಬ ಹುಡುಗ ಸುತ್ತಲಿನ ಜನ, ಪರಿಸರ, ವಿಷಯ ಎನ್ನುತ್ತ ಕತೆಯ ಹಂದರ ಗಟ್ಟಿಗೊಳ್ಳುತ್ತದೆ. ಇಬ್ಬರು ಹುಡುಗರ ನಡುವೆ ಬೇಲಿ ಅಡ್ಡ ನಿಲುತ್ತದೆ. ಬೇಲಿ ಅಡ್ಡಿಯಾಗುತ್ತದೆ. ಅದೇ ಬೇಲಿ ಕಳಚಿಕೊಳ್ಳುತ್ತದೆ. ಕತೆ ಮುಂದುವರೆಯುತ್ತದೆ… 

ಹೀಗೆ ಚಿಕ್ಕ ಹುಡುಗನೊಬ್ಬನ ಕಣ್ಣಿನಲ್ಲಿ ಕಾದಂಬರಿಯೊಂದು ಅರಳಿ ಬಹಳಷ್ಟು ಚರ್ಚೆಯಾಗುತ್ತದೆ. ಮಕ್ಕಳಿಗಾಗಿ ಬರೆಯಲ್ಪಟ್ಟ ಈ ಕಾದಂಬರಿಯ ಮಾರಾಟ ಮೂರು ಮಿಲಿಯನ್ ದಾಟಿ ಮುಂದುವರೆಯುತ್ತದೆ. ಕಾಲ್ಪನಿಕ ಕತೆಯಾಗಿದ್ದರೂ,  ಒಂದು ನೈಜ ಘಟನೆಯಂತೆ ಓದಿಸಿಕೊಂಡು ಹೋಗುವ ಈ ಕಾದಂಬರಿ ತನ್ನೆಲ್ಲ ಹೆಸರು, ಚರ್ಚೆ, ವಿಮರ್ಷೆ, ಹೊಗಳಿಕೆ, ತೆಗಳಿಕೆಗಳ ನಡುವೆ ನಿರ್ದೇಶಕನೊಬ್ಬನೆ ಕೈಗೆ ಸಿಕ್ಕು, ಕೆಲವೊಂದು ಬದಲಾವಣೆಗಳೊಂದಿಗೆ,  ಸಿನೆಮಾ ಆಗಿ ತೆರೆಗೆ ಬಂದುಬಿಡುತ್ತದೆ. ಅಲ್ಲಿಂದ ಅದು ಮತ್ತೊಂದು ರೀತಿಯ ದೃಶ್ಯಾವಳಿ.

ತೊಂಬತ್ನಾಲ್ಕು ನಿಮಿಷಗಳ ಚಿತ್ರ ನಿಧಾನವಾಗಿ ಒಂದೊಂದೆ ನಿಮಿಷಗಳನ್ನು ಆಕ್ರಮಿಸುತ್ತಾ ಸಾಗುತ್ತದೆ. ಆ ನಿಮಿಷಗಳುದ್ದಕ್ಕೂ ಹಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಣಗಳು ಶಕ್ತಿಯುತವಾಗಿ ಹಾದುಹೋಗುತ್ತವೆ.  ಆದರೆ ನಿರ್ದೇಶಕರ ಗಮನ ಕೇಂದ್ರೀಕೃತವಾಗುವುದು ಇಬ್ಬರು ಹುಡುಗರ ಮೇಲೆ. ಅವರಿಬ್ಬರ ನಡುವಿನ ’ಬೇಲಿ’ಯ ಮೇಲೆ. ಬೇಲಿಯ ಎರಡೂ ಕಡೆಯಲ್ಲಿ ಯುದ್ಧವಿದೆ. ಒಂದೆಡೆಯಲ್ಲಿ ಯುದ್ಧ ಮಾಡಿಸುವವರು. ಅವರ ಯೋಧರು. ಇನ್ನೊಂದೆಡೆಯಲ್ಲಿ ಯುದ್ಧ ಸಂತ್ರಸ್ಥರು. ಕೈದಿಗಳು. ಒಬ್ಬರು ಗೆಲ್ಲುವವರಾದರೆ ಇನ್ನೊಬ್ಬರು ಸೋತವರು. ಬೇಲಿಯ ಈಚೆ ಅಟ್ಟಹಾಸವಿದ್ದರೆ, ಆಚೆ ಸಾವು. ಸಾವು ಮತ್ತು ಬದುಕಿನ ಬೇಲಿಯ ನಡುವೆ ಇನ್ನೂ ಬದುಕನ್ನು ಸರಿಯಾಗಿ ನೋಡಲಾರಂಭಿಸದ ಈ ಇಬ್ಬರು ಹುಡುಗರು. ಒಬ್ಬ ಸಾವಿನ ಯಜಮಾನನ ಯೋಧನ ಮಗನಾದರೆ, ಇನ್ನೊಬ್ಬ ಸಾವಿನ ಜೊತೆಗೇ ಬದುಕುತ್ತಿರುವವರ ಮಕ್ಕಳಲ್ಲೊಬ್ಬ.

ಯೋಧನ ಕನಸು ಕಣ್ಣುಗಳ ಮಗ ತನ್ನಪ್ಪನ ಜೊತೆ ಇರುವ ಎಲ್ಲಾ ಸೌಕರ್ಯಗಳನ್ನೂ ಬಿಟ್ಟು ಬರುತ್ತಾನೆ. ತನ್ನ ಮನೆ, ಶಾಲೆ, ಗೆಳೆಯರು, ಆಟ-ಪಾಠ…ಪ್ರತಿಯೊಂದೂ. ಈಗ ಬಂದಿರುವ ಹೊಸಮನೆಯ ಕಣ್ಣಳತೆಯಲ್ಲೇ ಬೇಲಿ. ದಿನಚರಿಯಲ್ಲಿನ ಬದಲಾವಣೆ, ಬೇಸರ ಹಾಗೂ ವೈಪರೀತ್ಯಗಳ ನಡುವೆ ಆತನಿಗೆ ಬೇಲಿಯ ಆಚಿನ ಬದುಕು ಕಾಣಿಸುತ್ತದೆ. ಅಲ್ಲಿನ ಸಮವಸ್ತ್ರದ ಜನ ಕಾಣಿಸುತ್ತಾರೆ. ಮಕ್ಕಳು ಕಾಣಿಸುತ್ತಾರೆ. ತನಗಿಂತ ಚಿಕ್ಕವನೆ ಇರಬಹುದಾದ ಹುಡುಗ ಕಾಣಿಸುತ್ತಾನೆ. ನಡುವೆ ಬೇಲಿಯಿದ್ದೂ ಅವರಿಬ್ಬರ ಮಧ್ಯೆ ಹೊಸ ಗೆಳೆತನವೊಂದು ಉದಯಿಸುತ್ತದೆ. ಬೆಳೆಯುತ್ತದೆ. ಬೇಲಿಯ ಆಚಿನ ಬದುಕು ಇವನಿಗೆ ಕುತೂಹಲದ್ದಾದರೆ, ಆಚಿನವನಿಗೆ ಈ ಬದುಕು. ಇಬ್ಬರು ಹುಡುಗರ ದೈನಂದಿನ ಭೇಟಿ ಮುಂದುವರೆಯುತ್ತದೆ. ಹಲವು ಕಾರಣಗಳಿಂದಾಗಿ ಕನಸು ಕಣ್ಣುಗಳ ಹುಡುಗನಿಗೆ ಬೇಲಿಯ ಆಚೆ ನುಸುಳುವ ಸಂದರ್ಭ ಒದಗಿಬರುತ್ತದೆ. ಆತನಿಗೀಗ ಆಚಿನ ಜಗತ್ತನ್ನು ನೋಡುವ ಆಸೆ.

ಇಬ್ಬರು ಮಕ್ಕಳ ಜೊತೆಗೇ ಸನ್ನಿವೇಶಗಳ ಬೆಳವಣಿಗೆಯಾಗುತ್ತ ಕತೆ ಮುಗಿಯುವ ಹಂತ ತಲುಪುತ್ತದೆ. ಕನಸುಗಣ್ಣಿನ ಹುಡುಗ, ತನ್ನ ಅಕ್ಕ ಮತ್ತು ಅಮ್ಮನ ಜೊತೆಗೂಡಿ ಹಿಂತಿರುಗುವ ಸಮಯ ಬರುತ್ತದೆ. ಅವರಿಗೀಗ ಹಿಂತಿರುಗುವಂತೆ ಅಪ್ಪನ ಆಜ್ನೆ ಸಿಕ್ಕಿದೆ. ಆದ್ರೆ, ತನ್ನ ಸಾಹಸ ಇನ್ನೂ ಮುಗಿದಿಲ್ಲ ಎಂಬಂತೆ ಉಟ್ಟ ಶುಭ್ರ ಬಟ್ಟೆ ಕಳಚಿಟ್ಟು, ಬೇಲಿಯಾಚಿನ ಗೆಳೆಯನ ಗೆರೆ ಗೆರೆಯಾದ ಸಮವಸ್ತ್ರ ಧರಿಸಿ ಆಚೆ ನುಸುಳಿಬಿಡುತ್ತಾನೆ. ಅವರಿಗೀಗ ಬೇಲಿಯೊಳಗಿನ ಹುಡುಗನ ಕಳೆದುಹೋಗಿರುವ ಅಪ್ಪನನ್ನು ಹುಡುಕಬೇಕು. ಆದರೆ, ಕಳೆದುಹೋದ ಅಪ್ಪ ಸಿಗದೇ ತಿರುಗಿ ಬಂದಲ್ಲಿಗೆ ಹೊರಡುವ ನಿರ್ಧಾರ ಮಾಡುವಷ್ಟರಲ್ಲಿ ಅವರಿಬ್ಬರೂ ಹಲವಷ್ಟು ಜನರಿಂದ ಸುತ್ತುವರಿಯಲ್ಪಡುತ್ತಾರೆ. ಪ್ರತಿಯೊಬ್ಬರೂ ಅವರಂತೆ ಸಮವಸ್ತ್ರದಲ್ಲಿರುವವರೇ.  ಅವರನ್ನು ಫೇರಿ ಹೊರಡಿಸಿಕೊಂಡು ಹೋಗುತ್ತದೆ ಕಾವಲುಗಾರರ ಪಡೆ. ತಾವೆಲ್ಲಿಗೆ ಹೋಗುತ್ತಿದ್ದೇವೆ ಅನ್ನುವ ವಿಚಾರ ತಿಳಿಯದೇ ನಡೆಯುತ್ತಾರೆ ಉಳಿದವರೊಡನೆ. ಅದೇ ಸಮಯಕ್ಕೆ ಬರಲಾರಂಭಿಸಿದ ಮಳೆಯಿಂದ ತಪ್ಪಿಸಿಕೊಳ್ಳಲು ತಮ್ಮನ್ನು ಸುರಕ್ಷಿತ ಜಾಗಕ್ಕೆ ತಲುಪಿಸುತ್ತಿದ್ದಾರೆ ಅನ್ನುವ ಭರವಸೆಯಲ್ಲಿ ಜನರ (ಜನರಲ್ಲದವರ?) ನಡುವೆ ನಿಲ್ಲುತ್ತಾರೆ – ಒಬ್ಬರಿಗೊಬ್ಬರು ಕೈಹಿಡಿದು.  ಅಲ್ಲಿಂದ ಮುಂದಿನ ಕೆಲವು ನಿಮಿಷಗಳಲ್ಲಿ ಎಲ್ಲ ಮುಗಿದುಹೋಗುತ್ತದೆ. ತಣ್ಣಗಿನ ಕ್ರೌರ್ಯ ಅದು… ಹೊರಬಂದ ನಂತರ ಕಾಡುವುದು ಅದೇ ಜಾಗ, ಅದೇ ಭಾಗ.

ನೀವು ನೋಡಿಲ್ಲದಿದ್ದರೆ ಕೂಡಲೇ ನೋಡಬೇಕಾದ, ನೋಡಿದಿದ್ದಲ್ಲಿ ಮತ್ತೊಮ್ಮೆ ನೋಡಬೇಕೆಂದುಕೊಳ್ಳುವ ಚಿತ್ರ ಕೊಟ್ಟಿದ್ದಾನೆ ನಿರ್ದೇಶಕ- ಮಾರ್ಕ್ ಹರ್ಮನ್. ಆತನ ಕೈಗೆ ಈ ಕತೆ ಕೊಟ್ಟವನು ಜೋನ್ ಬೋಯ್ನ್ ಎಂಬ ಕತೆಗಾರ. ಎರಡುಸಾವಿರದ ಆರರಲ್ಲಿ ಬಂದ ಈ ಕಾದಂಬರಿ ಎಂಟರಲ್ಲಿ ಸಿನೆಮಾ ಆಗಿ ಹೊರಬಂತು.  ’ The Boy In The Striped Pyjamas’

ಟಿಪ್ಪಣಿ: ನೀವು ಇತಿಹಾಸದ ವಿದ್ಯಾರ್ಥಿಯಾಗಿದ್ದು, ಈ ಸಿನೆಮಾದ ಸುತ್ತ ಸಾಗುವ ಕತೆಯ ಕುರಿತು ಮೊದಲೆ ಅಭ್ಯಸಿಸಿದ್ದರೆ ನೀವು ನೋಡುವ ರೀತಿ ಬೇರಾಗಬಹುದು. ಇಲ್ಲವಾದಲ್ಲಿ, ಚಿತ್ರ ನೋಡಿದ ನಂತರ ನೀವು, ನಾಜಿಗಳು, ಹಿಟ್ಲರ್, ಯೆಹೂದಿಗಳು, ಜೆನೋಸೈಡ್, ಹೋಲೊಕಾಸ್ಟ್.. ಇತ್ಯಾದಿಗಳ ಹಿಂದೆ ಬೀಳುತ್ತೀರಿ. ಇವತ್ತಿಗೆ ಅವುಗಳೆಲ್ಲದರ ಮೂಲ ಹುಡುಕುವುದು ಕಂಪ್ಯೂಟರಿನ ಮುಂದೆ ಕುಳಿತವರಿಗೆ ಕಷ್ಟವಂತೂ ಅಲ್ಲ. ಆದರೆ ಈ ಎಲ್ಲವುಗಳ ನಡುವೆ ಆ ಇಬ್ಬರು ಹುಡುಗರೂ, ಹಾಗೂ ಕೆಲವು ಸನ್ನಿವೇಶಗಳನ್ನು ಮರೆಯುವುದು ಮಾತ್ರ ಖಂಡಿತವಾಗಿಯೂ ಕಷ್ಟವಾಗುತ್ತದೆ.  

ಅಸ್ತಿತ್ವದ ಒಂದು ಪ್ರಶ್ನೆ ಹಾಗೂ ಒಂದು ನಿಮಿಷದ ಮೌನ…

17/11/2009 by Kallare

ಆ ಸಭೆಗೆ ಸಕಲ ಸಿದ್ಧತೆ ನಡೆದಿದೆ. ಬಣ್ಣ ಬಣ್ಣದ ಕರೆಯೋಲೆ ತೆರೆಯಿಂದ ತೆರೆಗೆ ಹರಿದಿದೆ. ತೆರೆಯಿಂದ ಮರೆಗೆ ಸರಿದಿದೆ. ಕರೆಯೋಲೆಯಲ್ಲಿ ಚಿತ್ರ – ಅದಕ್ಕೀಗ ವಿಶೇಷ ಕಳೆ. ಕಣ್ಣಿನಲ್ಲಿ ಕಾಂತಿ. ತುಟಿಯಂಚಿನಲ್ಲಿ ನಗು. ತಿದ್ದಿಟ್ಟ ಕ್ರಾಪು… ಕಿವಿಯಿಂದ ಕಿವಿಗೆ ಮಾತು ತಲುಪಿದೆ. ಈ ಕಿವಿಯಿಂದ ಆ ಕಿವಿಗೆ ದಾಟಿದೆ. ಮಾತಿನಲ್ಲಿ ನೆನಪು – ಅದಕ್ಕೀಗ ವಿಶೇಷ ಕಾಳಜಿ. ವಿಶಿಷ್ಟ ಮಮಕಾರ. ವಿಚಿತ್ರ ಸಂಕಟ.

ಒಂದೊಂದಾಗಿ ಮುಂದುವರಿದು – ಮುಗಿದು ಈಗ ಉದ್ದೇಶಿತ ಕಾರ್ಯಕ್ರ್‍ಅಮ ಆರಂಭವಾಗಬೇಕು. ನೆಲಹಾಸು, ಕುರ್ಚಿಯಿಂದ ಹಿಡಿದು ದೀಪ ಧೂಪದವರೆಗೆ ಎಲ್ಲ ತಂತಮ್ಮ ಸ್ಥಾನ ಅಲಂಕರಿಸಿವೆ. ಬಾಟಲಿಯೊಳಗಿನ ನೀರು, ಅದರ ಪಕ್ಕ ಗ್ಲಾಸು ’ಸ್ವಚ್ಚ’ವಾಗಿ ಸಭೆಯ ನಡುವೆ ತಲುಪಿವೆ. ಎಲ್ಲ ನಿರ್ಜೀವ ವಸ್ತುಗಳೂ ಅಪ್ಪ ಹೇಳಿದ್ದು ಕೇಳುವ ಗಂಭೀರ ಮಕ್ಕಳಂತೆ ಸಪ್ಪೆ ಮೋರೆ ಹೊತ್ತಿವೆ. ಸನ್ಮಾನ್ಯರ ತುಂಬು ನಗೆಯ ಭಾವಚಿತ್ರವೂ ಅತೀ ಮುಖ್ಯ ಸ್ಥಾನ ಅಲಂಕರಿಸಿದೆ. ಅವರೆದುರು ಸುವಾಸನಾಯುಕ್ತ ಊದುಬತ್ತಿಯ ಘಮ. ಅಲ್ಲಲ್ಲಿ ಹರಡಿಕೊಂಡಿರುವ ಸಜೀವ ವಸ್ತುಗಳು ಕಾಲು ಕೆರೆದುಕೊಳ್ಳುತ್ತಲೋ, ತೋಳು ಏರಿಸುತ್ತಲೋ, ಕೂದಲು ತಿದ್ದುತ್ತಲೋ, ಮತ್ತೊಂದರ ಹೆಗಲ ಮೆಲೆ ಕೈಹಾಕುತ್ತಲೋ, ಪೆಕರು ಪೆಕರು ನೋಡುತ್ತಲೋ… ತಮ್ಮದೇ ಆದ ಪ್ರಪಂಚದಲ್ಲಿ ವಿಹರಿಸುತ್ತಿವೆ. ಗೇಟೆಂಬ ಪ್ರವೇಶದ್ವಾರದಿಂದ ಮತ್ತಿಷ್ಟು ಅತಿಥಿಗಳು ಬರುತ್ತಿವೆ. ಕಡುಗಪ್ಪು ಅಂಗಿ-ಕೆಂಪು ಗಾಡಿಯೂ, ನೀಲಿಹಾಕಿದ ಬಿಳಿ ಜುಬ್ಬಾ- ಟರ್ಕಿ ಟವೆಲ್ಲುಗಳೂ, ಗಣ್ಯವೂ, ನಗಣ್ಯವೂ ಎಲ್ಲ ನಮೂನೆಗಳಿವೆ. ಅವುಗಳ ಹಿಂದೆ ಮುಂದೆ ವ್ಯಾನಿಟಿ ಬ್ಯಾಗುಗಳೂ, ಹೈಹೀಲ್ಡ್ ಚಪ್ಪಲಿಗಳೂ, ಲಿಪ್’ಸ್ಟಿಕ್ಕುಗಳೂ, ಚಿಕ್ಕ ಚಿಕ್ಕ ಚುರುಕು ಕಣ್ಣುಗಳೂ ಸುತ್ತುತ್ತಿವೆ. ಈವರೆಗೆ ಹರಡಿದ್ದ ಒಂದು ಬಿಗು ವಾತಾವರಣ ತಾನೇ ತಾನಾಗಿ ತಿಳಿಯಾಗುತ್ತಿದೆ. 

ಇನ್ನು ’ನನ್ನದೇನಿಲ್ಲ’ ಎಲ್ಲ ಅವರದೇ ಎಂಬಂತೆ ಒಂದೊಂದಾಗಿ ಎಲ್ಲ ಸಜೀವಿಗಳು ಜಾಗ ಹಿಡಿದಿವೆ. ’ಮೊನ್ನೆ ಮೊನ್ನೆ ನೋಡಿದ್ದೆ, ಎರಡು ದಿನ ಮೊದಲು ನಮ್ಮನೆಗೆ ಬಂದಿದ್ದ, ಭಯಂಕರ ತಲೆ, ಅದ್ಭುತ ಪ್ರತಿಭೆ, ಕಡೆಯ ಊಟದ ಋಣ ನಂಜೊತೆ ಇತ್ತು, ಈಗೀಗ ಸೋತು ಹೋಗಿದ್ದ, ಒಳ್ಳೆ ರಸಿಕ, ಕಳಕೊಳ್ಳುವುದು ಅಂದರೆ ಇದು, ಸರಿ ಸಮಯಕ್ಕೆ ಹೋದ, ಗಟ್ಟಿ ಇರುವಾಗಲೆ ಹೋಗಿಬಿಡಬೇಕು, ಇಲ್ಲಿಗೆ ಎಲ್ಲ ಮುಗೀತು..’ ಎಲ್ಲ ಮುಗಿದು ಎಲ್ಲ ಸಜೀವಿಗಳು ನಿರ್ಜೀವದ ಮೌನಕ್ಕೆ ಹೊಂದಿಕೊಳ್ಳುವ ದಿಶೆಯಲ್ಲಿ ಪ್ರಯತ್ನ ಪ್ರಾರಂಭವಾಗಿದೆ. ಊದುಬತ್ತಿಯ ಪರಿಮಳದ ಮುಂದೆ ಶ್ರೀಯುತರದ್ದು ಮಾತ್ರ ಅದೇ ಮಾಸದ ನಗೆ. ಎದುರಿನಿಂದ ನೋಡುತ್ತಿರುವ ಸಜೀವಿಗಳ ಮುಸುಡಿಯಲ್ಲಿ ಇದ್ದಕ್ಕಿದ್ದಂತೆ ಸತ್ತ ಕಳೆ. ಇದ್ಯಾವುದರ ಪರಿವೆ ಇಲ್ಲದಂತೆ ಮಕ್ಕಳು ಬೆರಳು ಬೆಸೆಯುತ್ತಿವೆ, ನಿರೂಪಕ ಹಾಳೆ ಬದಲಿಸುತ್ತಿದೆ, ಹಲೋ ಮೈಕ್ ಚೆಕ್-ಮೈಕ್ ಚೆಕ್ ನಡೆಯುತ್ತಿದೆ, ಬಿಳಿ ಜುಬ್ಬಾ, ಕೆಂಪು-ಬಿಳಿ-ಕಪ್ಪು ತಲೆ ಸಭೆಯೇರುತ್ತಿದೆ. ಇನ್ನೇನು ಸಭೆ ಆರಂಭ…

ಒಂದು ನಿಮಿಷದ ಮೌನಕ್ಕೆ ಒಂದು ವಾರಕ್ಕೂ ಹೆಚ್ಚಿನ ತಯಾರಿ ನಡೆಸಿದ ಸಜೀವಿಗಳ ಕಣ್ಣು ಏನನ್ನೋ ಹುಡುಕುತ್ತಿದೆ. ಬತ್ತಿ ತುದಿ ದೀಪವಾಗುವ ಮೊದಲೆ ಸೂತ್ರದಾರನ ತಳಮಳ ಹೆಚ್ಚಾಗಿದೆ. ಅತಿಥಿಗಳು ಒಂದರ ಕಿವಿ ಒಂದು ಕಚ್ಚಿಕೊಳ್ಳುತ್ತಿವೆ. ಆಗಲೆ ಮೂರನೆಯ ಬಾರಿ ವಾಚು ನೋಡಿಕೊಂಡವುಗಳ ಸಂಖ್ಯೆ ಇದ್ದವುಗಳ ಅರ್ಧದಷ್ಟಾಗಿದೆ. ಇನ್ನೇನು ಮುಖ್ಯ ಉದ್ದೇಶ ಈಡೇರಬೇಕು – ತೊಡೆ ಬಿರಿದು ಹೊರಬಂದುಬಿಡುತ್ತೇನೆ ಅನ್ನುವಂತೆ ಯಾವನದೋ ಜಂಗಮವಾಣಿ ’ಜಗದಗಲ ಮುಗಿಲಗಲ’ ಕೂಗಿದೆ. ಅಳುವ ಮಗಳನ್ನು ಸಂತೈಸುವ ತಾಯಂತೆ ಎರಡೂ ತೊಡೆಗೆ ಕೈಹಾಕುತ್ತ ಓಡಿದೆ ಆಸಾಮಿ. ದೂರದಲ್ಲಿ, ’ಹಲೋ.. ಒನ್ನಿಮಿಷ ಮೌನಾಚರಣೆ ಮುಗ್ಸಿ ಕಾಲ್ ಮಾಡ್ತೀನಿ. ಎರಡ್ನಿಮಿಷ’ ಕೇಳುತ್ತಿದೆ. 

ಈಗ ಪ್ರಯತ್ನಪೂರ್ವಕವಾಗಿ ಮಾತು, ಸನ್ನೆ, ಶಬ್ಧ ಇತ್ಯಾದಿಗಳಿಗೆ ವಿರಾಮ ಸಿಕ್ಕಿದೆ. ಸಭೆಯ ತುಂಬಾ ನಿಧಾನ ನಿಧಾನವಾಗಿ ತಣ್ಣಗಿನ ಮೌನ ಆವರಿಸಿಕೊಳ್ಳುತ್ತಿದೆ. ಕುರ್ಚಿ ಕಾಲಿನ ಸದ್ದು, ವಯಸ್ಸಿನ ವಾಸನೆ, ಹೆಣ್ಣು ಪರಿಮಳ, ದೂರದ ಗಾಡಿ ಸದ್ದು.. ಎಲ್ಲ ಒಂದೊಂದಾಗಿ ಮರೆಯಾಗುತ್ತಿದೆ. ಕಳ್ಳ ಕಣ್ಣು, ಮಳ್ಳ ಮನಸು ಮಾತ್ರ ಜಿದ್ದಿಗೆ ಬಿದ್ದವರಂತೆ ಬೇಲಿ ಹಾರಿ ಹೊರಟಿವೆ. ಒಂದೊಂದರದ್ದೂ ಒಂದೊಂದು ಕತೆ. ಹಲವು ನೋಟ. ಹಲವಾರು ಕಾಟ. ಸಭೆಯನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುವಂತೆ ನಿರೂಪಕ ಮೌನಕ್ಕೆ ಭಾಷ್ಯ ಬರೆಯಲು ಹೊರಟಿದ್ದಾನೆ – ’… ಈಗ ಒಂದು ನಿಮಿಷದ ಮೌನ’ 

ಅರವತ್ತು ಸೆಕೆಂಡು ಈಗ ಮುಗಿಯಿತಾ, ಈಗ ಮುಗಿಯಿತಾ ಅನ್ನುವ ತಳಮಳದಲ್ಲಿ ಚಡಪಡಿಸಿಬಿಟ್ಟಿವೆ ಒಂದೊಂದೂ ಸಜೀವ ವಸ್ತುಗಳು. ಆ ಒಂದು ನಿಮಿಷದಲ್ಲಿ ಎದುರಿಗಿದ್ದ ಮಾನ್ಯರ ಭಾವಚಿತ್ರ ಅಲ್ಲಲ್ಲಿ ಕೆಲವು ವಿಷಾದಭರಿತ ಕಣ್ಣುಗಳಿಗೆ ಮಾತ್ರ ಕಂಡಿದೆ. ಅವರ ನಗೆ ದೀಪದ ಬೆಳಕಿನಲ್ಲಿ ನಿಚ್ಚಳವಾಗಿ ಕಂಡು ಊದುಬತ್ತಿಯ ಘಮದೊಂದಿಗೆ ನಿಧಾನವಾಗಿ ಪಸರಿಸುತ್ತ ಅನಂತದತ್ತ ವಿಹಾರ ಹೊರಟಿದೆ.    

ಈಗ ಸಭೆಗೆ ಜೀವ ಬರುತ್ತದೆ. ಜೊತೆಗೆ ಮಾನ್ಯ ಅಧ್ಯಕ್ಷರ ನಾಲ್ಕು ಅಮೂಲ್ಯ ಮಾತುಗಳು. ಎದುರಿನಲ್ಲಿ ಪಿಸುಮಾತು. ಮತ್ತೆ ಗದ್ದಲ…ಮುಂದಿನ ತಯಾರಿ. ಆಗಷ್ಟೆ ಹಚ್ಚಿದ ದೀಪ ಆರಿದ್ದು ಗಮನಿಸುವ ಅವಶ್ಯಕತೆಯೇನಿದೆ?  ಮತ್ತೊಂದು ಮೌನಾಚರಣೆ ಬರುವವರೆಗೆ ಬರೀ ಮಾತು. ಬರೀ ಕತೆ. ಭಾಷಣ, ಬರಹ, ಹಾರ-ತುರಾಯಿ, ಸನ್ಮಾನ, ಸಮಾರಂಭ. ಮತ್ತೊಂದು ಇನ್ನೊಂದು. ವರ್ತಮಾನದಲ್ಲೆನಿದ್ದರೂ ಅಸ್ತಿತ್ವದ ಒಂದು ಪ್ರಶ್ನೆ ಹಾಗೂ ಒಂದು ನಿಮಿಷದ ಮೌನ…    

ಕೊನೆಯ ಮಾತು: ಇವು ಶೃದ್ಧಾಂಜಲಿ ಕಾರ್ಯಕ್ರಮಕ್ಕೂ ಮೊದಲು ಸುಮ್ಮನೆ ಬರೆದಿಟ್ಟ ಸಾಲುಗಳು. ’ಬೊಗಸೆಯಲ್ಲಿ ಮಳೆ’ಯ  ಅಂಕಣವೊಂದರ ನೆನಪಿನಲ್ಲಿ.

ಯಕ್ಷಗಾನದ ’ಮಹಾಬಲ’ರಿಗೊಂದು ಶೃದ್ಧಾಂಜಲಿ

11/11/2009 by Kallare

ಕೌರವ, ಭೀಷ್ಮ, ಕೀಚಕ, ವಿಶ್ವಾಮಿತ್ರ… ಪ್ರತಿಯೊಬ್ಬ ಪುರಾಣ ಪುರುಷನ ರಂಗದ ಅಸ್ತಿತ್ವಕ್ಕೆ ಮತ್ತೊಮ್ಮೆ ಅಲ್ಪವಿರಾಮ ಬಿದ್ದಿದೆ. ನಿರಂತರವಾಗಿ ಅಭ್ಯಸಿಸಿ, ಪರದೆಯ ಮುಂದೆ ತಂದು, ಆಯಾ ಪಾತ್ರಕ್ಕೆ ತಕ್ಕ ಗೌರವ ಸಲ್ಲಿಸಿ, ’ನಾನು ನನ್ನಂತೆಯೆ, ಬೇರೆ ಯಾರಂತೆಯೂ ಅಲ್ಲ’ ಅನ್ನುವ ವಿಶ್ವಾಸದಲ್ಲಿ ಅವರು ಇಟ್ಟ ಒಂದೊಂದು ಹೆಜ್ಜೆಯೂ ’ಮಹಾಬಲ’ ಹೆಜ್ಜೆಯಾಯಿತು. ಕ್ಷೇತ್ರ ವಿಸ್ತಾರವಾಯಿತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಹೋಗಿದ್ದಾರೆ. ಬಹುಶ: ಅಲ್ಲೀಗ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರಬಹುದು. 

ಇಲ್ಲೀಗ ಅವರ ನೆನಪು. ಅವರ ವಿಚಾರ. ಬರಹ, ಭಾಷಣ, ಚರ್ಚೆ, ಅರ್ಥ… ಮತ್ತೊಂದು.  ಎಲ್ಲ ವರ್ತನಮಾನ. ಬರುವ ಶನಿವಾರ ಅವರಿಗೊಂದು ಶೃದ್ಧಾಂಜಲಿ. ಒಂದು ತಾಳಮದ್ದಲೆ.

Mahabala

ನೀವು ಬನ್ನಿ